Karki Krishnamurthy
Publisher -
- Free Shipping
- Cash on Delivery (COD) Available
Couldn't load pickup availability
ಅಪರಿಚಿತವಾದುದನ್ನು ನನ್ನದೇ ಅನುಭವ ಎಂಬಂತೆ ಅನುಭವಕ್ಕೆ ತಂದುಕೊಡುವುದೇ ಕಲೆಯ ಶಕ್ತಿ. ಕರ್ಕಿ ಕೃಷ್ಣಮೂರ್ತಿಯವರ ಚುಕ್ಕಿ ಬೆಳಕಿನ ಜಾಡು ಈ ಶಕ್ತಿಯನ್ನು ಬೆನ್ನತ್ತಿ ಹೊರಟಿದೆ. ಸಮಕಾಲೀನ ಜಗತ್ತಿನ ಸನ್ನಿವೇಶಗಳು ಬದುಕಿನ ಅಸಂಗತತೆಯನ್ನು ಇನ್ನೂ ದಟ್ಟವಾಗಿಸುತ್ತಿರುವ ವಾಸ್ತವದ ಶೋಧವಾಗಿಯೂ ಇದು ಕಾಣಿಸುತ್ತದೆ. ಆಮಿಷಗಳನ್ನು ಬದುಕು ಒಡ್ಡುತ್ತದೋ ನಾವೇ ಸೃಷ್ಟಿಸಿಕೊಳ್ಳುವುದೋ ಎನ್ನುವ ಬಗೆಹರಿಯದ ದ್ವಂದ್ವ , ಮಹತ್ವಾಕಾಂಕ್ಷೆ, ಕನಸು, ದುರಾಸೆ, ಸ್ವಾರ್ಥ, ಸಣ್ಣತನಗಳ ಸಹಜ ಅಸಹಜ ನೆಲೆಗಳ ಸಂಘರ್ಷ ಈ ಕೃತಿಯನ್ನು ರೂಪಿಸಿದೆ. ಗುಟ್ಟೇ ಬಿಟ್ಟುಕೊಡದ ಬದುಕನ್ನು, ಅದು ನಿನಗೆ ಬೇಡ ಎಂದದ್ದನ್ನು ಕಿತ್ತುಕೊಳ್ಳಲು ಹಪಹಪಿಸುವ ಮನುಷ್ಯಾವಸ್ಥೆಯನ್ನು ತುಸು ಆತಂಕದಿಂದಲೇ ಈ ಕೃತಿ ಎದುರಾಗುತ್ತದೆ.
ಕಾದಂಬರಿಯ ನಾಯಕ ನಿರಂಜನನ ಪಾತ್ರಕ್ಕೆ ಸಾಧಾರಣೀಕರಣದ ಗುಣ ಮತ್ತು ಸ್ವರೂಪ ಎರಡೂ ದಕ್ಕಿದೆ. ಎಲ್ಲ ಹುಲುಮಾನವರ ಒಳಗೂ ಇದ್ದೇ ಇರುವ ಕ್ಷುದ್ರ ಸಂಗತಿಗಳನ್ನು ಆತ್ಮವಂಚನೆಯಲ್ಲಿ ನಿಭಾಯಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿರುತ್ತವೆ. ನಿರಂಜನ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅದನ್ನು ಎಗ್ಗಿಲ್ಲದೆ ಸಮರ್ಥಿಸಿಕೊಳ್ಳುತ್ತಾ ಹೋಗುತ್ತಾನೆ. ತನಗೆ ಬೇಕಾದ್ದನ್ನು ಪಡೆದುಕೊಳ್ಳಲು ಯಾವ ದಾರಿ ಹಿಡಿದರೂ ತಪ್ಪಿಲ್ಲ ಎಂದು ಮತ್ತೆ ಮತ್ತೆ ಯೋಚಿಸುವುದೇ, ತನಗೆ ತಾನೇ ನಂಬಿಸಿಕೊಳ್ಳಲು ಹೋಗುವುದೇ ಅವನೊಳಗಿನ ಸಾಕ್ಷಿ ಪ್ರಜ್ಞೆಯನ್ನು ಧ್ವನಿಸುತ್ತದೆ. ನೈತಿಕ ಅನೈತಿಕತೆಯ ಪ್ರಶ್ನೆಗಳನ್ನು ನಿರಂಜನ ಸುಪ್ತಪ್ರಜ್ಞೆಯಲ್ಲಿ ಮುಖಾಮುಖಿಯಾಗುತ್ತಾನೆ. ಹೀಗಿದ್ದೂ ಬದುಕಿನೊಳಗೆ ಬಾಳಬಹುದಾದ ಬೆಳಕಿನ ಜಾಡನ್ನು ಹುಡುಕುವ ಗುಪ್ತಗಾಮಿನಿಯೂ ನಮ್ಮೊಳಗೇ ಇರುವ ಸೂಚನೆಯೂ ಇಲ್ಲಿದೆ.
- ಡಾ. ಎಂ. ಎಸ್. ಆಶಾದೇವಿ
A Kannada novel from Chanda Pustaka / ಛಂದ ಪುಸ್ತಕ ಕಾದಂಬರಿ
