Skip to product information
1 of 2

Dr. N. Jagadish Koppa

ಮಿರ್ಜಾ ಗಾಲಿಬ್

ಮಿರ್ಜಾ ಗಾಲಿಬ್

Publisher -

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 136

Type - Paperback

Gift Wrap
Gift Wrap Rs. 15.00
ಮಿರ್ಜಾ ಗಾಲಿಬ್ ಕಥನ

ಮಿರ್ಜಾ ಗಾಲಿಬ್ ಎಂಬುದು ಕೇವಲ ವ್ಯಕ್ತಿಯೊಬ್ಬನ ಹೆಸರು ಮಾತ್ರವಲ್ಲ, ಅದು ಭಾರತೀಯ ಉರ್ದು ಸಾಹಿತ್ಯದಲ್ಲಿ ಅಚ್ಚಳಿಯದ ಒಂದು ಹೆಸರು. ಗಾಲಿಬ್ ನಮ್ಮನ್ನು ಅಗಲಿ ಒಂದೂವರೆ ಶತಮಾನ ಕಳೆದರೂ, ಉರ್ದು ಸಾಹಿತ್ಯ ಪ್ರಿಯರ, ವಿದ್ವಾಂಸರ ನಾಲಿಗೆಯ ಮೇಲೆ ಈತನ ಗಜಲ್‌ಗಳು ಮತ್ತು ಕಸಿದಾ ಎಂಬ ಉರ್ದು ಕಾವ್ಯ ಪ್ರಕಾರಗಳು ಇಂದಿಗೂ ನಲಿದಾಡುತ್ತವೆ.

ತಾನು ಬದುಕಿದ ವರ್ತಮಾನದ ತಲ್ಲಣಗಳನ್ನು, ವೈಯಕ್ತಿಕ ಬದುಕಿನ ದುರಂತರಗಳನ್ನು, ವಿಪರ್ಯಾಸಗಳನ್ನು, ವಿಷಣ್ಣತೆಯನ್ನು ಜೊತೆಗೆ ತಾನು ಪ್ರೀತಿಸಿ ಆರಾಧಿಸಿದ ಹೆಣ್ಣಿನ ಮೇಲಿನ ಉತ್ಕಟ ಪ್ರೀತಿಯನ್ನು ಹಾಗೂ ಪ್ರೀತಿಯ ದುರಂತವನ್ನು ಹೃದಯ ಕಿತ್ತು ಅಂಗೈಲಿಟ್ಟುಕೊಂಡು ಬಣ್ಣಿಸಿದಂತೆ ಕಾವ್ಯದಲ್ಲಿ ಹಿಡಿದಿಟ್ಟ ಅಪ್ರತಿಮ ಉರ್ದು ಮತ್ತು ಪರ್ಶಿಯನ್ ಕವಿ ಮಿರ್ಜಾ ಗಾಲಿಬ್.

ಹತ್ತೊಂಬತ್ತನೇ ಶತಮಾನದಲ್ಲಿ ದಿಲ್ಲಿಯ ಕೊನೆಯ ಮೊಗಲ್ ದೊರೆ ಬಹದ್ದೂರ್ ಶಾನ ಆಸ್ಥಾನದಲ್ಲಿ ಕವಿಯಾಗಿದ್ದುಕೊಂಡು, ತನ್ನ ಸಮಕಾಲೀನ ಪ್ರತಿಭಾವಂತ ಕವಿಗಳ ಜೊತೆ ಬೌದ್ಧಿಕವಾಗಿ ಸೆಣೆಸಾಡುತ್ತಾ, ಉರ್ದು ಮತ್ತು ಪರ್ಶಿಯನ್ ಭಾಷೆಯಲ್ಲಿ ಕಾವ್ಯ ಪ್ರಕಾರಗಳಾದ ಗಜಲ್ ಹಾಗೂ ದೊರೆಗಳನ್ನು ಸ್ತುತಿಸುವ ಕಾವ್ಯದ ಇನ್ನೊಂದು ಪ್ರಕಾರವಾದ `ಕಸಿದಾ’ದಲ್ಲೂ ತನ್ನ ಪ್ರಖರವಾದ ಪ್ರತಿಭೆಯನ್ನು ಅನಾವರಣಗೊಳಿಸಿದ ಗಾಲಿಬ್, ಧಾರ್ಮಿಕ ಶ್ರದ್ಧೆಗೆ ತಿಲಾಂಜಲಿ ಇತ್ತು, ಅಪ್ಪಟ ರಸಿಕನಂತೆ ಬದುಕಿದವನು.

1857 ರಲ್ಲಿ ಸಂಭವಿಸಿದ `ಸಿಪಾಯಿ ದಂಗೆ’ ಕ್ರಾಂತಿಗೆ ಸಾಕ್ಷಿಯಾದನು. ದಂಗೆಯ ನಂತರ ಬ್ರಿಟಿಷರು ನಡೆಸಿದ ಅಮಾನುಷ ನರಮೇಧವನ್ನು ಕಣ್ಣಾರೆ ಕಂಡವನು. ಜೊತೆಗೆ ತಡೆಯಲಾರದೆ ಜೀವಭಯದಲ್ಲೂ ತನ್ನ ದಿನಚರಿ ಹಾಗೂ ಗೆಳೆಯರಿಗೆ ಬರೆದ ಪತ್ರಗಳಲ್ಲಿ ಎಲ್ಲಾ ಘಟನೆಗಳನ್ನು, ತನ್ನ ತಳಮಳಗಳನ್ನು ದಾಖಲಿಸಿ ಇತಿಹಾಸ ಸೃಷ್ಟಿಸಿದವನು. ದಂಗೆಯ ನಂತರದ ಬ್ರಿಟಿಷರ ಆಟಾಟೋಪಕ್ಕೆ ನಲುಗಿದ ಭಾರತೀಯರ ಮನಸ್ಸು ಮತ್ತು ಸಮಾಜದ ನೋವನ್ನು ದಾಖಲಿಸಲು ಭಾರತದ ಎಲ್ಲಾ ಭಾಷೆಗಳ ಸಾಹಿತ್ಯ ವಿಫಲವಾಗಿ ಮೌನವಾಗಿದ್ದ ಸಂದರ್ಭದಲ್ಲಿ ಈ ಎಲ್ಲಾ ಘಟನೆಗಳನ್ನು ದಾಖಲಿಸುವ ಮೂಲಕ ಉರ್ದು ಸಾಹಿತ್ಯಕ್ಕೆ ಮಿರ್ಜಾ ಗಾಲಿಬ್ ಘನತೆ ತಂದಿತ್ತನು.

ದೆಹಲಿ ನಗರದಲ್ಲಿ ಬದುಕಿನ ಏರಿಳಿತಗಳ ನಡುವೆ ಒಬ್ಬ ಮಿನಿ ನವಾಬನಂತೆ ಬದುಕಿದ ಗಾಲಿಬ್‌ನನ್ನು ನೀವು ಕವಿ, ಕುಡುಕ, ಪ್ರೇಮಿ, ರಸಿಕ, ಭಗ್ನಪ್ರೇಮಿ, ಧರ್ಮಭಂಜಕ, ಸಾಲಗಾರ, ಜೂಜುಕೋರ, ಅತ್ಯುತ್ತಮ ಮಾತುಗಾರ, ಹಾಸ್ಯಗಾರ, ಎತ್ತರದ ನಿಲುವಿನ ನೀಳಮೂಗಿನ ಸುಂದರ ಕಾಯದ ರೂಪವಂತ ಹೀಗೆ ಎಲ್ಲಾ ಉಪಮೆಗಳನ್ನು ಬಳಸಿ ಬಣ್ಣಿಸಿದರೂ, ಮಿರ್ಜಾ ಗಾಲಿಬ್‌ನ ವರ್ಣನೆಗೆ ಇವುಗಳು ಸಾಲುವುದಿಲ್ಲ. ಕಾವ್ಯವನ್ನು ತಿನ್ನುವ ಅನ್ನದಂತೆ, ಸುಖಿಸುವ ಮೈಥುನದಂತೆ, ಉಸಿರಾಡುವ ಗಾಳಿಯಂತೆ ಪ್ರೀತಿಸಿದವನು ಗಾಲಿಬ್. ತಾನು ಸೃಷ್ಟಿಸುವುದೆಲ್ಲಾ ಶ್ರೇಷ್ಠವಾಗಿರಬೇಕೆಂಬ ಹಠಕ್ಕೆ ಬಿದ್ದು ಅತ್ಯುತ್ತಮ ಕಾವ್ಯವನ್ನು ರಚಿಸಿ ಗೆದ್ದವನು.

ಗಾಲಿಬ್‌ನ ಕಾವ್ಯದಲ್ಲಿ ಏನುಂಟು ಏನಿಲ್ಲ? ಸೂಫಿ ಸಂತರ ದಾರ್ಶನಿಕ ಒಳನೋಟವಿದೆ. ತುಂಟ ಪ್ರೇಮಿಯ ಕುಹಕ ನೋಟವಿದೆ. ಪ್ರಾಮಾಣಿಕವಾಗಿ ಪ್ರೀತಿಸಿದ ಪ್ರೇಮಿಯೊಬ್ಬನ ಆರ್ತನಾದವಿದೆ. ಭಗ್ನಪ್ರೇಮಿಯ ಒಡೆದುಹೋದ ಹೃದಯ ಚೂರುಗಳ ಮಿಡಿತದ ಶಬ್ದವಿದೆ. ಕುಡುಕನೊಬ್ಬನ ರೋಮಾಂಚನವಿದೆ. ಸಮಾಜವನ್ನು ಗೇಲಿಮಾಡುವ ವಿದೂಷಕನೊಬ್ಬನ ಹಾಸ್ಯಪ್ರಜ್ಞೆ ಇದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಗಾಲಿಬ್‌ನ ಕಾವ್ಯದ ಆಳದಲ್ಲಿ ಅಪ್ಪಟ ಮನುಷ್ಯನೊಬ್ಬನ ತಾಜಾತನದ ತುಡಿತಗಳಿವೆ. ಈ ಕಾರಣಕ್ಕಾಗಿ ಗಾಲಿಬ್ ಇಂದಿಗೂ ಭಾರತದ ಎಲ್ಲಾ ಭಾಷೆಗಳ ಕಾವ್ಯ ಪ್ರೇಮಿಗಳ ಪ್ರೀತಿಯ ಕವಿಯಾಗಿದ್ದಾನೆ.
View full details