ಮೇಘನಾ ಸುಧೀಂದ್ರ ಅವರ “ಮಿಲೇನಿಯಲ್ ಅಮ್ಮ” ಪುಸ್ತಕದ ವಿಮರ್ಶೆ

ಮೇಘನಾ ಸುಧೀಂದ್ರ ಅವರ “ಮಿಲೇನಿಯಲ್ ಅಮ್ಮ” ಪುಸ್ತಕದ ವಿಮರ್ಶೆ

ಡಿಯರ್ ಮೇಘನಾ ಸುಧೀಂದ್ರ, 1967-68 ಸುಮಾರಿಗೆ ಇರಬಹುದು, ಅನುಪಮಾ ನಿರಂಜನ ಅವರು ತಾಯಿ-ಮಗು ಎಂಬ ಪುಸ್ತಕವೊಂದನ್ನು ಬರೆದರು. ಸಹೃದಯ ವೈದ್ಯ ಸಂಗಾತಿ ಎಂಬ ಟ್ಯಾಗ್ ಲೈನ್  ಪುಸ್ತಕಕ್ಕೆ ಇತ್ತು. ಕಾಲದಲ್ಲಿ ತಾಯ್ತನಕ್ಕೆ ವೈಜ್ಞಾನಿಕ ಮತ್ತು ಸಾಮಾಜಿಕ ಘನಸ್ತಿಕೆಯನ್ನು ಕೊಡಿಸಿದ ಪುಸ್ತಕ ಅದು. ಅದನ್ನು ಆಗ ಹೆಣ್ಮಕ್ಕಳು ಕೊಂಡು ಓದಿದರು, ಅನುಸರಿಸಿದರು.

ನನ್ನ ಪ್ರಕಾರ ಕನ್ನಡದಲ್ಲಿ ಬಂದ ಮೆಟರ್ನಿಟಿಯ ಮೊದಲ ಕೃತಿ ಅದಾಗಿರಬೇಕು.

ಆಮೇಲಾಮೇಲೆ ನೂರು ಸಾವಿರ ಅಂಥ ಕೃತಿಗಳು ಬಂದಿವೆ. ಮೆಟರ್ನಿಟಿಯನ್ನು ಯೋಗ, ಆಯುರ್ವೇದ, ಆಧ್ಯಾತ್ಮಿಕ,ಜ್ಯೌತಿಷ ನೆಲೆಗಳಿಂದ ನೋಡುವ ಹತ್ತು ಹಲವು ಕೃತಿಗಳೂ ಇವೆ.

Title : Millennial Amma, Articles, Writer : Meghana Sudhindra, Publisher : Harivu Creations Pvt Ltd (Harivu Books).

ನಿಮ್ಮ ಮಿಲೇನಿಯಲ್ ಅಮ್ಮ ಕೃತಿಯನ್ನು ಓದಿದೆ. ಇದು ಆತ್ಮಗೀತೆಯಂತಿದೆ.ತಾಯಿಯಾಗುವ ಹೊತ್ತು ಮತ್ತು ತಾಯಿಯಾದ ಹೊತ್ತುಗಳೆರಡನ್ನು ನೀವು ನಿಮ್ಮ ಹೃದಯಭಾಷೆಯಲ್ಲಿ ಬರೆದುಕೊಂಡಿದ್ದೀರಿ. ಓದಿಗೆ ಹಿತವಾಗಿದೆ. ಕೃತಿಯನ್ನು ಓದುತ್ತಿರುವಾಗ ನನ್ನ ತಂಗಿಯೋ, ಸೊಸೆಯೋ ತಾಯಿಯಾಗುತ್ತಿರುವ ಕ್ಷಣಗಳನ್ನು ಅನುಭವಿಸುತ್ತಿದ್ದಂತೆ ಭಾಸವಾಯಿತು. ಮಿಲೀನಿಯಂ ಕಾಲದ ತಾಯಿಯರು, ತಾಯಿಯಾಗುತ್ತಿರುವವರು, ತಾಯಿಯಾಗಲು ನಿರ್ಧರಿಸಿದವರೆಲ್ಲಾ ನಿಮ್ಮ ಪುಸ್ತಕ ಓದಿ ನಿಮ್ಮ ಗದ್ಯವನ್ನು ತಮ್ಮ ಹೃದ್ಯವಾಗಿ ಮಾಡಿಕೊಳ್ಳಬೇಕು.

ಪುಸ್ತಕದಲ್ಲಿ ನೀವು ತಾಯ್ತನದ ಬೇರೆಬೇರೆ ಆಯಾಮಗಳನ್ನು ಘಟ್ಟಗಳನ್ನು ಮತ್ತು ಅದರ ಪಾವಿತ್ರ್ಯವನ್ನೂ ಬರೆದುಕೊಂಡಿದ್ದೀರಿ. ಅಮ್ಮನ ಭಾವುಕತೆ ಮತ್ತು ಹೆಣ್ಣಿನ ಮುಗ್ಧತೆ ಎರಡನ್ನೂ ನೀವು ಪುಸ್ತಕದಲ್ಲಿ ಅಲ್ಲಲ್ಲಿ ಕಾಣಿಸಿದ್ದೀರಿ.

ಅಪ್ಪ ತೀರಿಕೊಂಡ ಹೊತ್ತಲ್ಲಿ ಉಂಟಾಗಿಹೋದ ಶೂನ್ಯವನ್ನು ನೀವು ಮಕ್ಕಳ ಮೂಲಕ ತುಂಬಿಕೊಳ್ಳಲು ನಿರ್ಧರಿಸಿದ ಬಗ್ಗೆ ಹೇಳಿದ್ದೀರಿ. ನನ್ನ ಜೊತೆಗೆ ಯಾರು ಎಂಬ ಪ್ರಶ್ನೆಗೆ ಮಕ್ಕಳು ಎಂಬ ಉತ್ತರ ಸಿಕ್ಕಿತು ಎಂಬ ಮಾತು ಆರ್ದ್ರವಾಗಿದೆ. ಮನೋಮಯೀ ಮತ್ತು ಮಯಸ್ಕರರಿಗಲ್ಲದೇ ಇನ್ಯಾರಿಗೆ ಪುಸ್ತಕಪ್ರೀತಿ ಸಲ್ಲಿಸಲು ಸಾಧ್ಯ?

ನಮ್ಮ ಗುರುಗಳು ತಾಯ್ತನದ ಕುರಿತಾಗಿ ಒಂದು ಮಾತು ಹೇಳುವವರು. ವೇದಗಳಲ್ಲಿ ತಾಯಿಯೇ ಪ್ರಥಮ ಗುರು ಎಂದಿದ್ದಾರೆ ಕಣ್ರೀ. ನಾನು ನಿಮ್ಮ ಸೆಕೆಂಡ್ ಗುರು. ಸಾ ಮಾತಾ ಯಾ ಸುನೀತಿಭಿಃ ಪತಿಭಿಃ ಶಿಶುಂ ರಕ್ಷತಿ ಅಂದಿದೆ ವೇದ. ಮಾತಾ ಭೂಮಿ ಎಂದಿದ್ದೂ ವೇದ. ಹೀಗೆ ತಾಯಿ ಎನಿಸುವುದು ಗುರುವನ್ನೂ ದಾಟಿ ಮುಂದೆ ಹೋದ ಒಂದು ಪರಮ ಸ್ಥಿತಿ ಕಣ್ರಯ್ಯಾ

ನಿಮ್ಮ ಪುಸ್ತಕ ಓದುತ್ತಿದ್ದಾಗ ಮಾತು ಮತ್ತೆ ಮತ್ತೆ ನೆನಪಾಗುತ್ತಿತ್ತು.

ಈ ಪುಸ್ತಕವನ್ನು ಕೊಳ್ಳಲು ಭೇಟಿ ನೀಡಿ: ಮಿಲೇನಿಯಲ್ ಅಮ್ಮ

Back to blog

Leave a comment