- ಪದಚಿಹ್ನ
ಬಹಳ ಸಮಯದ ನಂತರ ಒಂದಿಷ್ಟು ಬಾಲ್ಯದ ಗೆಳೆಯರು ಒಟ್ಟಿಗೆ ಸೇರಿ ಮಾತುಕತೆಗೆ ಕುಳಿತರೆ ಹೇಗಿರಬಹುದು? ಏನೆಲ್ಲಾ ವಿಷಯಗಳು ಬರಬಹುದು? ಒಂದು ಸ್ವಲ್ಪ ಹೊತ್ತಿನವರೆಗೆ ವರ್ತಮಾನದ ಕೆಲವು ವಿಷಯಗಳನ್ನು ಚರ್ಚಿಸಬಹುದು. ಅದಾದ ಬಳಿಕ ಮಾತುಗಳು ಮರಳುವುದು ಬಾಲ್ಯದ ದಿನಗಳಿಗೆ. ಏಕಾಂತದಲ್ಲಿ ಕುಳಿತು ಯೋಚಿಸುವಾಗಲೂ ಯಾವುದೋ ಒಂದು ಹಂತದಲ್ಲಿ ಮನಸ್ಸು ಬಾಲ್ಯಕ್ಕೆ ಮರಳುತ್ತದೆ. ಬಹಳ ದುಃಖವಾದಾಗಲೂ ಮನಸ್ಸು ಬಾಲ್ಯದ ಸುಂದರ ದಿನಗಳನ್ನು ನೆನಪು ಮಾಡಿಕೊಂಡು ಆ ದಿನಗಳೇ ಚೆನ್ನಾಗಿದ್ದವು ಎಂದುಕೊಳ್ಳುತ್ತದೆ. ಬಾಲ್ಯದಲ್ಲಿ ನಾವು ರೂಢಿಸಿಕೊಂಡ ಅದೆಷ್ಟೋ ಅಭ್ಯಾಸಗಳು ಈಗಲೂ ನಮ್ಮಲ್ಲಿ ಗಟ್ಟಿಯಾಗಿ ಬೇರೂರಿರುತ್ತವೆ. ವಿಕಾಸ್ ನೇಗಿಲೋಣಿ ಅವರು ಬರೆದ ರಥಬೀದಿ ಎಕ್ಸ್‌ಪ್ರೆಸ್ ನಮ್ಮ ಬಾಲ್ಯ ಮತ್ತು ಯೌವನ ದಿನಗಳತ್ತ ತಿರುಗಿ ನೋಡಲು ಒಂದೊಳ್ಳೆಯ ನೆಪವಾಗುತ್ತದೆ.
ಬಾಲ್ಯ ಮತ್ತು ಯೌವನ ನಮ್ಮನ್ನು ಆಗಾಗ ಕಾಡುವ ವಿಷಯಗಳು. ಬಾಲ್ಯ ಹಾಗೂ ಯೌವನದ ದಿನಗಳು ಒಂದು ರೀತಿಯಲ್ಲಿ, ಆಗಾಗ ಕುಡಿದು ಖುಷಿಪಡಬಹುದಾದ ಸಖತ್ ಲೆಮೆನ್ ಟೀ. ಬಹುತೇಕ ಹುಡುಗರ ದಿನಗಳು ಸುತ್ತುವುದು ಗೆಳೆಯರ ಗ್ಯಾಂಗ್ ನಡುವೆ. ಆ ದಿನಗಳಲ್ಲಿ ಎಲ್ಲರೂ ತಮಗೆ ತಾವೇ ಹೀರೋಗಳು ಎಂಬ ಫೀಲ್‌ನಲ್ಲಿ ಇರುತ್ತೇವೆ. ನಮ್ಮದೇ ಪ್ರಪಂಚ ಎಂಬ ಒಂದು ವಿಚಿತ್ರ ಗರ್ವ. ಮತ್ತೆ ಮತ್ತೆ ನೆನಪಿಸಿಕೊಂಡಷ್ಟು ಆ ದಿನಗಳೇ ಚೆಂದ ಅನಿಸುತ್ತದೆ. ಅಂತಹ ದಿನಗಳ ಕಥೆಯನ್ನು, ನಮ್ಮ ಅನುಭವವನ್ನು ಎಲ್ಲರೂ ಓದುವಂತೆ ಬರೆದಿದ್ದಾರೆ ವಿಕಾಸ್.
ಅಂಜಿಕೆ ಇದ್ದರೂ ಏನೋ ಒಂದು ತುಂಟಾಟ ಮಾಡಲು ಭಂಡ ಧೈರ್ಯ, ನೋಟ್ ಬುಕ್‌ನ ಕೊನೆಯ ಹಾಳೆಯಲ್ಲಿ ಬರೆದ ಟೀಚರ್ ಚಿತ್ರಗಳು, ಡೆಸ್ಕಿನ ಮೇಲೆ ಕೆತ್ತಿದ್ದ ಮೊದಲ ಕ್ರಷ್ ಹೆಸರು, ಹುಡುಗಿಗೆ ನೀಡಬೇಕಾಗಿದ್ದು ಫ್ರೆಂಡ್ಸ್ ಕೈಗೆ ಸೇರಿ ಹಾಸ್ಯಕ್ಕೆ ಒಳಗಾದ ಮೊದಲ ಪ್ರೇಮ ಪತ್ರ, ರಿಸಲ್ಟ್ ಬರುವ ಹಿಂದಿನ ದಿನ ಆಗುವ ಹೆದರಿಕೆ, ಗೆಳೆಯರೊಡನೆ ಆಟವಾಡಲು ಮನೆಯಲ್ಲಿ ಮಾಡುವ ನಾಟಕ, ಇಂತಹ ಅನೇಕ ವಿಷಯಗಳು ಬಾಲ್ಯ ಮತ್ತು ಹರೆಯದ ದಿನಗಳನ್ನು ಸಮೃದ್ಧಗೊಳಿಸಿರುತ್ತದೆ. ವಿಕಾಸ್ ಅವರು ಈ ಕೃತಿಯಲ್ಲಿ ಇಂತಹ ಅನೇಕ ಸಂಗತಿಗಳನ್ನು ಹದವಾಗಿ ಬೆರೆಸಿದ್ದಾರೆ ಹಾಗೂ ಆ ವಯಸ್ಸಿನ ಹುಡುಗರಲ್ಲಿ ಆಗುವ ಮಾನಸಿಕ ಹಾಗೂ ದೈಹಿಕ ಬದಲಾವಣೆಗಳನ್ನು ಅಷ್ಟೇ ನಾಜೂಕಾಗಿ ನಿರೂಪಿಸಿದ್ದಾರೆ. ಓದುವಾಗ ಏನೋ ಒಂದು ರೀತಿಯ ಆನಂದವಾದರೆ, ಓದಿ ಮುಗಿಸುವಾಗ ಒಂದು ಸಮಾಧಾನ ಆಗುತ್ತದೆ.
ಹಳ್ಳಿಯಿಂದ ಪಟ್ಟಣ. ಅಲ್ಲಿನ ಹೊಸ ರಸ್ತೆಗಳು, ಹೊಸ ವಾತಾವರಣ. ಎಲ್ಲವೂ ಆ ಹುಡುಗನ ಮೇಲೆ ಪ್ರಭಾವ ಬೀರುವಂಥವೆ. ಉಡುಪಿಯ ರಥಬೀದಿಯಲ್ಲಿ ಸುತ್ತು ಹಾಕುವಾಗ ಅವೆಲ್ಲ ಅನುಭವವಾಗುತ್ತವೆ. ಮೊದಲು ನೋಡಿದ ಸಿನಿಮಾ, ಇಡ್ಲಿ ಸಾಂಬಾರ್ ತಿನ್ನಲು ಹೋಗುವ ಹೋಟೆಲು, ಅಲಂಕಾರ್. ದಿಲ್ವಾಲೆ ದುಲ್‌ಹನಿಯಾ ಲೇಜಾಯೆಂಗೆ, ಸಂಸ್ಕೃತ ಹಾಗೂ ಕನ್ನಡ ಮೇಷ್ಟ್ರು, ಗ್ರೇಟ್ ಎಸ್ಕೇಪ್ ಪ್ಲಾನು, ಊರಿಂದ ಊರಿಗೆ ತಿರುಗುವ ಬಸ್ಸು ಎಲ್ಲಕ್ಕಿಂತ ಮುಖ್ಯವಾಗಿ ಗೆಳೆತನ ಮತ್ತು ಹಾಸ್ಟೆಲ್. ಎಲ್ಲವೂ ಉಡುಪಿಯ ಬೇಸಿಗೆಯಲ್ಲಿ ಒಂದು ತಂಪು ಗಾಳಿಯ ಹಿತವಾದ ಅನುಭವ ನೀಡುತ್ತದೆ, ಹಾಸ್ಟೆಲ್ ಅಲ್ಲಿ ಇದ್ದವರು ಅಥವಾ ಈಗ ಇರುವವರು ಈ ಪುಸ್ತಕವನ್ನು ಓದಿದರೆ ಅವರಿಗೆ ಹೆಚ್ಚು ಆಪ್ತವೆನಿಸುತ್ತದೆ, ಬಹಳ ಬೇಗ ಕನೆಕ್ಟ್ ಆಗುತ್ತದೆ.
ಹಾಸ್ಟೆಲ್ ಹುಡುಗರೆಲ್ಲ ಸೇರಿ ಒಂದು ದೊಡ್ಡ ಯೋಜನೆಯನ್ನು ಸಿದ್ಧಪಡಿಸಿ ಅದನ್ನು ಕಾರ್ಯಗತಗೊಳಿಸಿ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮ ನೋಡಲು ಹೋಗುವ ಸನ್ನಿವೇಶವೇ ಅದ್ಭುತ. ಯಾವ ಬಾಗಿಲಿನಿಂದ ಹೋಗುವುದು, ಎಷ್ಟೊತ್ತಿಗೆ ಹೋಗುವುದು ಎನ್ನುವ ಸಣ್ಣ ಸಣ್ಣ ವಿವರಗಳನ್ನು ಸೊಗಸಾಗಿ ಹೇಳಿದ ಭಾಗ ಹೈಲೈಟಿಂಗ್ ಅಂಶ. ಉಡುಪಿಯ ಹಬ್ಬ, ಇರುಳು, ದೀಪೋತ್ಸವದಲ್ಲಿ ಬೆಳಗುವ ಹಣತೆ, ಕಾಡುವ ಹುಡುಗಿ ಇವೆಲ್ಲ ನಮಗೊಂದು ನಾಸ್ಟಾಲ್ಜಿಯ ಫೀಲ್ ಕೊಟ್ಟು ನಮ್ಮನ್ನು ಆವರಿಸಿಕೊಳ್ಳುತ್ತದೆ.
ರಥಬೀದಿ ಎಕ್ಸ್‌ಪ್ರೆಸ್ ಮೂಲಕ adolescence ಸುತ್ತ ಒಂದು ಸುತ್ತು ಹಾಕಿಸಿದ್ದಕ್ಕೆ ವಿಕಾಸ್ ನೇಗಿಲೋಣಿ ಅವರಿಗೆ ಧನ್ಯವಾದ ಹಾಗೂ ಈ ಪುಸ್ತಕವನ್ನು ಮುದ್ರಣ ಮಾಡಿದ ಹರಿವು ಬುಕ್ಸ್ ಹಾಗೂ ರತೀಶ ರತ್ನಾಕರ ಅವರಿಗೆ ಕೂಡ ಅಭಿನಂದನೆ.
***
‘ರಥಬೀದಿ ಎಕ್ಸ್‌ಪ್ರೆಸ್’ ಪುಸ್ತಕವನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ👇🏼
ಹರಿವು ಬುಕ್ಸ್ ಪ್ರಕಾಶನದ ಪುಸ್ತಕಗಳನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ👇🏼
https://harivubooks.com/collections/harivu-books-publication
ಇತರೆ ಪುಸ್ತಕಗಳನ್ನು ಕೊಳ್ಳಲು ಭೇಟಿಕೊಡಿ www.harivubooks.com