ಅವಿಷ್ಕಾರಗಳ ಅವಾಂತರಗಳು ಮತ್ತು ವೈದ್ಯಕೀಯ ಪ್ರಪಂಚ!

ಅವಿಷ್ಕಾರಗಳ ಅವಾಂತರಗಳು ಮತ್ತು ವೈದ್ಯಕೀಯ ಪ್ರಪಂಚ!

-ಮಾಕೋನಹಳ್ಳಿ ವಿನಯ್‌ ಮಾಧವ 

ನಾನಿನ್ನೂ ಹೈಸ್ಕೂಲಿನಲ್ಲಿ ಇದ್ದೆ ಎಂದು ಕಾಣುತ್ತೆ. ಆಗೆಲ್ಲಾ ನಾವಿರುವ ಹಳ್ಳಿ ಅಥವಾ ಊರಿನ ಹೊರಗಡೆ ಫೋನಿನಲ್ಲಿ ಮಾತನಾಡಲು ಟ್ರಂಕ್‌ ಕಾಲ್‌ ಮಾಡಬೇಕಿತ್ತು. ಒಮ್ಮೆ ನನ್ನ ಸೋದರತ್ತೆಯ ಮಗಳು ನಂದಕ್ಕನ ಜೊತೆ ಮಾತನಾಡುತ್ತಾ, ʻಈ ಟ್ರಂಕ್‌ ಕಾಲ್‌ ಬದಲು, ಲೋಕಲ್‌ ಕಾಲ್‌ ಥರ ಎಲ್ಲಾ ಕಡೆಗೆ ಫೋನ್‌ ತಿರುಗಿಸೋ ಥರ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು ಅಲ್ವಾ?ʼ ಎಂದು ಹೇಳಿದೆ.

ಟಿವಿ ಇನ್ನೂ ಹಳ್ಳಿಗಳಿಗೆ ಬಂದಿಲ್ಲದ ಕಾಲದಲ್ಲಿ, ನಂದಕ್ಕ ಜೋರಾಗಿ ನಕ್ಕುಬಿಟ್ಟರು. ʻಹಾಗೇನಾದ್ರೂ ಮಾಡಿದ್ರೆ, ಮನೆಯಲ್ಲಿ ಅಡುಗೆ ಮಾಡೋವ್ರು ಯಾರು? ಹೆಂಗಸರೆಲ್ಲ ಫೋನ್‌ ಹತ್ತಿರಾನೇ ಕೂತು ಬಿಡ್ತಾರೆ ಅಷ್ಟೆ,ʼ ಎಂದು ಹೇಳಿದರು.

ಇನ್ನು ಕೆಲವೇ ವರ್ಷಗಳಲ್ಲಿ ಭಾರತಕ್ಕೆ ʻಸಿ ಡಾಟ್‌ʼ ಎನ್ನುವ ಯೋಜನೆ ಬಂದು, ʻಎಸ್‌ ಟಿ ಡಿʼ ಎನ್ನುವ ಪದ್ದತಿ ಬರುತ್ತದೆ ಎನ್ನುವುದರ ಕಲ್ಪನೆ ನನಗಾಗಲೀ, ನಂದಕ್ಕನಿಗಾಗಲೀ ಇರಲಿಲ್ಲ. ಮೊಬೈಲ್‌ ಫೋನ್‌ ಗಳ ಬಗ್ಗೆ ಯಾವುದೇ ಕನಸುಗಳನ್ನು ಕಾಣುವಷ್ಟು ಬುದ್ದಿ ಬೆಳೆದಿರಲಿಲ್ಲ. ನೋಡ ನೋಡುತ್ತಲೇ, ಇವೆಲ್ಲದರ ಅವಿಷ್ಕಾರವಾಗಿ, ನಾವಿಬ್ಬರೂ ಆ ಪ್ರಪಂಚದಲ್ಲಿ ಬದುಕುತ್ತಿದ್ದೇವೆ.

ಮನುಷ್ಯ ಎನ್ನುವ ಪ್ರಾಣಿ ಸಂಘ ಜೀವಿಯಾಗಿ ಸುಮಾರು ಹದಿನಾಲ್ಕು ಸಾವಿರ ವರ್ಷಗಳಾಗಿರಬಹುದು. ಅಂದಿನಿಂದ, ಅವಿಷ್ಕಾರ ಎನ್ನುವುದು ಮನುಷ್ಯನ ಬದುಕಿನ ಅವಿಭಾಜ್ಯ ಅಂಗವಾಗಿದೆ. ಕಳೆದ ಮೂರ್ನಾಲ್ಕು ಶತಮಾನಗಳಿಂದ, ಅವಿಷ್ಕಾರಕ್ಕೆ ವಿಜ್ಞಾನದ ಲೇಪ ಸೇರಿ, ಅವಿಷ್ಕಾರಗಳ ವೇಗ ವೃದ್ದಿಯಾಗುತ್ತಲೇ ಹೋಗುತ್ತಿದೆ. ನಾವು ನೋಡುತ್ತಿರುವ ಕಳೆದ ಎರಡು ದಶಕಗಳಲ್ಲಂತೂ, ಅವಿಷ್ಕಾರದ ವೇಗಕ್ಕೆ ಮನುಷ್ಯರು ಮತ್ತು ಇತರ ಪ್ರಾಣಿಗಳು ಹೊಂದಿಕೊಳ್ಳಲಾಗದೆ ಒದ್ದಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು.

ಮೊದಲೆಲ್ಲ ಈ ವೈಜ್ಞಾನಿಕ ಅವಿಷ್ಕಾರಗಳು ಮಾನವನ ಜೀವನವನ್ನು ಸುಲಭ ಮತ್ತು ಸುರಕ್ಷಿತ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳಾದರೆ, ಮುಂದಿನ ದಿನಗಳಲ್ಲಿ ಅವು ವ್ಯಾಪಾರೀಕರಣ ಮತ್ತು ಸಂಪತ್ತು ಕ್ರೂಢೀಕರಣದ ನಿಟ್ಟಿನಲ್ಲಿ ಹೆಜ್ಜೆ ಹಾಕಿದವು. ಪ್ರತಿಯೊಂದನ್ನೂ ಸವಾಲಾಗಿ ಸ್ವೀಕರಿಸುವ ಮನುಷ್ಯನು, ತನ್ನ ಅವಿಷ್ಕಾರವನ್ನು ಪ್ರಕೃತಿಯ ನಿಯಮವನ್ನು ಮೀರಿ ನಿಲ್ಲಲೂ ಸಹ ಪ್ರಯತ್ನಿಸಿ, ಅದರಲ್ಲಿ ಬಹಳಷ್ಟು ಮಟ್ಟಿಗೆ ಯಶಸ್ವಿಯಾಗಿದ್ದಾನೆ ಎಂದು ಹೇಳಬಹುದು. ಆದರೆ, ಪ್ರಕೃತಿಯು ತನ್ನ ನಿಯಮ ಮೀರಿದವರ ವಿರುದ್ದ ಅದರದೇ ರೀತಿಯಲ್ಲಿ ಪ್ರತಿಕಾರ ತೆಗೆದುಕೊಳ್ಳುವ ವಿಧಾನವನ್ನು ಹೊಂದಿದೆ ಎನ್ನುವುದನ್ನು ಮನುಷ್ಯ ತಿಳಿದುಕೊಳ್ಳುವ ಹೊತ್ತಿಗೆ ಬಹಳಷ್ಟು ತಡವಾಗಿದೆ ಎಂದೇ ಹೇಳಬಹುದು.

ಇಂದಿನ ನಾಗರೀಕತೆಯ ಅತ್ಯಂತ ದೊಡ್ಡ ಜಿಜ್ಞಾಸೆ ಎಂದರೆ, ವೈಜ್ಞಾನಿಕ ಅವಿಷ್ಕಾರಗಳ ʻಲಕ್ಷ್ಮಣ ರೇಖೆ ಯಾವುದು?ʼ ಎನ್ನುವುದನ್ನು ನಿರ್ಧರಿಸುವುದು. ಮಾನವ ಕುಲದ ಉಪಯೋಗಕ್ಕಾಗಿ ಅಣು ವಿಕರಣಗಳನ್ನು ಕಂಡು ಹಿಡಿದರೂ, ಕೊನೆಗೆ ಆ ವಿಕರಣಕ್ಕೆ ದೇಹ ಹೆಚ್ಚಾಗಿ ಪ್ರದರ್ಶನವಾದ್ದರಿಂದ, ಕ್ಯಾನ್ಸರ್‌ ಗೆ ತುತ್ತಾದರು. ಇಂತಹ ದುರಂತಗಳಿಗೆ ಚರಿತ್ರೆಯಲ್ಲಿ ಕೊನೆ-ಮೊದಲಿಲ್ಲ. ವೈಜ್ಞಾನಿಕ ಅವಿಷ್ಕಾರಗಳ ನೈತಿಕತೆಯ ಬಗ್ಗೆ ಬಹಳಷ್ಟು ಚರ್ಚೆಗಳಾದರೂ, ʻಲಕ್ಷ್ಮಣ ರೇಖೆʼ ಎಳೆಯಲು ಯಾರೂ ಒಪ್ಪುವುದಿಲ್ಲ. ಏಕೆಂದರೆ, ಇದು ಸಂಪತ್ತಿನ ಪ್ರಶ್ನೆ ಮತ್ತು ಮುಂದೆ ಹೇಗೋ ನಡೆದು ಹೋಗುತ್ತದೆ ಎನ್ನುವ ಉಡಾಫೆ.

ಇವನ್ನೆಲ್ಲ ಯೋಚಿಸುವಾಗ ನನಗೆ ಹೋಮರ್‌ ಬರೆದಿರುವ ಇಲಿಯಾಡ್‌ ನ ಒಂದು ಸಾಲು ನೆನಪಿಗೆ ಬರುತ್ತದೆ. ಯುದ್ದಕ್ಕಾಗಿ ಟ್ರಾಯ್‌ ಗೆ ಹೊರಡುವ ಮುಂಚೆ ಅಖಿಲಿಸ್‌ ತನ್ನ ತಾಯಿಯಾದ ಥೇಟಿಸ್‌ ಳನ್ನು ಭೇಟಿಯಾಗುತ್ತಾನೆ. ಅಖಿಲಿಸ್‌ ಯುದ್ದಕ್ಕೇ ಏಕೆ ಹೋಗಲೇಬೇಕು ಎನ್ನುವುದನ್ನು ಹೇಳುವ ಥೇಟಿಸ್‌, ತನ್ನ ಮಗ ಯುದ್ದದಿಂದ ಹಿಂದೆ ಬರುವುದಿಲ್ಲ ಎಂದೂ ಭವಿಷ್ಯ ನುಡಿಯುತ್ತಾ, ಹೇಳುತ್ತಾಳೆ: ʻyour glory walks hand in hand with your doomʼ.

ಇದು ನನಗೆ ಬಹಳ ಇಷ್ಟವಾದ ವಾಕ್ಯ ಮತ್ತು ನನ್ನ ವೈಯಕ್ತಿಯ ಅಭಿಪ್ರಾಯದಲ್ಲಿ, ಥೆಟಿಸ್‌ ಮನುಕುಲಕ್ಕೆ ಕೊಟ್ಟ ಸಂದೇಶ. ಇದನ್ನು ಬಹಳಷ್ಟು ಕಡೆ ನನ್ನ status ಆಗಿ ಉಪಯೋಗಿಸುತ್ತೇನೆ ಕೂಡ.

ಇದೆಲ್ಲ ಮತ್ತೆ ನೆನಪಾಗಿದ್ದು ಡಾ ಶಾಂತಲ ಎಂಬ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞೆ ಬರೆದ ಎರಡು ಪುಸ್ತಕಗಳನ್ನು ಓದುವಾಗ. ಮೊದಲನೆಯದು ʻಬಾನಂಚಿನ ಆಚೆʼ ಎಂಬ ಹತ್ತು ʻರೋಚಕ ವೈಜ್ಞಾನಿಕ ಕತೆಗಳುʼ ಪುಸ್ತಕ ಮತ್ತು ಎರಡನೆಯದು ʻದೇವರಾಗಲು ಮೂರೇ ಗೇಣುʼ ಎನ್ನುವ ಕಾದಂಬರಿ. ಎರಡು ಪುಸ್ತಕಗಳನ್ನೂ ಇತ್ತೀಚೆಗೆ ಪುಸ್ತಕ ಪ್ರಕಾಶನ ಜಗತ್ತಿಗೆ ಕಾಲಿಟ್ಟ ರತೀಶ್‌ ಅವರ ʻಹರಿವು ಪುಸ್ತಕʼ ಹೊರ ತಂದಿದೆ.

ತಮ್ಮ ಹತ್ತು ಸಣ್ಣ ಕಥೆಗಳಲ್ಲಿ, ಡಾ ಶಾಂತಲ ಅವರು ಬಹಳಷ್ಟು ಅವಿಷ್ಕಾರ ಮತ್ತು ಸಂಶೋಧನೆಗಳನ್ನು ವಿವರವಾಗಿ ಪರಿಚಯಿಸಿದ್ದಾರೆ. ಅದೊಂದು ಬೋರಿಂಗ್‌ ಪಠ್ಯದಂತೆ ಇರದೆ, ಸಾಮಾನ್ಯ ಜನರ ಮಧ್ಯೆ ನಡೆಯುವ ಸಂಭಾಷಣೆ ಮತ್ತು ನಮ್ಮ ಜೀವನದಲ್ಲೂ, ನಮಗೆ ಪರಿವೆ ಇಲ್ಲದಂತೆ ನಡೆಯುವ ಘಟನೆಗಳಂತೆ ಇವೆ. ಮುಂದೆ ಹೋಗುತ್ತಾ, ಈ ಘಟನೆಗಳು ವಿಸ್ಮಯಕಾರಿ ವೈಜ್ಞಾನಿಕ ಅವಿಷ್ಕಾರಗಳು ನಮ್ಮ ಸುತ್ತಲೂ ಸುತ್ತುತ್ತಿರುವಂತೆ ಭಾಸವಾಗುತ್ತವೆ.

ಡಾ ಶಾಂತಲ ಅವರು ಬರೀ ಕಥೆ ಹೇಳುವುದಕ್ಕಾಗಿ ವೈಜ್ಞಾನಿಕ ಅವಿಷ್ಕಾರಗಳನ್ನು ಬಳಸಿಲ್ಲ. ನಮಗರಿವಾಗದಂತೆ, ವೈಜ್ಞಾನಿಕ ಅವಿಷ್ಕಾರಗಳ ನೈತಿಕತೆಯ ಸುತ್ತಲೂ ಒಂದು ಚರ್ಚೆಯನ್ನು ಆರಂಭಿಸಿ, ಓದುಗರಲ್ಲಿ ಒಂದು ಚಿಂತನೆಯನ್ನು ಹುಟ್ಟು ಹಾಕುತ್ತಾರೆ. ನನಗೆ ಬಹಳ ಇಷ್ಟವಾದ ಅಂಶ ಎಂದರೆ, ತಮ್ಮ ಮುನ್ನುಡಿಯಿಂದ ಹಿಡಿದು, ಪ್ರತೀ ಕಥೆಯ ಆರಂಭದಲ್ಲಿ, ಐಸಾಕ್‌ ಅಸಿಮೋವ್‌, ಜೂಲ್ಸ್‌ ವರ್ನ್‌, ಸ್ಟೀಫನ್‌ ಹಾಕಿಂಗ್‌, ಐನ್ಸ್ ಟೈನ್ ನಂತಹ ಮಹಾನ್‌ ವಿಜ್ಞಾನಿಗಳಿಂದ ಹಿಡಿದು, ಭಾರತೀಯ ಗ್ರಂಥಗಳಾದ ಅಥರ್ವ ವೇದ, ಆಚಾರ್ಯ ಚರಕ ಮತ್ತು ಉಪನಿಷತ್‌ ಗಳಿಂದ ಉಲ್ಲೇಖಗಳನ್ನು ಪ್ರಸ್ತಾಪಿಸಿದ್ದಾರೆ. ತಮ್ಮ ವೈದ್ಯಕೀಯ ಪ್ರಪಂಚವಲ್ಲದೆ, ಭೌತಶಾಸ್ತ್ರ, ಕಂಪ್ಯೂಟರ್ ಜಗತ್ತು, ಬಾಹ್ಯಾಕಾಶಗಳಲ್ಲಿ ಆಗುತ್ತಿರುವ ಅವಿಷ್ಕಾರಗಳನ್ನು ಸಹ, ಸಾಮಾನ್ಯ ಜನರಿಗೆ ಅರ್ಥವಾಗುವಂತೆ, ಕುತೂಹಲಕಾರಿ ಕಥೆಗಳ ಮೂಲಕ ನಿರೂಪಿಸಿದ್ದಾರೆ. ಇದು ಲೇಖಕರಿಗೆ ವಿಷಯದ ಬಗ್ಗೆ ಇರುವ ಹಿಡಿತವನ್ನು ತೋರಿಸುತ್ತದೆ.

ʻದೇವರಾಗಲು ಮೂರೇ ಗೇಣುʼ ಕಾದಂಬರಿಯನ್ನು ಡಾ ಶಾಂತಲ ಅವರು ತಮ್ಮ ವೈದ್ಯಕೀಯ ಜಗತ್ತಿನ ಅವಿಷ್ಕಾರಗಳ ಸುತ್ತ ಹೆಣೆದಿದ್ದಾರೆ. ಅದರಲ್ಲೂ ಸಹ, ತಳಿ ತಂತ್ರಜ್ಞಾನ (genetics), ಪೀಳಿಕಟ್ಟುಗಳು (chromosomes) ಮತ್ತು ಒಂದು ಬಹುರಾಷ್ಟ್ರೀಯ ವಿಜ್ಞಾನಿಗಳು ಮಾಡಿದ ʻhuman genome projectʼ ಸುತ್ತ ಹೆಣೆದಿದ್ದಾರೆ. ಆ ಆವಿಷ್ಕಾರಗಳ ಸಾಧ್ಯತೆಗಳ ಆಳವನ್ನು ಮತ್ತು ʻmade to order babiesʼ ಎಂಬ ಕಲ್ಪನೆಯ ಸುತ್ತ ಹೆಣೆದಿರುವ ಘಟನಾವಳಿಗಳಲ್ಲಿ, ಅವುಗಳಿಂದಾಗಬಹುದಾದ ದುರಂತಗಳನ್ನು ಸಹ ವಿಶ್ಲೇಷಿಸಿದ್ದಾರೆ.

ಈ ಕಾದಂಬರಿ ಒಂದು ರೋಚಕ ಸಿನೆಮಾದಂತೆ ಸಾಗುತ್ತದೆ. ವಿಜ್ಞಾನಿಗಳ ಮಹತ್ವಾಕಾಂಕ್ಷೆ, ಕಾರ್ಪೋರೇಟ್‌ ಜಗತ್ತಿನ ಯೋಚನೆಗಳು ಮತ್ತು ಸಾಮಾನ್ಯ ಜನರ ದುರಾಸೆಗಳು ಒಟ್ಟಿಗೆ ಸೇರಿದಾಗ ಆಗುವ ಕಥೆ ಇದು. ಈ ಕಾದಂಬರಿ ಓದುವಾಗ ಹ್ಯಾರಿಸನ್‌ ಫೋರ್ಡ್‌ ನ ಫ್ಯುಜಿಟಿವ್‌ ಸಿನೆಮಾ ನೆನಪಾಯಿತು.

ಓದುಗರ ಆಸಕ್ತಿ ಹಾಳು ಮಾಡಬಾರದೆಂಬ ಉದ್ದೇಶದಿಂದ, ಈ ಪುಸ್ತಕಗಳಲ್ಲಿ ಬರುವ ಪಾತ್ರ ಅಥವಾ ಕಥಾ ಹಂದರವನ್ನು ನಾನು  ಚರ್ಚಿಸಿಲ್ಲ. ಕನ್ನಡದಲ್ಲಿ ಉತ್ತಮ ವೈಜ್ಞಾನಿಕ ಕಥೆಗಳು ಬರುತ್ತಿಲ್ಲ ಎಂದು ಯಾರಾದರೂ ವಾದಿಸುತ್ತಿದ್ದರೆ, ಡಾ ಶಾಂತಲ ಅವರು ತಮ್ಮ ಕೃತಿಗಳ ಮೂಲಕ ಉತ್ತರಿಸಿದ್ದಾರೆ ಎನ್ನುವುದು ನನ್ನ ಅಭಿಪ್ರಾಯ.

 

 

'ದೇವರಾಗಲು ಮೂರೇ ಗೇಣು' ಪುಸ್ತಕವನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ 👇🏻

https://harivubooks.com/products/devaragalu-moore-genu-novel-dr-shantala-harivu-publication

ಬಾನಂಚಿನ ಆಚೆ ಪುಸ್ತಕ ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ👇🏼

https://harivubooks.com/kn/products/baanachina-aache-kannada-books

ಬಾನಂಚಿನ ಆಚೆ ಪುಸ್ತಕದ ಲೇಖಕಿಯಾದ ಡಾ.ಶಾಂತಲ ಅವರ ಸಂದರ್ಶನ - https://youtu.be/syknvMCqZvs

ಇಂತದ್ದೇ ಹಲವಾರು ಪುಸ್ತಕಗಳನ್ನು ಕೊಳ್ಳಬೇಕಿದ್ದಲ್ಲಿ ಭೇಟಿಕೊಡಿ - www.harivubooks.com 

Back to blog

Leave a comment