R. K. Asha Pramod
ಸುಮಬಾಲೆ
ಸುಮಬಾಲೆ
Publisher -
- Free Shipping Above ₹300
- Cash on Delivery (COD) Available
Pages - 220
Type - Paperback
Couldn't load pickup availability
'ಸುಮಬಾಲೆ' ಶ್ರೀಮತಿ ಆರ್.ಕೆ. ಆಶಾ ಪ್ರಮೋದ್‌ರವರ ಚೊಚ್ಚಲ ಕಾದಂಬರಿಗೆ ಯಾರ ಮುನ್ನುಡಿಯ ಅವಶ್ಯಕತೆಯೂ ಇಲ್ಲವೆಂದು ನಾನು ಭಾವಿಸುತ್ತೇನೆ. ಕಾರಣ ತಮ್ಮ ಮೊದಲ ಪ್ರಯತ್ನದಲ್ಲಿಯೇ ಅವರು ಉತ್ತಮ ಕೃತಿಯನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಕಾದಂಬರಿಯು ಮೊದಲ ಪುಟದಿಂದ ಕೊನೆಯ ಪುಟದವರೆಗೂ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಇದರಲ್ಲಿ ಲೇಖಕಿ ನಿಜವಾಗಿ ಗೆಲವನ್ನು ಸಾಧಿಸಿದ್ದಾರೆ. ಅನಕೃ, ತರಾಸು, ಕಾರಂತ, ಕಟ್ಟಿಮನಿ, ಚದುರಂಗ, ಅನಂತಮೂರ್ತಿ, ಎಂ.ಕೆ. ಇಂದಿರಾ, ವಾಣಿ, ತ್ರಿವೇಣಿ, ನೀಳಾದೇವಿ, ಅಶ್ವಿನಿ, ಸಾಯಿಸುತೆ ಮುಂತಾದ ಕಾದಂಬರಿಕಾರರ ಸಾಲಿನಲ್ಲಿ ಶ್ರೀಮತಿ ಆಶಾ ಪ್ರಮೋದ್‌ರವರೂ ನಿಲ್ಲುತ್ತಾರೆ. ಅವರು ತಮ್ಮ ಕಾದಂಬರಿಗಳನ್ನು ಇದೇ ರೀತಿ ಬರೆದು ಕನ್ನಡ ಓದುಗರಿಗೆ ನಿರಂತರವಾಗಿ ರಸದೌತಣ ನೀಡುತ್ತಿರಲಿ ಎಂದು ಮನದುಂಬಿ ಹಾರೈಸುತ್ತೇನೆ.
ಹನ್ನೆರಡು ಅಧ್ಯಾಯಗಳಲ್ಲಿ ಕಾದಂಬರಿಯು ಪದರ ಪದರವಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಪ್ರತಿಯೊಂದು ಪದರವೂ ರಸಿಕ ಸಹೃದಯಿ ಓದುಗರ ಹೃದಯಗಳನ್ನು ಮೃದುವಾಗಿ ಸ್ಪರ್ಶಿಸಿ, ನೇವರಿಸಿ ಹಿತವಾಗಿ ಅಪ್ಪಿ, ತವಕ ತಲ್ಲಣಗಳಲ್ಲಿ ಮುಳುಗಿಸಿ, ಪ್ರೀತಿ ಪ್ರಣಯಗಳಲ್ಲಿ ರೋಮಾಂಚನ ಉಂಟುಮಾಡಿ, ಆಟೋಟ ಸ್ಪರ್ಧೆಗಳ ಸೋಲು-ಗೆಲವುಗಳಲ್ಲಿ ಮುನ್ನುಗ್ಗಿಸಿ, ಮಾತು-ಮೌನಗಳಲ್ಲಿ ಭಾವನೆಗಳನ್ನು ಅರಳಿಸಿ ಮುಂದುವರೆಯುತ್ತದೆ. ಶೃಂಗಾರ, ಹಾಸ್ಯ, ಶೋಕ, ಕರುಣ, ಅದ್ಭುತ, ಶಾಂತ ರಸಗಳು ಕೃತಿಯಲ್ಲಿ ಮೇಲೈಸಿದ್ದು ಪ್ರಸಂಗಾನುಸಾರ ನಮ್ಮ ಹೃನ್ಮನಗಳನ್ನು ತಟ್ಟುತ್ತವೆ.
ಕಾದಂಬರಿಯ ಲೇಖಕಿ ಆಶಾರವರು ಸೌರಭ್-ಕಮಲಿ, ಮನೋಜ್-ರೇಣು, ವಿಜಿ-ವೆಂಕಿಯರ ಪ್ರಣಯ ಸನ್ನಿವೇಶಗಳನ್ನು ಅಶ್ಲೀಲತೆಯ ಸೋಂಕಿಲ್ಲದೆ ಅದ್ಭುತವಾಗಿ ಸಂಯಮದಿಂದ ನಿರೂಪಿಸಿದ್ದಾರೆ. ತಮ್ಮ ಪಾತ್ರಗಳ ಸಂಭಾಷಣೆ ಮೂಲಕ ಸಮಾಜದ ಓರೆಕೋರೆಗಳನ್ನು, ನೋವು-ನಲಿವುಗಳನ್ನು, ಸಂತೋಷ-ನಿರಾಸೆಗಳನ್ನು ಬುದ್ದ, ಬಸವಣ್ಣ, ಅಕ್ಕಮಹಾದೇವಿ ಇವರ ವಿಚಾರಗಳನ್ನು ಸಂದರ್ಭೋಚಿತವಾಗಿ ಅಳವಡಿಸಿ ಬಹಳ ಅಚ್ಚುಕಟ್ಟಾಗಿ ಎಲ್ಲರೂ ಒಪ್ಪುವಂತೆ ನಿರ್ವಹಿಸಿದ್ದಾರೆ.
ಕೆಲವು ಸಣ್ಣಪುಟ್ಟ ನ್ಯೂನತೆಗಳಿದ್ದರೂ ಗಮನಕ್ಕೆ ಬಾರದಷ್ಟು ಕಾದಂಬರಿ ಸೊಗಸಾಗಿ ಚಿತ್ರಿತವಾಗಿದೆ. ಸಮರ್ಥ ಚಿತ್ರ ನಿರ್ದೇಶಕರು ಆಸಕ್ತಿ ವಹಿಸಿದರೆ ಈ ಕಾದಂಬರಿಯನ್ನು ಚಲನಚಿತ್ರವಾಗಿಸಬಹುದು.
-ಮಾ.ವೆಂ. ಶ್ರೀನಾಥ, ಹಿರಿಯ ಲೇಖಕರುಸು
Share


Subscribe to our emails
Subscribe to our mailing list for insider news, product launches, and more.