ತಂದೆ ತಾಯಂದಿರು ತಮ್ಮ ಮಕ್ಕಳಿಗೆ ಪುಸ್ತಕಗಳನ್ನು ಏಕೆ ಓದಿ ಹೇಳಬೇಕು?

ತಂದೆ ತಾಯಂದಿರು ತಮ್ಮ ಮಕ್ಕಳಿಗೆ ಪುಸ್ತಕಗಳನ್ನು ಏಕೆ ಓದಿ ಹೇಳಬೇಕು?

- ಯಶಸ್ವಿನಿ ಎಸ್. ಎನ್.

"ಮನೆಯಲ್ಲಿ ಇರುವಂತಹ ಮೇಷ್ಟ್ರುಗಳೆಂದರೆ ಪುಸ್ತಕಗಳು. ಅದಕ್ಕಿಂತ ದೊಡ್ಡ ಟೀಚರ್ ಇಲ್ಲ. ಸರಿಯಾದ ಪುಸ್ತಕ ಓದುವುದರಿಂದ ನಿಮ್ಮ ಮನಸ್ಸು, ನಿಮ್ಮ ಅಭಿಪ್ರಾಯ, ಯೋಚನೆ ಮಾಡುವ ರೀತಿ ಬದಲಾಗುತ್ತದೆ. ಅದಕ್ಕಿಂತ ಶಕ್ತಿಯುತವಾದ ವಿಷಯ ಇನ್ನೊಂದಿಲ್ಲ"

- ರಮೇಶ್ ಅರವಿಂದ, ಲೇಖಕ ಮತ್ತು ನಟ

ನನ್ನ ಮಗಳು ಹುಟ್ಟಿದಾಗ ನಾನು ಅವಳಿಗಾಗಿ ಮಕ್ಕಳ ಕತೆ ಪುಸ್ತಕಗಳನ್ನು ಕೊಂಡುಕೊಂಡು ಓದುವಾಗ, ಕೆಲ ಗೆಳತಿಯರು ಹಾಗೂ ಸಂಬಂಧಿಕರು ಕೇಳಿದ್ದು "ಈಗ್ಲೇ ಓದಿಸಿ ಐಎಎಸ್ ಪಾಸ್ ಮಾಡಸ್ತ್ಯ?" ಅಂತ. ಆದರೆ ನಾನು ನನ್ನ ಮಗಳಿಗೆ ಪುಸ್ತಕಗಳನ್ನು ಪರಿಚಯಿಸಿದ್ದು ಅವಳಿಗೆ ಪುಸ್ತಕಗಳ ಮೇಲೆ ಪ್ರೀತಿ ಹುಟ್ಟಲಿ, ಪುಸ್ತಕ ಓದುವುದರ ಬಗ್ಗೆ ಆಸಕ್ತಿ ಹುಟ್ಟಲಿ ಅಂತ. ನಿಮಿಗೊತ್ತಾ? ಮಕ್ಕಳಿಗೆ ಕತೆ ಪುಸ್ತಕ ಓದುವುದರಿಂದ ತುಂಬ ಪ್ರಯೋಜನಗಳಿವೆ. ಅದರ ಬಗ್ಗೆ ನನಗೆ ತಿಳಿದಷ್ಟು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

  1. ಶಬ್ದಕೋಶ

"ಜರ್ನಲ್ ಒಫ್ ಡೆವಲಪ್ಮೆಂಟ್ ಅಂಡ್ ಬೆಹವಿಯರ್ ಪೀಡಿಯಾಟ್ರಿಕ್ಸ್" ಅವರ ಅಧ್ಯಯನ ಪ್ರಕಾರ ಮಗುವಿಗೆ ದಿನಕ್ಕೆ ಒಂದು ಪಿಕ್ಚರ್ ಪುಸ್ತಕ ಓದುವುದರಿಂದ ವರ್ಷದಲ್ಲಿ ಆ ಮಗುವಿಗೆ 78,000 ಪದಗಳ ಪರಿಚಯವಾಗಿರುತ್ತದೆ.

ಓದುವುದರಿಂದ ಸೃಷ್ಟಿಯಾಗುವ ಕಲಿಕೆಯ ವಾತಾವರಣದಲ್ಲಿ ಶಿಶುಗಳು ಮತ್ತು ಮಕ್ಕಳು ಸಂಭಾಷಣೆ ಮೂಲಕ ಎಂದಿಗೂ ಎದುರಿಸದ ಪದಗಳಿಗೆ ಒಡ್ಡಿಕೊಳ್ಳುತ್ತಾರೆ.

ನಾವು ಮನೆಯಲ್ಲಿ ಮಗಳೊಂದಿಗೆ ಕನ್ನಡದಲ್ಲಿ ಅಷ್ಟೇ ಸಂಭಾಷಿಸಿದರು, ಜಾಸ್ತಿ ಇಂಗ್ಲಿಷ್ ಪುಸ್ತಕಗಳನ್ನು ಓದಿದ್ದರಿಂದ ಅವಳ ಇಂಗ್ಲಿಷ್ ಶಬ್ದಕೋಶ ನಾನ್ -ನೇಟಿವ್ ಸ್ಪೀಕರ್ ಗೆ ಉತ್ತಮವಾಗಿದೆ.

  1. ಭಾವನೆಗಳ ಪರಿಚಯ

ಓದುವಾಗ ಉಪಯೋಗಿಸುವ ಬೇರೆ ಶಬ್ದಗಳು ಮತ್ತು ದನಿ ಮಾಡುಲೇಷನಿಂದ ಮಕ್ಕಳಿಗೆ ಶಬ್ದದ ಹಿಂದಿರುವ ಭಾವನೆಗಳು ಅರ್ಥವಾಗುತ್ತದೆ. ನಾನು ನನ್ನ ಮಗಳಿಗೆ ಓದುವಾಗ ಅವಳು ನನ್ನ ಧ್ವನಿಯಿಂದಲೇ ಪುಸ್ತಕದಲ್ಲಿ ಬರುವ ಪಾತ್ರ ಖುಷಿಯಾಗಿದೆಯೋ, ಬೇಜಾರಾಗಿದೆಯೋ ಅಥವಾ ಕೋಪ ಮಾಡಿಕೊಂಡಿದೆಯೋ ಎಂದು ತಿಳಿದು ಆ ಪಾತ್ರ ಆ ರೀತಿ ಯಾಕೆ ಇದೆ ಎಂದು ಪ್ರೆಶ್ನಿಸುತ್ತಾಳೆ, ಕೆಲವೊಮ್ಮೆ ಅವಳೇ ಕಾರಣವನ್ನು ಕೊಡುತ್ತಾಳೆ.

  1. ಬಾಂಧವ್ಯ

ಮಕ್ಕಳಿಗೆ ಪುಸ್ತಕಗಳು ಓದುವುದರಿಂದ ಪೋಷಕರ ಹಾಗೂ ಮಗುವಿನ ಭಾವನಾತ್ಮಕ ಬಾಂಧವ್ಯ ವೃದ್ಧಿಸುತ್ತದೆ. ಸದಾ ಕೆಲಸದಲ್ಲಿ ಬ್ಯುಸಿ ಇರುವ ಪೋಷಕರು, ಮಗುವಿಗೆ ಪುಸ್ತಕ ಓದುವುದರಿಂದ ಮಗುವಿನೊಂದಿಗೆ "ಕ್ವಾಲಿಟಿ ಟೈಮ್" ಕಳೆಯಬಹುದು. ಮಗುವಿಗೆ ತಂದೆ ತಾಯಿಯ ಧ್ವನಿ ಕೇಳಲು ಹಿತವೆನ್ನಿಸುತ್ತದೆ. ಮಗುವಿಗೆ ಪೋಷಕರೊಂದಿಗೆ ಕಾಲ ಕಳಿಯುವುದರಿಂದ ಸಿಗುವ ಸೊಂತೋಷ ನೂರುಪಟ್ಟು.

ಮಗಳಿಗೆ ಹುಷಾರಿಲ್ಲದಿದ್ದರೆ, ಯಾವುದೋ ವಿಷಯಕ್ಕೆ ಬೇಜಾರ್ ಆಗಿದ್ದರೆ ಅವಳು ತನ್ನಷ್ಟಿಗೆ ತಾನೇ ಪುಸ್ತಕ ತಗೊಂಡು ಪುಟ ತಿರುವಿ ಹಾಕುತ್ತಿರುತ್ತಾಳೆ ಅಥವಾ ಪುಸ್ತಕ ಓದುತ್ತೀರಾ ಎಂದು ಕೇಳಿ ಓದಿಸಿ ಕೊಳ್ಳುತ್ತಾಳೆ.

  1. ಓದು-ಮೋಜು

ಕೇವಲ ಪರೀಕ್ಷೆಗೆ ಓದುವುದಾದರೆ ಮಕ್ಕಳು ಓದುವುದನ್ನು ಒಂದು ಕೆಲಸ ಎಂದು ತಿಳಿದು ಆಸಕ್ತಿ ತೋರುವುದಿಲ್ಲ.

ಕತೆ ಪುಸ್ತಕ ಓದುವುದನ್ನು ದಿನಚರಿಯ ಒಂದು ಭಾಗ ಮಾಡಿಕೊಂಡಾಗ, ಮಕ್ಕಳಿಗೆ ಓದುವುದು ಒಂದು ಮೋಜಾಗುತ್ತದೆ. ಕತೆ ಪುಸ್ತಕಗಳನ್ನು ಓದುವ ಮನೋಭಾವ ಅವರು ಬೆಳೆದ ನಂತರವೂ ಒಂದು ಹವ್ಯಾಸವಾಗಿ ಉಳಿಯುತ್ತದೆ. ಜೀವನ ಪಾಠವಿಲ್ಲದ ಕೇವಲ ಸಿಲ್ಲಿ ಪಾತ್ರಗಳಿಂದ, ಕತೆಯಿಂದ ಕೂಡಿರುವ ಪುಸ್ತಕ ಓದುವುದು ಮಕ್ಕಳಿಗೆ ಮೋಜು ಕೊಡುತ್ತದೆ.

ಎಷ್ಟೋ ಸಲ ಮಗಳು ನಾನ್-ಸೆನ್ಸ್ genre ಪುಸ್ತಕಗಳನ್ನು ಸಾಕಷ್ಟು ಎಂಜಾಯ್ ಮಾಡುತ್ತಾಳೆ ಹಾಗೂ ಓದುವಾಗ ನಗುತ್ತಿರುತ್ತಾಳೆ. ಓದಿದ ಮೇಲೆ "ಈ ಪುಸ್ತಕ ಎಷ್ಟು ಮಜಾ ಇದೆ ಅಲ್ವಾ. ಇನ್ನೊಂದ್ ಸಲ ಹೇಳಿ" ಎನ್ನುತ್ತಾಳೆ.

  1. ಸುತ್ತಲಿನ ಪ್ರಪಂಚದ ಪರಿಚಯ

ಪುಸ್ತಕಗಳಲ್ಲಿ ಮಕ್ಕಳು ಅವರಂತೆ ಇರುವ, ಅವರ ಸುತ್ತಾ ಮುತ್ತಾ ಇರುವ ಪಾತ್ರಗಳನ್ನು ಹಾಗು ಸಂಸ್ಕೃತಿಯನ್ನು ನೋಡುತ್ತಾರೆ. ಇದರಿಂದ ಅವರಿಗೆ ಹೊಂದಿಕೊಳ್ಳುವ ಭಾವ ಬೆಳೆಯುತ್ತದೆ. ಬೇರೆ ಸಂಸ್ಕೃತಿ, ದೇಶದ ಕಥೆಗಳನ್ನು ಓದುವುದರಿಂದ ಮಕ್ಕಳಿಗೆ ಹೊಸ ಪ್ರಪಂಚದ ಪರಿಚಯವಾಗುತ್ತದೆ.

  1. ಚಿತ್ರಗಳಿಂದ (ಇಲ್ಲುಸ್ಟ್ರೇಷನ್) ಸಂವಾದ ಸೃಷ್ಟಿ

ಪಿಕ್ಚರ್ ಪುಸ್ತಕಗಳು ಸಂವಾದತ್ಮಕ ಕತೆ ಹೇಳುವಿಕೆಗೆ ವೇದಿಕೆ ಸೃಷ್ಟಿಸುತ್ತದೆ. ಮಕ್ಕಳು ಚಿತ್ರಗಳನ್ನು ಗಮನಿಸುತ್ತ ಪ್ರಶ್ನೆ ಕೇಳುತ್ತಾರೆ ಹಾಗೂ ಕಥೆಯನ್ನು ನೆನಪಿಟ್ಟು ಕೊಳ್ಳುತ್ತಾರೆ. ಕೆಲವೊಮ್ಮೆ ಕತೆ ಗೊತ್ತಿಲ್ಲದಿದ್ದರೂ ಇಲ್ಲುಸ್ಟ್ರೇಷನ್ಸ್ ನೋಡಿ ಅವರೇ ಅವರಿಗೆ ಅರ್ಥವಾದಂತೆ ಕತೆ ಹೇಳಲು ಶುರು ಮಾಡುತ್ತಾರೆ.

ಹೊಸ ಪುಸ್ತಕ ಕೊಂಡಾಗ ಮಗಳಿಗೆ ನೀನೆ ಕತೆ ಹೇಳು ಅಂದರೆ ಚಿತ್ರಗಳನ್ನು ನೋಡುತ್ತಾ ಕತೆ ಹೇಳಲು ಶುರು ಮಾಡುತ್ತಾಳೆ. ಎಷ್ಟೋ ಸಲ ಅವಳು ಊಹಿಸಿ ಹೇಳುವ ಕತೆ ಸರಿಯಾಗಿ ಇರುತ್ತದೆ.

 ಯಾವಾಗ ಮತ್ತು ಹೇಗೆ ಓದಬೇಕು?

ಮಕ್ಕಳಿಗಾಗಿ ಓದುವುದಕ್ಕೆ ವಿಶೇಷವಾದ ಕೌಶಲ್ಯಗಳು ಬೇಡ. ನೀವು, ನಿಮ್ಮ ಮಗು ಮತ್ತು ಕೆಲವು ಪುಸ್ತಕಗಳು ಸಾಕು.

  • ದಿನದಲ್ಲಿ ಕೆಲವು ಸಮಯ ಮಗುವೊಂದಿಗೆ ಗಟ್ಟಿಯಾಗಿ ಓದಿ. ಪುಸ್ತಕ ಪೂರ್ತಿ ಓದಿ ಮುಗಿಸುವ ಚಿಂತೆ ಬೇಡ. ಮಗು ಇಷ್ಟ ಪಡುವ ಪುಟಗಳಷ್ಟೇ ಓದಿದರೂ ಸಾಕು.
  • ಪ್ರತಿ ದಿನ ಓದಲು ಪ್ರಯತ್ನಿಸಿ. ರಾತ್ರಿ ಮಲಗುವ ಮುನ್ನ ಓದುವುದು ಅಥವಾ ಮಗು ಎಚ್ಚರವಿದ್ದಾಗ, ಊಟ ಮಾಡಿಸುವಾಗ ಓದಬಹುದು.
  • ರೆಸ್ಟೋರೆಂಟ್ ಅಲ್ಲಿ ಊಟಕ್ಕೆ ಕಾಯುವಾಗ, ಕ್ಲಿನಿಕ್ ಅಲ್ಲಿ ಓದಬಹುದು. ಮಗುವಿನ ಡೈಪೆರ್ ಬ್ಯಾಗ್ನಲ್ಲಿ ಒಂದೆರಡು ಪುಸ್ತಕಗಳನ್ನು ಇಟ್ಟಿಕೊಳ್ಳಿ.
  • ಬೇರೆ ಬೇರೆ ಪಾತ್ರಗಳಿಗೆ ವಿಭಿನ್ನ ಧ್ವನಿ ಬಳಸಿ ಕತೆ ಹೇಳಬಹುದು.
  • ಎಷ್ಟೋ ಸಲ ಮಕ್ಕಳಿಗೆ ಪೂರ್ತಿ ಕತೆ ಕೇಳಿಸಿಕೊಳ್ಳುವ ಆಸಕ್ತಿ ಇರುವುದಿಲ್ಲ. ಮಗುವಿಗೆ ಯಾವ ಪುಟ ಓದಬೇಕಿರುತ್ತದೆ ಅದನ್ನು ಓದಿ.
  • ಓದುವ ಮಧ್ಯ ಪ್ರಶ್ನೆಗಳನ್ನು ಕೇಳಿ. (ಬೆಕ್ಕು ಎಲ್ಕಿದೆ? ಯಾವ ಬಣ್ಣ ಇದೆ? ). ಮಗು ಉತ್ತರಿಸಲಿಲ್ಲವೆಂದರೆ ನೀವೇ ಉತ್ತರಿಸಿ ಕತೆ ಮುಂದುವರಿಸಿ.
  • ಮಕ್ಕಳಿಗೆ ಪುನರಾವರ್ತನೆ ಇಷ್ಟ. ಓದಿರುವ ಪುಸ್ತಕವನ್ನೇ ಪುನಃ ಪುನಃ ಓದಲು ಹೇಳುತ್ತಾರೆ. ಹಿಂಜರಿಯದೆ, ಬೇಜಾರಿಲ್ಲದೆ ಓದಿ.
  • ಶಿಶು ಗೀತೆಗಳನ್ನು ಹಾಡಿ, ತಮಾಷೆಯಾಗಿ ಪ್ರಾಣಿಗಳ ಶಬ್ದಗಳನ್ನು ಮಾಡಿ- ಓದುವುದು ಮೋಜು ಎಂದು ತೋರಿಸುವ ಯಾವುದಾದರು ರೀತಿ ಓದಿ.

ಮಕ್ಕಳಿಗಿಂತ ಶಿಶುಗಳಿಗೆ ಓದುವುದು ತುಂಬಾ ಸುಲಭದ ಕೆಲಸ. ಅಂಬೇಗಾಲಿಡುವ ಅಥವಾ ಪುಟ್ಟ ಮಕ್ಕಳಂತೆ ಶಿಶುಗಳು ಓದುವಾಗ ಓಡಿ ಹೋಗುವುದಿಲ್ಲ ಮತ್ತು ಓದಿದ ಪುಸ್ತಕವನ್ನೇ ಪುನಃ ಪುನಃ ಓದಲು ಪೀಡಿಸುವುದಿಲ್ಲ 😜 ಶಿಶುಗಳಿಗೆ ನೀವು ಓದುವ ಪುಸ್ತಕಕಿಂತ ನಿಮ್ಮ ಪ್ರೀತಿಯ ಧ್ವನಿ, ನಿಮ್ಮೊಂದಿಗೆ ಕಳೆಯುವ ಸಮಯ ಅವರಿಗೆ ಇಷ್ಟವಾಗುತ್ತದೆ. ತುಂಬಾ ಬೇಗ ಅಥವಾ ತುಂಬಾ ತಡವಾಗಿ ಓದುವುದನ್ನು ಶುರು ಮಾಡಿದೀವಿ ಎನ್ನುವ ಚಿಂತೆ ಬಿಡಿ. ಯಾವಾಗ ಓದಲು ಶುರು ಮಾಡಿದರು ಅದು ಸರಿಯಾದ ಸಮಯವೇ.

ನಮ್ಮ ಪ್ರಕಾಶನದ ಮಕ್ಕಳ ಪುಸ್ತಕಗಳು - https://harivubooks.com/kn/products/chinnara-bannada-pustakagalu

ನಮ್ಮ ಮಳಿಗೆಯಲ್ಲಿ ಸಿಗುವ ಇನ್ನಷ್ಟು ಬಣ್ಣ ಬಣ್ಣದ ಪುಸ್ತಕಗಳನ್ನು ಇಲ್ಲಿ ಕೊಳ್ಳಿ - https://harivubooks.com/kn/collections/kids-books-kannada

Back to blog