Dr. I. J. Myageri
ಜೈಲ್ ಡೈರಿ
ಜೈಲ್ ಡೈರಿ
Publisher -
- Free Shipping Above ₹300
- Cash on Delivery (COD) Available
Pages - 112
Type - Paperback
Couldn't load pickup availability
ಗೆಳೆಯ ಡಾ.ಐ.ಜೆ.ಮ್ಯಾಗೇರಿಯವರ ಜೈಲುಕತೆಗಳನ್ನು ಓದುವಾಗ ನನಗೆ ಚೆಕಾವ್‌ನ ಕಥೆ ನೆನಪಿಗೆ ಬಂದಿತು. ಹಣಕ್ಕಾಗಿ ಅಣ್ಣನನ್ನೇ ಕೊಂದ ತಮ್ಮನ ಕತೆಯನ್ನು ಓದುವಾಗಲಂತೂ ಚೆಕಾವ್‌ನ ಕತೆಯು ಬೇರೊಂದು ಬಗೆಯಲ್ಲಿ ತಿರುವು ಪಡೆದಿದೆ ಎಂದು ಅನಿಸಿತು. ನಮ್ಮ ಸಮಾಜದ ಸಂಕಟಗಳಿಗೆ ಅತಿ ಸಮೀಪದರ್ಶನ ಸಿಗುವುದು ವೈದ್ಯರಿಗೆ, ಪೊಲೀಸರಿಗೆ, ವಕೀಲರಿಗೆ ಮತ್ತು ಜೈಲು ಅಧಿಕಾರಿಗಳಿಗೆ ಎಂದು ಕಾಣುತ್ತದೆ. ತಮಗೆ ಸೇವಾವಧಿಯಲ್ಲಿ ಭೇಟಿಯಾದ 'ಅಪರಾಧಿ'ಗಳನ್ನು, ಅವರಿಂದ ಪಡೆದ ಅನುಭವವನ್ನು ಮ್ಯಾಗೇರಿಯವರು ಇಲ್ಲಿ ನಿರೂಪಿಸಿಕೊಂಡಿದ್ದಾರೆ. ಇದೊಂದು ಕನ್ನಡದಲ್ಲಿ ವಿಶಿಷ್ಟ ಪುಸ್ತಕವಾಗಿದೆ. ಇದು ಕೈದಿಗಳ ಹಿನ್ನೆಲೆಯಲ್ಲಿ ಅಡಗಿರುವ ಅಸಹಾಯಕತೆ, ದಾರುಣ ಬದುಕು ಮತ್ತು ಕ್ರೌರ್ಯಗಳನ್ನು ಶೋಧಿಸುತ್ತದೆ. ಇದನ್ನು ಓದುವಾಗ ಬದುಕು ಇಷ್ಟೊಂದು ಕ್ರೂರವಾಗಿರಲು ಸಾಧ್ಯವೇ ಎಂದು ಸೋಜಿಗವೂ ಗಾಬರಿಯೂ ಆಗುತ್ತದೆ. ಹಸಿ ಬಾಣಂತಿಯನ್ನು ತನ್ನ ಕಾಮುಕತೆಗಾಗಿ ಕೊಂದ ಕುಡುಕ ಗಂಡನ ಪ್ರಸಂಗ ಓದುತ್ತಿದ್ದ ಹಾಗೆ ನಡುಗಿಹೋದೆ. ತಾಯಿಯೇ ಮಗನಿಗೆ ಸುಪಾರಿ ಕೊಟ್ಟು ಕೊಲ್ಲಿಸುವ ಕಥೆಯೂ ಹೀಗೇ ಇದೆ. ಇಲ್ಲಿನ ಕ್ರೌರ್ಯಕ್ಕೆ ಹೆಚ್ಚು ಬಲಿಪಶುಗಳು ಮಹಿಳೆಯರೇ ಆಗಿದ್ದಾರೆ. ಆದರೆ ಈ ಕೊಲೆಗಾರ ಕಳ್ಳರ ಜಗತ್ತಿನಲ್ಲಿ ಕೇವಲ ಅಪರಾಧವಿಲ್ಲ. ಮಾನವೀಯ ಸಂಬಂಧಗಳ ಎಳೆಗಳೂ ಇವೆ. ತನ್ನ ಸಂಸಾರವನ್ನು ಬಿಟ್ಟು ಜೈಲಿಗೆ ಹೋಗಲು ಆಗದೆ ಪೆರೋಲಿನ ಮೇಲೆ ಬಿಡುಗಡೆಯಾಗಿದ್ದ ಒಬ್ಬ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗವನ್ನು ಗಮನಿಸಬಹುದು.
ವಿಶೇಷವೆಂದರೆ, ಲೇಖಕರು ತಮ್ಮ ಅನುಭವವನ್ನು ನಿರೂಪಿಸುತ್ತ ಕಟ್ಟಿರುವ ಈ ಕಥನವು ಚಿಂತನೆಯಾಗಿ ರೂಪಾಂತರಗೊಂಡಿದೆ. ಈ ಚಿಂತನೆಯಲ್ಲಿ ಬದುಕಿನ ಪ್ರೀತಿಯೂ, ಚಂದವಾಗಿದ್ದ ಬದುಕು ಹೀಗೆ ತಿರುವು ಪಡೆಯಿತಲ್ಲ ಎಂಬ ವೇದನೆಯೂ, ವ್ಯಕ್ತಿಗಳ ಭಾವನೆಗಳ ಬಗ್ಗೆ ಮಾನವೀಯ ಕಾಳಜಿಯೂ ಇದೆ. ಇಲ್ಲಿ ಅಪರಾಧ ಸುದ್ದಿಯನ್ನು ಓದುಗರಿಗೆ ಪ್ರೇಕ್ಷಕರಿಗೆ ಉಣಬಡಿಸುವ ಪೀತಪತ್ರಿಕೆ ಹಾಗೂ ಕ್ರೈಂ ಧಾರಾವಾಹಿಗಳ ರೋಚಕತೆ ಇಲ್ಲಿ ಕಾಣದು. ಬದಲಿಗೆ ವಿದ್ಯಮಾನಗಳ ಹಿಂದಿರುವ ದುರಂತ ಪ್ರಜ್ಞೆಯ ಹುಡುಕಾಟವಿದೆ. ಹೀಗಾಗಿ ಇದು ಘಾತಕ ಅನುಭವಗಳ ಸರಮಾಲೆಯಾಗದೆ, ಅವುಗಳ ಮೂಲಕ ಜೀವನತತ್ವ ಶೋಧಿಸುವ ದಾರ್ಶನಿಕ ಕೃತಿಯಾಗಲು ಹವಣಿಸಿದೆ.
-ರಹಮತ್ ತರೀಕೆರೆ
Share


Subscribe to our emails
Subscribe to our mailing list for insider news, product launches, and more.