ಅವರು ಬರೆದ ಎರಡನೇ ಪುಸ್ತಕವಾದ ಇದರಲ್ಲಿ ವಿಶೇಷವಾಗಿ ಸೆಳೆದಿದ್ದು ಬರವಣೆಗೆಯ ಶೈಲಿ. ಹೌದು, ಏನು ಹೇಳಬೇಕು ಅದನ್ನು ಸರಳವಾಗಿ ಮನಮುಟ್ಟುವಂತೆ ಹೇಳಿದ್ದಾರೆ.ಹಾಗಾಗಿ ಈ ಪುಸ್ತಕದಲ್ಲಿರುವ ಪ್ರತಿಯೊಂದು ಅಂಕಣವೂ ನಿರಾಯಾಸವಾಗಿ ಓದಿಸಿಕೊಂಡು ಹೋಗುತ್ತದೆ. ಅಂಕಣಗಳಿಗೆ, ಕಥೆಗಳಿಗೆ ಹೊಸದೊಂದು ವಿಷಯ ಬೇಡ. ಎಲ್ಲೋ ಕಥೆಗಳ ಹುಡುಕಿಕೊಂಡು ಹೋಗಬೇಕಿಲ್ಲ ಬದಲಾಗಿ ನಮ್ಮ ದಿನನಿತ್ಯದ ಜೀವನದಲ್ಲಿ ನಡೆವ ಘಟನೆಗಳೇ ಸಾಕು ಎನ್ನುವಂತಹ ಬರಹವಿದು. ಕೆಲ ಘಟನೆಗಳಂತೂ ನಮ್ಮ ಬದುಕಲ್ಲೇ ಘಟಿಸಿದ್ದ ಸಂಗತಿಯೇನೋ ಅನ್ನುವಷ್ಟು ಪುಸ್ತಕ ಓದಿ ಮುಗಿಸಿದ ಮೇಲೂ ಕಾಡುತ್ತದೆ.. ತಾನು ಕಂಡದ್ದು, ಕೇಳಿದ್ದು, ಅನುಭವಿಸಿದ್ದು ಎಲ್ಲವೂ ಇಲ್ಲಿ ಅಂಕಣಗಳಾಗಿವೆ.ಅಲ್ಲಲ್ಲಿ ಕಾಣಸಿಗುವ ಜಿ.ಎಸ್.ಶಿವರುದ್ರಪ್ಪನವರ ಸಾಲುಗಳು ಆಪ್ತವೆನ್ನಿಸುತ್ತದೆ. ಕೆಲ ಘಟನೆಗಳು ಉದಾಹರಣೆಗಳ ಮೂಲಕ ಗಮನ ಸೆಳೆಯುತ್ತದೆ.
1.ರೇಡಿಯೋ ಎಂಬ ಪುಟ್ಟ ಪೆಟ್ಟಿಗೆಯೊಳಗಿನ ಮಾಯಾಜಗತ್ತು
ಮೊದಲ ಲೇಖನ ರೇಡಿಯೋ ಎಂಬ ಪುಟ್ಟ ಪೆಟ್ಟಿಗೆಯ ಜಗತ್ತಿನಲ್ಲಿ, ರೇಡಿಯೋವನ್ನು ರೂಪಕವಾಗಿ ಇಟ್ಟುಕೊಂಡೇ ಅಮ್ಮನ ಒಳಗುದಿಯನ್ನು ನಾಜೂಕಾಗಿ ಹರವಿಟ್ಟ ಬಗೆಯಂತೂ ಹೃದಯಸ್ಪರ್ಶಿ. ಮೊದಲೆಲ್ಲಾ ರೇಡಿಯೋ ಇಲ್ಲದ ಮನೆಯೇ ಇರಲಿಲ್ಲ. ಆದರೆ ದಿನ ಕಳೆದಂತೆ ರೇಡಿಯೋ ಮೂಲೆ ಸೇರಿದಂತೆ ಭಾವನೆಗಳು ಕೂಡ ಹೇಳ ಹೆಸರಿಲ್ಲದಂತಾಗಿದೆ.
2.ಮಲ್ಲಿಗೆಯೆಂದರೆ ಬರೀ ಹೂವಲ್ಲವೋ
ಹೂವುಗಳು ಕೇವಲ ಹೂವುಗಳಲ್ಲ ಅದರಲ್ಲೂ ಮಲ್ಲಿಗೆ ಹೂವು ಬಳ್ಳಿ ಎಂದರೆ ವಿಶೇಷ ಪ್ರೀತಿ.ಮನೆಯಂಗಳದಲ್ಲಿ ಬೆಳೆದ ಮಲ್ಲಿಗೆ ಬಳ್ಳಿಗೆ ಹೂವು ಅರಳಿ ನಿಂತಿತೆಂದರೆ ಮನದೊಳಗೆ ಅದೇನೋ ಖುಷಿ. ಅದರಲ್ಲೂ ಹೆಣ್ಣು ಮಕ್ಕಳಿಗಂತೂ ಮಲ್ಲಿಗೆಯೆಂದರೆ ಅದು ಬರಿ ಹೂವಲ್ಲ, ಅದೊಂದು ಕನಸು, ಏಕಾಗ್ರತೆ . ಎನ್ನುವ ಭಾವವನ್ನು ಚಂದವಾಗಿ ಹೇಳಿದ್ದಾರೆ.
3.ಎಳೇ ಕಾಗದದೆಲೆಯ ಮೇಲಿನ ಗೀಟು
ಬಿಳಿ ಹಾಳೆಯಂತಹ ಮನಕ್ಕೆ ಒಂದು ಕಪ್ಪು ಬಣ್ಣದ ಚುಕ್ಕಿ ಬಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಹೇಳಿದ ಮಾತಿನ ಹಾಗಿದೆ. ಮಕ್ಕಳ ಮನಸ್ಸಿಗೆ ಹಿಡಿದ ಕೈಗನ್ನಡಿಯಾಗಿದೆ. ಪಾಲಕರಿಗೆ ಕಿವಿ ಹಿಂಡಿ ನೈತಿಕ ಹೊಣೆಯನ್ನು ಹೇಳುವ ಎಚ್ಚರಿಕೆ ಪಾಠ ಈ ಬರಹವಾಗಿದೆ.
4. ಅವಳಿಗೆ ಅದ್ಯಾವುದೂ ಮಾಮೂಲಿಯಾಗಬಾರದು
ಏ ಬಿಡು ಅದೆಲ್ಲ ಮಾಮೂಲಿ ಅನ್ನೋದು ಬಹಳಷ್ಟು ಜನರ ಬದುಕಿನಲ್ಲಿ ಕೇಳಿದ ಪದ. ಹಾಗಾಗಿಯೇ ಏನಾದ್ರು ಆಗ್ಲಿ. ಏನಾದ್ರು ಹೋಗ್ಲಿ ಕಣ್ಣಿದ್ದು ಕುರುಡರಾಗಿ ಕಿವಿಯಿದ್ದೂ ಕೆಪ್ಪರಾಗಿ ಬದುಕುವ ಹಲವು ಮಂದಿಗೆ ಎಲ್ಲವೂ ಮಾಮೂಲಿಯಲ್ಲ ಒಮ್ಮೆಯಾದರೂ ಧ್ವನಿ ಏರಿಸಿ ಎಲ್ಲವೂ ಸಹಿಸ ಬೇಕೆಂದಿಲ್ಲ ಎಂದು ಹೇಳುವ ಆಪ್ತ ಬರಹವಾಗಿದೆ.
5. ನಿಂದಕರಿರಬೇಕು ಜಗದೊಳು
ನಿಂದನೆ ಇಲ್ಲದೆ ಬದುಕಿದವರು ಹುಡುಕಿದರೂ ಯಾರೂ ಸಿಗುವುದಿಲ್ಲ. ಏಕೆಂದರೆ ಜನರ ಮೆಚ್ಚಿಸಲು ದೇವ ಜನಾರ್ಧನನಿಂದಲೂ ಸಾಧ್ಯವಾಗಲಿಲ್ಲ ಅಂದಮೇಲೆ ನಮ್ಮ ನಿಮ್ಮದೇನು ಎನ್ನುವುದನ್ನು ಪುರಂದರ ದಾಸರ ವಚನದ ಮೂಲಕ ಮನಮುಟ್ಟುವ ಕಥೆಯ ಮೂಲಕ ಹೇಳಿರುವ ಪರಿ ಚಂದವಿದೆ.
ಹೀಗೆ ಅವರವರ ಬೆಟ್ಟದಲಿ ಕಲ್ಲುಂಟು ಮುಳ್ಳುಂಟು, ಗಂಡಸಿಗೂ ಗೊತ್ತಾಗಲಿ ಗೌರಿ ದುಃಖ , ಹೊಟ್ಟೆ ಕಿಚ್ಚಿಗೆ ತಣ್ಣೀರ್ ಸುರಿಸಿ ಇಂತಹ 27 ಲೇಖನಗಳು ಈ ಪುಸ್ತಕದಲ್ಲಿದೆ.ಪ್ರತಿ ಬರಹಗಳೂ ಸೂಕ್ಷ್ಮತೆಗೆ ಹಿಡಿದ ಕೈಗನ್ನಡಿ. ಕೆಲ ಘಟನೆಗಳ, ವಸ್ತು,ವಿಷಯವನ್ನು ಅನುಭವದ ಪಾಕದಲ್ಲಿ ಕರಗಿಸಿ ಹದವಾಗಿ ಬೆರೆಸಿ ಅಂಕಣ ಬರಹಗಳ ರೂಪದಲ್ಲಿ ರಸದೌತಣ ನೀಡಿದ್ದಾರೆ.ಕೆಲವು ಕಡೆಗಳಲ್ಲಿ ಸಮಾಜದ ಓರೆಕೋರೆಗಳ ಬೆಟ್ಟು ಮಾಡಿ ತೋರಿಸುವ ಗಟ್ಟಿತನವನ್ನು ಇದರಲ್ಲಿ ಕಾಣಬಹುದು.ಎಲ್ಲೂ ಏಕತಾನತೆ ಕಾಡದಂತೆ, ಯಾವುದೇ ಸಿದ್ದಾಂತಕ್ಕೆ ಅಂಟಿಕೊಳ್ಳದಂತೆ, ಮನುಷ್ಯ ಸಹಜ ಭಾವನೆಗಳ ತೋರ್ಪಡಿಸಿದಂತೆ ವಿಚಾರವನ್ನು ಪ್ರಸ್ತುತಪಡಿಸಿರುವುದು ಈ ಪುಸ್ತಕದ ವಿಶೇಷತೆಯಾಗಿದೆ.
ಕೊನೆಯಲ್ಲಿ...ಕುಮಟೆಯ ಬೀದಿಯ ಹರಿವೆ ಸೊಪ್ಪು, ಬೆಂಡೆ, ಜಾಜಿ ಹೂವಿನ ದಂಡೆ, ಕರಿಮಣಿ ಸರದ ಹಾಲಕ್ಕಿ ಗೌಡತಿ, ಸಮುದ್ರ, ಕಾಕಡ ಮಲ್ಲಿಗೆ ಇವೆಲ್ಲವೂ ಅತಿ ಆಪ್ತ ಅದನ್ನೆಲ್ಲ ಅಂಕಣ ಬರಹಗಳ ಮೂಲಕ ಪ್ರಸ್ತುತ ಪಡಿಸಿ ಊರಿನ ನೆನಪುಗಳ ಮೆಲುಕು ಹಾಕಿಸಿದ ನಿಮ್ಮಿಂದ ಇನ್ನಷ್ಟು ಕೃತಿಗಳು ಮೂಡಿಬರಲಿ.
- ಅಕ್ಷತಾ ಹೆಗಡೆ
ಶುಭಶ್ರೀ ಭಟ್ಟ ಅವರು ಬರೆದಿರುವ ಅಂಕಣಗಳ ಸಂಕಲನ "ಇಹದ ತಳಹದಿ" ಪುಸ್ತಕವನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ 👇🏻
https://harivubooks.com/products/ehada-talahadi-articles-shubhashree-bhat-kannada-book