*ಹಿರಣ್ಯಗರ್ಭ*
ಆಗ ನನ್ನ ಶಾಲಾ ಕಾಲೇಜು ದಿನಗಳು. YouTube, FB ಇತ್ಯಾದಿಗಳು ಇರದಿದ್ದ ಕಾಲ. ಹಾಗಾಗಿ ಕನ್ನಡ ಪುಸ್ತಕವನ್ನು ಕೈಗೆತ್ತಿಕೊಂಡರೆ ಒಂದೇ ದಿನದಲ್ಲಿ ೩೦೦-೪೦೦ ಪುಟಗಳ ಕಾದಂಬರಿಗಳನ್ನು ಆಸ್ವಾದಿಸುತ್ತಾ ಓದಿ ಮುಗಿಸಿದ್ದಿದೆ. ಅದರಲ್ಲೂ ಯಂಡಮೂರಿ ವೀರೇಂದ್ರನಾಥರ ಕಾದಂಬರಿ ಕೈಗೆ ಸಿಕ್ಕಿದರಂತೂ ಸರಿಯೇ ಸರಿ. ಆದರೆ ಇತ್ತೀಚಿನ ದಿನಗಳಲ್ಲಿ ಹಾಗೆ ಓದಿದ್ದಿಲ್ಲ. ಆದರೆ ಮೊನ್ನೆ ರಾತ್ರಿ ನನ್ನ ಕೈ ಸೇರಿದ *ಹಿರಣ್ಯಗರ್ಭ* ಪುಸ್ತಕವು ಮತ್ತೆ ಆ ದಿನಗಳಿಗೆ ನನ್ನನ್ನು ಕೊಂಡಯ್ದುಬಿಟ್ಟಿತು. ಮೊನ್ನೆ ರಾತ್ರಿ ಪುಸ್ತಕದ ಮುನ್ನುಡಿ ಓದಿ ಮಲಗಿದ್ದೆ. ನಿನ್ನೆ ಬೆಳಗ್ಗೆ ಪುಸ್ತಕ ಹಿಡಿದವನನ್ನು ಬೇರೇನೂ ಕೆಲಸ ಮಾಡದಂತೆ @Naveen B S ಹಿರಣ್ಯಗರ್ಭ ಕಾದಂಬರಿ ಸೆರೆಯಾಗಿಯಿತು. ಶ್ರೀಯುತ ಗಣೇಶಯ್ಯನವರು ಮುನ್ನುಡಿಯಲ್ಲಿ ಬರೆಯುವಂತೆ ಇದು ಮನಸ್ಸಿಗೆ ಇಡೀ ದಿನ ಜಯಂಟ್ ವೀಲ್ ಅನುಭವ ನೀಡಿದ್ದಂತೂ ಅಕ್ಷರಶಃ ಸತ್ಯ. ೨೪ ಗಂಟೆಗಳೊಳಗೆ ಈ ರಸಭರಿತ ರೋಚಕ ಕಾದಂಬರಿಯನ್ನು ಓದಿ ಮುಗಿಸಿ ಆಸ್ವಾದಿಸಿದೆ. ಮನೆಯವರೊಂದಿಗೆ ಹೊರಗೆ ಹೋಗುವುದಿರಲಿ, ಮಾತು ಕತೆ ಕೂಡ ಬಹುತೇಕ ಶೂನ್ಯ ಸ್ಥಿತಿಗೆ ತಲುಪಿತ್ತು ನಿನ್ನೆ.
ಹಾಗಾದರೆ ಅದರಲ್ಲಿ ಅಂಥದ್ದೇನಿದೆ ಅಂದರೆ ಸನಾತನಿಗಳಾದ ನಾವೆಲ್ಲಾ ನಂಬುವ ಹಿರಣ್ಯ ಗರ್ಭದ ತತ್ವ ಸಾರವೇ ಅಡಗಿದೆ. ಅದನ್ನು ವರ್ಣಿಸಲಸದಳ ಓದಿಯೇ ಅನುಭವಿಸಬೇಕು. ಮಲ್ಲೇಶ್ವರಂ ಮಾರುಕಟ್ಟೆಗೆ ನಾನು ಅನೇಕ ಬಾರಿ ಹೋಗಿದ್ದಿದೆ. ಆದರೆ ಇವರು ಕೊಡುವ ಒಂದೊಂದು ವಿವರವೂ ಇವರ ಸೂಕ್ಷ್ಮಾವಲೋಕನ ಕಲೆಗೆ ಒಂದು ಉದಾಹರಣೆ. ಬೆಂಗಳೂರಿನ ಮಲ್ಲೇಶ್ವರಂ ಮಾರುಕಟ್ಟೆಯ ವರ್ಣನೆಯಿಂದ ಆರಂಭವಾಗುವ ಕತೆ ತೆಗೆದುಕೊಳ್ಳುವ ರೋಚಕ ತಿರುವುಗಳು ಅನೂಹ್ಯ. Sky is the limit ಅನ್ನುವಂತೆ ನವೀನರ ಕಲ್ಪನೆ ಅನನ್ಯವಾದುದು. ಪದಬಂಧದಿಂದ ಮೊದಲ್ಗೊಂಡು ಶ್ರೀಸೂಕ್ತ, ಕನಕಧಾರಾ ಸ್ತೋತ್ರ, ಶ್ರೀಚಕ್ರ ಯಂತ್ರ, ರಂಗನಾಥ ಸ್ವಾಮಿಯ ಶಿಲ್ಪ, ವಿಜಯನಗರ ಸಾಮ್ರಾಜ್ಯದ ಚಿತ್ರಣ, ವಿದ್ಯಾರಣ್ಯರ ವೈಭವ, ಒನಕೆ ಕಿಂಡಿ, ಕೋಣಮ್ಮ, ಲಕುಲೀಶ, ಜಾನಪದ ರಾಮಾಣ್ಯ (ಹೌದು ರಾಮಾಣ್ಯ) ಸಂಗೀತ, ಶಿಲ್ಪಶಾಸ್ತ್ರ, ಸಿಮೆಟಿಕ್ಸ್, ಸಿಮಾಗ್ಲಿಫ್, ದಾಸವಾಣಿ, ಫಿಬೋನಕಿ ಸೀರೀಸ್ನ ಗೋಲ್ಡನ್ ರೇಶಿಯೋ, ಚದುರಂಗದ ಕುದುರೆಯ ರಹಸ್ಯ, ಮೈಸೂರು ಮಹಾರಾಜರ ಹವ್ಯಾಸ, ಹೀಗೆ ಅಬ್ಬಬ್ಬ ಅದೆಷ್ಟು ವಿಚಾರಗಳನ್ನು ಹಿಡಿದುಕೊಟ್ಟಿದ್ದಾರೆ. ಇದೆಲ್ಲಾ ಒಂದು ಕಾದಂಬರಿಯಲ್ಲೇ ಜಾಸ್ತಿಯಾಯಿತೇನೋ ಅನ್ನುವಷ್ಟು ವಿವರಗಳು. ಹಾಗಂತ ಡ್ಯಾನ್ ಬ್ರೌನ್ ಓದಿದಾಗ ಬೋರಾಗುವಂತೆ ಇಲ್ಲಿ ನಮಗೆ ಇವರು ಒಂದೇ ವಿಷಯವನ್ನು ಪುಟಗಟ್ಟಲೆ ಎಳೆದೂ ಎಳೆದೂ ಒಂದು ಚೂರೂ ಬೋರ್ ಹೊಡಿಸುವುದಿಲ್ಲ. ಹಾಗಾಗಿ ಒಂದು ಪ್ಯಾರಾ ಕೂಡಾ ಎಗರಿಸಿ ಮುಂದೆ ಹೋಗಲಾಗದು. ಅದೆಲ್ಲವನ್ನೂ ಓದುಗನಿಗೆ ಆಪ್ತವಾಗುವಂತೆ, ಸಹಜವೆನಿಸುವಂತೆ ಎಷ್ಟು ಬೇಕೊ ಅಷ್ಟನ್ನು ಕತೆಗೆ ಪೂರಕವಾಗುವಂತೆ ವಿವರಿಸುತ್ತಾ ಕ್ಲೂ ಹುಡುಕುತ್ತಾ ಮುಂದೆ ಸಾಗುವ ಪರಿ ಅನನ್ಯವಾಗಿದೆ. ಯಂಡಮೂರಿ ವೀರೇಂದ್ರನಾಥರ ಬರೆಹದಲ್ಲಿ ಸಿಗುವ ರೋಚಕತೆ, ಭೈರಪ್ಪನವರಂಥ ಅಧ್ಯಯನ ಶೀಲತೆ, ಚಕ್ರತೀರ್ಥರಂತೆ ವೈಜ್ಞಾನಿಕ ಹಾಗೂ ಗಣಿತದ ವಿಚಾರಗಳನ್ನು ವಿವರಿಸುವ ಬಗೆ, ವಿವಿಧ ಆಕರಗಳಿಂದ ಸಂಗ್ರಹಿಸಿದ ಅದಕ್ಕೆ ಪೂರಕವೆನಿಸುವ ನೈಜ ಚಿತ್ರಗಳ ಕಾಪಿಗಳು, ದೇವುಡು ಅವರ ಕಾದಂಬರಿಗಳಲ್ಲಿ ಕಾಣುವಂತೆ ಸಹಜ ಉಪಮೆಗಳು, ಡ್ಯಾನ್ ಬ್ರೌನ್ ಕಾದಂಬರಿಯಲ್ಲಿ ಕಾಣುವ ಶೈಲಿ ಹೀಗೆ ಇದು ಬಹುರೂಪೀ ಕಾದಂಬರಿ. ಪ್ರತಿ ಪಾತ್ರದ ಚಿತ್ರಣವೂ ಸಹಜ ಸುಂದರ. ತುಂಟ ಗಾರ್ಗಿ, ಮುಗ್ಧ ರಾಘವ, ಜ್ಞಾನಿ ರಾಮಾನುಜ ಎಲ್ಲರೂ ಕಣ್ಣಮುಂದೆ ಬಂದು ಮಾತನಾಡಿದಂತೆ ಅನಿಸುತ್ತದೆ. ಭಾಷೆ, ಸಂಭಾಷಣೆಗಳೂ ಅಷ್ಟೆ. ಇಂದಿನ ಕನ್ನಡಿಗರೇ ಆಡುವ ಮಾತುಗಳಂತೆ ಅತ್ಯಂತ ಸಹಜ. ಚಿಕ್ಕ ವಾಕ್ಯದಲ್ಲೂ ಏನಾದರೊಂದು ಸ್ವಾರಸ್ಯ ಉದಾಹರಣೆಗೆ ಗಾರ್ಗಿಯ ತಲೆ ಮೊಟಕಿದಾಗ ಆಕೆ ಹೇಳುವ ಮಾತು “ಹೀಗೇ ಹೊಡೆಯುತ್ತಿದ್ದರೆ ನನ್ನ ತಲೆ ಇಡಗುಂಜಿಯ ಗಣಪತಿಯ ತಲೆಯಂತೆ ಡೆಂಟಾಗುತ್ತೆ” ಇತ್ಯಾದಿ. ಒಂದೇ ವಾಕ್ಯವಾದರೂ ಇಡಗುಂಜಿಯ ಗಣಪತಿ ಒಮ್ಮೆ ನಮ್ಮ ಮನಃಪಟಲದಲ್ಲಿ ಬರದಿರಲಾರ. ನಾನಂತೂ ಒಂದು ದಿನ ಪೂರ್ತಿ ಕಾದಂಬರಿಯಲ್ಲಿ ಮುಳುಗಿಹೋಗಿಬಿಟ್ಟೆ. ಕೆಲವು ವರ್ಷಗಳ ಹಿಂದೆ ಬಾಹುಬಲಿ-೨ ಸಿನೇಮಾಕ್ಕೆ ಕಾದಂತೆ ಈಗ ನಾನು ಅವರ ಮುಂದಿನ ಕೃತಿಗೆ ಕಾಯುವಂತಾಗಿದೆ. ಮುಂದಿನ ಪ್ರತಿ ನನಗೊಂದು ಕಾಯ್ದಿರಿಸಿ ನವೀನ್.
ಮತ್ತೊಮ್ಮೆ ನಿಮಗೆ ಅಭಿನಂದನೆಗಳು. ನಿಮ್ಮ ಮತ್ತಷ್ಟು ಕೃತಿಗಳು ಕನ್ನಡದಲ್ಲಿ ಬರಲಿ. ಯಂಡಮೂರಿ ವೀರೇಂದ್ರನಾಥರು ತೆಲುಗಿನವರ ಮನೆಮಾತಾದಂತೆ ನವೀನ್ ಶಾಂಡಿಲ್ಯರು ಕನ್ನಡಿಗ ಓದುಗರೆಲ್ಲರನ್ನೂ ತಲುಪಲಿ ಎಂದು ಹಾರೈಸಿ ನಿಮ್ಮ ಮುಂದಿನ ಕೃತಿಗೆ ಶುಭಕೋರುವೆ.
-ಮೃತ್ಯುಂಜಯ ತೇಜಸ್ವಿ