-ಯಶಸ್ವಿನಿ ಎಸ್.ಎನ್
ಬಾನಂಚಿನ ಆಚೆ
ರೋಚಕ ವೈಜ್ಞಾನಿಕ ಕತೆಗಳು
ಲೇಖಕಿ: ಡಾ. ಶಾಂತಲ
"ಬಾನಂಚಿನ ಆಚೆ", ಇದು ಹತ್ತು ರೋಚಕ ವೈಜ್ಞಾನಿಕ ಕತೆಗಳ ಸಂಕಲನ. ಇದನ್ನು ಓದಲು ತೆಗೆದುಕೊಳ್ಳುವ ಮೊದಲು ವೈಜ್ಞಾನಿಕ ಕತೆಗಳಾಗಿರುವುದರಿಂದ ನನಗೆ ಅರ್ಥ ಆಗತ್ತೋ ಇಲ್ಲವೊ ಎಂಬ ಗೊಂದಲದಲ್ಲೇ ತೆಗೆದುಕೊಂಡೆ. ಪುಸ್ತಕದ ಪ್ರಾರಂಭದಲ್ಲಿ ಬರಹಗಾರರ ಮಾತಿನ ಕೊನೆಯಲ್ಲಿ ಲೇಖಕಿ ಶಾಂತಲ ಅವರು "ದೆವ್ವದ ಕತೆಗಳನ್ನು ಬರೆಯುವುದು ದೆವ್ವಗಳಿಗೆ ಅಲ್ಲವೆಂದಾದರೆ, ವೈಜ್ಞಾನಿಕ ಕತೆಗಳನ್ನು ಬರೆಯುವುದು ವಿಜ್ಞಾನಿಗಳಿಗಾಗಿ ಅಲ್ಲವಲ್ಲ. ಜನಸಾಮಾನ್ಯರಿಗಾಗಿಯೇ ಬರೆಯುತ್ತೇವೆ" ಎಂದು ಬರೆದದ್ದನ್ನು ಓದಿ ನನಗೇ ಹೇಳುತ್ತಿದ್ದಾರೇನೋ ಅನ್ನಿಸಿ ಕತೆಗಳನ್ನು ಓದಲು ಪ್ರಾರಂಭಿಸಿದೆ.
ಪುಟ್ಟ ಗಾತ್ರದಲ್ಲಿ ಅತೀ ದೊಡ್ಡ ಅನುಭವ ಕೊಡುವುದೇ ಈ ಪುಸ್ತಕದ ವಿಶೇಷತೆ. ಪ್ರತಿಯೊಂದು ಕತೆಯು ವೈಜ್ಞಾನಿಕ ಕತೆ ಆಗಿದ್ದು, ಓದಿದ ನಂತರ ಅದರಲ್ಲಿ ಚಿತ್ರಿಸಿದ ಪರಿಕಲ್ಪನೆಯ ಬಗ್ಗೆ ಯೋಚಿಸುವ ಮತ್ತು ವಿಶ್ಲೇಷಿಸುವ ಸ್ಥಿತಿಯಲ್ಲಿ ನಮ್ಮನ್ನು ಬಿಡುತ್ತದೆ. ಕೆಲವೊಂದು ಕತೆಗಳು ತಂತ್ರಜ್ಞಾನವು ಪ್ರಬಲವಾಗಿರುವ ಜಗತ್ತನ್ನು ತೋರಿಸುತ್ತದೆ. ಇನ್ನು ಕೆಲವು ಕತೆಗಳು ತಂತ್ರಜ್ಞಾನದ ಪ್ರಗತಿಯೊಂದಿಗೆ ಬರುವ ಅಪಾಯಗಳನ್ನು ತೋರಿಸುತ್ತದೆ. ಒಟ್ಟಾರೆ ವಿವಿಧ ವೈಜ್ಞಾನಿಕ ವಿಷಯಗಳನ್ನು ಕತೆಗಳ ರೂಪದಲ್ಲಿ ಅಂದವಾಗಿ ಜೋಡಿಸಿಟ್ಟಿದ್ದಾರೆ. ಶಾಂತಲ ಅವರು ಸರಳ ಬರವಣಿಗೆಯ ಮೂಲಕ ವೈಜ್ಞಾನಿಕ ವಿಷಯಗಳನ್ನು ಸುಲಭವಾಗಿ ವಿವರಿಸುತ್ತಾರೆ. ಒಂದೊಂದು ಕತೆಯು ಓದುವಾಗ ಅದರಲ್ಲಿ ನಾವು ತೊಡಗಿಸಿಕೊಳ್ಳುತ್ತೇವೆ.
ಹೆಚ್ಚಿನ ಸ್ಪಾಯ್ಲರ್ಗಳಿಲ್ಲದೆ ಪ್ರತಿ ಕತೆಯ ವಿಮರ್ಶೆಯನ್ನು ನೀಡಲು ಬಯಸುತ್ತೇನೆ. ಮೊದಲು ನನಗೆ ಬಹಳ ಇಷ್ಟವಾದ 'ಕನಸು ಕಾಣುವಿರ?' ಕತೆಯ ಬಗ್ಗೆ ಹೇಳುತ್ತೇನೆ. ಈ ಕತೆಯನ್ನು ಓದುವಾಗ ನನಗೆ ವರ್ಷಗಳಿಂದೆ Netflix ನಲ್ಲಿ ನೋಡಿದ 'ಬ್ಲಾಕ್ ಮಿರರ್' ಸರಣಿ ನೆನಪಿಗೆ ತಂದುಕೊಟ್ಟಿತು. ಈ ಕತೆಯಲ್ಲಿ 'ನೆನಹು ಬಲೆ' (thought catcher) ಹಾಗೂ 'ಸ್ವಪ್ನ ಯೋಜಕ' (dream developer) ಎಂಬ ತಂತ್ರಜ್ಞಾನದಿಂದ ಮಾನವರಿಗೆ ಸುಖವಾದ ನಿದ್ದೆ ಮತ್ತು ಸುಂದರ ಸ್ವಪ್ನಗಳು ಬೀಳುತ್ತಿದ್ದವು. ಈ ತಂತ್ರಜ್ಞಾನ ನಮ್ಮ ಯೋಚನೆ, ಚಿಂತನೆ, ಭಾವನೆಗಳಂತಹ ಖಾಸಗಿ ವಿಷಯಗಳನ್ನು ಬಳಕೆ ಮಾಡುವುದು ಮಾನವ ಹಕ್ಕಿನ ಉಲ್ಲಂಘನೆ ಎಂಬುದು ಕಥಾ ನಾಯಕ ಭುವನ್ ರಾಜ್ನ ವಾದ. Artificial intelligence ನಮ್ಮನ್ನು ಹೇಗೆ ಆಳಬಹುದು ಎಂಬುದೇ ಈ ಕತೆಯ ಸಾರ.
ಇತ್ತೀಚಿಗಷ್ಟೇ ದಿನಪತ್ರಿಕೆಗಳಲ್ಲಿ "artificial womb facility" ಬಗ್ಗೆ ಸುದ್ದಿ ಬಂದಿತ್ತು. ಇದು ಪೋಷಕರಿಗೆ ಕೃತಕ ಗರ್ಭಾಶಯದ ಸಹಾಯದಿಂದ ಕಸ್ಟಮೈಸ್ ಮಾಡಿದ ಶಿಶುಗಳನ್ನು ಉತ್ಪಾದಿಸಲು ನೀಡುವ ಪರಿಕಲ್ಪನೆಯಾಗಿದೆ. ತಂತ್ರಜ್ಞಾನದಿಂದ ಮುಂದಿನ ದಿನಗಳಲ್ಲಿ ಹೆರಿಗೆಯಲ್ಲಿ ಆಗುವ ಪ್ರಕ್ರಿಯದ ಕತೆಯೇ 'ಹೆರಿಗೆ'. ಇದರಲ್ಲಿ ಲೇಖಕಿ ಶಾಂತಲ ಅವರು ಕೇವಲ artificial womb facility ಬಗ್ಗೆ ಅಲ್ಲದೆ labor pain experiencer ಮತ್ತು robot- midwife ಬಗ್ಗೆನೂ ಕಲ್ಪಿಸಿ ಕುತೂಹಲ ಭರಿತ ಕತೆ ಹೆಣೆದಿದ್ದಾರೆ.
'ಮಾಯಾ ನೂರ್' ಕತೆಯಲ್ಲಿ ಉಕ್ಕಾಳುವಿಗೆ (ರೋಬೋಟ್) ಸಂವೇದನ ಶಕ್ತಿ ಬಂದಾಗ ಅದರ ಮನಸ್ಸಿನಲ್ಲಿ ಆಗುವ ತಳಮಳದ ಬಗ್ಗೆ ಬರೆಯುತ್ತಾರೆ. ಉಕ್ಕಾಳು ನಿಜವಾದ ತಿಳುವಳಿಕೆ ಹೊಂದಿದ್ದರೆ, ಕೇವಲ ಅನುಕರಣೆ ಮಾಡದೆ, ತನ್ನ ಭಾವನೆಗಳ ಮೇಲೆ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದರೆ ಏನು ಆಗಬಹುದು ಎಂಬುದು 'ಮಾಯಾ ನೂರ್' ಕತೆಯಿಂದ ತಿಳಿಯಬಹುದು.
'ಕ್ರೋಮೊಸೋಮ್ 4' ಕತೆಯಲ್ಲಿ ಸಂಶೋಧಕಿ ಡಾ. ಸಮೀಕ್ಷಾ ತಂತ್ರಜ್ಞಾನದ ಸಹಾಯದಿಂದ ಪೀಳಿಕಂತೆಗಳನ್ನ (chromosomes) ಬದಲಾಯಿಸುತ್ತಾರೆ. ಆದರೆ ಅವರಿಗೆ ನಿಸರ್ಗದ ವಿರುದ್ಧ ಕೆಲಸ ಮಾಡಿದ ಪಾಪಪ್ರಜ್ಞೆ ಕಾಡುತ್ತದೆ. ವಿಜ್ಞಾನದಿಂದ ಎಲ್ಲಾ ಸಾಧಿಸಬಹುದೆಂದು ಸುಮ್ಮನೆ ಮುನ್ನುಗಿದರೆ ಅದು ನಮಗೆ ಕಂಟಕವಾಗುತ್ತದೆ ಎನ್ನುವ ಸಂದೇಶ ಕೊಡುವ ಕತೆ ಇದು.
'ಕಲ್ ಸಂಜೀವಮ್ಮನ ಕತೆ'ಯಲ್ಲಿ ಪಳೆಯುಳಿಕೆಯಾಗಿದ್ದ (fossil) ಒಂದು ಜಂತು, ಸುಮಾರು ಎರಡು ಸಾವಿರ ವರ್ಷಗಳ ನಂತರ ಜೀವ ಪಡೆಯುತ್ತದೆ. ಅದನ್ನು ಕಂಡು ಯುವಕರಲ್ಲಿ ಮೊದಲು ಆಗುವ ಕುತೂಹಲ, ಎಲ್ಲರೊಂದಿಗೆ ಅದರ ವಿಷಯ ಹಂಚಿಕೊಳ್ಳಬೇಕೆನ್ನುವ ಉತ್ಸಾಹ, ತದನಂತರ ಆಗುವ ಭಯ ಎಲ್ಲವನ್ನು ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ.
'ಮತ್ತೊಂದು ಶತಮಾನ' ಕ್ರಿ. ಶ 2100 ನಲ್ಲಿ ನಡೆಯುವ ಕತೆ. ಇಪ್ಪತ್ತೆರಡನೇ ಶತಮಾನದಲ್ಲಿ ತಂತ್ರಜ್ಞಾನ ಮತ್ತು ಆವಿಷ್ಕಾರದಲ್ಲಿ ಆಗುವ ಬದಲಾವಣೆಗಳ ಸಮಗ್ರ ಚಿತ್ರಣವನ್ನು ಲೇಖಕಿ ಕೊಟ್ಟಿದ್ದಾರೆ. Carbon nano ಟ್ಯೂಬ್ ಟೆಕ್ನಾಲಜಿಯಿಂದ ನಿರ್ಮಿಸಿರುವ ಆರ್ಕಲಾಜಿ, ಧೈಹಿಕ ಕ್ರಿಯೆಗಳ ಮೇಲೆ ಸದಾ ಲಕ್ಷ್ಯವಿಡುವ ಮೆಡಿಕಲ್ ಟ್ಯಾಟೊ, ವರ್ಚುವಲ್ ರಿಯಾಲಿಟಿ ಸೆಶನ್ ಅಲ್ಲಿ ನೆಡೆಯುವ ಚಿಕಿತ್ಸೆ, 3-ಡಿ ಬಯೋ ಪ್ರಿಂಟರ್ನಿಂದ ಔಷಧಿ ರವಾನಿಸುವ, ಕಿಟಕಿಯಿಂದ ಆಚೆ ಹಾರುವ ಫ್ಲೋಟಿಂಗ್ ಕಾರುಗಳು ಬಗ್ಗೆ ರೋಚಕವಾಗಿ ಮುಂದಿನ ಶತಮಾನವನ್ನು ಊಹಿಸಿ ವರ್ಣಿಸಿದ್ದಾರೆ. ಕತೆ ಓದಿದಾಗ ನಮ್ಮಲ್ಲಿ ನಾವು ಒಮ್ಮೆಯಾದರು ಮುಂದಿನ ಶತಮಾನವನ್ನು ನೋಡಬೇಕು ಎಂಬ ಆಸೆಯನ್ನು ಹುಟ್ಟಿಸುತ್ತದೆ.
ಕೋಮದಲ್ಲಿರುವ ವ್ಯಕ್ತಿಯ ಯೋಚನೆಯೇ 'ಕೋಮಾ' ಕತೆಯಾಗಿದೆ. ವಾರದಿಂದ ಕೋಮದಲ್ಲಿರುವ ಡಾ. ಕಲ್ಯಾಣಿಯವರು ಸಾಯುವ ಮುನ್ನ ಅವರಿಗೆ ಬರುವ ಯೋಚನೆಗಳ ಚಿತ್ರಣವು ಇದರಲ್ಲಿದೆ.
ಔಷಧಿ ಉತ್ಪಾದನೆ ಕಂಪನಿಯೊಂದು ಹೊಸ ಔಷಧಿಯನ್ನು ಕಂಡುಹಿಡಿದಾಗ, ಮಾರುಕಟ್ಟೆಗೆ ಪರಿಚಯಿಸುವ ಮುನ್ನ ನಡಿಯುವ volunteer ಸ್ಟಡಿಯಲ್ಲಿ ಅದರ ದುಷ್ಟಪರಿಣಾಮದಿಂದ ಆಗುವ ಅನಾಹುತ ಮತ್ತು ಅನ್ಯಾಯವನ್ನು ದಾಖಲಿಸುವ ಥ್ರಿಲಿಂಗ್ ಕತೆಯೇ 'ಮಾಯಾ ಮದ್ದಿನ ಮುಸುಕಿನಲ್ಲಿ'.
'ಸೈಬರ್ಗ್ ಶ್ರೀನಿವಾಸ' ಹಾಗೂ 'ಅವರು ಬಂದುಬಿಟ್ಟರು' ಕತೆಗಳಲ್ಲಿ ಮುಂದಿನ ಶತಮಾನಗಳಲ್ಲಿ ಬರಬಹುದಾದಂತಹ ಸೈಬರ್ಗ್ (cyber + organism ) ಮಾನವರ ಬಗ್ಗೆ ಬರೆಯುತ್ತಾ, ಈ ಜನರನ್ನು ಒಪ್ಪಿಕೊಂಡು ಸರ್ಕಾರಗಳು ಹೇಗೆ ಇವರ ಉಪಯೋಗ ಪಡೆಯುತ್ತಾರೆ ಎಂದು ಅದ್ಭುತವಾಗಿ ಕತೆಗಳನ್ನು ಬರೆದಿದ್ದಾರೆ.
ನಾವು ಬೆಳೆದಂತೆ ತಂತ್ರಜ್ಞಾನವು ಬೆಳೆಯುತ್ತಿದೆ. ಮಾನವ ತಂತ್ರಜ್ಞಾನವನ್ನು ಅವಲಂಬಿಸಿದ್ದಾನೆ. ತಂತ್ರಜ್ಞಾನವಿಲ್ಲದ ಜೀವನ ಊಹಿಸಲು ಅಸಾಧ್ಯ. ಬುದ್ಧಿವಂತ ಮತ್ತು ಚಿಂತನೆ-ಪ್ರಚೋದಕ ಕತೆಗಳ ಮಾಲೆ ಈ 'ಬಾನಂಚಿನ ಆಚೆ' ಪುಸ್ತಕ. ವಿಜ್ಞಾನದಿಂದ ಮುಂದೆ ಏನು ಆಗಬಹುದು ಎಂದು ಕಲ್ಪಿಸಿ ಅದಕ್ಕೆ ತಕ್ಕಂತಹ ಕತೆಗಳನ್ನು ಕಟ್ಟಿಕೊಟ್ಟಿರುವ ಲೇಖಕಿಗೊಂದು 'ಸಲಾಂ'.
ಬಾನಂಚಿನ ಆಚೆ ಪುಸ್ತಕ ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ👇🏼
https://harivubooks.com/kn/products/baanachina-aache-kannada-books
ಬಾನಂಚಿನ ಆಚೆ ಪುಸ್ತಕದ ಲೇಖಕಿಯಾದ ಡಾ.ಶಾಂತಲ ಅವರ ಸಂದರ್ಶನ - https://youtu.be/syknvMCqZvs
ಇಂತದ್ದೇ ಹಲವಾರು ಪುಸ್ತಕಗಳನ್ನು ಕೊಳ್ಳಬೇಕಿದ್ದಲ್ಲಿ ಭೇಟಿಕೊಡಿ - www.harivubooks.com