ಮೇಘನಾ ಸುಧೀಂದ್ರ ಅವರ “ಮಿಲೇನಿಯಲ್ ಅಮ್ಮ” ಪುಸ್ತಕದ ಕುರಿತು ಜೋಗಿಯವರ ವಿಮರ್ಶೆ

ಮೇಘನಾ ಸುಧೀಂದ್ರ ಅವರ “ಮಿಲೇನಿಯಲ್ ಅಮ್ಮ” ಪುಸ್ತಕದ ಕುರಿತು ಜೋಗಿಯವರ ವಿಮರ್ಶೆ

ಪ್ರಿಯ ಮೇಘನಾ,

ನಿಮ್ಮ ಕಥೆ, ಕಾದಂಬರಿ, ವಿಜ್ಞಾನ ಲೇಖನಗಳ ಸಂಗ್ರಹ, ಬೆಂಗಳೂರಿನ ಕುರಿತ ಬರಹ, ಪ್ರವಾಸ ಕಥನ, ಬಾರ್ಸಿಲೋನಾ ಡೈರಿ ಇವನ್ನೆಲ್ಲ ಓದಿದ್ದೇನೆ. ಓದುತ್ತಾ ಒಬ್ಬರ ಕುರಿತು ನಮಗೆ ಒಂದು ಚಿತ್ರ ಮೂಡಿರುತ್ತದೆ. ಅವರ ಮುಂದಿನ ಕೃತಿ ಬಂದಾಗ ಅದೇ ಧಾಟಿಯಲ್ಲಿರಬಹುದು ಅಂದುಕೊಂಡಿರುತ್ತೇವೆ. ನಿಮ್ಮ ಹೊಸ ಪುಸ್ತಕ ಮಿಲೇನಿಯಲ್ ಅಮ್ಮ ಆ ನಂಬಿಕೆಯನ್ನು ಸುಳ್ಳಾಗಿಸಿದೆ.
ನಾನು ಬಹಳ ಕುತೂಹಲ ಮತ್ತು ಬೆರಗಿನಿಂದ ಇದನ್ನು ಓದಿದೆ. ಎಂದೂ ತಾಯಿಯಾಗದ, ತಂದೆಯಾಗುವ ವಯಸ್ಸು ಮೀರಿದ ನನ್ನನ್ನು ಅದು ಏಕೆ ಆಕರ್ಷಿಸಿತು ಅಂತ ಮತ್ತೆ ಮತ್ತೆ ಕೇಳಿಕೊಂಡೆ. ಅದು ನಿಮ್ಮ ಆತ್ಮಕಥನ ತುಣುಕಿನಂತೆಯೂ, ಅಮ್ಮನ ಗೊಣಗಾಟದಂತೆಯೂ, ತಾಯಿಯ ಅಕ್ಕರೆಯಂತೆಯೂ, ಪ್ರಕೃತಿಯ ಪಿಸುಮಾತಿನಂತೆಯೂ ಇದೆ. ಇವೆಲ್ಲದರ ಜತೆಗೆ, ಒಂಚೂರು ವೈಚಾರಿಕತೆ, ಸಾಂಸಾರಿಕ ತಾಪತ್ರಯ, ವೃತ್ತಿಜೀವನದ ಒತ್ತಡ, ಹೊಸಗಾಲದ ತಾಯಿಯ ಮೂಢನಂಬಿಕೆಗಳು, ವೈದ್ಯವಿಜ್ಞಾನವನ್ನು ಕಾರ್ಪೊರೆಟ್ ಆಸ್ಪತ್ರೆ ಮತ್ತು ಇನ್ಶೂರೆನ್ಸ್ ಮಾಫಿಯಾ ಬಳಸಿಕೊಳ್ಳುವ ರೀತಿ- ಈ ಎಲ್ಲದರ ಚಿತ್ರಣವೂ ನನ್ನ ಕಣ್ಮುಂದೆ ಬಂತು. ತಾಯಿಯಾಗುವುದು ಸುಲಭದ ಬಾಬತ್ತು ಅಲ್ಲ. ಈಗ ಅದೊಂದು ಮಹಾಯುದ್ಧ.
ನಾನು ಕೂಡ ವೈದ್ಯರ ನಿಗಾ ಮತ್ತು ನಿರಂತರ ತಪಾಸಣೆಯ ನಂತರ ಮೈಸೂರಿನ ಆಸ್ಪತ್ರೆಯಲ್ಲಿ ಹುಟ್ಟಿದವನು. ಅಮ್ಮ ಆಸ್ಪತ್ರೆಯ ನೆನಪುಗಳನ್ನು ಹೇಳುತ್ತಿದ್ದಳು. ಅನೇಕರ ಕತೆಗಳನ್ನು ನಾನೂ ಕೇಳಿಸಿಕೊಳ್ಳುತ್ತಿದ್ದೆ. ಮೊದಲ ಕಾರ್ಪೋರೆಟ್ ಆಸ್ಪತ್ರೆ ಬೆಂಗಳೂರಲ್ಲಿ ಹುಟ್ಟಿದಾಗ, ನಾವೆಲ್ಲ ಕುತೂಹಲಕ್ಕೆಂದು ಹೋಗಿ ಬಂದಿದ್ದೆವು. ನಮಗೆ ಗೊತ್ತಿದ್ದ ವೈದ್ಯರು ಅಲ್ಲಿನ ವಿದ್ಯಮಾನಗಳನ್ನೆಲ್ಲ ವಿವರಿಸಿದ್ದರು. ಅದಾಗಿ ಇಪ್ಪತ್ತು ವರ್ಷಗಳೇ ಕಳೆದಿವೆ. ಈಗ ಮತ್ತೇನೇನೇನೋ ಆಗಿದೆ. ನೀವು ವಿವರಿಸಿದ ವಸ್ತುವೈಭವ, ವೈದ್ಯಜಗತ್ತಿನ ವಿಸ್ಮಯಗಳೆಲ್ಲ ನನಗೆ ಹೊಸದು.
Title : Millennial Amma, Articles, Writer : Meghana Sudhindra, Publisher : Harivu Creations Pvt Ltd (Harivu Books).
ಇದರಲ್ಲಿ ತಾಯ್ತನದ ಅನುಭವದ ಜತೆಗೇ, ಅದರ ಆಚೀಚೆಯ ಸಾಂಸ್ಕೃತಿಕ, ಸಾಮಾಜಿಕ, ಮಾನಸಿಕ ಮತ್ತು ಮನೋದೈಹಿಕ ತಳಮಳಗಳನ್ನೆಲ್ಲ ವಿವರಿಸಿರುವ ಕಾರಣ, ಈ ಪುಸ್ತಕದ ತೂಕ ಹೆಚ್ಚಾಗಿದೆ. ನೀವು ತಾಯಾಗಿರುವುದು ಅವಳಿ ಮಕ್ಕಳಿಗಲ್ಲ, ಈ ಪುಸ್ತಕ ನಿಮ್ಮ ಮೂರನೇ ಮಗು ಅಂತ ನನಗೆ ಅನ್ನಿಸಿತು.
ನಾನು ಹೇಳುತ್ತಿರುತ್ತೇನಲ್ಲ, ಒಡಲ ನೂಲಿನಿಂದ ಜೇಡ ಹೆಣೆಯುವಂತೆ ಜಾಲ, ಅಂತರಂಗದಿಂದ ಹುಟ್ಟಿದ ಕತೆಗಳು ಯಾವತ್ತೂ ತಟ್ಟುತ್ತವೆ. ಇದು ಕೂಡ ಅಂಥದ್ದೇ ಕತೆ.

ಪ್ರೀತಿಯಿಂದ
ಜೋಗಿ
ಈ ಪುಸ್ತಕವನ್ನು ಕೊಳ್ಳಲು ಭೇಟಿ ಕೊಡಿ: ಮಿಲೇನಿಯಲ್ ಅಮ್ಮ
Back to blog

Leave a comment