ಹರಿವು ಬುಕ್ಸ್ ಆರಂಭವಾಗಿ ಒಂದು ವರ್ಷ ಕಳೆದಿತ್ತು. ಮೊದಲ ವರ್ಷದ ಸಂಭ್ರಮವನ್ನು ಆಚರಿಸಿ ಮುಂದಡಿ ಇಡುತ್ತಿದ್ದ ನಮ್ಮನ್ನು ಹಾವೇರಿಯ ಯಾಲಕ್ಕಿಯ ಕಂಪು ಕೈಬೀಸಿ ಕರೆದಿತ್ತು! ಹೌದು, ಕೋವಿಡ್ ಬಳಿಕ ನಡೆಯುತ್ತಿದ್ದ ಮೊದಲ ಸಾಹಿತ್ಯ ಸಮ್ಮೇಳನ ನಮ್ಮ ಪಾಲಿಗೆ ಮೊಟ್ಟ ಮೊದಲ ಸಾಹಿತ್ಯ ಸಮ್ಮೇಳನ. ಹಿಂದಿನ ಸಾಹಿತ್ಯ ಸಮ್ಮೇಳನಗಳ ಕುರಿತು ಸಾಕಷ್ಟು ಕೇಳಿದ್ದೆವು, ಕೆಲವೊಂದು ಕಡೆ ಭೇಟಿಯನ್ನೂ ಕೊಟ್ಟಿದ್ದೆವು. ಆದರೆ ಪುಸ್ತಕ ಮಾರಾಟಗಾರರಾಗಿ, ಪ್ರಕಾಶಕರಾಗಿ ನಮಗಿದು ಮೊದಲ ಅನುಭವ. ಹಾಗಾಗಿ, ಹಾವೇರಿಯ ಸಮ್ಮೇಳನದ ನೆನಪಿಗಾಗಿ ಈ ಬರಹ.
ನಮ್ಮ ಪ್ರಕಾಶನದ ಪುಸ್ತಕಗಳ ಜೊತೆಗೆ ಸಾವಿರಾರು ಕನ್ನಡ ಪುಸ್ತಕಗಳನ್ನು ಹೊತ್ತೊಯ್ದು, ನಮಗೆಂದು ಮೀಸಲಾಗಿದ್ದ “E11-E13” ಮಳಿಗೆಯಲ್ಲಿ ಒಪ್ಪವಾಗಿ ಜೋಡಿಸಿಟ್ಟು, ಪುಸ್ತಕ ಪ್ರೇಮಿಗಳಿಗಾಗಿ ಕಾದುನಿಂತಿದ್ದೆವು. ಅಬ್ಬಬ್ಬಾ, ಕಣ್ಣು ಮಿಟುಕಿಸಿ ಬಿಡುವಷ್ಟರಲ್ಲಿ ಸಾವಿರಾರು ಜನ ಎಡೆಬಿಡದೇ ಬರುತ್ತಿದ್ದರು! ಮೊದಲ ದಿನ ಹರಿದು ಬಂದ ಪುಸ್ತಕ ಪ್ರೇಮಿಗಳು ನದಿಯಂತೆ ಕಂಡರೆ, ಎರಡನೇ ಹಾಗೂ ಮೂರನೇ ದಿನಕ್ಕೆ ಹೆಗ್ಗಡಲಂತೆ ಕಂಡದ್ದು ನಿಜ! ಬಗೆ ಬಗೆಯ ಪುಸ್ತಕಗಳನ್ನು ನೋಡಿ ಹಲವರು ಮೆಚ್ಚುಗೆಯ ಮಾತುಗಳನ್ನು ತಿಳಿಸಿದರು. ನಮ್ಮ ಬಳಿ ಇಲ್ಲದ ಕೆಲವು ಪುಸ್ತಕಗಳನ್ನೂ ನಮ್ಮ ಅಂಗಡಿಗೆ ಸೇರಿಸಲು ತಿಳಿಸಿದರು. ಇದರಿಂದ ನಮಗೆ ಸಾಕಷ್ಟು ಕಲಿಕೆಯೂ ಆಯಿತು. ಹೆಚ್ಚಿನವರು ಪುಸ್ತಕಗಳನ್ನು ಕೊಂಡು ಹಾರೈಸಿದರು. ನಮಗದು ವಿಶೇಷವಾಗಿತ್ತು.
ಮಕ್ಕಳು ಮೆಚ್ಚಿದ ಬಣ್ಣದ ಪುಸ್ತಕಗಳು!
ಚಿನ್ನಿಯ ರಜಾಯಿ, ಅಳಿಲು ಸೇವೆ, ರಿಕ್ಕು ರಿಕ್ಷಣ್ಣಾ ಎಂಬ ಮಕ್ಕಳ ಚಿತ್ರ ಪುಸ್ತಕಗಳು ನಮ್ಮ ಪ್ರಕಾಶನದಿಂದ ಹೊರಬಂದಿರುವುದು ಹೆಚ್ಚಿನವರಿಗೆ ತಿಳಿದಿದೆ. ಆ ಪುಸ್ತಕಗಳು ಮಕ್ಕಳ ಕಣ್ಮನಗಳನ್ನು ಸೆಳೆದವು. ಮಳಿಗೆಗೆ ಬಂದ ಪ್ರತಿಯೊಂದು ಮಗುವು ಈ ಮೂರು ಪುಸ್ತಕಗಳ ಪುಟಗಳನ್ನು ತಿರುವಿ ಹಾಕದೇ ಮಳಿಗೆಯಿಂದ ಹೊರಹೋಗಲಿಲ್ಲ! ಮಕ್ಕಳು ಮೆಚ್ಚುವಂತಹ ಪುಸ್ತಕ ಇಟ್ಟ ನಲಿವು ನಮ್ಮದಾಗಿತ್ತು.
ಹರಟೆ, ಹಾಸ್ಯ, ಜೊತೆಗೆ ಗಂಭೀರ ಚರ್ಚೆ!
ಮಳಿಗೆಗೆ ಬಂದವರಿಂದ ಪುಸ್ತಕ ಮಾರಾಟದ ಇಂದಿನ ಸ್ಥಿತಿ, ಯಾವ್ಯಾವ ಬಗೆಯ ಪುಸ್ತಕಗಳು ಹೋಗುತ್ತವೆ ಅಂತೆಲ್ಲಾ ಬಗೆ ಬಗೆಯ ಮಾತುಕತೆಗಳು ಸಾಗಿದ್ದವು. ಒಂದು ಕಡೆ ಕೆಲವೊಂದು ಪುಸ್ತಕದ ಕುರಿತು ಒಂದಿಷ್ಟು ಹರಟೆ ನಡೆಯುತ್ತಿದ್ದರೆ, ಇನ್ನೊಂದು ಕಡೆ 10% ರಿಯಾಯಿತಿಗೆಂದು ಹಾಕಿದ್ದ “10%” ಪಟ್ಟಿಯನ್ನು ನೋಡಿ “ಬರೀ ಹತ್ತು ರೂಪಾಯಿಗೆ ಈ ಪುಸ್ತಕಗಳಾ?” “ನಿಮ್ಮಲ್ಲಿ Free Shipping ಅಲ್ವಾ, ನನ್ನದೊಂದು ಪರ್ಸನಲ್ ಲಗೇಜ್ ಇದೆ ಫ್ರೀಯಾಗಿ ಕೊರಿಯರ್ ಮಾಡುತ್ತೀರಾ?” ಎಂದು ನಮ್ಮ ಕಾಲೆಳೆಯುತ್ತಿದ್ದರು ಕೊನೆಗೆ ನಕ್ಕು ಬೇಕಾದ ಪುಸ್ತಕ ಕೊಂಡು ಹೋಗುತ್ತಿದ್ದರು. ಮತ್ತಷ್ಟು ಓದುಗರು ಕೆಲವು ಪುಸ್ತಕಗಳ ಕುರಿತು ಆಳವಾಗಿ ನಮ್ಮೊಡನೆ ಚರ್ಚೆ ನಡೆಸಿ, ನಮಗೆ ತಿಳಿದಿರದ ಹಲವಾರು ಸಾಹಿತ್ಯದ ವಿಷಯಗಳನ್ನು ನಮ್ಮೊಡನೆ ಹಂಚಿಕೊಂಡರು. ಹೀಗೆ ಇಡೀ ಮಳಿಗೆಯಲ್ಲಿ ಒಂದಲ್ಲ ಒಂದು ರೀತಿಯ ಚಟುವಟಿಕೆಗಳು ನಡೆದು ಮಳಿಗೆಯ ಉಲ್ಲಾಸ ಹೆಚ್ಚಿತ್ತು.
ಹರಿವು ಬುಕ್ಸ್ ಗ್ರಾಹಕರ ಭೇಟಿ!
ಹಾವೇರಿಯ ಸಮ್ಮೇಳನಕ್ಕೆ ಸುತ್ತಲಿನ ಹುಬ್ಬಳ್ಳಿ, ಧಾರವಾಡ, ಶಿರಸಿ, ಹೊನ್ನಾವರ ದಾವಣಗೆರೆಯಿಂದಲೂ ಹಲವು ಓದುಗರು ಬಂದಿದ್ದರು. ಅದರಲ್ಲಿ ಹಲವರು harivubooks.com ಮೂಲಕ ಆನ್‌ಲೈನ್‌ನಲ್ಲಿ ಪುಸ್ತಕಗಳನ್ನು ಕೊಂಡಿದ್ದವರು. ಅಂತಹ ಹಲವಾರು ಹರಿವು ಬುಕ್ಸ್ ಗ್ರಾಹಕರು ಬಂದು ಮಾತನಾಡಿಸಿದಾಗ ನಮಗಾದ ಸಂತೋಷ ಅಷ್ಟಿಷ್ಟಲ್ಲ! ನೇರವಾಗಿ ನಮ್ಮ ಆನ‌್‌ಲೈನ್ ಗ್ರಾಹಕರನ್ನು ಭೇಟಿಯಾಗಿ ಮಾತನಾಡಿಸುವುದು, ಅವರ ಅನಿಸಿಕೆಗಳನ್ನು ಕೇಳುವುದು ಅಪರೂಪದ ಸಂಗತಿ. ಅಂತಹ ಅಪರೂಪದ ಕ್ಷಣಕ್ಕೆ ನಮ್ಮ ಮಳಿಗೆ ಸಾಕ್ಷಿಯಾಗಿತ್ತು.
ಮಳಿಗೆಗೆ ಬಂದ ಮಿರ್ಚಿ ಮಂಡಕ್ಕಿ!
ದಿನವಿಡೀ ನಿಂತು, ಬಂದವರನ್ನು ಮಾತನಾಡಿಸುತ್ತಾ, ಪುಸ್ತಕ ಮಾರಾಟ ಮಾಡುತ್ತಾ ಕಾಲ ಕಳೆಯುತ್ತಿದ್ದ ನಮಗೆ ಹಾವೇರಿಯ ಊಟದ ರುಚಿಯನ್ನು ಸವಿಯಲು ಸಾಧ್ಯವಾಗಿರಲಿಲ್ಲ. ಆದರೂ ಅಲ್ಲಿ ಹೆಸರಾಗಿರುವ “ಮಿರ್ಚಿ ಮಂಡಕ್ಕಿ”ಯನ್ನು ಸವಿಯುವ ಅದೃಷ್ಟ ನಮಗೆ ಒದಗಿ ಬಂದಿತ್ತು. ಹರಿವು ಬುಕ್ಸ್‌ನ ಪ್ರೀತಿಯ ಗ್ರಾಹಕರು, ನಮ್ಮ ಹಿತೈಶಿಗಳೂ ಆದ ಹಾವೇರಿಯ ಒಬ್ಬರು ನಮಗಾಗಿ ಸಂಜೆಯ ಹೊತ್ತಿಗೆ ಮಿರ್ಚಿ-ಮಂಡಕ್ಕಿಯನ್ನು ತಂದು ನಮ್ಮ ನಾಲಿಗೆಯ ರುಚಿಮೊಗ್ಗುಗಳಿಗೆ ಕೆಲಸ ಕೊಟ್ಟಿದ್ದು ಮರೆಯಲಾಗದ ಕ್ಷಣ! ಒಂದು ಪುಸ್ತಕದ ಅಂಗಡಿಯ ಮೇಲೆ ಇಟ್ಟಿರುವ ಇಂತಹ ಅಕ್ಕರೆಯನ್ನು ನೋಡಿ ಎದೆತುಂಬಿ ಬಾರದೇ? ಮೆಣಸಿನಕಾಯಿ ಬಜ್ಜಿ ಖಡಕ್ಕಾಗಿತ್ತು, ಅವರ ಪ್ರೀತಿ ಮಾತ್ರ ಸಕ್ಕರೆಗಿಂತ ಹೆಚ್ಚು ಸಿಹಿಯಾಗಿತ್ತು.
ಹಾವೇರಿಯವರ ಮಾತು ಗಟ್ಟಿಚಟ್ನಿ, ಮನಸ್ಸು ಮಲ್ಲಿಗೆ ಇಡ್ಲಿ!
ಹಾವೇರಿ ಊರಿನ ಭಾಷೆಯ ಸೊಗಡು ಅಲ್ಲಿ ಬೀರುವ ಯಾಲಕ್ಕಿಯ ಕಂಪಿನಂತೆ. ಬೆಂಗಳೂರಿನಲ್ಲಿ ಬೆಳೆದ ನಮಗೆ ಅಲ್ಲಿ ಭಾಷೆಯ ಗಡಸುತನ ಬೇರೆ ಅನಿಸಿದರು, ಅವರು ಮಾತನಾಡುವ ಧಾಟಿ ಹೆಚ್ಚು ಹಿಡಿಸಿತು. ಅವರು ಮಾತನಾಡುವ ಧಾಟಿ ಎಷ್ಟು ಗಡುಸಾಗಿದೆಯೋ ಅಷ್ಟೇ ಮೆದುವಾಗಿ ಅವರ ಮನಸ್ಸಿದೆ ಎಂಬುದು ನಮ್ಮ ಅನುಭವದ ಮಾತು. ಪುಸ್ತಕ ಮಳಿಗೆಯಲ್ಲಿ ಅವರು ನಡೆದುಕೊಂಡ ರೀತಿ, ಮಳಿಗೆಯಲ್ಲಿ ಬಿಲ್ಲಿಂಗ್ ಆಗುವುದು ಕೊಂಚ ತಡವಾದರೂ ಸಹಿಸಿಕೊಂಡು ನಮ್ಮೊಂದಿಗೆ ಸಹಕರಿಸಿದ್ದು, ಎಲ್ಲವೂ ನಮಗೆ ನೆನಪಿನಲ್ಲಿ ಉಳಿಯುವಂತದ್ದು.
ಬೇರೆ ಬೇರೆ ಪ್ರಕಾಶಕರು, ಪುಸ್ತಕದ ಅಂಗಡಿಗಳು ಒಂದೆಡೆ ಸೇರುವ ಅಪರೂಪದ ಜಾಗವೇ ಸಾಹಿತ್ಯ ಸಮ್ಮೇಳನ. “ಹೆಂಗಿದೆ ವ್ಯಾಪಾರ?” ಎಂದು ಉಳಿದ ಮಳಿಗೆಯವರನ್ನೆಲ್ಲಾ ಮಾತನಾಡಿಸಿ ಎಲ್ಲರೊಡನೆ ಬೆರೆಯಲು ನಮಗೊಂದು ದೊಡ್ಡ ಅವಕಾಶ ಸಿಕ್ಕಿದ್ದು ಸುಳ್ಳಲ್ಲ. ಓದುಗರ ಅಭಿರುಚಿಗಳು ಏನು ಎಂದು ಅರಿಯಲು ಈ ಸಮ್ಮೇಳನ ನಮಗೆ ಸಾಕಷ್ಟು ನೆರವಾಯಿತು. ಇಂತಹ ಸಮ್ಮೇಳನದ ರೂವಾರಿಯಾದ ಸಾಹಿತ್ಯ ಪರಿಷತ್ತಿಗೆ ಧನ್ಯವಾದಗಳು. ಹರಿವು ಬುಕ್ಸ್ ಮಳಿಗೆಗೆ ಭೇಟಿಕೊಟ್ಟ ಪ್ರತಿಯೊಬ್ಬರಿಗೂ ನಮ್ಮ ಧನ್ಯವಾದಗಳು. ನೇರವಾಗಿ ಇಲ್ಲವೇ ತೆರೆ-ಮರೆಯಲ್ಲಿ ನಮಗೆ ನೆರವಾದ ಎಲ್ಲರಿಗೂ ನಮನಗಳು! ನಿಮ್ಮೆಲ್ಲರ ಹಾರೈಕೆ, ಅಕ್ಕರೆ ಹೀಗೆ ಇರಲಿ. ಮುಂದಿನ ಸಮ್ಮೇಳನದಲ್ಲಿ ಮತ್ತೆ ಸಿಗೋಣ.