ನೀವು ನಡೆದು ಬಂದ ದಾರಿಯ ಕಾವ್ಯ ವಿಭಾಗಕ್ಕೆ ಪೀಠಿಕೆಯಾಗಿ ನೀವು ಬರೆದದ್ದನ್ನು ಓದುತ್ತ ಹೋದಂತೆ ನೀವು ನನ್ನ ತಲೆಮಾರಿನ ಅತ್ಯುತ್ತಮ ವಿಮರ್ಶಕರಲ್ಲೊಬ್ಬರು ಎಂಬುದು ಸ್ಪಷ್ಟವಾಗುತ್ತ ಬಂತು, ಆಳವಾದ ಅಭ್ಯಾಸ, ಸದಭಿರುಚಿ, ಮುಖ್ಯಾಂಶಗಳ ಮೇಲೆ ದೃಢವಾದ ಹಿಡಿತ ಇವುಗಳನ್ನು ಗಮನಿಸಿದಾಗ ಅತ್ಯಂತ ತೃಪ್ತಿಯೂ ಸಂತೋಷವೂ ಆಯಿತು.. ಹೊಸಗನ್ನಡ ಕಾವ್ಯದ ಪರಿಶೀಲನೆಗೆ ನೀವು ಬಲು ಭದ್ರವಾದ ಬುನಾದಿಯನ್ನು ಹಾಕಿದ್ದೀರಿ. ಆ ಬಗ್ಗೆ ಮುಂದೆ ನಡೆಯುವ ಕೆಲಸವೆಲ್ಲವೂ ನಿಮ್ಮ ಈ ಲೇಖನದ ಆಧಾರದ ಮೇಲೆಯೇ ನಡೆಯಬೇಕಾಗಿದೆ.