ಪುಸ್ತಕ ಪ್ರಕಾಶನದ ಮೇಲೊಂದು ಮಿಣುಕು ನೋಟ! - ರತೀಶ ಬಿ. ಆರ್.

ಪುಸ್ತಕ ಪ್ರಕಾಶನದ ಮೇಲೊಂದು ಮಿಣುಕು ನೋಟ! - ರತೀಶ ಬಿ. ಆರ್.

“ಡೈಮಂಡ್ ಸೂತ್ರ”, ಇದು ಸಾವಿರದ ಇನ್ನೂರು ವರ್ಷಗಳಿಗೂ ಹಿಂದೆ ಕಾಗದದ ಮೇಲೆ ಅಚ್ಚಾದ ಮೊದಲ ಪುಸ್ತಕ! ಅದಕ್ಕಿಂತಲೂ ಹಿಂದೆ ಅಚ್ಚಾಗಿರುವ ಪುಸ್ತಕಗಳಿರಬಹುದು ಆದರೆ ಅವಿನ್ನು ಬೆಳಕಿಗೆ ಬರಬೇಕಷ್ಟೇ. ಚೀನಾದಲ್ಲಿ ಡೈಮಂಡ್ ಸೂತ್ರ ಅಚ್ಚಾಗಿ ಆರುನೂರು ವರ್ಷಗಳಾದ ಮೇಲೆ ಜರ್ಮನಿಯ ಗುಟೆನ್ಬರ್ಗ್ ಸಂಸ್ಥೆ ಬೈಬಲ್ಗಳನ್ನು ಪುಸ್ತಕ ರೂಪದಲ್ಲಿ ಅಚ್ಚು ಮಾಡಿ ಹರಡತೊಡಗಿತು. ಕಾಗದದ ದೊಡ್ಡ ಮಟ್ಟದ ಬಳಕೆ ಈ ಹಂತದಲ್ಲಿ ಶುರುವಾಗಿ ಈಗ ಜಗತ್ತಿನೆಲ್ಲೆಡೆ ವರ್ಷಕ್ಕೆ ಇಪ್ಪತ್ತೈದು ಲಕ್ಷಕ್ಕೂ ಹೆಚ್ಚು ಪುಸ್ತಕಗಳು ಅಚ್ಚಾಗಿ ಪ್ರಕಟಗೊಳ್ಳುವ ಹಂತಕ್ಕೆ ಬಂದಿದ್ದೇವೆ. ಇಂಡಿಯಾದಲ್ಲೇ ವರ್ಷಕ್ಕೆ ಸುಮಾರು ಒಂದು ಲಕ್ಷ ಪುಸ್ತಕಗಳು ಪ್ರಕಟಗೊಳ್ಳುತ್ತಿವೆ. ಇದ್ಯಾವುದರಲ್ಲೂ ನಾನು ಪ್ರಕಟವಾಗುವ ಶೈಕ್ಷಣಿಕ ಪುಸ್ತಕಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಈ ಎಲ್ಲಾ ಅಂಕಿಅಂಶಗಳು ಕೇವಲ ಸಾಹಿತ್ಯದ ಪುಸ್ತಕಗಳದ್ದು. ಪುಸ್ತಕ ಪ್ರಕಾಶನದ ಹಿನ್ನೆಲೆ ಹಾಗೂ ವ್ಯಾಪ್ತಿಯನ್ನು ತಿಳಿಸುವ ಸಲುವಾಗಿ ಇದನ್ನೆಲ್ಲಾ ಹೇಳುತ್ತಿದ್ದೇನೆ. ಕನ್ನಡದ ವಿಷಯಕ್ಕೆ ಬಂದರೆ ಸುಮಾರು ಆರರಿಂದ ಏಳು ಸಾವಿರ ಪುಸ್ತಕಗಳು ಪ್ರತಿವರ್ಷ ಪ್ರಕಟವಾಗುತ್ತವೆ ಎಂದು ಅಂದಾಜಿಸಲಾಗುತ್ತದೆ. ಸಾವಿರ ವರ್ಷಗಳ ಹಿಂದೆ ಕಾಗದದ ಮೇಲೆ ಮಸಿಯನ್ನು ಅಂಟಿಸಿ ಪ್ರಕಟಿಸಿ ಆರಂಭವಾದ ಈ ಪ್ರಕಾಶನದ ಕೆಲಸ ಎಷ್ಟೋ ಹಂತಗಳನ್ನು ದಾಟಿ, ನೂರಾರು ಮಾರ್ಪಾಡುಗಳನ್ನು ಕಂಡು ಈಗ ಕೋಟ್ಯಂತರ ರೂಪಾಯಿಗಳ ದೊಡ್ಡ ಉದ್ದಿಮೆಯಾಗಿ ಬೆಳೆದು ನಿಂತಿದೆ. ಬದಲಾವಣೆ ಒಂದೇ ನಿತ್ಯ ನಿರಂತರ ಎನ್ನುವಂತೆ ಮುಂದೆಯೂ ಈ ಉದ್ದಿಮೆಯಲ್ಲಿ ಬದಲಾವಣೆಗಳಿಗೆ ಕೊರತೆ ಇರುವುದಿಲ್ಲ ಎಂಬುದು ನನ್ನ ನಂಬಿಕೆ. 

ಹಿಂದೆ ಏನೇನಾಯಿತು ಎಂಬುದು ಈಗ ಬೇಡ ಬಿಡಿ. ಸದ್ಯಕ್ಕೆ ಈಗಿನ ಪ್ರಕಾಶನದ ಕೆಲಸ ಹೇಗೆ ನಡೆಯುತ್ತದೆ ಗೊತ್ತಾ? ಆದಷ್ಟು ಚುಟುಕಾಗಿ ಹೇಳಿಬಿಡುತ್ತೀನಿ. ನೀವೇನಾದರೂ ಹೊಸದಾಗಿ ಪ್ರಕಾಶನದ ಕೆಲಸ ಆರಂಭಿಸಿದ್ದರೆ, ಅಥವಾ ಶುರುಮಾಡುವವರಿದ್ದರೆ ಈ ವಿವರ ನೆರವಿಗೆ ಬರಬಹುದು.

-      ಸಾಹಿತ್ಯದ ಪ್ರಕಾರದ ಆಯ್ಕೆ ನಿಮಗೆ ಬಿಟ್ಟದ್ದು. ಕತೆ, ಕಾದಂಬರಿ, ಕವಿತೆ, ವ್ಯಕ್ತಿತ್ವ ವಿಕಸನ, ಪ್ರಬಂಧ, ಜೀವನಚರಿತ್ರೆ ಹೀಗೆ ಯಾವ ಬಗೆಯ ಸಾಹಿತ್ಯವನ್ನು ಪ್ರಕಟಿಸಬೇಕು ಎಂಬುದು ನಿಮ್ಮ ತೀರ್ಮಾನವಾಗಿರಲಿ. ಅದಕ್ಕೆ ಹೊಂದುವಂತಹ ಬರಹಗಾರರನ್ನು ಹುಡುಕಿ ಅಥವಾ ತಲುಪಿ ಬರಹವನ್ನು ಪಡೆದು, ಒಂದು ಸಲ ಓದಿಬಿಡಿ. 

-      ನಿಮಗೊಂದು ಸಂಪಾದಕೀಯ ತಂಡ ಇದ್ದರೆ ಒಳ್ಳೆಯದು. ಪ್ರಕಟಿಸಬಹುದು ಅನಿಸಿದ ಬರಹ ಸಿಕ್ಕರೆ ಅದನ್ನು ಸಂಪಾದಕೀಯ ತಂಡಕ್ಕೆ ಕಳುಹಿಸಿ ಅವರ ಅನಿಸಿಕೆಯನ್ನು ಪಡೆಯಿರಿ. ಬರಹದಲ್ಲಿ ಏನಾದರು ಬದಲಾವಣೆಗಳು ಬೇಕೆನಿಸಿದರೆ ಅದನ್ನು ಬರಹಗಾರರೊಂದಿಗೆ ಚರ್ಚಿಸಿ. ನಿಮ್ಮ ಹಾಗೂ ನಿಮ್ಮ ತಂಡದ ಅನಿಸಿಕೆಗಳನ್ನು ಒಪ್ಪಿ ಬರಹದಲ್ಲಿ ಬದಲಾವಣೆ ಆದರೆ ಮುಂದಿನ ಹಂತಕ್ಕೆ ಹೋಗಿ. ನಿಮ್ಮ ಅನಿಸಿಕೆಗೆ ತಕ್ಕಂತೆ ಬರಹಗಾರರು ಬದಲಾಯಿಸಲು ಒಪ್ಪದೇ ಹೋದಲ್ಲಿ ಮುಂದುವರೆಯಬೇಕೋ ಬೇಡವೋ ಎಂಬ ತೀರ್ಮಾನ ನೀವು ತೆಗೆದುಕೊಳ್ಳಿ. ಮುಂದುವರೆಯುವುದಾದರೆ, ಮುಂದಿನ ಹಂತಕ್ಕೆ ಹೋಗಿ, ಇಲ್ಲವಾದರೆ ಹಿಂದಿನ ಹಂತದಿಂದ ಮತ್ತೆ ಶುರುಮಾಡಿ. 

-      ಎಲ್ಲಾ ಒಪ್ಪಿಗೆ ಆದಲ್ಲಿ ಬರಹಗಾರರೊಂದಿಗೆ ಒಂದು ಒಪ್ಪಂದ ಮಾಡಿಕೊಳ್ಳಿ. ಒಪ್ಪಂದ ಹಾಳೆಯ ಮೇಲಿರಲಿ. ಎಷ್ಟು ವರ್ಷದ ತನಕ ನೀವದನ್ನು ಅಚ್ಚು ಹಾಕಿಸಿ ಮುದ್ರಿಸಬಹುದು, ರಾಯಧನ ಹೇಗೆ ಮತ್ತು ಎಷ್ಟು ಕೊಡುವುದು, ಬರಹದ ಹಕ್ಕುಗಳು ಯಾರ ಬಳಿ ಇರಬೇಕು, ಇಂತಹ ವಿಷಯಗಳಿರುವ ಒಂದು ಒಪ್ಪಂದ ಪತ್ರ ಮಾಡಿಕೊಂಡು ಇಬ್ಬರೂ ಸಹಿಹಾಕಿ ತೆಗೆದಿಟ್ಟುಕೊಳ್ಳಿ. ಪ್ರಕಾಶಕ-ಲೇಖಕರ ನಡುವಿನ ಒಪ್ಪಂದ ಪತ್ರದ ಮಾದರಿಗಳು ಬೇಕಾದಷ್ಟು ಸಿಗುತ್ತವೆ. ಅಥವಾ ನಿಮಗೆ ಗೊತ್ತಿರುವ ವಕೀಲರಿಂದ ಒಂದು ಒಪ್ಪಂದ ಪತ್ರದ ಮಾದರಿ ಮಾಡಿಸಿಟ್ಟುಕೊಳ್ಳಿ.

-      ಒಪ್ಪಂದದ ಓಡಾಟಗಳೆಲ್ಲಾ ಮುಗಿದ ಮೇಲೆ ಬರಹಕ್ಕೆ ಬೇಕಾದ ಮುಖಪುಟ ಮಾಡುವ ಕೆಲಸ ಆರಂಭವಾಗಲಿ. ಬರಹಗಾರರಿಗೂ ಮುಖಪುಟ ವಿನ್ಯಾಸ ಮಾಡುವವರಿಗೂ ಮಾತಾಡಿಸಿ, ನಿಮ್ಮ ಸಲಹೆಗಳನ್ನೂ ನೀಡಿ ಮುಖಪುಟ ಮಾಡಿಸಿ.

-      ಮುಖಪುಟದ ಕೆಲಸ ನಡೆಯುತ್ತಿರುವಾಗಲೇ ಒಳಪುಟ ವಿನ್ಯಾಸದ ಕೆಲಸವೂ ಶುರುವಾಗಲಿ. ಪುಸ್ತಕ ಯಾವ ಅಳತೆಯಲ್ಲಿರಬೇಕು ತೀರ್ಮಾನಿಸಿ ಅದಕ್ಕೆ ತಕ್ಕಂತೆ ವಿನ್ಯಾಸ ಮಾಡಿಸಿ. ಮಾರುಕಟ್ಟೆಯಲ್ಲಿ ಬಳಕೆಯಲ್ಲಿರುವ ಜನಪ್ರಿಯ ಅಳತೆಗಳು ಇಲ್ಲಿವೆ ನೋಡಿ;

1/8 Demy Size = 5.5” X 8.5”

1/8 Crown Size = 4.5” X 7”

1/4 Crown Size = 7” X 9.5”

1/4 Demy Size = 8.5” X 11”

1/4 Royal Size = 6.5” X 10”

1/16 Demy Size = 6” X 4.2” 

-      ಇದರ ನಡುವೆ ಐಎಸ್ಬಿಎನ್ಗೆ ಕೋರಿಕೆ ಸಲ್ಲಿಸುವ ಕೆಲಸ ಮರೆಯಬೇಡಿ. https://isbn.gov.in ಮೂಲಕ ನೀವು ಖಾತೆ ಒಂದನ್ನು ತೆರೆದು ಪುಸ್ತಕದ ವಿವರಗಳನ್ನು ನೀಡಿ ಐಎಸ್ಬಿಎನ್ಗೆ ಕೋರಿಕೆ ಸಲ್ಲಿಸಿ. ಸಲ್ಲಿಸಿದ ಹತ್ತು ದಿನದ ಒಳಗೆ ಐಎಸ್ಬಿಎನ್ ನಿಮಗೆ ಸಿಗುವುದು. ಪುಸ್ತಕದ ಗುರುತಿಗೆ ಇದು ಒಳ್ಳೆಯದು.

-      ವಿನ್ಯಾಸದ ಕೆಲಸ ಮುಗಿದ ಮೇಲೆ ಕೊನೆಯ ಹಂತದ ಕರಡು ತಿದ್ದುವ ಕೆಲಸ ನಡೆಯಲಿ. ಇದು ತುಂಬಾ ಮುಖ್ಯ, ಕಾಗುಣಿತ ತಪ್ಪಿದ್ದರೆ, ವ್ಯಾಕರಣ ಹಾಳಾಗಿದ್ದರೆ, ವಿರಾಮ ಚಿಹ್ನೆಗಳು ಎಲ್ಲೆಲ್ಲೋ ಹೋಗಿದ್ದರೆ, ಒಟ್ಟಾರೆಯಾಗಿ ಓದುಗನಿಗೆ ಯಾವುದೇ ತೊಂದರೆ ಆಗದೇ ಇರುವಂತೆ ಪುಸ್ತಕ ಬಂದಿದೆಯೇ ಎಂದು ನೋಡಬೇಕು. ತಪ್ಪುಗಳಿದ್ದರೆ ಗುರುತು ಹಾಕಿ ಮತ್ತೆ ಒಳಪುಟ ವಿನ್ಯಾಸದವರಿಗೆ ಕಳುಹಿಸಿ ಸರಿಪಡಿಸಿ.

-      ಅತ್ತ ಮುಖಪುಟದ ಕೆಲಸ ಮುಗಿಯುತ್ತಿದ್ದಂತೆ ಇತ್ತ ಒಳಪುಟವೂ ತಯಾರಾದರೆ ಮುಂದಿನದ್ದು ಅಚ್ಚು ಹಾಕಿಸುವ ಕೆಲಸ. ಯಾವ ಬಗೆಯ ಕಾಗದ ಬಳಸಬೇಕು, ಗಟ್ಟಿ ಹೊದಿಕೆಯೋ, ಕಾಗದದ ಹೊದಿಕೆಯೋ ಎಂಬುದನ್ನೆಲ್ಲಾ ನಿಮ್ಮ ಪುಸ್ತಕ ಅಚ್ಚುಹಾಕಿಸುವವರ ಜೊತೆ ಮಾತನಾಡಿ ತಿಳಿಸಿ. ಸಾಧ್ಯವಾದರೆ ಒಂದು ಪುಸ್ತಕವನ್ನು ಮಾದರಿ ಅಚ್ಚು ಹಾಕಿಸಿ ನೋಡಿದರೆ ಒಳ್ಳೆಯದು. ಎಲ್ಲವೂ ಸರಿಯಾದರೆ ಎಷ್ಟು ಬೇಕೋ ಅಷ್ಟು ಪುಸ್ತಕವನ್ನು ಅಚ್ಚುಹಾಕಿಸಿ. ಮೊದಲ ಮುದ್ರಣ ಸಾಮಾನ್ಯವಾಗಿ ಒಂದು ಸಾವಿರ ಪುಸ್ತಕಗಳನ್ನು ಹಾಕಿಸುವುದು ವಾಡಿಕೆ.

-      ಮುಂದಿನದ್ದು ಪ್ರಚಾರ ಮತ್ತು ವಿತರಣೆ. ನನಗೆ ತಿಳಿದ ಹಾಗೆ ನಾವೆಲ್ಲರೂ ಹೆಚ್ಚು ಎಡವಿ ಬೀಳುವುದು ಇಲ್ಲಿಯೇ. ಪುಸ್ತಕಕ್ಕೆ ಚೆನ್ನಾಗಿ ಪ್ರಚಾರ ಕೊಡಿ. ದಿನಪತ್ರಿಕೆ, ಸಾಮಾಜಿಕ ಜಾಲತಾಣ, ಇಂಟರ್ನೆಟ್ಗಳ ನೆರವನ್ನು ಪಡೆದುಕೊಳ್ಳಿ. ಬರಹಗಾರರ ಜೊತೆ ಮಾತನಾಡಿ ಪುಸ್ತಕ ಬಿಡುಗಡೆಯ ಕಾರ್ಯಕ್ರಮಗಳನ್ನು ಮಾಡುವುದಿದ್ದರೆ ಮಾಡಿ. ಅದೂ ಪ್ರಚಾರದ ಒಂದು ಭಾಗವೇ ಆಗಿದೆ. ರಾಜ್ಯದ ಮೂಲೆ ಮೂಲೆಯ ಪುಸ್ತಕದ ಅಂಗಡಿಗಳಲ್ಲಿ ಪುಸ್ತಕ ಇರುವಂತೆ ವಿತರಣೆಯ ಕೆಲಸಮಾಡಿ. ನೀವು ವಿತರಣೆ ಮಾಡಲು ಆಗದಿದ್ದಲ್ಲಿ ಒಳ್ಳೆಯ ವಿತರಕರನ್ನು ಹುಡುಕಿ, ಪುಸ್ತಕ ಎಲ್ಲಾ ಪುಸ್ತಕದಂಗಡಿ ತಲುಪುವಂತೆ ನೋಡಿಕೊಳ್ಳಿ. ಅಮೇಜಾನ್, ಫ್ಲಿಪ್ಕಾರ್ಟ್ನಂತಹ ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಪುಸ್ತಕ ಕಾಣುವಂತೆ ಮಾಡಿ ಅಲ್ಲಿಯೂ ಪ್ರಚಾರ ಕೊಡಿ. ಪ್ರಚಾರ ಹಾಗೂ ವಿತರಣೆ ಹೀಗೆ ಮಾಡಬೇಕು, ಹಾಗೆಯೇ ಮಾಡಬೇಕು ಎಂಬ ನಿಯಮಗಳಿಲ್ಲ. ಪುಸ್ತಕದ ಬಗ್ಗೆ ಜನರಿಗೆ ತಿಳಿಯಬೇಕು, ಮಾರಾಟವಾಗಬೇಕು. ಅಷ್ಟೇ ಇದರ ಗುರಿ ಆಗಿರಲಿ. ಬೇರೆ ಬೇರೆ ಓದುಗರ ಗುಂಪಿನಲ್ಲಿ ಕಾಣಿಸಿಕೊಳ್ಳುವಂತೆ ಬರಹಗಾರರನ್ನು ಕೇಳಿ. ಪುಸ್ತಕದ ಕುರಿತು ಆಗಾಗ ಬೇರೆ ಬೇರೆ ಪುಸ್ತಕದ ಅಂಗಡಿಗಳಲ್ಲಿ, ಓದುಗರ ಗುಂಪಿನಲ್ಲಿ ಚರ್ಚೆಗಳನ್ನು ಏರ್ಪಡಿಸಿ. ಅಲ್ಲಿಯೂ ಬರಹಗಾರರು ಪಾಲ್ಗೊಳ್ಳುವಂತೆ ಮಾಡಿ. ಪ್ರಚಾರಕ್ಕೆ ನೀವೆಷ್ಟು ಮುಖ್ಯವೋ ಬರಹಗಾರರೂ ಅಷ್ಟೇ ಮುಖ್ಯ. 

-      ಲೆಕ್ಕ-ಪತ್ರಗಳನ್ನು ಸರಿಯಾಗಿಡಿ. ಒಪ್ಪಂದದ ಪ್ರಕಾರ ಬರಹಗಾರರಿಗೆ ತಲುಪಬೇಕಾದ ರಾಯಧನ ಸರಿಯಾಗಿ ತಲುಪಲಿ. ಪುಸ್ತಕವೊಂದು ಮರುಮುದ್ರಣ ಕಂಡರೆ ಅದಕ್ಕಿಂತ ದೊಡ್ಡ ಗೆಲುವು ಇನ್ನೊಂದಿಲ್ಲ. ಅದಕ್ಕೆ ಬೇಕಾದ ಪ್ರಚಾರ, ವಿತರಣೆ ನಿಮ್ಮಲ್ಲಿರಲಿ. ಅಷ್ಟೇ ದೊಡ್ಡ ಮಟ್ಟದ ಪಾರದರ್ಶಕತೆ ವ್ಯವಹಾರದಲ್ಲಿ ಇರಲಿ.

ಪುಸ್ತಕವೊಂದು ಸೋತರೆ ಎದೆಗುಂದಬೇಡಿ, ತಪ್ಪೇನಾಯಿತು ಎಂದು ತಿಳಿಯಿರಿ, ಕಲಿಯಿರಿ ಮುಂದೆ ನಡೆಯಿರಿ. ಹಾಗೆಯೇ ಪುಸ್ತಕವೊಂದು ಗೆದ್ದರೂ ಹೇಗೆ ಗೆದ್ದಿತು ಎಂದು ತಿಳಿಯಿರಿ, ಕಲಿಯಿರಿ ಮುಂದೆ ನಡೆಯಿರಿ. ಕನ್ನಡ ಪುಸ್ತಕ ಪ್ರಕಾಶನವನ್ನು ಆದಷ್ಟು ವೃತ್ತಿಪರತೆಯಿಂದ ನಡೆಸಿಕೊಂಡು ಹೋಗುವ ಪ್ರಯತ್ನ ನಿಮ್ಮದಾಗಿರಲಿ. ಇದಿಷ್ಟು ಚುಟುಕಾಗಿ ಪ್ರಕಾಶನದ ಕೆಲಸಗಳನ್ನು ನಿಮ್ಮ ಮುಂದೆ ತೆರೆದಿಡುವ ಪ್ರಯತ್ನ. ಮುಂದಿನ ದಿನದಲ್ಲಿ ಒಂದೊಂದೇ ವಿಷಯಗಳ ಬಗ್ಗೆ ಮತ್ತಷ್ಟು ಆಳವಾಗಿ ತಿಳಿಯುವ ಪ್ರಯತ್ನ ಮಾಡೋಣ. ಮತ್ತೆ ಸಿಗೋಣ.

ಒಳಿತಾಗಲಿ,

ರತೀಶ ಬಿ. ಆರ್.

ಹರಿವು ಬುಕ್ಸ್ ನಿರ್ದೇಶಕರು    

Back to blog