T. S. Goravara
Publisher -
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಕಣ್ಣುಮುಟ್ಟುವತನಕ ಹರಡಿರುವ ಕಸುವುಳ್ಳ ಕಪ್ಪುಮಣ್ಣಿನ ಹೊಲ, ತನಗೆ ತಿಳಿದಾಗ ಬಂದು ಸುರಿದು ಹೋಗುವ ಮಳೆ, ಒಂದಕ್ಕೊಂದು ಜತ್ತು ತಪ್ಪಿದ ಒಗೆತನ, ಆದರೂ ಒಕ್ಕಿದ್ದಕ್ಕೆ ಕಣ ತುಂಬುವ ನೆಲದ ತಾಯ್ತನ, ರೋಣ, ಗಜೇಂದ್ರಗಡ, ನರಗುಂದ, ನವಲಗುಂದದ ಚೌಕಿಯ ಬಾಳೇವು ಇದು. ದಾಂಪತ್ಯವಿರಸದ ಮಕ್ಕಳಂತೆ ಉದ್ವೇಗದ ಏರುಗಚ್ಚಿನಲ್ಲಿರುವ ಜನೆ, ದುಡಿಮೆ-ವಿರಾಮ, ಪ್ರೀತಿ-ಜಗಳ, ಬಾಂಧವ್ಯ-ದ್ವೇಷ, ಕೂಡುಗಣ್ಣುವ-ಕೂಡಿ ಕಾದುವ ಎಲ್ಲದರಲ್ಲೂ ಪುಟ್ಟಪೂರಾ ಅನುಭವಿಸಿಯೇನೆಂಬ ತಾದ್ಯಾತ್ಮ, ಜಮೀನ್ದಾರಿಕೆಯ ಅಹಮಿಕೆಯನ್ನೇ ಅಲಕ್ಷ್ಯ ಮಾಡಿ ಎಲ್ಲರೊಳಗೊಂದಾಗಿ - ಬಾಳೇವು ಮಾಡಬೇಕೆಂಬ ಜೀವನ ವಿವೇಕವನ್ನು ಕಟ್ಟಿಕೊಂಡವರು, ಕಾರಿನ ಹಸಿರಿಲ್ಲ ಎಂದು ಕೊರಗದೆ, ಸುರೇಪಾನದ ಹಳದಿ ದಿಬ್ಬಣ ನಿಲಿಸಿ, ಸೌಖ್ಯದ ಪದರರೂಪೀ ಸಂರಚನೆಯನ್ನು ನಿರೂಪಿಸಿದ ಜನ, ಬಯಲುಸೀಮೆಯ ಜನಬದುಕಿನ ಕಥನವನ್ನು ಈ ಜೀವನ ವೃತ್ತಾಂತ ನೆನಪಿಸುತ್ತದೆ.
ಇದು, ಕೊಡ್ಲೆಪ್ಪ ಎಂಬ ಅಬೋಧ ಹುಡುಗ ತನ್ನ ಅನಾಥ ಪ್ರಜ್ಞೆಯೊಂದಿಗೆ ಗುದಮುರಿಗಿ ಹಾಕುತ್ತಲೇ ಬಾಳನ್ನು ಕಟ್ಟಿಕೊಂಡ ಕವಿತೆ, ಬಿರುಬಿಗಿದ ಮಣ್ಣ ಪದರದಿಂದ ಎಳೆಹುಲ್ಲಿನ ದಳಗಳು ತಲೆಯೆತ್ತುವ ಕಥೆ. ಈ ದೇಶದ ಸಾಮಾನ್ಯಾತಿ ಸಾಮಾನ್ಯನ ಬಾಳಸಂಪುಟ, ಲಿಂಗ ಜಾತಿ ಕುಲ ಕಷ್ಟಗಳಿಂದಲೂ 'ವಿಶಿಷ್ಟ' ಎಂದು ಗುರುತಿಸಿಕೊಳ್ಳಲು ಆಗದವನ ಚರಿತ್ರೆ, ಮನುಷ್ಯ ಬಾಳು ವಿಶಿಷ್ಟವಾಗುವುದು ಅವನದನ್ನು ನಿರ್ವಹಿಸುವ ಬಗೆಯಲ್ಲಿ ಎಂದು ತಿಳಿಸುವ ಟಿಪ್ಪಣಿ, ವ್ಯಕ್ತಿಕಥೆಯೊಂದಿಗೆ ಸಮುದಾಯ ಕಥೆಯನ್ನು ಬೆರೆಸಿದ ಲಾವಣಿ.
ಕಾರ್ಲೈಲ್ ಹೇಳುತ್ತಾನೆ - ಚರಿತ್ರೆಯಂದರ ಮತ್ತೇನೂ ಅಲ್ಲ, ಅಸಂಖ್ಯ ಜೀವನ ಚರಿತ್ರೆಗಳ ಸಾರಾಂಶ. ಹೌದಲ್ಲವೇ? ಚರಿತ್ರೆಯನ್ನು ಹೀಗೆ ತಿದ್ದಿಕೊಳ್ಳುವ ಅಗತ್ಯವಿದೆ. ಜೀವನ ಚರಿತ್ರೆ ಮಹೋನ್ನತ ಸಾಧನೆ ಮಾಡಿದವರ ಕಥನವೇ? ಹಾಗಿದ್ದರೆ ಮಹೋನ್ನತ ಎಂದರೇನು? ಕಟ್ಟಡ ಕಟ್ಟಲು ಸಿದ್ಧ ಪಡಿಯಚ್ಚಿನ ಕಲ್ಲುಗಳು ಮಾತ್ರ ಸಾಕಾಗದು. ಅವುಗಳನ್ನು ಬೆಸೆಯಲು ಪುಡಿ ಚೂಪುಗಲ್ಲುಗಳೂ ಬೇಕು. ಆ ಚೂಪುಗಲ್ಲುಗಳೂ ಅದೆಷ್ಟೋ ಉಳಿಪೆಟ್ಟು ತಿಂದೇ ಬಂದಿರುವುದು ತಾನೇ? ಜೀವನ ಚರಿತ್ರೆ ಬದುಕಿನ ತಾತ್ವಿಕತೆಗೆ ಕರೆಯುತ್ತಿದೆ. ನಾವೀಗ ವಿಸ್ಮೃತಿಯನ್ನು ನೀಗಿಕೊಳ್ಳುವ ಜನ ಚರಿತ್ರೆಯ ಮರುಸಂಕಥನದ ಅಗತ್ಯದಲ್ಲಿದ್ದೇವೆ. ಈ ಪುಸ್ತಕ ಅಂತಹ ಪ್ರಯತ್ನ.
ಪ್ರಕಾಶಕರು - ನವಕರ್ನಾಟಕ ಪ್ರಕಾಶನ
