ಪತ್ತೆದಾರಿ ಕಾದಂಬರಿ ಹೇಗಿದ್ದರೆ ಚೆಂದ?

ಪತ್ತೆದಾರಿ ಕಾದಂಬರಿ ಹೇಗಿದ್ದರೆ ಚೆಂದ?

- ಕೌಶಿಕ್ ಕೂಡುರಸ್ತೆ

ಹೊಸ ಪೀಳಿಗೆಯ ಜನರಲ್ಲಿ ಓದುವ ಹವ್ಯಾಸ ಸಾಕಷ್ಟು ಕಡಿಮೆಯಾಗಿದೆ. ಓದುಗರು ಸಿಗುವುದೇ ಅಪರೂಪ. ತನ್ನ ದಿನನಿತ್ಯದ ಕೆಲಸಗಳ ಮಧ್ಯೆ ಹಾಗೂ ಸಾಮಾಜಿಕ ಜಾಲತಾಣದ ವ್ಯೂಹದ ನಡುವೆ ಆತನಿಗಾಗಿ ಒಂದೊಳ್ಳೆಯ ಬರಹವನ್ನು ಕಟ್ಟಿಕೊಟ್ಟು ಆತನನ್ನು ಮತ್ತೆ ಓದಿನತ್ತ ಸೆಳೆಯುವುದು ನಿಜವಾದ ಸವಾಲಿನ ಕೆಲಸವಾಗಿದೆ. ಕಡಿಮೆಯೆಂದರೆ ದಿನಕ್ಕೆ ನಾಲ್ಕು ಪುಟಗಳನ್ನು ಓದುವಷ್ಟು ತಾಳ್ಮೆಯನ್ನು ಈಗಿನ ಪೀಳಿಗೆ ಕಳೆದುಕೊಂಡಿದೆ. ಅಂತಹವರು ಒಂದು ಕಾದಂಬರಿಯನ್ನು ಪೂರ್ತಿಯಾಗಿ ಓದಿ ಮುಗಿಸುವುದು ದೂರದ ಮಾತಾಗಿದೆ.

ಇಂತಹ ಸಂದರ್ಭದಲ್ಲಿ ಅವರ ಅಭಿರುಚಿಗೆ ತಕ್ಕಂತೆ ಬರಹಗಳನ್ನು ಬರೆದು ತಲುಪಿಸಿ ಅವನ್ನು ಮೆಚ್ಚಿಸುವುದು ಬರಹಗಾರನಿಗೆ ಬೇಕಾದ ಇನ್ನೊಂದು ದೊಡ್ಡ ಶಕ್ತಿ. ಅವನು ಅದನ್ನು ಸಾಧಿಸಿದರೆ ಓದುಗ ಮತ್ತೆ ಪುಸ್ತಕಗಳಲ್ಲಿ ಸೆರೆಯಾಗುತ್ತಾನೆ.

ಈಗಿನ ಅಂತರ್ಜಾಲ ಯುಗದಲ್ಲಿ  ಓದುಗ ಬಯಸುವುದು ತಾನು ಎಲ್ಲೂ ನೋಡಿರದ, ಕೇಳಿರದ, ಅನುಭವಿಸಿರದ ಕಥೆಯನ್ನು. ಮೊದಲೆಲ್ಲ ಇವು ಕೇವಲ ಪುಸ್ತಕಗಳಲ್ಲಿ ಮಾತ್ರ ಇದ್ದವು.  ಏಕೆಂದರೆ ಆಗ ತಂತ್ರಜ್ಞಾನ ಎನ್ನುವುದು ಇರಲಿಲ್ಲ. ಈಗ ಅಂತರ್ಜಾಲ, ಸಾಮಾಜಿಕ ಜಾಲತಾಣ ಅಥವಾ ತಂತ್ರಜ್ಞಾನಗಳು ಅವನ್ನೆಲ್ಲಾ ಮಂಕಾಗಿಸಿದೆ. ಬರಹಗಾರನ ಬರವಣಿಗೆಯಲ್ಲಿ ಸಿಗುವ ರುಚಿ ಇವುಗಳಲ್ಲಿ ಸಿಗುವುದಿಲ್ಲ ಎಂದು ತಿಳಿದುಬಂದರೆ ಮತ್ತೆ ಅವರೆಲ್ಲ ಓದಿನ ಕಡೆ ಮುಖ ಮಾಡುತ್ತಾರೆ, ಆ ರುಚಿಯನ್ನು ಸವಿಯುತ್ತಾರೆ. ಆದರೆ ಅಂತಹ ರುಚಿಕರವಾದ ಬರಹವನ್ನು ಬಡಿಸುವ ಜವಾಬ್ದಾರಿ ಒಬ್ಬ ಒಳ್ಳೆಯ ಬರಹಗಾರನ ಮೇಲಿದೆ.

ಈಗ ಪತ್ತೆದಾರಿ ಕಾದಂಬರಿಯ ವಿಚಾರವನ್ನು ತೆಗೆದುಕೊಂಡರೆ ಈಗಿನವರಿಗೆ ಅದನ್ನು ಬರೆದು ಒಪ್ಪಿಸುವುದು ದೊಡ್ಡ ಸವಾಲು. ಕಾರಣ ಪ್ರತಿಯೊಬ್ಬ ಕೂಡ ಪ್ರತಿಯೊಂದಕ್ಕೂ ಸಾಕ್ಷಿ ಹುಡುಕುತ್ತಾನೆ. ತಾನು ನೋಡಿದ ಕೇಳಿದ ತಂತ್ರಜ್ಞಾನ, ಆವಿಷ್ಕಾರಗಳನ್ನು ಬರವಣಿಗೆಯ ಜೊತೆ ತುಲನೆ ಮಾಡುತ್ತಾನೆ. ಅದು ಸಹಜ ಕೂಡ. ಅದಕ್ಕಾಗಿ ಒಬ್ಬ ಪತ್ತೇದಾರಿ ಕಾದಂಬರಿಕಾರ ತನ್ನ ಕಥೆಯ ಜೊತೆ ಈಗಿನ ತಲೆಮಾರಿನ ಓದುಗನ ನಿರೀಕ್ಷೆಯನ್ನು ಮೀರಿ ಕಥೆಯನ್ನು ಬರೆಯುತ್ತಾ, ಅದರಲ್ಲಿ ಸಾಧ್ಯವಾದಷ್ಟು ರೋಚಕ ತಿರುವುಗಳನ್ನು ಇಟ್ಟು ಕಾದಂಬರಿಯನ್ನು ಸಿದ್ಧಪಡಿಸಿ  ಓದುಗನ ಮುಂದಿಟ್ಟರೆ ಅದು ಓದುಗನಿಗೆ ಖುಷಿಕೊಡುತ್ತದೆ. ಅದಕ್ಕೆ ಬರಹಗಾರ ಸಾಕಷ್ಟು ಹುಡುಕಾಟ ನಡೆಸಬೇಕಾಗುತ್ತದೆ. ಪ್ರತಿಯೊಂದು ವಿಷಯಕ್ಕೆ ಸಾಕಷ್ಟು ಅನ್ವೇಷಣೆ ನಡೆಸಿರಬೇಕಾಗುತ್ತದೆ. ಅದು ಅವನ ಜವಾಬ್ದಾರಿ  ಕೂಡ.  ಓದುಗ ಬಯಸುವುದನ್ನು ಬರಹಗಾರ ಕೊಡುವುದು ಅವನ ಹೊಣೆ . ಹಾಗಿದ್ದರೆ ಮಾತ್ರ ಒಬ್ಬ ವ್ಯಕ್ತಿ ಮೊಬೈಲನ್ನು ಬಿಟ್ಟು ಪುಸ್ತಕದ ಕಡೆ ಮುಖ ಮಾಡುತ್ತಾನೆ.

ಥ್ರಿಲ್ಲರ್ ಇಷ್ಟಪಡುವ ಓದುಗನು ಆಂಗ್ಲ ಕಾದಂಬರಿಗಳತ್ತ ಹೊರಳುವುದೇಕೆ??

ನನ್ನ ಅನಿಸಿಕೆಯ ಪ್ರಕಾರ ಒಂದು ಕಾಲದಲ್ಲಿ ಪತ್ತೇದಾರಿ ಕಾದಂಬರಿಗಳನ್ನು ಬರೆಯುತ್ತಿದ್ದ ನರಸಿಂಹಯ್ಯ, ಸುದರ್ಶನ್ ದೇಸಾಯಿ, ಜಿಂದೆ ನಂಜುಂಡಸ್ವಾಮಿ ಯವರ ನಂತರ ಅವರು ಸೃಷ್ಟಿಸಿ ಹೋಗಿದ್ದ ಓದುಗ ಸಮುದಾಯವನ್ನು ಉಳಿಸಿಕೊಳ್ಳಲು ನಾವು ವಿಫಲವಾಗಿದ್ದೇವೆ. ಬಹುಶಃ ನೀರಸ ಕಥಾವಸ್ತು ಅಥವಾ ಕಥಾಶೈಲಿಯು ಒಂದು ಕಾರಣವಾಗಿರಬಹುದು. ಇಲ್ಲವೇ ಇದ್ದಕ್ಕಿದ್ದಂತೆ ಪತ್ತೇದಾರಿ ಕಾದಂಬರಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು ಇರಬಹುದು. ಪತ್ತೇದಾರಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದ ಕಾಲಾವಿದ್ದ ಇಲ್ಲಿ ಇದೀಗ ಓದೋಣವೆಂದರೆ ಒಂದೊಳ್ಳೆ ಕಾದಂಬರಿಗಳು ಸಿಗದಿರುವುದು ಸೋಜಿಗವೇ ಸರಿ. ಆದ್ದರಿಂದ ಥ್ರಿಲ್ಲರ್ ಕಾದಂಬರಿಗಳೆಡೆಗೆ ಆಸಕ್ತಿಯಿರುವವನಿಗೆ ತಕ್ಷಣಕ್ಕೆ ಎದುರಾಗುವುದೇ ಆಂಗ್ಲ ಭಾಷೆಯ ಕಾದಂಬರಿಗಳು. ಅಲ್ಲಿನ ಅದ್ಭುತ ಥ್ರಿಲ್ಲರ್ ಕಾದಂಬರಿಗಳನ್ನು ಓದಿ ರುಚಿ ಹತ್ತಿಸಿ ಕೊಂಡವನಿಗೆ ಇಲ್ಲಿನ ಕಾದಂಬರಿಗಳು ಬಾಲಿಷ ಅನಿಸಬಹುದು. ಆದ್ದರಿಂದ ಇಲ್ಲಿ ಬರೆಯಲು ಹೊರಡುವ ಪತ್ತೇದಾರಿ ಕಾದಂಬರಿಕಾರರಿಗೆ ಜವಾಬ್ದಾರಿ ಹೆಚ್ಚಿರುತ್ತದೆ. ಓದುಗನನ್ನು ತನ್ನೆಡೆಗೆ ಸೆಳೆದುಕೊಳ್ಳುವ ಚಾಣಾಕ್ಷತೆ ಇರಬೇಕಾಗುತ್ತದೆ. ಹೊಸ ಹೊಸ ವಿಷಯಗಳೊಂದಿಗೆ ಮತ್ತು ಕಥಾವಸ್ತುಗಳೊಡನೆ ಓದುಗನೆದುರಿಗೆ ಪದೇ ಪದೇ ನಿಲ್ಲಬೇಕಾಗುತ್ತದೆ. ಓದುಗನ ಡಿಮ್ಯಾಂಡಿಗೆ ತಕ್ಕಂತೆ supply ನ ಅವಶ್ಯಕತೆ ಇರುವುದರಿಂದ ಹೆಚ್ಚಿನ ಕಾದಂಬರಿಕಾರರ ಅವಶ್ಯಕತೆ ಇಲ್ಲಿದೆ. ವರ್ಷಕ್ಕೆ ಕನಿಷ್ಠವೆಂದರೂ ಹತ್ತಾದರು ರೋಚಕ ಕಾದಂಬರಿಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಬಂದರೆ ಓದುಗ ಇಲ್ಲೇ ಉಳಿದುಕೊಳ್ಳುತ್ತಾನೆ.

ಪತ್ತೇದಾರಿ ಕಾದಂಬರಿಗಳನ್ನು ಬರೆಯಲು ವಿಷಯದ ಆಯ್ಕೆಯ ಕುರಿತು...

ಥ್ರಿಲ್ಲರ್ ಕತೆಗಳನ್ನು ಬರೆಯಲು ಹೊರಡುವವನು ಸಾಕಷ್ಟು ಓದಿಕೊಂಡಿರಬೇಕಾಗುತ್ತದೆ. ಪೋಲಿಸ್ ಇನ್ವೆಸ್ಟಿಗೇಶನ್ ವಿಧಾನಗಳು, ಫೊರೆಂಸಿಕ್ ಮತ್ತು ಕೋರ್ಟ್ ಸಂಬಂಧ ಪಟ್ಟ ವಿಚಾರಗಳನ್ನು ತಿಳಿದುಕೊಳ್ಳವ ಅವಶ್ಯಕತೆಯಿರುತ್ತದೆ. ರೋಚಕತೆಯನ್ನು ನೀಡುವ ಒಂದು ಚಿಕ್ಕ ವಿಷಯವು ಕೂಡ ಕಾದಂಬರಿಗೆ ಕಥಾವಸ್ತುವಾಗಬಲ್ಲದು. ಉದಾಹರಣೆಗೆ ಇಂಡೋನೇಷ್ಯಾದಲ್ಲಿರುವ  ಕಾಡುಬೆಕ್ಕಿನ ಜಾತಿಗೆ ಸೇರಿದ ಕೋಪಿ ಲುವಾಕ್ ಎಂಬ ಪ್ರಾಣಿಯ ಕುರಿತಾದ ಮಾಹಿತಿ. ನನ್ನ ಥ್ರಿಲ್ಲರ್ ಕಾದಂಬರಿಯೊಂದರ ಕಥಾವಸ್ತುವಿನ ಪ್ರಮುಖ ವಿಚಾರವೇ ಇದು. ಈ ಪ್ರಾಣಿಯ ಕುರಿತಾದ ವಿಚಾರವನ್ನಿಟ್ಟುಕ್ಕೊಂಡು ಅದಕ್ಕೆ ಥ್ರಿಲ್ಲರ್ ಅಂಶಗಳನ್ನು ಸೇರಿಸಿ ಹುಟ್ಟಿದ ಕಾದಂಬರಿಯೇ "ಒಂದು ಕೋಪಿಯ ಕಥೆ". ಜಗತ್ತಿನಲ್ಲಿ ಅತ್ಯಂತ ಬೆಲೆಬಾಳುವ ಕಾಫಿಯನ್ನು ಈ ಕೋಪಿ ಲುವಾಕ್ ಎನ್ನುವ ಕಾಡುಬೆಕ್ಕಿನ ಮಲದಿಂದ ತಯಾರಿಸುತ್ತಾರೆ ಎಂಬ ವಿಚಾರವೇ ನನ್ನನ್ನು ಅಚ್ಚರಿಗೊಳಿಸಿತ್ತು. ಒಂದು ವೇಳೆ ಆ ಕಾಡುಬೆಕ್ಕು ನಮ್ಮ ಕೊಡಗಿಗೆ ಬಂದರೆ?? ಅದು ಇಲ್ಲಿಗೆ ಬಂದ ಮೇಲೆ ಆ ಊರಿನಲ್ಲಿ ಒಂದಿಷ್ಟು ಕೊಲೆಗಳಾದರೆ?? ಹೀಗೆ ಒಂದು ಚಿಕ್ಕ ವಿಷಯಕ್ಕೂ ಕೂಡ ಕಾದಂಬರಿಯನ್ನು ಹುಟ್ಟಿಸುವ ತಾಕತ್ತಿದೆ. ಆದ್ದರಿಂದ ಹೊಸ ಬರಹಗಾರನಿಗೆ ಓದಿನ ಅವಶ್ಯಕತೆಯಿದೆ. ಆಗಾಗ ದಿನಪತ್ರಿಕೆಗಳಲ್ಲಿ ಬರುವ ಹೊಸ ಕ್ರೈಮ್ ವಿಚಾರಗಳೆಡೆಗೆ ಅಥವಾ ಬೆರಗುಗೊಳಿಸುವ ವಿಚಾರಗಳೆಡೆಗೆ ಗಮನ ಹರಿಸಬೇಕು. ಯಾರಿಗೆ ಗೊತ್ತು ಅದೂ ಕೂಡ ನಿಮ್ಮ ಕಾದಂಬರಿಯ ಕಥಾವಸ್ತುವಾಗಿರಬಹುದು!!

ಪತ್ತೇದಾರಿ ಕಾದಂಬರಿಗಳನ್ನು ಬರೆಯಲು ಹೊರಡುವ ಯುವ ಬರಹಗಾರರಿಗೆ ಕೆಲವು ಸಲಹೆಗಳು:-

ಸಾಮಾನ್ಯವಾಗಿ ಥ್ರಿಲ್ಲರ್ ಕತೆಗಳನ್ನು ಬರೆಯಲು ಹೊರಡುವವನು ಒಂದೇ ಪ್ಯಾಟರ್ನ್ ನತ್ತ ಹೊರಳಿಕೊಳ್ಳುತ್ತಾನೆ. ಒಂದು ಕೊಲೆಯಾಗುತ್ತದೆ ತದನಂತರ ಆ ಕೊಲೆಗಾರನನ್ನು ಹುಡುಕುತ್ತಾ ಹೋಗುವುದು. ಥಾವ ಒಂದು ಕಡೆ ಸೀರಿಯಲ್ ಕಿಲ್ಲಿಂಗಳು ನಡೆಯುತ್ತಿರುತ್ತದೆ ತದನಂತರ ಆ ಸೀರಿಯಲ್ ಕಿಲ್ಲರ್‍‌ನನ್ನು ಹುಡುಕುತ್ತಾ ಹೊರಡುವುದು. ಇದು ಆಗಬಾರದು. ಮತ್ತಿದು ಈಗಿನ ಯುವ ಪೀಳಿಗೆಗೆ ಅಷ್ಟಾಗಿ ರುಚಿಸುವುದಿಲ್ಲ. ಹಿಂದಿನಿಂದಲೂ ಇದೇ ರೀತಿಯ ಕತೆಗಳು ಸಾಕಷ್ಟು ಬಂದಿರುವುದರಿಂದ ಓದುಗನಿಗೆ monotonous ಅನಿಸಿಬಿಡುತ್ತದೆ. ಆದ್ದರಿಂದ ಈ ಪ್ರಸ್ತುತ ಕಾಲಘಟ್ಟದಲ್ಲಿ ಬರೆಯಲು ಹೊರಡುವ ಬರಹಗಾರನ ಮುಂದೆ ಸಾಕಷ್ಟು ಸವಾಲುಗಳಿವೆ. ತಾನು ಕೇಳಿರದ, ನೋಡಿರದ ಹಾಗೂ ತನ್ನನ್ನು excite ಮಾಡುವ ಕತೆಗಳಿಗೆ ಆತ ಹುಡುಕಾಟ ನಡೆಸುತ್ತಿರುತ್ತಾನೆ.

ಆದ್ದರಿಂದ ಬರಹಗಾರನು ತಾನು ಬರೆಯುವ ಮುನ್ನ ಸಾಕಷ್ಟು ಅಧ್ಯಯನ ನಡೆಸುವ ಅವಶ್ಯಕತೆ ಯಿರುತ್ತದೆ. ಪ್ರಸ್ತುತ ವಿದ್ಯಮಾನಗಳೆಡೆಗೆ ಮತ್ತು ಹೊಸ ತಂತ್ರಜ್ಞಾನದೆಡೆಗೆ ಆತ ತನ್ನನ್ನು ತಾನು ತೆರೆದುಕೊಳ್ಳಬೇಕಾಗುತ್ತದೆ.

ಆ ತಂತ್ರಜ್ಞಾನಗಳನ್ನು ತನ್ನ ಕತೆಗಳಲ್ಲಿ ಹೇಗೆ ಬಳಸಿಕೊಳ್ಳಬೇಕು ಎಂಬ ಬುದ್ಧಿವಂತಿಕೆಯು ಬೇಕಾಗುತ್ತದೆ. ಹಾಗೆ ಥ್ರಿಲ್ಲರ್ ಕಾದಂಬರಿಗಳಲ್ಲಿ ಕಥಾವಸ್ತು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಒಂದೊಳ್ಳೆ ರುಚಿಸುವ ಕಥಾವಸ್ತುವನ್ನು ರೋಚಕವಾಗಿ ಹೇಳಿದರೆ ಓದುಗ ಮೆಚ್ಚಿಕೊಳ್ಳುತ್ತಾನೆ. ಮತ್ತು ಆ ಲೇಖಕನಿಂದ ಬರುವ ಮುಂದಿನ ಕತೆಗಳಿಗೆ ಕಾಯುತ್ತಾನೆ.

ಹೊಸದಾಗಿ ಥ್ರಿಲ್ಲರ್ ಕತೆಯನ್ನು ಬರೆಯಲು ಹೊರಡುವವನು ಮೊದಲು ತಾನು ಆಯ್ದು ಕೊಳ್ಳುವ ವಿಷಯದೆಡೆಗೆ ಗಮನ ಹರಿಸಬೇಕು. ಆ ವಿಷಯದಲ್ಲೆಷ್ಟು ಹೊಸತನವಿದೆ ಮತ್ತು ಆ ವಿಷಯದ ಅಧ್ಯಯನದಿಂದ ಸಿಗುವ ಒಂದಿಷ್ಟು ಮಾಹಿತಿಗಳನ್ನು ತನ್ನ ಕತೆಯಲ್ಲಿ ಹೇಗೆ ಬಳಸಿಕೊಳ್ಳಬೇಕು ಎಂಬುದು ತಿಳಿದಿರಬೇಕು. ಒಂದು ಕ್ರೈಮ್ ಆರ್ಟಿಕಲ್ ಕೂಡ ಒಂದು ಕಾದಂಬರಿಗೆ ಕಥಾವಸ್ತುವಾಗಬಲ್ಲದು. ಅದನ್ನು ರೋಚಕ ಕಾದಂಬರಿಯನ್ನಾಗಿ ಹೆಣೆಯುವ ಕಲೆ ಲೇಖಕನಿಗಿರಬೇಕಾಗುತ್ತದೆ. ಸಾಧ್ಯವಾದರೆ ಒಂದಿಷ್ಟು ಥ್ರಿಲ್ಲರ್ ಕಾದಂಬರಿಗಳನ್ನು ಓದಿಕೊಳ್ಳುವುದು ಮತ್ತು ಒಂದಿಷ್ಟು ಥ್ರಿಲ್ಲರ್ ಸಿನಿಮಾಗಳನ್ನು ನೋಡಿದರೆ ರೋಚಕವಾಗಿ ಕತೆ ಹೆಣೆಯುವ ಶೈಲಿ ತಿಳಿಯುತ್ತದೆ. ಎಷ್ಟೇ ಒಳ್ಳೆಯ ಕಥಾವಸ್ತುವಿದ್ದರೂ ನಿರೂಪಣೆಯು ಪ್ರಮುಖವಾಗುತ್ತದೆ. ಆಗಷ್ಟೇ ಪುಸ್ತಕ ಲೋಕಕ್ಕೆ ಆಗಮಿಸುವ ಯುವ ಓದುಗರು ಪತ್ತೇದಾರಿ ಕಾದಂಬರಿಗಳೆಡೆಗೆ ತಮ್ಮನ್ನು ತಾವು ಒಪ್ಪಿಸುಕೊಳ್ಳುವುದರಿಂದ ಆದಷ್ಟು ಸರಳ ಭಾಷೆಯಲ್ಲಿ ನಿರೂಪಣೆ ಮಾಡುವುದು ಒಳ್ಳೆಯದು. ಹಾಗೆ ತಾನು ಕತೆ ಹೇಳುವ ಸ್ಥಳದ ಜೊತೆ ಕತೆ ಬೆರೆತರೆ ಓದುಗನಿಗೆ ಕತೆಯು ಇನ್ನಷ್ಟು ಹತ್ತಿರವಾಗುತ್ತದೆ. ಹಾಗೇಯೇ ಮೈ ರೋಮಾಂಚನಗೊಳಿಸುವ ದೃಶ್ಯಗಳ ಜೊತೆಗೆ ಒಂದು ಅದ್ಭುತ ಕ್ಲೈಮ್ಯಾಕ್ಸ್ ಇದ್ದರೆ ಮಾತ್ರ ಆ ಥ್ರಿಲ್ಲರ್ ಕಾದಂಬರಿ ಗೆಲ್ಲುತ್ತದೆ. ಥ್ರಿಲ್ಲರ್ ಕಾದಂಬರಿಗಳು ಕೇವಲ ಆ ಹೊತ್ತಿನ ಓದಿಗಷ್ಟೆ ಆಗದೆ ಅದರಿಂದ ಓದುಗನಿಗೆ ಒಂದಷ್ಟು ಮಾಹಿತಿ ಸಿಕ್ಕರೆ ಇನ್ನೂ ಒಳ್ಳೆಯದು.

ಕೊನೆಯದಾಗಿ, ನಾನು ಸ್ವತಃ ಪತ್ತೇದಾರಿ ಕಾದಂಬರಿಕಾರನಾಗಿ ಹೇಳುವುದಾದರೆ ಪತ್ತೇದಾರಿ ಕಾದಂಬರಿಗಳನ್ನು ಇಷ್ಟಪಡುವ ಓದುಗರು ಸಾಕಷ್ಟಿದ್ದಾರೆ. ಅದರಲ್ಲೂ ಥ್ರಿಲ್ಲರ್ ಕತೆಗಳನ್ನು ಓದಬಯಸುವವರಲ್ಲಿ ಯುವ ಓದುಗರೇ ಹೆಚ್ಚು. ಅವರಿಗೆ ಪ್ರತಿ ಪುಟಕ್ಕೂ ಥ್ರಿಲ್ ನೀಡುವ ಮತ್ತು ರುಚಿಸುವ ಕತೆ ನೀಡಿದರೆ ಖಂಡಿತಾ ಒಪ್ಪಿ ಅಪ್ಪುತ್ತಾರೆ. ಆದರೆ ಅವರನ್ನು ತೃಪ್ತಿ ಪಡಿಸುವ ಕಾದಂಬರಿಗಳು ಹೆಚ್ಚಾಗಿ ಬರುತ್ತಿಲ್ಲ ಜೊತೆಗೆ ಬರೆಯುವವರ ಸಂಖ್ಯೆಯೂ ಕಡಿಮೆಯಿದೆ. ಆದ್ದರಿಂದ ಪತ್ತೇದಾರಿ ಕಾದಂಬರಿಗಳನ್ನು ಬರೆಯುವವರು ಹೆಚ್ಚಾಗಬೇಕು. ಥ್ರಿಲ್ ನೀಡುವ ಕಥಾವಸ್ತು ಗಳೊಂದಿಗೆ ಕಾದಂಬರಿಕಾರ ಬರಬೇಕು. ಹೆಚ್ಚೆಚ್ಚು ಕಾದಂಬರಿಗಳು ಬರುವುದರಿಂದ ಹೊಸ ಓದುಗರ ಸೃಷ್ಟಿಯಾಗುತ್ತದೆ. ಕನ್ನಡ ಸಾಹಿತ್ಯ ಲೋಕಕ್ಕೆ ಓದುಗರನ್ನು ಪರಿಚಯಿಸುವುದರ ಹಿಂದೆ ಪತ್ತೇದಾರಿ ಕಾದಂಬರಿಗಳ ಕೊಡುಗೆ ಬಹಳಷ್ಟಿರುವುದರಿಂದ ಮತ್ತು ಪತ್ತೇದಾರಿ ಕಾದಂಬರಿಗಳು ಸಾಹಿತ್ಯ ಲೋಕಕ್ಕೆ ಬಾಗಿಲಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಪತ್ತೇದಾರಿ ಕಾದಂಬರಿಗಳನ್ನು ಈಗೀನ ಯುವ ಬರಹಗಾರರಿಂದ ನಾನು ಥ್ರಿಲ್ಲರ್ ಪುಸ್ತಕಗಳ ಪ್ರೇಮಿಯಾಗಿ ಬಯಸುತ್ತೇನೆ.

ಧನ್ಯವಾದಗಳು,

ಕೌಶಿಕ್ ಕೂಡುರಸ್ತೆ

 

ಕೌಶಿಕ್ ಕೂಡುರಸ್ತೆ ಅವರ ಪುಸ್ತಕಗಳು - https://harivubooks.com/collections/koushik_koduraste_kannada_books

ಬೆಸ್ಟ್‌ ಸೆಲ್ಲಿಂಗ್‌ ಥ್ರಿಲ್ಲರ್ ಪುಸ್ತಕಗಳು -  https://harivubooks.com/kn/collections/kannada-suspense-thriller-books

 

Back to blog