B. Padmanabha Somayaji
ಯಕ್ಷಕನ್ಯೆ
ಯಕ್ಷಕನ್ಯೆ
Publisher -
- Free Shipping Above ₹250
- Cash on Delivery (COD) Available
Pages - 239
Type - Paperback
ಯಕ್ಷ ನವರಸ ಲೋಕ
ಪದ್ಮನಾಭ ಸೋಮಯಾಜಿಯವರು ಯಕ್ಷಗಾನವನ್ನು ಕೇಂದ್ರವನ್ನಾಗಿ ಇಟ್ಟುಕೊಂಡು ಬರೆದ ಕಾದಂಬರಿ, ಇದು 1962ರಲ್ಲಿ ಪ್ರಕಟವಾಯಿತು. ಅಂದರೆ ಈ ಕಾದಂಬರಿಯು ಪ್ರಕಟವಾಗಿ 62 ವರ್ಷಗಳಾದ ನಂತರ ಮರುಮುದ್ರಣವನ್ನು ಕಾಣುತ್ತಿದೆ. ಕಾಳಿದಾಸನು ತನ್ನ ಮಾಳವಿಕಾಗ್ನಿಮಿತ್ರ ನಾಟಕದಲ್ಲಿ 'ನಾಟ್ಯಂ ಭಿನ್ನರುಚೇರ್ಜನಸ್ಯ ಬಹುದಾತ್ಯೇಕಂ ಸಮಾರಾಧನಮ್' ಎಂದಿದ್ದಾನೆ. 'ನಾಟಕ ಎನ್ನುವುದು ಹಲವು ಅಭಿರುಚಿಗಳನ್ನು ಹೊಂದಿರುವ ಜನರಿಗೆಲ್ಲರಿಗೂ ತೃಪ್ತಿಯನ್ನು ಕೊಡಬಲ್ಲ ಏಕಮೇವ ಸಮಾರಾಧನೆ' ಎನ್ನುತ್ತಾನೆ. ಈ ಮಾತು ಯಕ್ಷಗಾನಕ್ಕೂ ಅನ್ವಯವಾಗುತ್ತದೆ ಎನ್ನುವುದರಲ್ಲಿ ಎರಡನೆಯ ಮಾತಿಲ್ಲ. ಯಕ್ಷಗಾನ ಎಂದರೆ ಎಲ್ಲರಿಗೂ ಪರಿಚಿತವಾದ ಪೌರಾಣಿಕ ಕಥೆ, ಸಂಭಾಷಣೆ, ಹಾಡು, ಸಂಗೀತ, ನೃತ್ಯ, ಅದ್ಭುತ ಮುಖವರ್ಣಿಕೆ, ಝಗಝಗಿಸುವ ಉಡುಪು, ದಿವ್ಯ ಮಂದ ಬೆಳಕಿನಲ್ಲಿ ಅಲೌಕಿಕ ಪರಿಸರವನ್ನು ಸೃಜಿಸಿ ನವರಸಗಳ ಪ್ರವಾಹವನ್ನೇ ಹರಿಸುವ ದೃಶ್ಯ ವೈಭವವಾಗಿದೆ.
ಗಣಪತಿ ಎನ್ನುವ ಯುವಕ ಯಕ್ಷಗಾನ ಕಲೆಗೆ ಮಾರುಹೋಗುತ್ತಾನೆ. ಕದ್ದುಮುಚ್ಚಿ ಯಕ್ಷಗಾನ ಆಟಗಳನ್ನು ನೋಡುತ್ತಾನೆ, ಯಕ್ಷಗಾನದ ಪಾತ್ರಗಳನ್ನು ಆವಾಹಿಸಿಕೊಂಡು ತಾನೇ ಹಾಡುತ್ತಾನೆ, ಕುಣಿಯುತ್ತಾನೆ, ಕಲ್ಪನಾ ಲೋಕದಲ್ಲಿ ವಿಹರಿಸುತ್ತಾನೆ, ಗೆಳೆಯರನ್ನು ಸೇರಿಸಿಕೊಂಡು ಯಕ್ಷಗಾನ ಕೂಟವನ್ನು ಕಟ್ಟುತ್ತಾನೆ, ಯಕ್ಷಗಾನ ಪ್ರಸಂಗಗಳ ಪುಸ್ತಕಗಳನ್ನು ಹುಡುಕಿ ಹುಡುಕಿ ಓದುವುದರಲ್ಲಿ ಶಾಲೆಯ ಪಾಠಗಳು ಹಿಂದಕ್ಕೆ ಬೀಳುತ್ತವೆ. ಕೊನೆಗೆ ಮನೆಯಿಂದ ಹೊರಬರುವುದು ಅನಿವಾರ್ಯವಾಗುತ್ತದೆ.
'ಕಲಾದೇವಿ ಎಲ್ಲರನ್ನು ಕೈ ಬೀಸಿ ಕರೆಯುತ್ತಾಳೆ. ಆದರೆ ಆಕೆಯು ಕೈ ಹಿಡಿಯುವುದು ಒಬ್ಬಿಬ್ಬರನ್ನು ಮಾತ್ರ' ಎಂಬ ನುಡಿಯು ಪ್ರಚಲಿತದಲ್ಲಿದೆ. ಇದು ಸತ್ಯ. ಏಕೆಂದರೆ ಕಲಾ ಮಾಧ್ಯಮದಲ್ಲಿ ಉತ್ತುಂಗ ಮಟ್ಟವನ್ನು ತಲುಪಿದ ಕಲಾವಿದನು ಸಾಮಾನ್ಯವಾಗಿ ಹೆಣ್ಣು- ಹೊನ್ನು ಮಣ್ಣಿನ ಕಾರಣ ಅಳಿಯಬೇಕು ಅಥವಾ ತನ್ನ ಅಹಂಕಾರದ ಭಾರವನ್ನು ತಾಳಲಾಗದೇ ಸ್ವಯಂ ಅವಸಾನವಾಗಬೇಕು. ಇಲ್ಲವೇ ಅವನ ಕಲಾ ಪ್ರೌಡಿಮೆಯನ್ನು ಸಹಿಸಕೊಳ್ಳಲಾಗದ ಅರೆಬೆಂದ ಕಲಾವಿದರ ಕ್ರೋಧಕ್ಕೆ ಬಲಿಯಾಗಿ ಸಾಯಬೇಕು... ಒಂದೂ ಕಪ್ಪು ಚುಕ್ಕೆಯಿಲ್ಲದ ಕಲಾವಿದ ಬಹುಶಃ ಇಲ್ಲವೇ ಇಲ್ಲವೇನೋ!
ವಿದ್ವಾನ್ ಬಂಟ್ವಾಳ ಪದ್ಮನಾಭ ಸೋಮಯಾಜಿಯವರು (1917-1977) ಸಂಸ್ಕೃತ ಮತ್ತು ಕನ್ನಡದಲ್ಲಿ ವಿದ್ವತ್ ಪರೀಕ್ಷೆಯನ್ನು ಪೂರ್ಣಗೊಳಿಸಿ, ಸ್ವಯಂ ಮಹಾರಾಜರ ಕೈಯಿಂದ ಚಿನ್ನದ ಪದಕವನ್ನು ಪಡೆದವರು. ಯಕ್ಷಗಾನದಲ್ಲಿ ಸ್ವಯಂ ಆಸಕ್ತಿಯನ್ನು ತಳೆದಿದ್ದವರು. ಇವರು ಆರು ಕಾದಂಬರಿಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಅವರ ಸಮಕಾಲೀನ ಕಾದಂಬರಿ 'ಯಕ್ಷಕನ್ಯೆ'. ಕರಾವಳಿಯ ಕಲಾ ಪ್ರಪಂಚಕ್ಕೆ ಸಂಬಂಧಿಸಿದ ರಸವತ್ ಕಾದಂಬರಿ, 1962ರಲ್ಲಿ ರಚನೆಯಾದ ಈ ಕಾದಂಬರಿಯು ಮರುಮುದ್ರಣವಾಗಿ ನಿಮ್ಮ ಕೈಯಲ್ಲಿದೆ. ಯಕ್ಷಗಾನದ ನವರಸಗಳನ್ನು ಸುಖಿಸುವ ಭಾಗ್ಯವು ತಮ್ಮದಾಗಲಿ.
-ಡಾ| ನಾ. ಸೋಮೇಶ್ವರ
Share
Subscribe to our emails
Subscribe to our mailing list for insider news, product launches, and more.