ಕವಿರಾಜ ಮಾರ್ಗದಲ್ಲೊಂದು ಲವಲವಿಕೆಯ ಜೀವನ… - ಮಾಕೋನಹಳ್ಳಿ ವಿನಯ್ ಮಾಧವ

ಕವಿರಾಜ ಮಾರ್ಗದಲ್ಲೊಂದು ಲವಲವಿಕೆಯ ಜೀವನ… - ಮಾಕೋನಹಳ್ಳಿ ವಿನಯ್ ಮಾಧವ

Every act of rebellion expresses a nostalgia for innocence and an appeal to the essence of being __ Albert Camus


ನನ್ನ ಮತ್ತು ರವಿ ಬೆಳೆಗರೆಯ ಸ್ನೇಹ ಸುಮಾರು ಇಪ್ಪತ್ತ ಮೂರು ವರ್ಷಗಳು. ರವಿ ತೀರಿಕೊಂಡಾಗ ನಾನು ರವಿ ಬಗ್ಗೆಯಾಗಲೀ, ನಮ್ಮಿಬ್ಬರ ಗೆಳೆತನ, ಜಗಳಗಳ ಬಗ್ಗೆಯಾಗಲೀ ಅಥವಾ ನಾವು ಕಳೆದ ಒಳ್ಳೆಯ ಸಮಯದ ಬಗ್ಗೆಯಾಗಲೀ, ಏನೂ ಬರೆಯಲಿಲ್ಲ.
ರವಿ ಅಷ್ಟೇ ಅಲ್ಲ. ತೇಜಸ್ವಿ ಮತ್ತು ನನ್ನ ವನ್ಯಲೋಕದ ಪಯಣದ ಗುರವಾದ ಚಿಣ್ಣಪ್ಪನವರು ತೀರಿಕೊಂಡಾಗಲೂ ಅಷ್ಟೆ, ನಾನು ಏನೂ ಬರೆಯಲಿಲ್ಲ ಮತ್ತು ಆ ವಿಷಯವನ್ನು ಯಾರ ಬಳಿಯೂ ಮಾತನಾಡಲಿಲ್ಲ. ಗಾಢವಾದ ಸಂಬಂಧಗಳು ದೂರವಾದಾಗ, ಭಾವನೆಗಳು ಹೆಪ್ಪುಗಟ್ಟುತ್ತವೆ.

ಆದರೆ, ರವಿ ತೀರಿಕೊಂಡ ಮೂರು ದಿನಗಳ ನಂತರ ಅವರ ಹಿರಿಯ ಮಗಳು ಚೇತನಾಳಿಗೆ ಫೋನ್ ಮಾಡಿ, ʻಪುಟ್ಟಾ, ಭಾನಿಯನ್ನು (ಎರಡನೇ ಮಗಳು ಭಾವನಾ) ನೀನೇ ನೋಡಿಕೊಳ್ಳಬೇಕು,ʼ ಎಂದೆ.
ʻಅಂಕಲ್, ಅಪ್ಪ ಸಾಯುವ ಹದಿನೈದು ದಿನಗಳ ಮುಂಚೆ ಅದನ್ನೇ ನನಗೆ ಹೇಳಿದ್ದರು. ಈಗ ನೀವೂ ಅದನ್ನೇ ಹೇಳುತ್ತಿದ್ದೀರಿ,ʼ ಎಂದಳು. ಕೆಲವು ಸಲಹೆಗಳನ್ನಿತ್ತು, ಫೋನ್ ಕೆಳಗಿಟ್ಟೆ.
ಈ ಘಟನೆ ನೆನಪಾದದ್ದು ಸಿನೆಮಾ ಸಾಹಿತಿ ಕವಿರಾಜ್ ಅವರು ಬರೆದ ʻಕವಿರಾಜ್ ಮಾರ್ಗದಲ್ಲಿ…ʼ ಪುಸ್ತಕ ಓದುವಾಗ. ಅದರಲ್ಲಿ ʻಬೆಳಗೆರೆಯೊಂದಿಗೆ ಖಾಸ್ ಬಾತ್ʼ ಎಂಬ ಘಟನೆಯನ್ನೂ ಬರೆದುಕೊಂಡಿದ್ದಾರೆ. ಅದನ್ನು ಓದಿ ನನಗೇನೂ ಆಶ್ಚರ್ಯವಾಗಲಿಲ್ಲ. ಏಕೆಂದರೆ, ಅಂಥಹಾ ಕೆಲವು ಸಂದರ್ಭಗಳನ್ನು ರವಿ ನನ್ನ ಜೊತೆ ಹೇಳಿದಾಗ, ನಮ್ಮಿಬ್ಬರ ನಡುವೆ ದೊಡ್ಡ ಜಗಳಗಳೇ ನಡೆದಿವೆ. ಒಂದೆರೆಡು ದಿನಗಳಲ್ಲಿ ಆ ಜಗಳ ಮರೆತು ಹೋಗಿರುತ್ತಿತ್ತು.ಈ ಸಂದರ್ಭದಲ್ಲಿ ಕವಿರಾಜ್ ಅವರು ರವಿಗೆ ಕೊಟ್ಟ ಉತ್ತರ ನೋಡಿದಾಗ, ನನಗೆ ಆಲ್ಬರ್ಟ್ ಕಾಮೂಸ್ ನ ಮೇಲಿನ ಮಾತು ನೆನಪಾಯಿತು. ಏಕೆಂದರೆ, ಈ ಲೇಖನದಲ್ಲಿ ಕವಿರಾಜ್ ಅವರು ರವಿಗೆ ಕೊಟ್ಟ ಉತ್ತರ, ಅವರ ವ್ಯಕ್ತಿತ್ವವನ್ನು ನಿರೂಪಿಸುತ್ತದೆ.

ನನಗೂ ಮತ್ತು ಸಿನೆಮಾ ಪ್ರಪಂಚಕ್ಕೂ ಭಾವನಾತ್ಮಕ ಸಂಬಂಧಗಳಿಲ್ಲ. ಆದರೆ, ಕೆಲವು ಅತ್ಯದ್ಭುತ ಚಲನಚಿತ್ರಗಳನ್ನು ನಾನು ನೋಡಿದ್ದೇನೆ ಮತ್ತು ನೋಡಲು ಇಷ್ಟ ಪಡುತ್ತೇನೆ ಎನ್ನುವುದಂತೂ ನಿಜ. ಪತ್ರಕರ್ತನಾಗಿ ಕೆಲಸ ಮಾಡಿದ ನಾನು, ಸಿನೆಮಾ ಮತ್ತು ಕ್ರೀಡಾ ವಿಭಾಗವನ್ನು ವರದಿ ಮಾಡುವ ಗೋಜಿಗೆ ಹೋಗಲಿಲ್ಲ. ಆದರೆ, ಸಿನೆಮಾ ಪ್ರಪಂಚದ ಆಗು-ಹೋಗುಗಳ ಬಗ್ಗೆಯ ಜ್ಞಾನಕ್ಕೇನೂ ಕೊರತೆ ಇರಲಿಲ್ಲ. ಸಿನೆಮಾ ರಂಗದವರ ಪರಿಚಯವೂ ಅಷ್ಟಕಷ್ಟೆ. ನಾನು ಬಹಳ ಇಷ್ಟ ಪಡುವ ಅನಂತ್ ನಾಗ್ ಅವರನ್ನು ನಾನು ಭೇಟಿಯಾಗಿದ್ದೆಲ್ಲ ಅವರು ರಾಜಕಾರಣಿಯಾಗಿದ್ದಾಗ. ಪತ್ರಕರ್ತನಾಗುವ ಮುಂಚೆಯೇ ಪರಿಚಯವಾಗಿದ್ದ ಅಂಬರೀಶ್ ಅವರನ್ನು ಎಂದೂ ಸಿನೆಮಾ ನಟನಾಗಿ ನೋಡಲೇ ಇಲ್ಲ.

ಸಾಧಾರಣವಾಗಿ ಜನಗಳು ಯಾವುದೇ ವಿಷಯವನ್ನು ಮಾಧ್ಯಮಗಳ ಮೂಲಕ (ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಮೂಲಕ) ತಿಳಿದುಕೊಳ್ಳುತ್ತಾರೆ. ಮಾಧ್ಯಮಗಳಿಗೆ ಅವುಗಳದೇ ಆದ ಒಂದು ಇತಿ-ಮಿತಿ ಇರುತ್ತದೆ. ನಾವು ಎಷ್ಟೇ ರಾಜಕಾರಣಿಗಳನ್ನು, ಪೋಲಿಸರನ್ನು, ಅಪರಾಧಿಗಳನ್ನು ಮತ್ತು ಸಮಾಜದ ಯಾವುದೇ ವ್ಯಕ್ತಿಗಳನ್ನು ಹತ್ತಿರದಿಂದ ನೋಡಿದರೂ, ಅವರ ಬಗ್ಗೆ ಎಷ್ಟೇ ತಿಳಿದುಕೊಂಡಿದ್ದರೂ, ವರದಿಗೆ ಇರುವ ಚೌಕಟ್ಟಿನೊಳಗೆ ಮಾತ್ರ ಬರೆಯಲು ಸಾಧ್ಯ. ಉಳಿದ ವಿವರಗಳು ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ.
ಇದು ಚಲನಚಿತ್ರ ರಂಗಕ್ಕೂ ಸಹ ಅನ್ವಯವಾಗುತ್ತದೆ. ಏಕೆಂದರೆ, ಕೆಲವು ವರ್ಷಗಳ ಕೆಳಗೆ ಜೋಗಿಯವರು ಸಿನೆಮಾ ರಂಗದ ಇಬ್ಬರ ಆತ್ಮ ಚರಿತ್ರೆಗಳನ್ನು ಬರೆದಿದ್ದರು. ಒಂದು ದಿವಂಗತ ಪಾರ್ವತಮ್ಮ ರಾಜ್ಕುಮಾರ್ ಅವರದ್ದು ಮತ್ತು ಎರಡನೇಯದು ಶ್ರೀಮತಿ ಗಿರಿಜಾ ಲೋಕೇಶ್ ಅವರನ್ನು ಕುರಿತು. ಆ ಪುಸ್ತಕಗಳನ್ನು ಓದಿದಾಗ, ಸಾರ್ವಜನಿಕವಾಗಿ ಚರ್ಚೆಯಾದ ಎಷ್ಟೋ ಗಾಸಿಪ್ ಗಳು ಸತ್ಯಕ್ಕೆ ಎಷ್ಟೊಂದು ದೂರವಾಗಿರುತ್ತವೆ ಎಂದು ಅರ್ಥವಾಗುತ್ತದೆ.
ಗಿರಿಜಾ ಲೋಕೇಶ್ ಅವರ ಆತ್ಮ ಕಥೆ ಮನ ಕಲಕುವಂತಿದೆ. ಆ ಪುಸ್ತಕ ಬಿಡುಗಡೆಯಾಗುವ ಸಂದರ್ಭದಲ್ಲಿ ಜೋಗಿಯವರು ಒಂದು ಮಾತು ಹೇಳಿದ್ದರು. ʻಗಿರಿಜಮ್ಮನವರು ರಾತ್ರಿ ನಾಟಕದಲ್ಲಿ ರಾಜಕುಮಾರಿಯ ಪಾತ್ರ ಮಾಡುತ್ತಿದ್ದರು. ಹಗಲಿನಲ್ಲಿ ಬಡತನವನ್ನು ಅನುಭವಿಸುತ್ತಿದ್ದರು. ಜೀವನವನ್ನು ನಾಟಕ ಎಂದೂ, ನಾಟಕವನ್ನು ಜೀವನ ಎಂದೂ ಬದುಕಿದ್ದರಿಂದ, ಅವರು ಕಷ್ಟಗಳನ್ನು ಸುಖವಾಗಿ ಅನುಭವಿಸಿದರು.ʼ

ಸಿನೆಮಾ ರಂಗದಲ್ಲಿ ಬಹಳಷ್ಟು ಜನಗಳಿಗೆ ಈ ಮಾತು ಅನ್ವಯಿಸುತ್ತದೆ ಎನ್ನುವುದು ನನ್ನ ಅಭಿಪ್ತಾಯ. ಏಕೆಂದರೆ, ಈ ಪ್ರಪಂಚಕ್ಕೆ ಬರುವವರೆಲ್ಲ ತಾವು ಹೀರೋ/ಹೀರೋಯಿನ್ ಆಗಿ, ಪ್ರೇಕ್ಷಕರ ಮನದಲ್ಲಿ ವಿರಾಜಿಸಬೇಕು ಎಂದು ಬಂದಿರುತ್ತಾರೆಯೇ ಹೊರತು, ಲೈಟ್ ಬಾಯ್, ಕೋರಸ್ ಡಾನ್ಸರ್ ಅಥವಾ ಜ್ಯೂನಿಯರ್ ಆರ್ಟಿಸ್ಟ್ ಆಗಲು ಅಲ್ಲ. ಕೆಲವರ ಕನಸು ನನಸಾದರೆ, ಇನ್ನುಳಿದವರು ಕಾಲಕ್ರಮೇಣ ತಮಗೆ ದಕ್ಕಿದ್ದಕ್ಕೆ ಒಗ್ಗಿಕೊಳ್ಳುತ್ತಾರೆ. ಅದರ ಮಧ್ಯೆಯೂ, ತಮ್ಮದೇ ಆದ ಒಂದು ಸ್ವಾರಸ್ಯಕರವಾದ ಜೀವನವನ್ನು ಕಟ್ಟಿಕೊಂಡಿರುತ್ತಾರೆ. 
ಅಂತಹ ಕನಸು ನನಸಾದವರ ಕೆಲವು ಸ್ವಾರಸ್ಯಕರ ವಿವರಗಳು, ಕವಿರಾಜ್ ಮಾರ್ಗದಂತಹ ಪುಸ್ತಕಗಳಲ್ಲಿ ದೊರಕುತ್ತವೆ. ಈ ಪುಸ್ತಕದ ಮೊದಲನೇ ಕಥೆಯಾದ ʻಗೋಲ್ಡನ್ ಸ್ಟಾರ್ ಮಾಡಿದ ಕಿಡ್ನ್ಯಾಪ್ʼ ಓದುವಾಗ ನನ್ನ ತುಟಿಯಂಚಿನಲ್ಲಿ ಕಿರುನಗೆಯೊಂದು ಮೂಡಿತು. ಬಹಳ ವರ್ಷಗಳ ಕೆಳಗೆ, ಹಿರಿಯ ನಟ ದೊಡ್ಡಣ್ಣ, ವಿ ರವಿಚಂದ್ರನ್ ಮತ್ತು ರಾಕ್ ಲೈನ್ ವೆಂಕಟೇಶ್ ಅವರು ಒಂದು ಪಾರ್ಟಿಯಲ್ಲಿ ಸಿಕ್ಕಿದ್ದರು. ಸ್ವಲ್ಪ ಹೊತ್ತಿನಲ್ಲಿ ದೊಡ್ಡಣ್ಣ ರವಿಚಂದ್ರನ್ ಮತ್ತು ರಾಕ್ ಲೈನ್ ಸೇರಿ, ದೊಡ್ಡಣ್ಣನವರ ಹತ್ತಿರದ ಸಂಬಂಧಿಕರ ಮದುವೆಯಿಂದ ಕಿಡ್ನ್ಯಾಪ್ ಮಾಡಿ, ಚಿಕ್ಕಮಗಳೂರಿನಲ್ಲಿ ಶೂಟಿಂಗ್ ಗೆ ಕರೆದುಕೊಂಡು ಹೋದ ಕಥೆ ಹೇಳುತ್ತಾ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡರೆ, ಅವರಿಬ್ಬರೂ ಬಿದ್ದೂ, ಬಿದ್ದೂ ನಗುತ್ತಿದ್ದರು.
ಕವಿರಾಜ್ ಅವರು ಬರೆದ ಇಪ್ಪತ್ತೆಂಟು ಕಥೆಗಳನ್ನೂ ವಿಶ್ಲೇಷಿಸಲು ಹೋಗುವುದಿಲ್ಲ. ಆದರೆ, ತಮ್ಮ ಗುರುಗಳಾದ ಗುರು ಕಿರಣ್, ಜೊತೆಯಲ್ಲಿ ಕೆಲಸ ಮಾಡಿದ ನಾಗೇಂದ್ರ ಪ್ರಸಾದ್, ಹರಿಕೃಷ್ಣ, ದಿನಕರ್ ತೂಗುದೀಪ ಮುಂತಾದವರನ್ನು ನೆನಸಿಕೊಂಡ ರೀತಿ ಹೃದಯಸ್ಪರ್ಷಿಯಾಗಿದೆ. ಹಾಗೆಯೇ, ಅವರು ಭೇಟಿಯಾದ ಬಹಳಷ್ಟು ಮೇರು ನಟರಾದ ಡಾ ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಪುನೀತ್ ರಾಜ್ ಕುಮಾರ್, ದರ್ಶನ್, ಹಾಡುಗಾರರಾದ ಎಸ್ ಪಿ ಬಾಲಸುಬ್ರಹ್ಮಣ್ಯಂ ಮುಂತಾದವರಿಂದ ಕಲಿತ ಪಾಠಗಳನ್ನು ಯಾವುದೇ ಹಮ್ಮುಗಳಿಲ್ಲದೆ ಒಪ್ಪಿಕೊಳ್ಳುತ್ತಾರೆ.

Purchase ಕವಿರಾಜ್ ಮಾರ್ಗದಲ್ಲಿ...

ಈ ಪುಸ್ತಕ ಒಂದು ಆತ್ಮಚರಿತ್ರೆಯ ಬಿಡಿ ಭಾಗಗಳಂತೆ ಕಂಡರೂ, ಎಲ್ಲಿಯೂ ಆತ್ಮ ಸ್ತುತಿ ಮಾಡಿಕೊಳ್ಳದೆ, ತಾವು ಮಾಡಿದ ತಪ್ಪುಗಳನ್ನು ತಲೆಬಾಗಿ ಒಪ್ಪಿಕೊಂಡು, ತಮ್ಮ ಸಹಾಯವಿಲ್ಲದೆಯೂ ಎತ್ತರಕ್ಕೆ ಬೆಳೆದವರನ್ನು ಮೆಚ್ಚುಗೆಯಿಂದ ನೋಡುವ ಪರಿ, ಅವರಲ್ಲಿರುವ ಮುಗ್ಧತೆಗೆ ಸಾಕ್ಷಿಯಾಗಿದೆ. 
ಪುಸ್ತಕದ ಕಥೆಗಳೂ ಅಷ್ಟೆ. ಎಲ್ಲಿಯೂ ತಡವರಿಸದೆ ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ಸಿನೆಮಾ ರಂಗದ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವವರ ಅಭಿಪ್ರಾಯವನ್ನೇ ಬದಲಿಸಬಲ್ಲ ಪುಸ್ತಕ ಎಂದರೂ ತಪ್ಪಾಗಲಾರದು.

ಮಾಕೋನಹಳ್ಳಿ ವಿನಯ್ ಮಾಧವ

Back to blog