ಹಿನ್ನೀರ ದಂಡೆಯ ಸೀತಾಳೆ ದಂಡೆ - ಮಂಗಳಾ ಟಿ. ಎಸ್. ತುಮರಿ
ನಮ್ಮ ಸುತ್ತಲಿನ ಸಾಮಾನ್ಯ ಎನಿಸುವ ಸಂಗತಿಗಳನ್ನು ಸಾಂದ್ರವಾಗಿ ಭಾವಪೂರ್ಣವಾಗಿ ದಾಟಿಸುವ ಈ ಸಂಕಲನದ ಕತೆಗಳು; ಸಾರ್ಥಕ ಬದುಕಿಗಾಗಿ ಹಂಬಲಿಸಿವೆ. ಶರಾವತಿ ಮುಳುಗಡೆಯ ಹಿನ್ನೀರ ದಂಡೆಯಿಂದ ಬೆಂಗಳೂರೆಂಬ ಮಹಾನಗರದ ನಡುವಿಗೆ ತಂದು ನಿಲ್ಲಿಸಿದ ಕಥೆಗಾರ್ತಿಯ ಜೀವನಾನುಭಗಳೇ ಕತೆಗಳ ಹೂರಣ. ಅನುದಿನದ ಅವಸರದ ಸಂಕೀರ್ಣ ಬಾಳಿನ ಪದರುಗಳ ಸೂಕ್ಷ್ಮ ಅವಲೋಕನವೇ ಕತೆಗಳಾವರಣ. 'ಆರೋಹಿ' ಎಂಬ ಯಶಸ್ವೀ ನಾಟಕ ರಚಿಸಿ ಸೈ ಎನಿಸಿಕೊಂಡ ಮಂಗಳಾ ಟಿ. ಎಸ್. ಅವರು ಕಥಾಪ್ರಯೋಗದಲ್ಲೂ ಗಮನಸೆಳೆದಿದ್ದಾರೆ. ಮಧ್ಯಮವರ್ಗದ ಜಂಜಾಟಗಳನ್ನು ಬಯಕೆ ಆಶಯಗಳನ್ನು ವಾಸ್ತವದ ಭೂಮಿಕೆಯಲ್ಲಿ ದಿಟ್ಟಿಸುವ ಇಲ್ಲಿನ ಕತೆಗಳು ಓದುಗರ ಹೃದಯ ತೇವಗೊಳಿಸುತ್ತವೆ. ಸಂಕಲನದಲ್ಲಿ ಹೆಣ್ಣಿನ ಒಳತೋಟಿಗಳು ಆದುನಿಕ ಅವಸ್ಥಾಂತರದ ಗರಡಿಯಲ್ಲಿ ಪಳಗಿ ಗಟ್ಟಿಪಾತ್ರಗಳಾಗಿ ಅರಳಿ ಹೊರಳಿವೆ. ಸ್ತ್ರೀವಾದಿ ಚಿಂತನೆಯು ಗ್ರಹಿಸಬಹುದಾದ ಸ್ಥಿತ್ಯಂತರಗಳನ್ನು ಸವಾಲುಗಳನ್ನು ಒರೆಹಚ್ಚಿ ನೋಡಲು ಪೂರಕ ಸನ್ನಿವೇಶಗಳು ಇಲ್ಲಿ ಚಿತ್ರಣಗೊಂಡಿವೆ. ಸರಳ ಸಹಜಾಭಿವ್ಯಕ್ತಿಯು ಸರಾಗವಾಗಿ ಓದಿಸಿಕೊಳ್ಳುತ್ತದೆ.
✍️ಡಾ. ರತ್ನಾಕರ ಸಿ ಕುನುಗೋಡು
ಮೂಲತಃ ಶರಾವತಿ ಹಿನ್ನೀರಿನ ತುಮರಿಯವರಾದ ಮಂಗಳ ಶಿಕ್ಷಕಿ, ಲೇಖಕಿ ಹಾಗೂ ಕೀರ್ತನಕಾರರು. ಇವರ ನಾಟಕ ‘ಆರೋಹಿ' ಗೆ ಕನ್ನಡ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರಕಿದೆ. ಈ ಕಥಾಸಂಕಲನದಲ್ಲಿ ಒಟ್ಟು ಹನ್ನೆರಡು ಕಥೆಗಳಿವೆ. ಈ ಕಥೆಗಳಿಗೆ ನವಜಾತ ಶಿಶುವಿನ ಗಂಧವಿದೆ. ಮುಗ್ಧತೆ ಮತ್ತು ನವಿರುತನ ಇಲ್ಲಿನ ಸ್ಥಾಯೀ ಭಾವಗಳು. ಮಹಿಳೆಯೊಬ್ಬಳು ಕಥೆಗಾರ್ತಿಯಾಗಿ ರೂಪುಗೊಂಡಾಗ, ಸಾಹಿತ್ಯ ಕ್ಷೇತ್ರಕ್ಕೆ ಸಿಗಬಹುದಾದ ಬಹುತೇಕ ಲಾಭಗಳು ಈ ಕೃತಿಯಿಂದ ದೊರೆಯುತ್ತದೆ. ಮಂಗಳಾ ಅವರು ತಮ್ಮ ಬಾಲ್ಯ ಮತ್ತು ಯೌವನದ ದಿನಗಳು; ಮಲೆನಾಡು, ನಗರ ಜೀವನವನ್ನು ತಮ್ಮದೇ ಆದ ಕೋನಗಳಿಂದ ಸೆರೆಹಿಡಿದು ಓದುಗನ ಮುಂದಿಟ್ಟಿದ್ದಾರೆ.
ಪ್ರಸಿದ್ಧರ ಪತ್ನಿಯ ಸಂದರ್ಶನದಂತಹ ಸಮಕಾಲೀನ ಕಥಾವಸ್ತುವಿನಿಂದ ಹಿಡಿದು ತಲೆಮಾರಿನ ಹೊಯ್ದಾಟವು, ಈ ಸಂಕಲನದಲ್ಲಿ ಕಥೆಗಳಾಗಿ ರೂಪುಗೊಂಡ ಪರಿ ಅನನ್ಯವಾದುದು. ನಾಮಕರಣದಂತಹ ವಿಷಯವನ್ನು ತೆಗೆದುಕೊಂಡು ರಚಿಸಿದ ಕಥೆಯ ತಂತ್ರ, ಮಂಗಳಾ ಅವರು ಪಳಗಿದ ಕಥೆಗಾರ್ತಿಯಾಗುವ ಭರವಸೆಯನ್ನು ಹುಟ್ಟುಹಾಕುತ್ತದೆ. ಗುಲಾಬಿ ಫ್ರಾಕಿನ ಕಥೆಗೆ ಭಾವುಕತೆಯೇ ಇಂಧನ. ಸುಕ್ರಿ ಎಂಬ ಮೀನು ಮಾರುವ ಸಶಕ್ತ ಹೆಂಗಸಿನ ಪಾತ್ರದ ಜೊತೆಗೆ ಕಾಲೇಜಿನಲ್ಲಿ ಪೀಡಿಸುವ ಹುಡುಗನಿಗೆ ಹೆದರುವ ಅಬಲೆಯನ್ನು ಮಂಗಳಾ ಚಿತ್ರಿಸಬಲ್ಲರು. ನಿತ್ಯ ಬದುಕಿನಲ್ಲಿ ಸಿಗಬಹುದಾದ ವಾಣಿ ಚಿಕ್ಕಿಯಂತಹ ಪಾತ್ರ ಇಲ್ಲಿ ಮನೋಜ್ಞವಾಗಿ ಮೂಡಿಬಂದಿದೆ. ಮುಂಬೈನಂತಹ ಶಹರಿನ ಎರಡು ಮುಖಗಳು, ದುರ್ಬಲ ಮಹಿಳೆಯಿಂದ ಭೂಮಿ ಕಿತ್ತುಕೊಳ್ಳುವ ಸಮಾಜ, ಗಂಡಹೆಂಡಿರ ಜಗಳದ ಮಧ್ಯದ ಹೂವಮ್ಮ- ಮಂಗಳಾ ಅವರ ಕಥೆ ನೇಯ್ಗೆಯ ಕಾಯಕಕ್ಕೆ ಸಾಕ್ಷಿ. ಅವನಿಯಂತಹ ಭೂಮಿ ತೂಕದ ಹೆಣ್ಣು, ನೊಂದ ಜೀವಗಳಿಗೆ ಸ್ಪೂರ್ತಿಯಾಗಬಲ್ಲಳು. ಈ ಕಥಾಸಂಕಲನದ ಮೂಲಕ ಮಂಗಳಾ ಹಚ್ಚಿರುವ ಕತೆಹಣತೆ ಆರದಂತೆ ಕಾಯಲು ಅವರ ಪಾತ್ರಗಳೇ ಸಾಕು!
✍️ಡಾ.ಅಜೀತ್ ಹರೀಶಿ
ಲೇಖಕರು, ವೈದ್ಯರು. ಹರೀಶಿ
ಮಂಗಳ ಟಿ.ಎಸ್ ತುಮರಿ ಅವರ "ಹಿನ್ನೀರ ದಂಡೆಯ ಸೀತಾಳೆದಂಡೆ "ಪುಸ್ತಕವನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ 👇🏻