Dr. K. Nataraj
ಮೌಲ್ಯಗಳ ಸರದಾರ ಡಾ. ರಾಜ್ ಕುಮಾರ್
ಮೌಲ್ಯಗಳ ಸರದಾರ ಡಾ. ರಾಜ್ ಕುಮಾರ್
Publisher - ಸ್ನೇಹ ಬುಕ್ ಹೌಸ್
- Free Shipping Above ₹400
- Cash on Delivery (COD) Available*
Pages -
Type - Hardcover
Couldn't load pickup availability
ಶ್ರೀ ಕೆ. ನಟರಾಜ್ ಅವರು ಮೂಲತಃ ವಿಜ್ಞಾನ ವಿಷಯವನ್ನು ಕಲಿತವರು; ಕಲಿಸಿದವರು. ಆದರೆ ಅವರ ಸಾಹಿತ್ಯಾಸಕ್ತಿ ಮತ್ತು ಅಭಿವ್ಯಕ್ತಿ ಗಮನೀಯ ಪ್ರಮಾಣದಲ್ಲಿ ಬೆಳೆದಿದೆ; ಬೆಳೆಯುತ್ತಿದೆ. ಗದ್ಯಕೃತಿಗಳ ಜೊತೆಗೆ ದೈನಂದಿನ ವಿದ್ಯಮಾನಗಳ ಬಗ್ಗೆ ಚುಟುಕು ರೂಪದ ರಚನೆಗಳ ಮೂಲಕ ಪ್ರತಿಕ್ರಿಯಿಸುತ್ತಿರುವ ಅವರ ನಿತ್ಯಾಸಕ್ತಿ ಕಾಳಜಿಗೊಂದು ಸಾಕ್ಷಿ. ಈಗ ಅವರು 'ಮೌಲ್ಯಗಳ ಸರದಾರ ಡಾ. ರಾಜಕುಮಾರ್' ಎಂಬ ಮಹತ್ವದ ಗ್ರಂಥವನ್ನು ರಚಿಸಿರುವುದರ ಮೂಲಕ ಸಿನಿಮಾಸಕ್ತಿಯ ಗಂಭೀರತೆ ಮತ್ತು ಡಾ. ರಾಜಕುಮಾರ್ ಅವರ ಮಾನವೀಯ ಆನನ್ಯತೆಗೆ ಕನ್ನಡಿಯಾಗಿದ್ದಾರೆ.
ಡಾ. ರಾಜಕುಮಾರ್ ಅವರ ಸಾಧನೆಯನ್ನು ಕುರಿತು ಕನ್ನಡದಲ್ಲಿ ಅನೇಕ ಕೃತಿಗಳು ಪ್ರಕಟವಾಗಿವೆ. ಬಹುತಃ ಯಾವುದೇ ಚಲನಚಿತ್ರ ಕಲಾವಿದರನ್ನು ಕುರಿತು ಇಷ್ಟು ಸಂಖ್ಯೆಯ ಕೃತಿಗಳು ರಚನೆಯಾಗಿಲ್ಲ. ಇದು ರಾಜಕುಮಾರ್ ಅವರ ಸಿನಿಮಾ ಸಾಧನೆಗಷ್ಟೇ ಅಲ್ಲ ಅವರು ಬದುಕಿದ ರೀತಿ ನೀತಿಗಳಿಗೂ ಸಂದ ಗೌರವ. ಶ್ರೀ ಕೆ. ನಟರಾಜ್ ಅವರು ಈ ಗ್ರಂಥದಲ್ಲಿ ಡಾ. ರಾಜಕುಮಾರ್ ಅವರ ಮಾನವೀಯ ಮೌಲ್ಯಗಳನ್ನು ಸಿನಿಮಾ ಮತ್ತು ಬದುಕು-ಎರಡೂ ನೆಲೆಗಳಿಂದ ಕಟ್ಟಿಕೊಟ್ಟಿದ್ದಾರೆ.
ಡಾ. ರಾಜಕುಮಾರ್ ಅವರ ಅಭಿನಯದ 125 ಸಾಮಾಜಿಕ ವಸ್ತುವಿನ ಸಿನಿಮಾಗಳಲ್ಲಿ ಪ್ರಕಟಗೊಂಡಿರುವ ಸಾಮಾಜಿಕ ಮೌಲ್ಯಗಳನ್ನು ಶೋಧಿಸಿದ್ದಾರೆ. ಇದೊಂದು ಅಸಾಧಾರಣವಾದ ಕೆಲಸ. ಅಷ್ಟೂ ಚಿತ್ರಗಳನ್ನು ಗಂಭೀರವಾಗಿ ವೀಕ್ಷಿಸಿ, ಪರಿಶೀಲಿಸಿ, ಪರಿಶೋಧಿಸಿ ಬರೆಯುವುದು ಚಿಕ್ಕ ಪ್ರಯತ್ನವಲ್ಲ. ಇದು ರಾಜಕುಮಾರ್ ಅವರ ಸಿನಿಮಾಗಳ ಬಗೆಗಿನ ಆಸಕ್ತಿ ಮಾತ್ರವಾಗದೆ ನಟರಾಜ್ ಅವರು ಗೌರವಿಸುವ ಮೌಲ್ಯಗಳ ಆಸಕ್ತಿಯೂ ಆಗಿರುವ ಒಂದು ಪ್ರಬುದ್ಧ ಪ್ರಯತ್ನವಾಗಿದೆ. ಎರಡನೇ ಭಾಗದಲ್ಲಿ 'ಮೌಲ್ಯಗಳ ದಾರಿಯಲ್ಲಿ ಡಾ. ರಾಜ್' ಎಂಬ ಮುಖ್ಯ ಶೀರ್ಷಿಕೆಯ 50 ಸಂಕ್ಷಿಪ್ತ ಬರಹಗಳಿವೆ.
ಈ ಬರಹಗಳು ಡಾ. ರಾಜಕುಮಾರ್ ಅವರ ವ್ಯಕ್ತಿತ್ವವನ್ನು ಪರಿಚಯಿಸುವಲ್ಲಿ ಫಲಪ್ರದವಾಗಿವೆ. ಹಾಗೆ ನೋಡಿದರೆ ಸಿನಿಮಾಗಳಲ್ಲಿರುವ ಮೌಲ್ಯಗಳು ಮತ್ತು ರಾಜಕುಮಾರ್ ಅವರ ಜೀವನ ಮೌಲ್ಯಗಳಿಗೂ ಪರಸ್ಪರ ಸಂಬಂಧವಿದೆ. ಈ ಅಂಶವು 'ಮೌಲ್ಯಗಳ ಸರದಾರ ಡಾ. ರಾಜಕುಮಾರ್" ಗ್ರಂಥದಲ್ಲಿ ತಾನೇ ತಾನಾಗಿ ಮನವರಿಕೆಯಾಗುತ್ತದೆ. ಡಾ. ರಾಜಕುಮಾರ್ ಅವರ ವ್ಯಕ್ತಿತ್ವವನ್ನು ಹರಿವ ನೀರಿಗೆ ಹೋಲಿಸುವ ಮೂಲಕ ನಟರಾಜ್ ಅವರು ರಾಜಕುಮಾರ್ ಅವರ ಜಡಗೊಳ್ಳದ ಚಲನಶೀಲ ವ್ಯಕ್ತಿತ್ವವನ್ನು ನಿರೂಪಿಸಿದ್ದಾರೆ. ನಟರಾಜ್ ಅವರಿಗೆ ಡಾ. ರಾಜಕುಮಾರ್ ಎಂದರೆ 'ಸಹಜತೆಯೇ ಸಾಕಾರವೆತ್ತಿದ ಬೃಹತ್ ಚೇತನ'; 'ಜಾತಿ, ಧರ್ಮ ಎಲ್ಲವನ್ನೂ ಮೀರಿ ನಿಂತದ್ದು ಕಲೆ, ಎಂದು ಜಗತ್ತಿಗೆ ತೋರಿಸಿದ ಕನ್ನಡದ ಕಲಾಸಾಮ್ರಾಟ್': 'ಕನ್ನಡದ ಒಂದು ಧ್ರುವತಾರೆ'; 'ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿ' – ಈ ವಿಶೇಷಣೆಗಳ ವ್ಯಕ್ತಿತ್ವಕ್ಕೆ ಸಾಕ್ಷಿರೂಪವಾಗಿ ಈ ಗ್ರಂಥವು ಮೂಡಿಬಂದಿದೆ. ಶ್ರೀ ನಟರಾಜ್ ಅವರಿಗೆ ಅಭಿನಂದನೆಗಳು ಪ್ರಕಾಶಕ ಪರಶಿವಪ್ಪನವರಿಗೆ ಧನ್ಯವಾದಗಳು.
-ಬರಗೂರು ರಾಮಚಂದ್ರಪ್ಪ
Share

Subscribe to our emails
Subscribe to our mailing list for insider news, product launches, and more.