ಕನ್ನಡ ಪುಸ್ತಕೋದ್ಯಮದಲ್ಲಿ ವಿತರಣೆ ಸದ್ಯಕ್ಕೆ ಒಗ್ಗರಣೆ

ಕನ್ನಡ ಪುಸ್ತಕೋದ್ಯಮದಲ್ಲಿ ವಿತರಣೆ ಸದ್ಯಕ್ಕೆ ಒಗ್ಗರಣೆ

 ಈಗಾಗಲೇ ನೆಲೆ ನಿಂತ, ಮೊದಲಿನಿಂದಲೂ ಅಖಾಡದಲ್ಲಿರುವ ಪ್ರಕಾಶಕರಿಗೆ ವಿತರಣೆ ಎಷ್ಟರ ಮಟ್ಟಿಗೆ ಸಲೀಸು ಗೊತ್ತಿಲ್ಲ, ಆದರೆ ಸಾಹಿತ್ಯ ಲೋಕದಲ್ಲಿ ಹೊಸದಾಗಿ ಏನೇನೋ ಆಲೋಚನೆ ಇಟ್ಟುಕೊಂಡು ಜಿಗಿಯುವ ಯುವಮನಸುಗಳಿಗೆ ಪೂರಕವಾದ ವಿತರಣೆ ಚೈನ್ ಅಂತೂ ನಮ್ಮಲ್ಲಿ ಇಲ್ಲ.

ಈಗ ಇಲ್ಲವಾ? ಎಂದು ನೋಡಿದರೆ, ಮೊದಲಿನಿಂದಲೂ ಒಂದು ವೃತ್ತಿಪರವಾದ ವಿತರಣೆ ವ್ಯವಸ್ಥೆ ನಮ್ಮಲ್ಲಿ ಇಲ್ಲವೇ ಇಲ್ಲ. ನಮ್ಮ ಮಾರುಕಟ್ಟೆಯನ್ನು ನಾವೇ ಕುಗ್ಗಿಸಿಕೊಂಡಿದ್ದೇವೆ. ನಮ್ಮಲ್ಲಿ ಏಳೆಂಟು ಪ್ರಮುಖ ವಿತರಕರಿದ್ದಾರೆ. ಆದರೆ ಆ ವಿತರಕರೆಲ್ಲ ಪ್ರಕಾಶಕರೂ ಹೌದು. ವಿತರಣೆ ಎನ್ನುವುದು ಪೂರ್ಣಪ್ರಮಾಣದಲ್ಲಿಲ್ಲ. ಅವರಿಗೆ ವಿತರಣೆ ಒಂದು ಹಂತದಲ್ಲಿ ತಲೆಬಿಸಿಯೂ ಹೌದು. ಅವರ ಪ್ರಕಾಶನಕ್ಕಿಂತ ವಿತರಣೆಯ ಪುಸ್ತಕಗಳು ಹೆಚ್ಚು ಮಾರಾಟವಾದಲ್ಲಿ ಸ್ವಲ್ಪ ಹೊಟ್ಟೆಉರಿಯೂ ಹೌದು.

ನಮ್ಮಲ್ಲಿ ವೃತ್ತಿಪರವಾಗಿ ಅಷ್ಟಾಗಿ ಏನೂ ನಡೆಯೋಲ್ಲ. ಇನ್ನು ಇಮೇಲ್, ಫೋನ್ ಮೀಟಿಂಗ್ಗಳಿಗೆ ಸಾಂಪ್ರದಾಯಿಕ ವಿತರಕರು ತೆರೆದುಕೊಂಡಿಲ್ಲ. ಅವರಿಗೇನಿದ್ದರೂ ಪುಸ್ತಕ ಹೊತ್ತುಕೊಂಡು ಪ್ರಕಾಶಕರು, ಲೇಖಕರು ಅವರ ಬಾಗಿಲು ತಟ್ಟಬೇಕು, ಪರ್ಚೇಸ್ ಆರ್ಡರ್ ಬಾಯಿ ಮಾತಲ್ಲಿ ಆಗಬೇಕು, ಬಿಲ್ ಸೆಟಲ್ಮೆಂಟ್ ಅವರೇ ನಿರ್ಧರಿಸಬೇಕು. ಪ್ರಕಾಶಕರು ಅಥವಾ ಲೇಖಕರು ಕೇಳಿದರೆ ಮುನಿಸಿಕೊಳ್ಳುವುದರಿಂದ ಹಿಡಿದು ಬುಕ್ಕೇ ಸೇಲ್ ಆಗಿಲ್ಲ ಎಂದು ವಾಪಸು ಕೊಡುವ ತಂತ್ರ ಬೇರೆ. ಕೊಟ್ಟ ಪುಸ್ತಕಗಳನ್ನು ನಾಲ್ಕೈದು ತಿಂಗಳು ಇಟ್ಟುಕೊಂಡು ಪ್ರಯೋಜನ ಏನು?

ನಮ್ಮ ಪ್ರಕಾಶನದ ಪುಸ್ತಕ ವಿತರಣೆಯೊಂದನ್ನು ಒಬ್ಬರು ವಿತರಕರಿಗೆ ಕೊಟ್ಟಿದ್ದೆವು. ಬಿಲ್ ಕೇಳುವವರೆಗೂ ನಗುತ್ತ ನಗುತ್ತ ಇದ್ದವರು, ಬಿಲ್ ಕೇಳಿದ ಕೂಡಲೇ ಫೋನ್ ಕಾಲ್ ಎತ್ತದೆ ಇರೋದು, ಆಮೇಲೆ ಏನೇನೋ ನೆಪ ಕೊಡೋದು ಮಾಡಿದರು. ಸ್ವಲ್ಪ ಗಂಭೀರವಾಗಿ ಕೇಳಿದಾಗ, “ಪುಸ್ತಕವೇ ಹೋಗಿಲ್ಲ, ಬಂದ್ ತಗೊಂಡ್ ಹೋಗಿ” ಎಂದು ಹೊಸ ತಂತ್ರ ಶುರು ಮಾಡಿಕೊಂಡರು. “ಸರಿ ಕೊಡಿ” ಎಂದು ಹೋಗಿ, “ಆರೇಳು ತಿಂಗಳ ಹಿಂದೆ ವಿತರಣೆಗೆ ಕೊಟ್ಟ ಪುಸ್ತಕಗಳು ಹಾಗೇ ಇವೆ. ಯಾಕೆ ಕೊಟ್ಟಿಲ್ಲ?” ಎಂದು ಕೇಳಿದರೆ “ಎನಕ್ವಯಿರಿ ಇಲ್ಲ, ಆರ್ಡರ್ ಇಲ್ಲ” ಎಂದರು. ಅದು ಚೆನ್ನಾಗಿಯೇ ಹೋಗುತ್ತಿದ್ದ ಪುಸ್ತಕ. ಅವರ ಪ್ರಕಾರ ಮಳಿಗೆಯವರೇ ಅವರನ್ನು ಕೇಳಬೇಕು ಇಲ್ಲವೇ ಪ್ರಕಾಶಕರು ಹೇಳಬೇಕು. ಅವರ ಕೆಲಸ ಕೇವಲ ತಲುಪಿಸುವುದಷ್ಟೇ. ಮತ್ತೆ ಅವರಾಗಿ ಅವರೇ ಬಿಲ್ ಸೆಟಲ್ ಮಾಡುವ ಮನಸು ಬರಬೇಕಷ್ಟೆ. ಈ ತರದ ಬೇಜವಾಬ್ದಾರಿ ವೃತ್ತಿಪರವಲ್ಲದ ವಿತರಕರು ನಮ್ಮಲ್ಲಿ ಇದ್ದಾರೆ. ಅವರಿಂದಾಗಿ ಪುಸ್ತಕಗಳು ಮಾರುಕಟ್ಟೆಯಲ್ಲಿ ಇರದೇ ಅವರ ಗೋಡೌನ್ಗಳಲ್ಲಿ ಇವೆ, ಸ್ವತಂತ್ರ ಲೇಖಕರಿಗೆ ಬಿಲ್ ಸೆಟಲ್ ಆಗುತ್ತಿಲ್ಲ, ಜೊತೆಗೆ ವೃತ್ತಿಪರವಲ್ಲದ ಈರ್ಷ್ಯೆ, ದ್ವೇಷ, ಮುನಿಸು ಇವೆಲ್ಲ ಹೊರೆ ಬೇರೆ.

ಪುಸ್ತಕ ಮಾಡೋದು ಈಗ ಮೊದಲಿಗಿಂತ ಸುಲಭದ ವಿಷಯ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಆದರೆ ಪುಸ್ತಕವನ್ನು ಓದುಗರಿಗೆ ತಲುಪಿಸೋದು, ಹಾಕಿದ ಬಂಡವಾಳ ತೆಗೆದುಕೊಳ್ಳೋದು ಹಾಗೂ ಮಾರುಕಟ್ಟೆ ವಿಸ್ತರಣೆ ಸದ್ಯಕ್ಕೆ ಪ್ರತಿಷ್ಠಿತರಲ್ಲದ ಈಗಷ್ಟೇ ಧುಮುಕಿರುವ ಹೊಸಬರು ಮತ್ತು ಸ್ವತಂತ್ರ ಪ್ರಕಾಶಕ ಮತ್ತು ಲೇಖಕರಿಗೆ ದೊಡ್ಡ ಸವಾಲು. ನಮಗೂ ಇದರ ಬಿಸಿ ಮುಟ್ಟಿರುವುದು ಸುಳ್ಳಲ್ಲ. ಹಾಗಂತ ಎಲ್ಲರೂ ಅಂತಹವರೇ ಎಂದು ನಾನು ಹೇಳುತ್ತಿಲ್ಲ. ಹೊಸಬರಿಗೆ ವೇದಿಕೆ ಕೊಡುವ, ಸಹಾಯ ಮಾಡುವ, ಪೂರಕವಾಗಿರುವ ಮಳಿಗೆಯವರು, ವಿತರಕರು ಕೂಡ ಇದ್ದಾರೆ. ಅಂತಹವರ ಸಂಖ್ಯೆ ಹೆಚ್ಚಲಿ.

ಪ್ರಕಾಶಕರಲ್ಲದ ಪೂರ್ಣ ಪ್ರಮಾಣದ ವಿತರಣೆ ವ್ಯವಸ್ಥೆ ಒಂದು ನಮ್ಮಲ್ಲಿ ಹುಟ್ಟಬೇಕಿದೆ. ಅವರಿಗೆ ವಿತರಣೆಯೇ ಕೆಲಸವಾಗಬೇಕು. ಕರ್ನಾಟಕವನ್ನು ನಾಲ್ಕು ಭಾಗ ಮಾಡಿ ಪ್ರತಿ ಭಾಗದಲ್ಲಿ ಒಂದು ಶಾಖೆ ಆಗಬೇಕು. ಸ್ಟೋರೇಜ್ ವ್ಯವಸ್ಥೆ ಆಗಬೇಕು. ಅವುಗಳ ನಡುವಿನ ಕೋಆರ್ಡಿನೇಷನ್ ಮೂಲಕ ಯಾವುದೇ ಕನ್ನಡ ಪುಸ್ತಕ ಇಡೀ ಕರ್ನಾಟಕದಲ್ಲಿ ತಲುಪುವ ವ್ಯವಸ್ಥೆ ಆಗಬೇಕು.

ವಿತರಕರಿಗೆ ಸ್ವಲ್ಪ ವೃತ್ತಿಪರತೆ ದಕ್ಕಬೇಕು. ಪರ್ಚೇಸ್ ಆರ್ಡರ್ ಹಾಕುವ, ತಾವಾಗಿಯೇ ಮಳಿಗೆಯವರಿಗೆ, “ಇಂತಹ ಕೆಲವು ಹೊಸ ಪುಸ್ತಕಗಳು ಬಂದಿವೆ, ಇಂಥ ಇಂಥ ಪ್ರಕಾಶನ ಲೇಖಕರು ಬರೆದಿದ್ದಾರೆ, ಮಾರುಕಟ್ಟೆಯ ಪೊಟೆನ್ಶಿಯಲ್ ಇಷ್ಟಿದೆ” ಎಂದು ಹೇಳಿ ಆರ್ಡರ್ ಪಡೆದುಕೊಳ್ಳುವ ವ್ಯವಸ್ಥೆ ಆಗಬೇಕು, ಬಿಲ್ ಡ್ಯೂ ಡೇಟ್ ತೋರಿಸುವ ವ್ಯವಸ್ಥೆ ಆಗಬೇಕು, ಸಕಾಲದಲ್ಲಿ ಬಿಲ್ ಸೆಟಲ್ ಮಾಡುವ, ಇಲ್ಲವೇ ಮಾರಾಟವಾಗಿರುವ ಪುಸ್ತಕಕ್ಕಾದರೂ ಬಿಲ್ ಸೆಟಲ್ ಮಾಡಿ ಮಿಕ್ಕ ಪುಸ್ತಕ ಹಿಂದಿರುಗಿಸುವ ವ್ಯವಸ್ಥೆ ಆಗಬೇಕು. ಇವೆಲ್ಲವೂ ಸೇವೆ ಅಂದುಕೊಳ್ಳದೆ ವ್ಯವಹಾರ ಎಂದೇ ಟ್ರೀಟ್ ಮಾಡಬೇಕು. ನಮ್ಮಲ್ಲಿ ಕೆಲವರಿಗೆ ವಿತರಣೆ ವ್ಯವಸ್ಥೆ ಸೇವೆ ಅನ್ನುವ ಮನೋಭಾವನೆ ಇದ್ದು, ಪ್ರಕಾಶಕರು ಮತ್ತು ಲೇಖಕರು ಭಯಂಕರ ವಿಧೇಯತೆ ತೋರುವುದನ್ನು ಅಪೇಕ್ಷಿಸುತ್ತಾರೆ. ಅದೆಲ್ಲ ಓಕೆ, ಆದರೆ ಇದು ವ್ಯವಹಾರ ಆಗಿ, ಇದಕ್ಕೆ ಹಣ ಪಡೆಯುವಾಗ ಈ ಉಪಯೋಗಕ್ಕಿಲ್ಲದ ಸೇವೆ ವಿಧೇಯತೆ ಯಾಕೆ ಅಪೇಕ್ಷಿಸುತ್ತಾರೆ? ಅದೆಲ್ಲ ತಾನಾಗಿ ಹುಟ್ಟುವುದು ಅಲ್ಲವೇ?

ಕನ್ನಡ ಸಾಹಿತ್ಯವನ್ನು ಒಂದು ಉದ್ಯಮವಾಗಿ ಕಟ್ಟಿ ಬೆಳೆಸಿ ಅದರ ಮಾರುಕಟ್ಟೆಯನ್ನು ಭಾರತದ ಉದ್ದಗಲಕ್ಕೂ ಹಬ್ಬಿಸುವ ಹೊಣೆಗಾರಿಕೆಯಲ್ಲಿ ಪ್ರಕಾಶಕರು, ವಿತರಕರು, ಬರಹಗಾರರು ಮತ್ತು ಓದುಗರು ಎಲ್ಲರ ಪಾಲೂ ಇದೆ. ಇಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೈ ಜೋಡಿಸಿ ನಡೆಯಲೇಬೇಕಾದ ಅನಿವಾರ್ಯತೆ ಇದೆ. ಒಳ್ಳೆಯ ಕಂಟೆಂಟ್ ಇರುವ ಪುಸ್ತಕಗಳನ್ನು ಲೇಖಕರು, ಪ್ರಕಾಶಕರು ತರಲಿ, ಅದಕ್ಕೆ ಅವಶ್ಯವಾದ ಪ್ರಮೋಷನ್ ದೊರೆತು ಡಿಮಾಂಡ್ ಹುಟ್ಟಲಿ, ಹುಟ್ಟಿದ ಬೇಡಿಕೆಯನ್ನು ಪೂರೈಸಲು ಪುಸ್ತಕ ತಲುಪಿಸುವ ಸೂಕ್ತ ವಿತರಣೆ ವ್ಯವಸ್ಥೆ ಆಗಲಿ, ಅದಕ್ಕೆ ಮಳಿಗೆಯವರ ಸಹಕಾರವೂ ಇರಲಿ. ಹಾಗೆ ನೋಡಿದರೆ ನಮ್ಮಲ್ಲಿ ಬರಹಗಾರನಿಗಿಂತ ವಿತರಣೆ ಮತ್ತು ಮಳಿಗೆಯವರಿಗೆ ಲಾಭ ಹೆಚ್ಚು. ಆ ಲಾಭದ ಕೃತಜ್ಞತೆಗಾದರೂ ಒಂದೊಳ್ಳೆ ವ್ಯವಸ್ಥೆ, ಸಹಕಾರ ನಮ್ಮಲ್ಲಿ ಇರಲೇಬೇಕು.

ಮುಂದಿನ ದಿನಗಳಲ್ಲಿ, ಈಗಿನ ಯುವ ತಲೆಮಾರಿನ ಓದುಗರು, ಮಳಿಗೆಯವರ ಜೊತೆ ಸಾಂಪ್ರದಾಯಿಕ ವಿತರಕರು ಸೇರಿ ಕನ್ನಡ ಸಾಹಿತ್ಯ ಮಾರುಕಟ್ಟೆ ವಿಸ್ತರಣೆ ಆಗುವ ಎಲ್ಲ ಭರವಸೆಗಳಿವೆ. ಅದಕ್ಕೆ ಸಣ್ಣ ನಿಷ್ಕಲ್ಮಶ ಸ್ವಾರ್ಥವಿಲ್ಲದ ಸಹಕಾರ ಬೇಕಿದೆ.

ಎಲ್ಲರೂ ಒಟ್ಟಿಗೆ ಕೈ ಹಿಡಿದು ಉದ್ಯಮ ಬೆಳೆಸೋಣ.

Back to blog