ಮೂಲತಃ ಶರಾವತಿ ಹಿನ್ನೀರಿನ ತುಮರಿಯವರಾದ ಮಂಗಳ ಶಿಕ್ಷಕಿ, ಲೇಖಕಿ ಹಾಗೂ ಕೀರ್ತನಕಾರರು. ಇವರ ನಾಟಕ ‘ಆರೋಹಿ' ಗೆ ಕನ್ನಡ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರಕಿದೆ. ಈ ಕಥಾಸಂಕಲನದಲ್ಲಿ ಒಟ್ಟು ಹನ್ನೆರಡು ಕಥೆಗಳಿವೆ. ಈ ಕಥೆಗಳಿಗೆ ನವಜಾತ ಶಿಶುವಿನ ಗಂಧವಿದೆ. ಮುಗ್ಧತೆ ಮತ್ತು ನವಿರುತನ ಇಲ್ಲಿನ ಸ್ಥಾಯೀ ಭಾವಗಳು. ಮಹಿಳೆಯೊಬ್ಬಳು ಕಥೆಗಾರ್ತಿಯಾಗಿ ರೂಪುಗೊಂಡಾಗ, ಸಾಹಿತ್ಯ ಕ್ಷೇತ್ರಕ್ಕೆ ಸಿಗಬಹುದಾದ ಬಹುತೇಕ ಲಾಭಗಳು ಈ ಕೃತಿಯಿಂದ ದೊರೆಯುತ್ತದೆ. ಮಂಗಳಾ ಅವರು ತಮ್ಮ ಬಾಲ್ಯ ಮತ್ತು ಯೌವನದ ದಿನಗಳು; ಮಲೆನಾಡು, ನಗರ ಜೀವನವನ್ನು ತಮ್ಮದೇ ಆದ ಕೋನಗಳಿಂದ ಸೆರೆಹಿಡಿದು ಓದುಗನ ಮುಂದಿಟ್ಟಿದ್ದಾರೆ.
ಪ್ರಸಿದ್ಧರ ಪತ್ನಿಯ ಸಂದರ್ಶನದಂತಹ ಸಮಕಾಲೀನ ಕಥಾವಸ್ತುವಿನಿಂದ ಹಿಡಿದು ತಲೆಮಾರಿನ ಹೊಯ್ದಾಟವು, ಈ ಸಂಕಲನದಲ್ಲಿ ಕಥೆಗಳಾಗಿ ರೂಪುಗೊಂಡ ಪರಿ ಅನನ್ಯವಾದುದು. ನಾಮಕರಣದಂತಹ ವಿಷಯವನ್ನು ತೆಗೆದುಕೊಂಡು ರಚಿಸಿದ ಕಥೆಯ ತಂತ್ರ, ಮಂಗಳಾ ಅವರು ಪಳಗಿದ ಕಥೆಗಾರ್ತಿಯಾಗುವ ಭರವಸೆಯನ್ನು ಹುಟ್ಟುಹಾಕುತ್ತದೆ. ಗುಲಾಬಿ ಫ್ರಾಕಿನ ಕಥೆಗೆ ಭಾವುಕತೆಯೇ ಇಂಧನ. ಸುಕ್ರಿ ಎಂಬ ಮೀನು ಮಾರುವ ಸಶಕ್ತ ಹೆಂಗಸಿನ ಪಾತ್ರದ ಜೊತೆಗೆ ಕಾಲೇಜಿನಲ್ಲಿ ಪೀಡಿಸುವ ಹುಡುಗನಿಗೆ ಹೆದರುವ ಅಬಲೆಯನ್ನು ಮಂಗಳಾ ಚಿತ್ರಿಸಬಲ್ಲರು. ನಿತ್ಯ ಬದುಕಿನಲ್ಲಿ ಸಿಗಬಹುದಾದ ವಾಣಿ ಚಿಕ್ಕಿಯಂತಹ ಪಾತ್ರ ಇಲ್ಲಿ ಮನೋಜ್ಞವಾಗಿ ಮೂಡಿಬಂದಿದೆ. ಮುಂಬೈನಂತಹ ಶಹರಿನ ಎರಡು ಮುಖಗಳು, ದುರ್ಬಲ ಮಹಿಳೆಯಿಂದ ಭೂಮಿ ಕಿತ್ತುಕೊಳ್ಳುವ ಸಮಾಜ, ಗಂಡಹೆಂಡಿರ ಜಗಳದ ಮಧ್ಯದ ಹೂವಮ್ಮ- ಮಂಗಳಾ ಅವರ ಕಥೆ ನೇಯ್ಗೆಯ ಕಾಯಕಕ್ಕೆ ಸಾಕ್ಷಿ. ಅವನಿಯಂತಹ ಭೂಮಿ ತೂಕದ ಹೆಣ್ಣು, ನೊಂದ ಜೀವಗಳಿಗೆ ಸ್ಪೂರ್ತಿಯಾಗಬಲ್ಲಳು. ಈ ಕಥಾಸಂಕಲನದ ಮೂಲಕ ಮಂಗಳಾ ಹಚ್ಚಿರುವ ಕತೆಹಣತೆ ಆರದಂತೆ ಕಾಯಲು ಅವರ ಪಾತ್ರಗಳೇ ಸಾಕು!
'ಹಿನ್ನೀರ ದಂಡೆಯ ಸೀತಾಳದಂಡೆ' ಇದು 'ಮಂಗಳ ಟಿ.ಎಸ್. ತುಮುರಿ' ಅವರ ಕಥಾಸಂಕಲನ. ಈ ಸಂಕಲನವು ಒಟ್ಟು ೧೨ ಕತೆಗಳನ್ನು ಒಳಗೊಂಡಿದೆ. ಅಲೆದಾಟದ ಗೀಳಿನ ಪ್ರಭಾವದಿಂದ ಕೊಡಚಾದ್ರಿಯ ಸಮೀಪದ 'ತುಮುರಿ'ಯ ಪರಿಚಯ ನನಗೆ ಈಗಾಗಲೇ ಇದ್ದ ಪರಿಣಾಮವಾಗಿ ಈ ಪುಸ್ತಕವನ್ನು ಆಸಕ್ತಿ ಹುಟ್ಟಿತು.
ಇನ್ನೂ ಪುಸ್ತಕ ಬಗ್ಗೆ ಹೇಳುವುದಾದರೆ ಬಹುತೇಕ ಎಲ್ಲಾ ಕತೆಗಳು ಹೊಸ ತಲೆಮಾರಿನ ಕತೆಗಳಾಗಿವೆ. 'ಬೇಲಿ' ಕತೆಯಲ್ಲಿ ಬರುವ ಕೃಷಿಕ ಮತ್ತು ಧನಿಕನ ನಡುವಿನ ವ್ಯತ್ಯಾಸ. ಒಬ್ಬ ಶಿಕ್ಷಕನ ನಿಜವಾದ ಆದರ್ಶ ಪರಿಚಯ ನೀಡುವ 'ತಪ್ಪೊಪ್ಪು', ಬಂಡವಾಳಶಾಹಿಗಳ ಬಂಡವಾಳ ಜಗ್ಗಿಜಾಹೀರು ಮಾಡುವ 'ಸ್ವಪ್ನಸೌಧ', ನೀರಿನ ತರಂಗದಂತೆ ಅಂತರಂಗದ ಮೃದಂಗ ಎಂದು ತಿಳಿಸುವ 'ಹಸಿರುಕೆರೆ', ಬಾಯಿ ತಪ್ಪಿ ಬಂದ.. ಅದೇ ಮಾತು ಮುಂದೆ ಶಾಪವಾಗಿ ಪರಿಣಮಿಸಿದರೆ ಆಗುವ ಮನಸ್ಸಿನ ದುಗುಡ... ಮುಂತಾದ ಸೂಕ್ಷ್ಮ ಸಂಗತಿಗಳನ್ನು ಬಳಸಿ ಇಲ್ಲಿನ ಕತೆಗಳು ರಚಿತವಾಗಿದೆ.
Subscribe to our emails
Subscribe to our mailing list for insider news, product launches, and more.
Choosing a selection results in a full page refresh.