ನನ್ನ ಗುರುಗಳ ತಮ್ಮನ ಮಗ ಪವನ. ಅವನು ನನ್ನ ಬೆಳೆದ ಮಗ ಅವನ ಮಗ ಅಥರ್ವ. ಈಗ ಅಥರ್ವ ನನ್ನ ಪುಟ್ಟ ಮಗ. ದೇವರ ದಾರಿಯಲ್ಲಿ ನಡೆವವರಿಗೆ ಎಲ್ಲರೂ ಮಕ್ಕಳೇ: ಮೊಮ್ಮಕ್ಕಳಿಲ್ಲ. ಅದೇ ಅದರ ದಿವ್ಯ ಸೊಬಗು.
ಅಥರ್ವನಿಗೆ ಈಗ ಆರು. ನಾನು ಕಲ್ಲಹಳ್ಳಿಗೆ ಹೋದರೆ ಅವನು ನನ್ನ ಸುತ್ತ ಮುತ್ತ. ಅವನಿಗೆ ಊಟದ ತುತ್ತು, ಆಟದ ಹೊತ್ತು ಎಲ್ಲ ನಾನೇ, ರಾತ್ರಿ ಆದರೆ ಅವನಿಗೆ ಕಥೆ ಹೇಳಿ ನಾನೇ ಮಲಗಿಸಬೇಕು. ಅದು ನನಗೂ ಅವನಿಗೂ ಇರುವ ಬಿಡದ ನಂಟು,
ನನಗೆ ಯಾರೋ ಹೇಳಿದ ಕಥೆ ಹೇಳಲು ಇಷ್ಟವಿಲ್ಲ. ಹಾಗೆಯೇ ಪುರಾಣದ ಕಥೆ ಬಾಯಿಪಾಠ ಒಪ್ಪಿಸುವುದೂ ಒಪ್ಪಿಗೆಯಿಲ್ಲ. ಏನಿದ್ದರೂ ಹೊಸದು ಸ್ವತಂತ್ರ; ಇದು ನನ್ನ ಛಾತಿ. ಹೀಗಾಗಿ ಅವನಿಗೆ ಕಥೆ ಹೇಳುವಾಗ ನಾನು ಹೊಸದನ್ನು ಹುಡುಕುವೆ. ಹಾಗೆ ಹುಟ್ಟಿದ ಕಥೆಗಳು ಇಲ್ಲಿವೆ.