Prashantha Soratoora
Publisher -
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಕನ್ನಡ ಎರಡು ಸಾವಿರ ವರ್ಷಗಳ ಬರವಣಿಗೆಯ ಇತಿಹಾಸವುಳ್ಳ ನುಡಿಯೆಂದು ನಾವೆಲ್ಲರೂ ಹೆಮ್ಮೆ ಪಡುತ್ತೇವೆ. ಸಾವಿರಾರು ವರ್ಷಗಳ ಇಂತಹದೊಂದು ಕೊಂಡಿಯಲ್ಲಿ ನಮ್ಮ ಪೂರ್ವಜರು ಮತ್ತು ನಾವು ಬೆಸೆದುಕೊಂಡಿದ್ದೇವೆ ಅನ್ನುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿಯೂ ಹೌದು. ಆದರೆ ವಿಜ್ಞಾನ ಮತ್ತು ತಂತ್ರಜ್ಞಾನದ ಜಗತ್ತಿನ ಅತೀ ವೇಗದ ಈ ಹೊತ್ತಿನ ಬದಲಾವಣೆಗಳನ್ನು ಅರಿತುಕೊಳ್ಳಲು, ನಮ್ಮೊಳಗೆ ಇಂಗಿಸಿಕೊಂಡು ಅದರ ಪ್ರಗತಿಯಲ್ಲಿ ನಾವೂ ಕೊಡುಗೆ ಕೊಡುವಂತಾಗಲು ಮತ್ತು ಆ ಮೂಲಕ ಕನ್ನಡ ಜನರ, ನಾಡಿನ ಏಳಿಗೆಯ ಸಾಧನವಾಗಲು ಕನ್ನಡ ಸಜ್ಜಾಗಿದೆಯೇ ಅನ್ನುವ ಪ್ರಶ್ನೆ ಕೇಳಿಕೊಂಡಾಗ ಅಲ್ಲಿ ಇನ್ನೂ ಆಗಬೇಕಿರುವ ಕೆಲಸ ಸಾಕಷ್ಟಿದೆ ಅನ್ನುವುದು ಎದ್ದು ಕಾಣುತ್ತದೆ. ಕನ್ನಡವನ್ನು ಕೇವಲ ಸಾಹಿತ್ಯ, ಸಿನೆಮಾ, ನಾಟಕಗಳಿಗೆ ಮಿತಗೊಳಿಸದೆ ಜ್ಞಾನ ಜಗತ್ತಿನ ಬದಲಾವಣೆಗೆ ಸಜ್ಜಾದ ನುಡಿಯಾಗಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಅಡಿ ಮಟ್ಟದಿಂದ ಆಗಬೇಕಿರುವ ಹತ್ತಾರು ಕೆಲಸಗಳಿವೆ. ಅವುಗಳಲ್ಲಿ ಒಂದು ಕನ್ನಡ ಮಾಧ್ಯಮ ಶಾಲೆಯಲ್ಲಿ ಇಂದು ವಿಜ್ಞಾನದ ಕಲಿಕೆ ಹೇಗಿದೆ ಎಂದು ತಿಳಿದು, ಅಲ್ಲಿನ ಪಠ್ಯಕ್ರಮದಲ್ಲಿ ಬಳಸಲಾಗಿರುವ ಪದಗಳು ಹೇಗಿವೆ, ಅವು ಮಕ್ಕಳ ಕಲಿಕೆಗೆ ಪೂರಕವಾಗಿದೆಯೇ, ಇಲ್ಲದಿದ್ದಲ್ಲಿ ಯಾವ ರೀತಿಯ ಪದಗಳ ಬಳಕೆಯ ಮೂಲಕ ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಬಹುದು ಮತ್ತು ಒಟ್ಟಾರೆಯಾಗಿ ಇಂತಹ ಪ್ರಯತ್ನಗಳ ಮೂಲಕ ಕನ್ನಡದಲ್ಲೂ ಜ್ಞಾನ ಸೃಷ್ಟಿ ಮತ್ತು ಪಸರಿಸುವಿಕೆಯನ್ನು ಹೇಗೆ ಹೆಚ್ಚಿಸಬಹುದು ಅನ್ನುವ ಕುರಿತು ಚಿಂತಿಸುವುದು. ಅಂತಹ ಪ್ರಯತ್ನವೊಂದನ್ನು ಈ ಪುಸ್ತಕದ ಮೂಲಕ ಪ್ರಶಾಂತ ಸೊರಟೂರ ಅವರು ಮಾಡಿದ್ದಾರೆ. ಈ ಪುಸ್ತಕದ ಮೊದಲ ಭಾಗದಲ್ಲಿ ವಿಜ್ಞಾನದ ಕಲಿಕೆಯಲ್ಲಿ ಮಕ್ಕಳ ನುಡಿಯ ಪಾತ್ರವೇನು? ಪಾರಿಭಾಷಿಕ ಪದಗಳ ಸ್ವರೂಪ ಹೇಗಿರಬೇಕು ಅನ್ನುವ ಕುರಿತು ಚಿಂತನೆ ಇದ್ದರೆ ಎರಡನೆಯ ಭಾಗದಲ್ಲಿ ಕನ್ನಡ ಮಾಧ್ಯಮದ ಈಗಿನ ಪಠ್ಯಪುಸ್ತಕಗಳು ಮತ್ತು ಅಲ್ಲಿ ಬಳಸಲಾಗಿರುವ ಪದಗಳ ಕುರಿತು ಒಂದು ವಸ್ತುನಿಷ್ಟವಾದ ಅಧ್ಯಯನವಿದೆ. ಈ ಅಧ್ಯಯನದ ಜೊತೆ ಯಾವ ರೀತಿಯ ಪದಗಳ ಬಳಕೆಯ ಮೂಲಕ ಕನ್ನಡದಲ್ಲೂ ವಿಜ್ಞಾನದ ಕಲಿಕೆಯನ್ನು ಹೆಚ್ಚು ಚೆನ್ನಾಗಿಸಬಹುದು ಅನ್ನುವ ಕುರಿತು ಉದಾಹರಣೆಗಳಿವೆ. ಇಂತಹುದ್ದೇ ಪದಗಳನ್ನು ಬಳಸಬೇಕು ಅನ್ನುವ ಒತ್ತಾಯ ಇಲ್ಲಿ ಇಲ್ಲ. ಬದಲಿಗೆ ಇಂತಹದೊಂದು ಸಾಧ್ಯತೆಯನ್ನು ಆಸಕ್ತರ ಮುಂದಿಡುವುದು ಪ್ರಶಾಂತ ಅವರ ಆಶಯವಾಗಿದೆ. ಈ ಪುಸ್ತಕ ಶಿಕ್ಷಕರು, ಕನ್ನಡದಲ್ಲಿ ವಿಜ್ಞಾನದ ಪದಸಂಪತ್ತು, ಬರವಣಿಗೆ ಕಟ್ಟುತ್ತಿರುವ, ಕಟ್ಟಬೇಕೆಂದಿರುವ ಆಸಕ್ತರಿಗೆ ಒಂದು ಹೊಸ ನೋಟ ಕೊಡಬಹುದು ಅನ್ನುವ ಆಶಯ ನಮ್ಮದು. - ಮುನ್ನೋಟ ಟ್ರಸ್ಟ್

