ಡಾ. ಕೆ. ಶಿವರಾಮ ಕಾರಂತ
Publisher: ಸಪ್ನ ಬುಕ್ ಹೌಸ್
Couldn't load pickup availability
ಒಬ್ಬ ಮನುಷ್ಯ ಒಂದೇ ಜನ್ಮದ ತನ್ನ ಜೀವಿತಕಾಲದಲ್ಲಿ ಇಷ್ಟೆಲ್ಲಾ ಓದಲು, ಬರೆಯಲು, ಕೆಲಸಗಳನ್ನು ಮಾಡಲು ಸಾಧ್ಯವೇ ಎನಿಸುತ್ತದೆ. ಇಂತಿಪ್ಪ ಕಾರಂತರು ತಮ್ಮದೇ ಸಂಪಾದಕತ್ವದ “ವಿಚಾರವಾಣಿ” ಎಂಬ ಕನ್ನಡ ವಾರಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನಗಳಿವು. ನಗುವನ್ನುಕ್ಕಿಸುವ ವಿಡಂಬನೆಗಳ ಸಂಕಲನವಿದು.
ಮೈಯ ಕೆಲಸ ಕಡಿಮೆ ಮಾಡುವುದೇ ಮೈಗಳ್ಳತನ ಎಂಬುದಾಗಿ ಸೂಚಿಸುತ್ತಾ, ಅದೇ ಜೀವನದ ಆದರ್ಶವಾಗಿರಬೇಕೆಂಬ ಧ್ಯೇಯವನ್ನು ಮೈಗೂಡಿಸಿಕೊಂಡಿದ್ದ ವ್ಯಕ್ತಿಯು ಯಾವ ಕೆಲಸ ಮಾಡಲೂ ಅವಸರ ಮಾಡುವುದಿಲ್ಲ, ಅಂದಮೇಲೆ ಅವನಿಗಿಂತ ಪರಮಹಂಸ ಇನ್ನೊಬ್ಬನಿಲ್ಲ ಎಂಬುದಾಗಿ ಮೈಗಳ್ಳತನವನ್ನು ಸಮರ್ಥಿಸಿಕೊಳ್ಳುವ ಸೋಮಾರಿಯ ದಿನಚರಿ ಹೇಗಿರುತ್ತದೆ ಎಂಬುದಕ್ಕೆ ನಿದರ್ಶನವಾಗಿ ಈ ಪುಸ್ತಕದಲ್ಲಿ 14 ಹರಟೆಗಳಿವೆ. ಬೆಳಿಗ್ಗೆ ಹಾಸಿಗೆಯಿಂದ ಏಳುವುದರ ಬಗ್ಗೆ, ಉಪನ್ಯಾಸ ನೀಡುವ ಬಗೆಯ ಕುರಿತಾಗಿ, ಚುನಾವಣೆಯ ಕುರಿತಾಗಿ, ಓದುವ ಬಗ್ಗೆ, ಸ್ನಾನದ ಬಗ್ಗೆ, ಮದುವೆಯ ಬಗ್ಗೆ ಸ್ವಾರಸ್ಯಕರವಾದ ಹರಟೆಗಳಿವೆ.
ಪುಸ್ತಕದ ಕೊನೆಯಲ್ಲಿ ಕಾರಂತರು ಸಾವನ್ನೂ ಬಿಡದೆ, ಸಾವಿನ ಕುರಿತಾಗಿಯೂ ಹೀಗೆ ಬರೆದಿದ್ದಾರೆ.
“ಸಾಯುವ ವಿಷಯದ ಮೈಗಳ್ಳನಾದವನು ಎಂದೂ ಆತುರ ತಾಳುವುದಿಲ್ಲ. ನಾಳೆ ಸ್ವರ್ಗ ಸಿಗುತ್ತದೆ ಎಂಬುದರಿಂದ. ಇವತ್ತು ಗಡಿಬಿಡಿ ಮಾಡಿ, ಉಸಿರಾಡಿಸಿ, ಜೀವವನ್ನು ದಣಿಸುವ ವ್ಯಕ್ತಿಯು ಸೋಮಾರಿಯಲ್ಲ. ಹಾಗೆ ಸ್ವರ್ಗಸುಖ ಬೇಡವೇ ಬೇಡ ಎನ್ನುವುದೂ ಇಲ್ಲ. ಆತುರದಿಂದ ಜನ ಹೋಗುತ್ತಾರೆ. ಅವರು ಹೋಗಿ ನೋಡಿಬರಲಿ. ಅಲ್ಲಿನ ಪರಿಸ್ಥಿತಿಯೇನೆಂದು ತಿಳಿದ ಬಳಿಕ ಸಾಯುವ ದಿನ ನಿಶ್ಚಯಿಸಬಹುದಲ್ಲ; ಈಗಲೇನೇ ಏನು ಆತುರ?”
ಅನನ್ಯವಾದ ಪುಸ್ತಕ. ನೀವೂ ಓದಿ. ನಮಸ್ಕಾರ
–ರಾಮಪುರ ರಘೋತ್ತಮ
