Skip to product information
1 of 1

Somu Reddy

ಕಂದೀಲು

ಕಂದೀಲು

Publisher - ಕಾನ್‌ಕೇವ್ ಮೀಡಿಯಾ

Regular price Rs. 130.00
Regular price Rs. 130.00 Sale price Rs. 130.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 136

Type - Paperback

ದೊಡ್ಡ ಮನುಷ್ಯರ ನಡುಮನೆಗಳಲ್ಲಿ ಹುಲಿಯ ಚರ್ಮ, ಜಿಂಕೆಯ ಕೋಡು, ಕತ್ತಿ, ಕಠಾರಿ, ಬಂದೂಕುಗಳನ್ನು ತೂಗು ಹಾಕಿ ಸಿಂಗರಿಸುವುದನ್ನು ಕಂಡಾಗಲೆಲ್ಲ ಗಾಂಧೀಜಿಗೆ ಆ ಜಾಗದಲ್ಲಿ ಚರಕ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎನ್ನಿಸುತ್ತದೆ. 'ಮುಸೊಲಿನಿಯ ಬಂಗಲೆಯ ಗೋಡೆಗೆ ತೂಗುಹಾಕಿರುವ ಬಂದೂಕು ನೋಡುವವರಲ್ಲಿ ಹಿಂಸೆಯ ಮನಸ್ಥಿತಿಯನ್ನು ಸೃಷ್ಟಿಸುತ್ತದೆ' ಎನ್ನುವ ಗಾಂಧೀಜಿಗೆ, ಅಲ್ಲಿ ಚರಕ ಇದ್ದಿದ್ದರೆ ಅಹಿಂಸೆಯ ಸಂದೇಶ ಹಬ್ಬಿಸುತ್ತಿತ್ತು ಎಂಬುದರಲ್ಲಿ ಅನುಮಾನವಿರಲಿಲ್ಲ.

ರೇಣುಕಾ ಕೋಡಗುಂಟಿಯವರ 'ಕಂದೀಲಿನ ಕುಡಿ' ಸಂಕಲನದ 'ಗಾಂಧಿ ಮತ್ತು ದೇವರು' ಕವಿತೆ ಗಾಂಧೀಜಿಗಿಂತ ಕೊಂಚ ಮುಂದೆ ಸಾಗಿ ಅಹಿಂಸೆಯ ಐಡಿಯಾವನ್ನು ಅರ್ಥಪೂರ್ಣವಾಗಿ ವಿಸ್ತರಿಸುತ್ತಾ, 'ನಮ್ಮ ದೇವತೆಗಳ ಕೈಯಲ್ಲಿ ಆಯುಧಗಳನ್ನು ಕಂಡಾಗಲೆಲ್ಲ ಗಾಂಧಿಯ ಕೈಯಲ್ಲಿನ ಚರಕ ನೆನಪಾಗುತ್ತದೆ' ಎಂದಾಗ ನಿಜಕ್ಕೂ ಅಚ್ಚರಿಯಾಯಿತು. ಅವರ 'ಕೌದಿ' ಕವಿತೆಯಲ್ಲಿ ಬುದ್ಧ, ಬಸವ, ಗಾಂಧಿ, ಅಕ್ಕ, ಅಲ್ಲಮರು ತಮ್ಮನ್ನೆಲ್ಲ ಕೌದಿಯ ತೇಪೆಯಾಗಿಸುವಂತೆ ಕೌದಿ ಹೊಲಿಯುವಾಕೆಯನ್ನು ಬೇಡಿ, ಸೂಜಿ ಚುಚ್ಚಿಸಿಕೊಂಡು ಖುಷಿಪಡುವ ದೃಶ್ಯ ಗಾಂಧೀ ತಾತ್ವಿಕತೆಯನ್ನು ಇನ್ನಷ್ಟು ಆಳವಾಗಿಸುತ್ತದೆ. ರೇಣುಕಾರ ಅಸಲಿ ಕವಿನೋಟದಿಂದ ಹುಟ್ಟುವ ಇಂಥ ಸುಂದರ ಚಿತ್ರಗಳು; 'ಸಮಯ' ಕವಿತೆಯಲ್ಲಿರುವ 'ಅಪ್ಪ ಕಟ್ಟಿದ ಮನೆಯ ಇಟ್ಟಿಗೆಯನ್ನು ಮಗ ಎಣಿಸುತ್ತಾ ಕೂತಿದ್ದಾನೆ... ಅಪ್ಪ ಕಟ್ಟಿದ ಗೋಡೆಯ ಭಾರ ಇಳಿಯಲೇ ಇಲ್ಲ... ಅವ್ವ ಒಗೆದ ಸೀರೆಯ ಕಲೆಗಳು ಹೋಗಲೇ ಇಲ್ಲ' ಥರದ ವಿಷಾದದ ಪ್ರತಿಮೆಗಳು ಅವರ ಕವಿತ್ವದ ಸಾಧ್ಯತೆಯನ್ನು ನಿಚ್ಚಳವಾಗಿ ಕಾಣಿಸುತ್ತವೆ.

ಸಂಸ್ಕೃತಿ ಸಂಶೋಧಕಿಯಾಗಿರುವ ರೇಣುಕಾ ಮಾಡುತ್ತಿರುವ ಗಂಭೀರ ಸಾಂಸ್ಕೃತಿಕ ಅಧ್ಯಯನಗಳು ಅವರ ಕವಿತೆಗಳಿಗೆ ಅಂಚಿನ ಸಂಸ್ಕೃತಿಗಳ ಪಿಸುದನಿಗಳನ್ನು, ಚೌಡಕಿ, ಬುಡಬುಡಕಿಯ ಲಯಗಳನ್ನು ಕೊಟ್ಟಿವೆ. ಸಂಕಲನದ ಮೊದಲ ಪದ್ಯದಲ್ಲೇ ಮಸ್ಕಿ ಕಡೆಯ ಲಯ, ನುಡಿಗಟ್ಟುಗಳು ಕಾವ್ಯಭಾಷೆಯಾಗುವುದನ್ನು ಕಂಡಾಗ ಅವರ ತಾಜಾ ಕಾವ್ಯಶಕ್ತಿ ಇಲ್ಲಿದೆ ಎನ್ನಿಸತೊಡಗುತ್ತದೆ. ನಂತರ ಇಲ್ಲಿ ಹಣಿಕಿಕ್ಕುವ ಮಧ್ಯಮ ವರ್ಗದ ಕಾವ್ಯಭಾಷೆ ಕಲ್ಯಾಣ ಕರ್ನಾಟಕದ ಕಡೆಯಿಂದ ಬಯಲುಸೀಮೆಗೆ ಬಂದ ಕವಯಿತ್ರಿಯರ ಸೃಜನಶೀಲ ಬಿಕ್ಕಟ್ಟನ್ನೂ ಸೂಚಿಸುತ್ತದೆ. ಈ ನಡುವೆಯೂ ರೇಣುಕಾಗೆ ತನ್ನ ಸೀಮೆಯ ನುಡಿಗಟ್ಟುಗಳು, ಜೀವನದರ್ಶನಗಳು ಒದಗಿ ಬಂದಾಗಲೆಲ್ಲ ಅವರ ಕವಿತೆಗಳಲ್ಲಿ ಹೊಸ ದನಿ, ಹೊಸ ಅರ್ಥಗಳು ಮೂಡತೊಡಗುತ್ತವೆ.

ಆರೋಗ್ಯಕರ ನಿಲುವು, ಸ್ತ್ರೀವಾದಿ ಪ್ರಗತಿಪರತೆ, ಸಮಕಾಲೀನ ರಾಜಕೀಯ-ಸಾಮಾಜಿಕ ಸಂವೇದನೆಗಳು ಬೆರೆತ ಕವಿತೆಗಳನ್ನು ಬರೆಯುತ್ತಿರುವ ರೇಣುಕಾ ಕೋಡಗುಂಟಿಯವರ ಸಂಶೋಧನಾ ಲೋಕದ ಸಾಮುದಾಯಿಕ ಕಾಣ್ಕೆ, ಅವರೊಳಗೆ ಹರಿಯುತ್ತಿರುವ ನೆಲದ ಭಾಷೆ ಅವರ ಕಾವ್ಯದಲ್ಲಿ ಇನ್ನಷ್ಟು ಹದವಾಗಿ ಬೆರೆಯಲಿ, ಅವರ ಸಂಶೋಧಕ ವ್ಯಕ್ತಿತ್ವ ಹಾಗೂ ಕವಿಮನಗಳೆರಡೂ ಬಿರುಕೊಡೆಯದೆ ಬೆಸೆದು, ಅವರ ಕವಿತೆಯ ಕಂದೀಲು ಸದಾ ಬೆಳಕು ಚೆಲ್ಲುತ್ತಿರಲಿ!

-ನಟರಾಜ್ ಹುಳಿಯಾರ್

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)