ಇದು ಜಯನಗರದ ಹುಡುಗಿ ಎಂದು ಪ್ರಸಿದ್ಧರಾಗಿರುವ ಮೇಘನಾ ಅವರ ಎಂಟನೆಯ ಪುಸ್ತಕ. ವಿಶೇಷವೇನೆಂದರೆ ಅವರು ಅವಳಿ (ಒಂದು ಗಂಡು, ಒಂದು ಹೆಣ್ಣು) ಮಕ್ಕಳಿಗೆ ತಾಯಿಯಾದ ಬಳಿಕ ಬರೆದ ಮೊದಲ ಪುಸ್ತಕ. ಒಬ್ಬ ತಾಯಿಯಾಗಿ ತನ್ನ ಪಯಣದಲ್ಲಿ ತನ್ನ ಅನುಭವಗಳನ್ನು ಹಿನ್ನೆಲೆಯಾಗಿರಿಸಿಕೊಂಡು ಈಗಿನ ಕಾಲದ ತಾಯಂದಿರು ಎದುರಿಸುವ ತುಮುಲಗಳನ್ನು ಮತ್ತು ಸವಾಲುಗಳನ್ನು ಅನಾವರಣಗೊಳಿಸುವ ಲೇಖಕಿ ಅವುಗಳಿಗೆ ಒಂದು ಮಟ್ಟಿನ ಪರಿಹಾರಗಳನ್ನು ಸಹ ಚರ್ಚಿಸುತ್ತಾರೆ. ಪುಸ್ತಕ ಒಟ್ಟು ಹದಿನಾಲ್ಕು ಅಧ್ಯಾಯಗಳ ಮೂಲಕ ಮಗು ಉದರದಲ್ಲಿ ಚಿಗುರಿದ ಕ್ಷಣದಿಂದ ಶುರುವಾಗಿ ಅದನ್ನು ಬೆಳೆಸುವ ವಿಚಾರದಲ್ಲಿ ಇರಬೇಕಾದ ನಿಲುವುಗಳತ್ತ ಓದುಗರನ್ನು ಕರೆದೊಯ್ಯುತ್ತದೆ. ಯಾರು ಮಿಲೇನಿಯಲ್ ಅಮ್ಮನೆಂದರೆ!!? ೧೯೮೦ರಿಂದ ೧೯೯೫ರ ನಡುವೆ ಹುಟ್ಟಿದ ತಾಯಂದಿರ ಪೀಳಿಗೆ.
ಗರ್ಭಾವಸ್ಥೆ ಮತ್ತು ಪ್ರಸವ ಪ್ರಕ್ರಿಯೆ ಅನಾದಿ ಕಾಲದಿಂದಲೂ ಒಂದೇ ಆಗಿದ್ದರೂ ಅದಕ್ಕೆ ಒಳಪಡುವ ಹೆಣ್ಣುಮಕ್ಕಳ ಮನಸ್ಥಿತಿ ಕಾಲಕ್ಕೆ ತಕ್ಕಂತೆ ಅಪಾರ ಬದಲಾವಣೆ ಹೊಂದಿದೆ ಎಂಬುದು ಸುಳ್ಳಲ್ಲ. ಈಗ ತಾಯ್ತನವನ್ನು ಅಪ್ಪಿಕೊಳ್ಳುವ ಮೊದಲು ಹತ್ತಾರು ಬಾರಿ ಯೋಚಿಸುವ ಕಾಲ. ತನ್ನ ಉದ್ಯೋಗ, ಏರುತ್ತಿರುವ ವಯಸ್ಸು, ಫಲವತ್ತತೆ, ಆರೋಗ್ಯ, ಸಾಮಾಜಿಕ ಬದುಕು, ಲಭ್ಯವಿರುವ ಬೆಂಬಲ, ಆರ್ಥಿಕ ಸ್ಥಿತಿ ಮಾತ್ರವಲ್ಲದೆ ತನ್ನ ಹಾಗೂ ಸಂಗಾತಿಯ ಅನುಬಂಧ, ಸ್ವಭಾವ, ಮಾತು, ವರ್ತನೆ ಎಲ್ಲವನ್ನೂ ಅಮೂಲಾಗ್ರವಾಗಿ ಗಮನಿಸಿ ಮುಂದುವರೆಯಬೇಕಾದಂತಹ ಸೂಕ್ಷ್ಮತೆ ಬೇಡುವ ಸಮಯವಿದು. ಮದುವೆಯಾಯಿತು, ಮಕ್ಕಳಾಯಿತು ಅನ್ನುವ ಸಮಯವಿದಲ್ಲ. ಅಲ್ಲದೇ ಅದು ಕೇವಲ ಹೆಂಗಸರ ವಿಷಯ ಅನ್ನುವಂತಿಲ್ಲ. ಸಂಗಾತಿಯ ಸಂಪೂರ್ಣ ತೊಡಗಿಕೊಳ್ಳುವಿಕೆ ಅತೀ ಅಗತ್ಯ.
ನನಗೆ ಅನ್ನಿಸುವಂತೆ ಪ್ರತೀ ತಾಯ್ತನವೂ ಏಕಪ್ರಕಾರವಾಗಿ ಇರುವುದಿಲ್ಲ. ಅಲ್ಲದೇ ಒಬ್ಬಳೇ ತಾಯಿಯ ಎರಡು ಗರ್ಭಾವಸ್ಥೆ ಸಹ ವಿಭಿನ್ನ. ಪ್ರತೀ ತಾಯಿಗೂ ಹೇಳುವುದು ಸಾಕಷ್ಟಿರುತ್ತದೆ. ಆ ನಿಟ್ಟಿನಲ್ಲಿ ಈ ಕೃತಿ ನನ್ನನ್ನು ಖರೀದಿಸಿದ ಒಂದೆರಡು ದಿನಗಳಲ್ಲೇ ಕುತೂಹಲದಿಂದ ಓದಿಸಿಕೊಂಡು ಹೋಯಿತು. ಲೇಖಕಿಯವರ ಪ್ರತೀ ಅನುಭವಗಳ ವ್ಯಾಖ್ಯಾನದೊಂದಿಗೆ ನಾನು ಕನೆಕ್ಟ್ ಆದೆ. ಕೆಲವೆಡೆ ಇನ್ನೂ ಹೇಳಬೇಕಿತ್ತೇನೋ ಅನ್ನಿಸಿತು. ತಾಯ್ತನವೇ ಹಾಗಲ್ಲವೇ! ಎಲ್ಲವನ್ನೂ ಬರೆದು, ಹೇಳಿ, ತಿಳಿದು ಮುಗಿಸುವ ಹಾಗಿಲ್ಲ! ಹಲವಾರು ವಿಷಯಗಳನ್ನು ಅನುಭವದ ಮೂಲಕವಾಗಿ ಮಾತ್ರ ತಿಳಿಯಬೇಕಷ್ಟೇ! ಪುಸ್ತಕದಲ್ಲಿ ಅನೇಕ ಕಡೆಗಳಲ್ಲಿ ಇಂಗ್ಲಿಷ್ ಭಾಷೆಯನ್ನು ಸಹ ಬಳಸಿಕೊಂಡಿದ್ದಾರೆ. ಕೆಲವೊಮ್ಮೆ ಲೇಖನದ ಮೊದಲ ಉಲ್ಲೇಖವಾಗಿ ಮತ್ತೆ ಕೆಲವೆಡೆ ಕೊನೆಗೆ ಸಾರಾಂಶದಂತೆ. ನನಗೆ ಬಹಳ ಇಷ್ಟವಾಗಿದ್ದು ಕೊನೆಯ ಐದು ಅಧ್ಯಾಯಗಳು. ದೈಹಿಕ ಬದಲಾವಣೆ, ತಾಯಿಗೆ ಸಿಗಬೇಕಾದ ಬೆಂಬಲ, ಅಂತರ್ಜಾಲದ ತಾಯಂದಿರು ಮತ್ತು ಅವರ ರೀಲ್ಸ್, ತಾಯಿಯಂದಿರ ಗಿಲ್ಟ್ ಮತ್ತು ಮಿನಿಮಲಿಸಮ್, ಸ್ರ್ತೀವಾದಿ ಮಕ್ಕಳು ಎಂಬ ವಿಚಾರಗಳ ಕುರಿತು ಅವರು ಅತ್ಯಂತ ಸ್ಪಷ್ಟವಾಗಿ ಬರೆದಿದ್ದಾರೆ. ನನ್ನ ಯೋಚನೆಯೊಂದಿಗೆ ಹೊಂದಿಕೊಂಡ ವಿಚಾರಧಾರೆಗಳಿವು. ತಾಯ್ತನದ ತ್ಯಾಗವನ್ನು ವಿಜೃಂಭಿಸುವುದಕ್ಕಿಂತ, ತಾಯಿಯೂ ಸಹ ಮನುಷ್ಯಳೇ, ಅವಳ ಭಾವನೆಗಳ ಏರಿಳಿತ, ಅವಳೂ ಖುಷಿಯಾಗಿಬೇಕು ಎನ್ನುವುದು ಸಹಜವೆಂಬ ನಿಲುವು ಹಿಡಿಸಿತು.
ಒಬ್ಬ ಮಿಲೇನಿಯಲ್ ಅಮ್ಮನಾಗಿ, ಜೆನ್ ಆಲ್ಫಾ ಆದ ಎರಡು ಮಕ್ಕಳನ್ನು ಪಡೆದು (VBAC), ಇದೀಗ ವರ್ಷದ ಕೂಸಿನೊಂದಿಗೆ ಈ ಪಯಣದಲ್ಲಿ ಸಾಗಿ ಬಂದು, ಎರಡು ವಿಶಿಷ್ಟ ಅನುಭವಗಳನ್ನು ಹೊಂದಿ, ಮಕ್ಕಳನ್ನು ಪೋಷಿಸುತ್ತಿರುವ ನನಗೆ ಮೊದಲನೇಯ ಸಲ ಅಷ್ಟಾಗಿ ಈ ಬಗ್ಗೆ ಗೊತ್ತಿರಲಿಲ್ಲ. ಎರಡನೆಯ ಗರ್ಭಾವಸ್ಥೆಯ ಸಮಯದಲ್ಲಿ ಕನ್ನಡದಲ್ಲಿ ಈ ಬಗೆಯ ಪುಸ್ತಕಗಳು ಬೆರಳೆಣಿಕೆಯಷ್ಟು ಸಹ ಸಿಕ್ಕಿರಲಿಲ್ಲ. ಆದರೆ ಇಂಗ್ಲಿಷ್ ಅಲ್ಲಿ ಬೇಕಾದಷ್ಟು ಪುಸ್ತಕಗಳಿವೆ. ತಾಯ್ತನದ ಅನುಭವ ಕಥನದ ಪುಸ್ತಕಗಳ ಪ್ರಕಾರ ಅದೇಕೋ ಬರೆಯುವವರು ಇಲ್ಲವೇನೋ ಎಂಬಂತೆ ಅನಾಥವಾಗಿದೆ. ಓದುವವರಿಲ್ಲ ಎನ್ನುವುದನ್ನು ನಾನು ಒಪ್ಪಲಾರೆ!
ಇನ್ನು ಇದನ್ನು ಯಾರೆಲ್ಲ ಓದಬಹುದು? ಎಲ್ಲರೂ! ಏಕೆಂದರೆ ಇದು ಕೇವಲ ಮೊದಲ ಬಾರಿಗೆ ತಾಯಿಯಾಗುವ ಯೋಚನೆ ಮಾಡುವ ಹೆಣ್ಣಿಗೆ ಮತ್ತು ಅವಳ ಸಂಗಾತಿಗೆ ಮಾತ್ರವಲ್ಲದೇ ಎಲ್ಲರಿಗೂ ಆ ಸಮಯದಲ್ಲಿ ಏನು ಮಾಡಬೇಕು, ಮಾಡಬಾರದು, ಹೇಳಬೇಕು, ಹೇಳಬಾರದು ಎಂಬ ಬಗ್ಗೆ ಒಂದಷ್ಟು ಮಟ್ಟಿಗೆ ಮಾಹಿತಿ ನೀಡುತ್ತದೆ. ಬದಲಾದ ಆಕೆಯ ಮನಸ್ಥಿತಿಯನ್ನು ಅರ್ಥೈಸಲು ಸಹಕಾರಿ. ಗೂಗಲ್ ಒದಗಿಸುವ ಬಿಡಿ ಬರಹಗಳಿಗಿಂತ ಇಂತಹ ಕೃತಿಗಳು ಉತ್ತಮ. ಇದನ್ನು
ಇಂಗ್ಲಿಷ್ ಭಾಷೆಗೂ ಅನುವಾದಿಸಬಹುದು, ಚೆನ್ನಾಗಿ ಮೂಡಿ ಬಂದಿದೆ. ಇಂತಹ ಅನುಭವಪೂರ್ಣ ಬರಹಗಳು ಹೆಚ್ಚು ನಂಬಲರ್ಹ. ಬನ್ನಿ, ಹೊಸ ಯೋಚನೆಗಳ ತಾಯಂದಿರನ್ನು ಸಂಭ್ರಮಿಸೋಣ. ಓದಿ, ಓದಿಸಿ. ಉಡುಗೊರೆ ನೀಡಿ.