Meena mysuru
Publisher -
- Free Shipping
- Cash on Delivery (COD) Available
Pages -
Type -
Couldn't load pickup availability
ಮಗುವೊಂದಕ್ಕೆ ಹಾಲೂಡಿಸಿ, ಬೆರಳು ಹಿಡಿದುಕೊಂಡು ನಡೆದಾಡಿಸಿ, ಮಾತುಕತೆಗಳ ಕಲಿಸಿ, ಸಂಸ್ಕಾರ ಹೇಳಿಕೊಟ್ಟು ಆಯಾ ಸಮಾಜದ ಅತ್ಯುತ್ತಮ ಪ್ರಜೆಯನ್ನಾಗಿಸುವ ಪ್ರಕ್ರಿಯೆ ಒಂದು ಯಜ್ಞಕ್ಕೆ ಸಮವಾದುದು. ಪ್ರೀತಿಸುವುದನ್ನು, ಪರರ ಕಷ್ಟಕೋಟಲೆಗಳಿಗೆ ಮಿಡಿಯುವುದನ್ನು, ಎಲ್ಲರೂ ಸಮಾನರು ಎಂಬ ಭಾವವನ್ನು, ಏನಾದರೂ ಆಗಲಿ ಮಾನವೀಯತೆಯನ್ನು ಬಿಡಬಾರದು ಎಂಬ ಸತ್ಯವನ್ನು ಕಲಿಸುವುದು ಕೂಡ ಸುಲಭದ ಕೆಲಸವೇನಲ್ಲ. ಆದರೆ ಇದೆಲ್ಲ ನಾಗರಿಕ ಸಮಾಜದ ಮಾತಾಯಿತು. ಒಳ ಮತ್ತು ಹೊರಗಿನ ಕಣ್ಣು ಹಾಗೂ ಇಂದ್ರಿಯಗಳ ಸಂವೇದನೆಯನ್ನು ಕಳೆದುಕೊಂಡು ರಾಕ್ಷಸವಾಗಿರುವ ಸಮಾಜಕ್ಕೆ ಅರಣ್ಯ ನ್ಯಾಯವೇ ಪಾರಮ್ಯ. ಅಂಥ ರೋದನಕ್ಕೆ ಪಾತ್ರವಾಗುವವರು ಅಸಹಾಯಕರಾದ ವಯಸ್ಸಾದವರು, ಹೆಂಗಳೆಯರು ಮತ್ತು ಮಕ್ಕಳು.
ಮಲಾಲ ಎಂಬ ರೂಪಕದ ಕಥೆ ಕೂಡ ಇದೇ, ಎಲ್ಲ ಹೂಗಳಂತೆ ತಾನು ಆರಳಿ ಘಮಿಸಬೇಕು ಎಂದು ಎಲ್ಲರಂತೆ ಈ ಬಾಲಕಿ ಕನಸು ಕಂಡಿದ್ದೇ, ಅರಣ್ಯ ನ್ಯಾಯಾಧೀಶರಿಗೆ ಅಪರಾಧವಾಗಿ ಕಂಡಿತು. ಹಿಂಸಾಪಶುಗಳ ನಿರ್ದಯತೆ ಆಕೆಯನ್ನು ಸಾವಿನಂಚಿಗೆ ದೂಡಿತು.
ಲೋಕದ ಎಲ್ಲ ಶಕ್ತಿಗಳೂ ಒಗ್ಗೂಡಿ, ಮಲಾಲಳಿಗೆ ಮತ್ತೆ ಉಸಿರು ತುಂಬಿ, ನೂರ್ಕಾಲ ಬಾಳುವ ರೂಪಕವನ್ನಾಗಿಸಿದವು. ನೆತ್ತರದಾಹಕ್ಕೆ ಅನಾಮಿಕವಾಗಿ ಸಾವನ್ನಪ್ಪಬಹುದಾಗಿದ್ದ ಬಾಲೆ ಸ್ವಾಭಿಮಾನ, ಧೈರ್ಯ, ಸಾಹಸ ಮತ್ತು ಛಲವಂತಿಕೆಗಳ ಪ್ರತೀಕವಾಗಿ ಬದಲಾದಳು.
ಮಲಾಲಳ ಕೆಚ್ಚೆದೆಯ ಈ ಹೋರಾಟದ ಕಥೆಯನ್ನು ಆಕೆಯ ದಿನಚರಿ, ಸಂದರ್ಶನ, ಇತರರು ಆಕೆಯ ಕುರಿತು ಬರೆದ ಲೇಖನ, ಅಭಿಪ್ರಾಯಗಳನ್ನು ಆಧರಿಸಿ ಪುಸ್ತಕ ರೂಪದಲ್ಲಿ ಕನ್ನಡಿಗರಿಗೆ ಪರಿಚಯಿಸಿದ್ದಾರೆ ಮೀನಾ ಮೈಸೂರು. ಸರಳ ಹಾಗೂ ಸಹಜ ಅನುವಾದ ಉತ್ತಮ ಓದಿನ ಸುಖವನ್ನು ನೀಡುತ್ತದೆ.
