Dr. K. Shivaram Karanth
ಸರಸಮ್ಮನ ಸಮಾಧಿ - ಕಾದಂಬರಿ
ಸರಸಮ್ಮನ ಸಮಾಧಿ - ಕಾದಂಬರಿ
Publisher - ಸಪ್ನ ಬುಕ್ ಹೌಸ್
- Free Shipping Above ₹250
- Cash on Delivery (COD) Available
Pages - 120
Type - Paperback
ಈ ಚಿಕ್ಕ ಕಾದಂಬರಿಯಲ್ಲಿ ಅಡಕವಾಗಿರುವ ವಿಷಯಗಳನ್ನು ಅರಗಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಪುರುಷಪ್ರಧಾನ ಸಮಾಜದಲ್ಲಿ ಸ್ತ್ರೀ ಶೋಷಣೆಯ ವಿವಿಧ ಮುಖಗಳ ಪರಿಚಯ ಮಾಡುತ್ತಾ ಹೆಣ್ಣಿನ ಸ್ಥಾನಮಾನವನ್ನು ಗಂಡಿನ ಸ್ಥಾನಮಾನಕ್ಕೆ ತೂಗಿದಾಗ ಅವಳಿರುವ ಬದುಕಿನ ಚಿತ್ರಣ ಗಂಡಿನೊಂದಿಗೆ ಸರಿದೂಗಲಾರದೆಂಬ ಕಟುಸತ್ಯದ ಅನಾವರಣವನ್ನು 30-40 ರ ದಶಕದಲ್ಲಿಯೇ ಕಾರಂತಜ್ಜ ಕಣ್ಮುಂದೆ ತಂದರೂ ಅದು ಇಂದಿಗೆ ಹೋಲಿಸಿದಾಗ್ಯೂ ಹೆಚ್ಚಿನ ಮಟ್ಟದ ಬದಲಾವಣೆಯೇನೂ ಕಂಡು ಬರದೆ ಪ್ರಸ್ತುತವೆನಿಸಿದೆ.
ದಾಂಪತ್ಯ ಜೀವನದ ವಿರಸ, ಹೊಂದಾಣಿಕೆಯಿಲ್ಲದ ಜೀವನ ಚಿತ್ರ ಕಟ್ಟಿಕೊಡುತ್ತಾ ಹೇಳಿರುವ ಅವರ ಮಾತುಗಳು “ಮುಖ್ಯವಾಗಿ ಇಂಥವರೇ ಬೇಕೆಂದಿಲ್ಲ. ಜಾತಕದ ಕೂಟ ಸರಿಹೋದರಾಯಿತು. ಜೀವನದ ಕೂಟ ಮುಂದಿನದು; ಅದು ತನ್ನಂತೆ ಸರಿ ಹೋದೀತೆಂದು ತಿಳಿಯಲೇಬೇಕು. ಒಮ್ಮೆ ಹೋಗಲಿಲ್ಲ, ಆಗ ಜಾತಕ ನೋಡಿದವರು ಎಲ್ಲಿಯೋ ತಪ್ಪಿರಬೇಕೆಂಬುದು ಸ್ಪಷ್ಟ. ಆಗ ಹಣೆಯ ಬರಹವನ್ನು ದೂರಿದರಾಯಿತು.” ಇದನ್ನು ಅರ್ಥಮಾಡಿಕೊಂಡರೆ ಸಾರ್ವಕಾಲಿಕ ಸತ್ಯದ ಅರಿವು ಮೂಡಿ ಇಂದಿಗೂ ವಿವಾಹದ ವಿಷಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಎಡವುದನ್ನು ತಕ್ಕಮಟ್ಟಿಗೆ ತಡೆಯಬಹುದೇನೋ ಎಂಬ ಒಂದು ಯೋಚನೆ ಸುಳಿಯದೇ ಇರದು.
ಕಾರಂತಜ್ಜರ ವಿಶಿಷ್ಟತೆಯೇ ಅಂತಹುದು. ಮನುಷ್ಯ ಸಂಬಂಧಗಳ ಸೂಕ್ಷ್ಮಗಳು ಸಂವೇದನೆಯ ಎಲ್ಲೆಯ ಮೀರದೆ ಮನದಾಳಕ್ಕೇ ಏಕಾಏಕಿ ನುಗ್ಗಿಬಿಡುತ್ತವೆ. ಅವರ ಬರಹ ಓದುತ್ತಿದ್ದಂತೆ ಅದರೊಂದಿಗೆ ನಾವು ನಮ್ಮನ್ನೇ ತಾಳೆಹಾಕಿ ತೂಗಿ ನೋಡಿಯೇ ಬಿಡುತ್ತೇವೆ. ಇದಕ್ಕೆ ಉದಾಹರಣೆಯೆಂದರೆ ಅವರ ಕಾದಂಬರಿಯ ಮುನ್ನುಡಿಯಲ್ಲಿರುವ ಒಂದು ಸಾಲು- “ಮನುಷ್ಯ ವರ್ಗವೇ ಸಾಕಷ್ಟು ಕಪಟ ಜೀವನ ನಡೆಯಿಸುತ್ತಿರುವ ಒಂದು ಜಾತಿಯಾಗಿದೆ. ಅದು ಪರರ ವಿಚಾರದಲ್ಲಿ ಯಾವೆಲ್ಲ ನಿಯತ್ತು, ಶಿಕ್ಷೆ, ದೋಷಾರೋಪಣೆ ಮಾಡಲು ಸಿದ್ದವೋ, ತನ್ನ ವಿಷಯ ಬಂದಾಗ, ತನ್ನನ್ನು ತಾನು ತೂಗಬೇಕಾಗಿ ಬಂದಾಗ, ತನ್ನ ನಡೆನುಡಿಗಳನ್ನು ತಾನು ಪ್ರಶ್ನಿಸಲೇ ಬೇಕಾದಾಗ, ಆ ಬಗ್ಗೆ ಯಾವ ಸಂಕೋಚವೂ ಇಲ್ಲದಂತೆ ವರ್ತಿಸುತ್ತದೆ.” ಇದು ಸತ್ಯಕ್ಕೆ ಹಿಡಿದ ಕನ್ನಡಿಯಲ್ಲವೇ ….?
ಗಂಡು ಹೆಣ್ಣಿನ ವಿವಾಹ ಸಂಬಂಧದಲ್ಲಿ ಹೆಣ್ಣಿಗೆ ಆಯ್ಕೆಯ ವಿಷಯದಲ್ಲಿ ಅಂದಿನಿಂದ ಇಂದಿಗೆ ಬೇಕಾದಷ್ಟು ಮಾರ್ಪಾಟುಗಳಾಗಿದ್ದರೂ ಅನರ್ಥಗಳು ಜರುಗಿದಾಗ ಗಂಡು ಹೆಣ್ಣಿನ ತಪ್ಪುಗಳು ಸಮಪಾಲಾಗಿದ್ದರೂ ಇಂದಿಗೂ ತಪ್ಪಿನ ಹೊರೆಯಲ್ಲಿ ಹೆಣ್ಣಿಗೆ ಬಹುಪಾಲು ಹೊರೆಸುವುದು ಶೋಚನೀಯ. ಈ ಕಾದಂಬರಿಯ ಮುಖ್ಯ ಪಾತ್ರಧಾರಿ ಚಂದ್ರಯ್ಯನ ಗಮನಕ್ಕೆ ಬಂದ ಸ್ತ್ರೀಯರೆಲ್ಲರೂ ಭಾಗೀರಥಿ, ಸುನಾಲಿನಿ, ಜಾನಕಿ, ನಾಗವೇಣಿ, ಬೆಳ್ಯಕ್ಕ ಅನಿವಾರ್ಯವೆಂಬಂತೆ ಶೋಷಿತ ಸಮಾಜದ ಸ್ತ್ರೀ ಜೀವಗಳು. ಅವರನ್ನು ಅರ್ಥಮಾಡಿಕೊಳ್ಳುವಲ್ಲಿ ಚಂದ್ರಯ್ಯನ ಮನದ ವೇದನೆ… ಕಡೆಗೆ ಊರಿಗೆ ಊರೇ ಅಲ್ಲದೇ ಸುತ್ತಲ ಹತ್ತಾರು ಹಳ್ಳಿಗಳು ನಂಬುವ ಮಹಾಸತಿ ಸರಸಮ್ಮನು ಒಂದು ಅತೃಪ್ತ ಆತ್ಮವೇ ಎಂದು ಅರಿವಾಗುವಲ್ಲಿ ಕಾದಂಬರಿ ಮುಗಿಯುತ್ತದೆ.
ಚಿಕ್ಕ ಕಾದಂಬರಿಯಾದರೂ ಓದುವಲ್ಲಿ ಹಿಡಿದಿಟ್ಟುಕೊಂಡು ಓದಿಸಿಕೊಂಡು ಹೋಗುತ್ತದೆ.
- ಸಪ್ನಾ ವಂಶಿ
ಪ್ರಕಾಶಕರು - ಸಪ್ನ ಬುಕ್ ಹೌಸ್
Share
Subscribe to our emails
Subscribe to our mailing list for insider news, product launches, and more.