ಕನ್ನಡ ಕಾದಂಬರಿ ಲೋಕದಲ್ಲೊಂದು ಹೊಸ ಮಿಂಚು!

ಕನ್ನಡ ಕಾದಂಬರಿ ಲೋಕದಲ್ಲೊಂದು ಹೊಸ ಮಿಂಚು!

- ರತೀಶ ರತ್ನಾಕರ

ಐವಿಎಫ್ ಎನ್ನುವ ವೈದ್ಯಕೀಯ ಅದ್ಭುತ ಲಕ್ಷಾಂತರ ಜೋಡಿಗಳ ಬಾಳಲ್ಲಿ ಬೆಳಕಾಗಿರುವುದು ಇಂದಿನ ಸತ್ಯ. ಐವಿಎಫ್ ದಿನೇ ದಿನೇ ಹುಟ್ಟುಹಾಕುತ್ತಿರುವ ಸಾಧ್ಯತೆಗಳೂ ಅಚ್ಚರಿ ಮೂಡಿಸುತ್ತವೆ. ನಮಗೊಂದು ಮಗು ಬೇಕು, ಅದು ವಿಜಯ್ ಪ್ರಕಾಶ್‌ ಅಷ್ಟು ಚೆನ್ನಾಗಿ ಹಾಡಬೇಕು, ಇಲ್ಲವೇ ಭೀಮ್ ಸೇನ್ ಜೋಷಿಯಂತೆ ಹಾಡಬೇಕು, ಮೈಕೆಲ್ ಜಾಕ್ಸನ್‌ನಂತೆ ಕುಣಿಯುವ ಮಗು ಬೇಕು, ಚೆಸ್‌ನಲ್ಲಿ ವಿಶ್ವ ಚ್ಯಾಂಪಿಯನ್ ಆಗುವಂತಹ ಮಗು ಬೇಕು… ಹೀಗೊಂದು ಬಯಕೆ ಹಲವು ತಂದೆ-ತಾಯಂದಿರ ಮನಸ್ಸಿನಲ್ಲಿ ಇರುತ್ತದೆ ಅಲ್ಲವೇ? ಟೈಲರ್ ಹತ್ತಿರ ಹೋಗಿ ಬೇಕಾದ ಬಣ್ಣದ ಬಟ್ಟೆಯನ್ನು ಆಯ್ದುಕೊಂಡು ಬೇಕಾದ ಅಳತೆಗೆ ಬಟ್ಟೆ ಹೊಲಿಸಿಕೊಳ್ಳುವುಂತೆ, ನಿಮ್ಮ ಬಯಕೆಗೆ ತಕ್ಕಂತೆ ‘ಜೀನ್ ಎಡಿಟಿಂಗ್’ ಮೂಲಕ, ಬೇಕಾದ ಮಗುವನ್ನು ಪಡೆಯಬಹುದು, ಅದೇ ‘ಡಿಸೈನರ್ ಬೇಬಿ’ ಎಂದು ವೈದ್ಯಕೀಯ ವಿಜ್ಞಾನ ಹೇಳುತ್ತದೆ. ಆದರೆ ಇಂತಹ ಪ್ರಯೋಗಗಳಿಂದ ಹೆಚ್ಚಿನ ಅನಾಹುತ ಹಾಗೂ ಜೀವಹಾನಿ ಆಗಬಹುದು ಎಂಬ ಕಾರಣಕ್ಕೆ, ಡಿಸೈನರ್ ಬೇಬಿ ಪಡೆಯುವಂತಹ ಪ್ರಯೋಗಗಳನ್ನು ಮಾಡಬಾರದು ಎಂದು ಕಾನೂನು ಗಟ್ಟಿಯಾಗಿ ಹೇಳುತ್ತದೆ. ಹಾಗಾಗಿ, ಇದರ ಸುತ್ತ ಯಾವುದೇ ಪ್ರಯೋಗಗಳು ನಡೆದಿಲ್ಲ.

 

ಇದೇ ಡಿಸೈನರ್ ಬೇಬಿ ವಿಷಯದ ಸುತ್ತ ಡಾ. ಶಾಂತಲ ಅವರು ಒಂದು ರೋಚಕವಾದ ಕಾದಂಬರಿ ಬರೆದಿದ್ದಾರೆ. ಒಂದು ಒಳ್ಳೆಯ ಥ್ರಿಲ್ಲರ್ ಸಿನೆಮಾ ಹೇಗೆ ಕೊನೆಯವರೆಗೂ ಅವುಡು ಕಚ್ಚಿಕೊಂಡು ನೋಡುವ ಹಾಗೆ ಮಾಡುವುದೋ ಹಾಗೆಯೇ ಡಾ. ಶಾಂತಲ ಅವರ ‘ದೇವರಾಗಲು ಮೂರೇ ಗೇಣು’ ಕಾದಂಬರಿ ಓದುಗರನ್ನು ಆವರಿಸಿಕೊಂಡು ಬಿಡುವುದು. ವೈದ್ಯರಾಗಿ ಅಪಾರ ಅನುಭವ ಇರುವ ಡಾ. ಶಾಂತಲ ಅವರು ಆಸ್ಪತ್ರೆಯ ವಾತಾವರಣ ಹಾಗೂ ಆಗುಹೋಗುಗಳನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸುತ್ತಾರೆ. ವೈದ್ಯಕೀಯ ವಿಜ್ಞಾನದ ಹೊಸ ಆವಿಷ್ಕಾರಗಳ ಸುತ್ತ ಅವರಿಗೆ ಇರುವ ಅರಿವು ಹುಬ್ಬೇರಿಸುಂತಹದ್ದು. “ಡಾಕ್ಟರ್ ಒಬ್ಬರು ಮಾತ್ರೆಯ ಚೀಟಿ ಬರೆದರೆ ಮೆಡಿಕಲ್ ಸ್ಟೋರಿನವರಿಗೆ ಮಾತ್ರ ಓದಿ ಅರಿತುಕೊಳ್ಳಲು ಸಾಧ್ಯ, ಜನಸಾಮಾನ್ಯರಿಗಲ್ಲ. ಇನ್ನು ಇವರು ಕಾದಂಬರಿ ಬರೆದರೆ ಸಾಮಾನ್ಯರು ಓದುವುದುಂಟೇ!?” ಎಂದು ಯಾರಿಗಾದರು ಪ್ರಶ್ನೆ ಮೂಡಬಹುದು. ಆದರೆ ಡಾ. ಶಾಂತಲ ಅವರು ಇದಕ್ಕೊಂದು ಅಪವಾದ ಎನಿಸುತ್ತದೆ. ಐವಿಎಫ‌್ ನಂತಹ ಹೊಚ್ಚ ಹೊಸ ವಿಜ್ಞಾನದ ವಿಷಯವನ್ನು ಯಾವುದೇ ವಿಜ್ಞಾನದ ಹಿನ್ನಲೆ ಇರದ ವ್ಯಕ್ತಿಯೊಬ್ಬನಿಗೆ ಸುಲಭವಾಗಿ ತಿಳಿಯುವಂತೆ ಬರೆದುಕೊಂಡು ಹೋಗುತ್ತಾರೆ. ಇದು ಡಾ. ಶಾಂತಲ ಅವರ ಬರವಣಿಗೆಯ ಶಕ್ತಿ!

 

‘ದೇವರಾಗಲು ಮೂರೇ ಗೇಣು’ ಕೇವಲ ವಿಜ್ಞಾನದ ವಿಷಯಗಳ ಸುತ್ತ ಗಿರಕಿ ಹೊಡೆಯುವುದಿಲ್ಲ. ಅದು ಮಿಂಚಿನಂತೆ ಬಂದು ಹೋಗುತ್ತದೆ. ಅದೊಂದು ಎಳೆಯಷ್ಟೆ! ಉಳಿದಂತೆ, ಶಾಂತಲ ಕಟ್ಟಿರುವ ನಿರುಪಮಾ, ನಸೀಂ, ಹಿತೇಶ್, ಬಾಲಚಂದ್ರನಂತಹ ಪಾತ್ರಗಳಲ್ಲಿ ಗಟ್ಟಿತನವಿದೆ. ಗಂಡ ಹೆಂಡತಿಯ ಅನ್ಯೋನ್ಯ ಸಂಬಂಧ, ಗೆಳತನ, ವೈರತ್ವ, ತೆಳುಹಾಸ್ಯ ಇವೆಲ್ಲವನ್ನೂ ಹದವಾಗಿ ಬೆರೆಸಿರುವ ರೀತಿ ಮೆಚ್ಚುವಂತದ್ದು. ಓದುಗನು ಕೊನೆಯವರೆಗೂ ಕುತೂಹಲದಿಂದ ಓದುವಂತೆ ಮಾಡಿರುವ ರೀತಿ ನಿಜವಾಗಿಯೂ ಅಚ್ಚರಿಯೇ ಸರಿ. ಸುಮಾರು 280 ಪುಟಗಳ ದೊಡ್ಡ ಕಾದಂಬರಿ, ಅದರೆ ಎಲ್ಲಿಯೋ ಎಳೆಯದೇ, ಎಲ್ಲಿಯೋ ತೂಕಡಿಸದೇ ಅದು ಓದುಗನನ್ನು ಓಡಿಸಿಕೊಂಡು, ಓದಿಸಿಕೊಂಡು ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ! ಕನ್ನಡದಲ್ಲಿ ದೊಡ್ಡ ಕಾದಂಬರಿ ಬರೆಯುವವರ ಎಣಿಕೆ ಕಡಿಮೆ ಆಗುತ್ತಿದೆ ಎಂಬ ಆತಂಕ ಕೇಳಿಬರುತ್ತಿದೆ. ಆದರೆ, ಡಾಕ್ಟರ್ ಆಗಿ ಇಂಗ್ಲಿಷ್‌ನಲ್ಲಿ ಸಾಕಷ್ಟು ಬರಹ ಹಾಗೂ ಪುಸ್ತಕಗಳನ್ನು ಬರೆಯುತ್ತಿದ್ದರೂ, ಕನ್ನಡದಲ್ಲಿ ಒಂದು ವಿಶೇಷವಾದ ಕಾದಂಬರಿ ಒಂದನ್ನು ಬರೆಯಬೇಕು ಎಂಬ ಡಾ. ಶಾಂತಲ ಅವರ ಉತ್ಸಾಹ ಕಂಡರೆ ನಲಿವಾಗುತ್ತದೆ. ಅದಕ್ಕೆ ತಕ್ಕಹಾಗೆ ಅವರು ತೂಕವಾದ ಕಾದಂಬರಿಯನ್ನೂ ಬರೆಯುತ್ತಾರೆ. ಒಂದು ಕಾದಂಬರಿಗೆ ಇರಬೇಕಾದ ಪಾತ್ರಗಳ ಗಟ್ಟಿತನ, ಪಾತ್ರ ಹಾಗೂ ಸನ್ನಿವೇಶಗಳ ಬಣ್ಣನೆ, ಓದುಗನನ್ನು ಹಿಡಿದಿಟ್ಟುಕೊಳ್ಳಲು ಇರಬೇಕಾದ ಕೌತಕ ಮತ್ತು ಬರಹದ ಧಾಟಿ, ಜೊತೆಗೆ ಮುಖ್ಯವಾಗಿ ಒಳ್ಳೆಯ ಕತೆ, ಇವೆಲ್ಲವೂ ಡಾ. ಶಾಂತಲ ಅವರ ಪುಸ್ತಕದಲ್ಲಿ ಕಾಣಸಿಗುವುದು.

 

ಓದುಗರು ದುಡ್ಡು ಕೊಟ್ಟು, ಪುಸ್ತಕವನ್ನು ಕೊಂಡು ಓದುತ್ತಾರೆ, ಅವರು ನನಗಾಗಿ ನೀಡುವ ಸಮಯ ಹಾಗೂ ಹಣ ಎರಡಕ್ಕೂ ತಕ್ಕ ಗೌರವ ನೀಡಬೇಕು. ಅವರಿಗೆ ಇಷ್ಟವಾಗುವಂತೆ ಬರೆಯಬೇಕು ಎಂದು ಪ್ರಾಮಾಣಿಕ ಬರವಣಿಗೆಯಲ್ಲಿ ಡಾ. ಶಾಂತಲ ಅವರು ತೊಡಗಿದ್ದಾರೆ. ಅವರ ಹೊಸ ಕಾದಂಬರಿ ದೇವರಾಗಲು ಮೂರೇ ಗೇಣು ಓದಿ ನೋಡಿ. ಈ ಹಿಂದೆ, ಹರಿವು ಬುಕ್ಸ್‌ನಿಂದಲೇ ‘ಬಾನಂಚಿನ ಆಚೆ’ ಎಂಬ ಕಥಾ ಸಂಕಲನ ಹೊರಬಂದಿದೆ. 3019 AD ಎಂಬ ವೈಜ್ಞಾನಿಕ ಕಾದಂಬರಿಯೂ ಮೈಲ್ಯಾಂಗ್ ಅವರಿಂದ ಹೊರಬಂದಿದೆ. ಓದಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಬರಹದಲ್ಲಿ ಮಾಗುತ್ತಿರುವ ಡಾ. ಶಾಂತಲ ಅವರು ಇನ್ನೂ ಹೆಚ್ಚು ಹೆಚ್ಚು ಬರೆದು ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಲಿ ಎಂದು ಹಾರೈಸೋಣ.

 

'ದೇವರಾಗಲು ಮೂರೇ ಗೇಣು' ಪುಸ್ತಕವನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ 👇🏻

https://harivubooks.com/products/devaragalu-moore-genu-novel-dr-shantala-harivu-publication

ಹರಿವು ಬುಕ್ಸ್‌ ಪ್ರಕಾಶನದ ಪುಸ್ತಕಗಳನ್ನು ಕೊಳ್ಳಲು ಭೇಟಿ ಕೊಡಿ - https://harivubooks.com/collections/harivu-books-publication

ಇತರೆ ಪುಸ್ತಕಗಳನ್ನು ಕೊಳ್ಳಲು ಭೇಟಿಕೊಡಿ - www.harivubooks.com

Back to blog

Leave a comment