-ಜೋಗಿ
ಕ್ಲಾಸುಗಳಲ್ಲಿ ಎಂಟೆಂಟ್ಲಿ ಅರವತ್ತನಾಲ್ಕು ಅನ್ನುವುದನ್ನು ಕಲಿಸುತ್ತಾರೆ. ವ್ಯಾಕರಣ ಹೇಳಿಕೊಡುತ್ತಾರೆ. ಮೊದಲ ಸಲ ಶಕುಂತಲೆಯನ್ನು ನೋಡಿದ ದುಷ್ಯಂತನಿಗೆ ಏನಾಯಿತು ಅನ್ನುವುದನ್ನು ವಿವರಿಸುತ್ತಾರೆ. ಹೇಳಬೇಕಾದ್ದನ್ನು ಹೇಳಿಕೊಟ್ಟು ಮೇಷ್ಟರು ತಮ್ಮ ತಮ್ಮ ಮನೆ ಸೇರುತ್ತಾರೆ.
ನಡುರಾತ್ರಿ ಒಂಟಿಯಾಗಿ ಮಲಗಿದ ಹುಡುಗನ ಪಕ್ಕದಲ್ಲಿಯೇ ಅದೆಲ್ಲಿಂದಲೋ ಬೆಳಕಿನ ಕೋಲೊಂದು ಬಂದು ಬೀಳುತ್ತದೆ. ಆ ಅರೆಬರೆ ಬೆಳಕಿನಲ್ಲೇ ಜ್ಞಾನೋದಯ ಆಗುತ್ತದೆ. ಅದು ಜ್ಞಾನವೋ ಸಿದ್ಧಿಯೋ ವೈರಾಗ್ಯವೋ ಯೌವನದ ಕುರುಹೋ ತನಗೊಬ್ಬನಿಗೇ ಉಂಟಾದ ಮರುಕವೋ ಜಗತ್ತಿನಲ್ಲಿ ಎಲ್ಲ ಹುಡುಗರೂ ಹುಡುಗಿಯರೂ ಹೀಗೇ ಒಂದು ಅಪರಾತ್ರಿಯಲ್ಲೇ ಯಕ್ಷಯಕ್ಷಿಯರಾಗಿ ಬದಲಾಗುತ್ತಾರೋ?
ವಿಕಾಸ್ ನೇಗಿಲೋಣಿ ತನ್ನ ಬಾಲ್ಯದ ಕತೆಯನ್ನೂ ಯೌವನದ ಕತೆಯನ್ನೂ ಬೆಸೆಯುತ್ತಾ ಹೋಗಿದ್ದಾರೆ. ಒಂದೆಡೆ ಬಾಲ್ಯದ ತಬ್ಬಲಿ ಹುಡುಗ, ಮತ್ತೊಂದೆಡೆ ಯಾರನ್ನು ತಬ್ಬಲಿ ಎಂದು ಬೆರಗುಗೊಂಡು ನಿಂತಿರುವ ಯೌವನದ ಹುಡುಗ ಏಕಕಾಲಕ್ಕೆ ಇಲ್ಲಿ ಮುಖಾಮುಖಿ ಆಗುತ್ತಾರೆ. ಹೇಳಬೇಕಾದ್ದನ್ನು ಕೊಂಚ ಮುಚ್ಚಿಟ್ಟು, ಸಂಕೋಚದ ಕೈಗೆ ಅಲ್ಲಲ್ಲಿ ಪೆನ್ನಿಟ್ಟು ಬರೆಸಿರುವಂತೆ ಕಾಣುವ ಇದು ಬಹುಶಃ ಕನ್ನಡದ ಮೊದಲ ಅಡಾಲಸೆಂಟ್ ಆತ್ಮಚರಿತ್ರೆಯೂ ಇದ್ದೀತು.
ನಮ್ಮ ಬಾಲ್ಯದಿಂದ ಯೌವನಕ್ಕೆ ನಾವು ಹೊರಡುವ ಪಯಣದ ಕತೆ ಹೆಚ್ಚು ಕಮ್ಮಿ ಒಂದೇ ಥರ ಇರುತ್ತದೆ. ನಮಗೆಲ್ಲ ಒಬ್ಬ ಪರಮಗುರು, ಅವನೇ ದಾರಿ ತೋರಿಸುವವನು. ಸೃಷ್ಟಿಯ ರಹಸ್ಯಗಳನ್ನು ಬೋಧಿಸುವವನೂ ಅವನೇ. ಮೇಷ್ಟರು ಕಲಿಸುವುದಕ್ಕಿಂತ ಅವನು ಕಲಿಸುವುದೇ ಆಕರ್ಷಕವಾಗಿರುತ್ತದೆ. ಅವನು ಕಲಿಸಿದ್ದನ್ನು ನಾವು ಪಾಲಿಸುತ್ತಾ ಕ್ರಮೇಣ ಅವನನ್ನೇ ಮೀರಿಸಿದೆವು ಎಂಬ ಹಮ್ಮಿನಲ್ಲಿ ಓಡಾಡಿಕೊಂಡಿರುತ್ತೇವೆ. ಅಲ್ಲೊಂದು ಪುಟ್ಟ ಗುಂಪು, ಸಂಕೋಚ ಮತ್ತು ಉಡಾಫೆ ಬೆರೆತ ನಿಲುವು, ದಿಟ್ಟವಾಗಲು ಯತ್ನಿಸುತ್ತಲೇ ಹಿಂಜರಿಯುವುದು, ಅನಾಥಪ್ರಜ್ಞೆಯ ಜೊತೆಗೇ ಒಂಟಿಯಾಗಿ ಬದುಕಬಲ್ಲೆ ಎಂಬ ಹಮ್ಮು- ಎಲ್ಲವೂ ಸೇರಿಕೊಂಡು ಬಡ ಹುಡುಗನ ಬಾಲ್ಯ ಅವನ ಜೀವನದ ಅತ್ಯಂತ ಶ್ರೀಮಂತ ಗಳಿಗೆಯೂ ಆಗಿಬಿಡುತ್ತದೆ.
ವಿಕಾಸ್ ನೇಗಿಲೋಣಿಯನ್ನು ಕತೆಗಾರನನ್ನೂ ಕವಿಯನ್ನೂ ಆಗಿಸಿದ ಕ್ಷಣಗಳು ಈ ಪುಟಗಳಲ್ಲಿ ಸಿಗುತ್ತವೆ. ಈ ಬರಹದ ವಿನಯವಂತಿಕೆ ಇದಕ್ಕೊಂದು ವಿಶೇಷ ಪ್ರಭೆಯನ್ನೂ ಕೊಟ್ಟಿದೆ. ವಿಕಾಸ್ ಇಡೀ ಪುಸ್ತಕದ ಉದ್ದಕ್ಕೆ ಎಲ್ಲಿಯೂ ನಾನು ಎಂಬ ಪದವನ್ನು ಬಳಸಿಲ್ಲ. ಇದರಿಂದಾಗಿ ಇದು ಆ ವಯಸ್ಸಿನ ಎಲ್ಲರ ಆತ್ಮಚರಿತ್ರೆಯೂ ಆಗಬಹುದಾದ ವಿಸ್ತಾರವನ್ನು ತಾನೇ ತಾನಾಗಿ ಪಡಕೊಂಡಿದೆ.
ಅಪ್ಪನಂತೆ ಆಗಬೇಡ ಎಂಬ ಅಮ್ಮನ ಎಚ್ಚರಿಕೆ, ತನಗೆ ಯಾರೂ ಇಲ್ಲ ಎಂಬ ಏಕಾಕಿ ಭಾವ, ತನ್ನಂತೆ ಅನೇಕರಿದ್ದಾರೆ ಎಂಬ ನೆಮ್ಮದಿ, ಬಡತನ ಮತ್ತು ಕಡುಕಷ್ಟ ಎರಡನ್ನೂ ವಿದ್ಯೆ ಮೀರಬಲ್ಲದು ಎಂಬ ಅರಿವು, ಬೆಳಗಿನ ಓದಿನಿಂದ ಪಡಕೊಂಡ ಆತ್ಮವಿಶ್ವಾಸ, ಕದ್ದು ನೋಡಿದ ಸಿನಿಮಾದ ನಾಯಕಿ ಬೋಧಿಸಿದ ನಿರ್ಲಜ್ಜ ಪಾಠ, ಕೃಷ್ಣನ ಅಂಗಳದಲ್ಲಿ ಸುಳ್ಳಾಡುವ ಪ್ರಾಮಾಣಿಕತೆ, ಅನ್ನಪೂರ್ಣೆಯ ನೆನಪು, ಪರ್ಯಾಯದ ಇರುಳು, ಅನಾಥ ಹುಡುಗಿಯೊಬ್ಬಳ ದಿಗ್ಭ್ರಮೆ- ಇವುಗಳೆಲ್ಲ ಸೇರಿ ವಿಕಾಸ್ ನೇಗಿಲೋಣಿಯನ್ನು ಬೆಳೆಸುತ್ತಾ ಹೋಗಿವೆ.
ಇದನ್ನು ಓದುತ್ತಾ ಓದುತ್ತಾ ನಿಮ್ಮಲ್ಲೊಂದು ಹುಮ್ಮಸ್ಸು ಮೂಡುತ್ತದೆ. ತನ್ನ ಬಾಲ್ಯ ಹೇಗಿತ್ತು ಅನ್ನುವುದನ್ನು ಪ್ರತಿಯೊಬ್ಬ ಹುಡುಗನೂ ಕಂಡುಕೊಳ್ಳುವುದಕ್ಕೆ ಇದೊಂದು ಕನಕನ ಕಿಂಡಿಯೂ ಆಗಬಲ್ಲದು. ನಮ್ಮ ಇಡೀ ಬದುಕಿನ ಬ್ಲೂಪ್ರಿಂಟೇ ಬಾಲ್ಯದಲ್ಲಿರುತ್ತದೆ. ಅಲ್ಲಿ ಕಂಡದ್ದು ಅನು‘ವಿಸಿದ್ದು ಕಾಡಿದ್ದು ಕನವರಿಸಿದ್ದು ರೂಪಕಗಳಾಗಿ ನಮ್ಮೊಳಗೇ ಉಳಿದಿರುತ್ತವೆ. ಅವು ನಮ್ಮನ್ನು ಕ್ರಮೇಣ ಆಳತೊಡಗುತ್ತವೆ. ಪ್ರೌಢಿಮೆ ಮತ್ತು ಬುದ್ಧಿವಂತಿಕೆ ನಮ್ಮನ್ನು ನಿಯಂತ್ರಿಸುವುದಕ್ಕಿಂತ ಬಾಲ್ಯದ ಅವಿಸ್ಮರಣೀಯ ಸಂಜ್ಞೆಗಳಿಗೆ ನಾವು ತಲೆಬಾಗುವುದರಲ್ಲಿ ಬೇರೆಯೇ ಖುಷಿಯಿದೆ.
ಅಂಥದ್ದೊಂದು ಉತ್ಸಾಹವನ್ನು ವಿಕಾಸ್ ಸಣ್ಣ ಸಣ್ಣ ಅಧ್ಯಾಯಗಳಲ್ಲಿ ನಿಮ್ಮ ಮುಂದೆ ಹರಡಿದ್ದಾರೆ. ಈ ಅಕ್ಷರಗಳ ಜೊತೆ ನಿಮ್ಮ ಸ್ಮತಿಯೂ ಬೆರೆತರೆ, ಎಂದೂ ಬಾಡದ ಬಾಲ್ಯವೆಂಬ ಸುರಗಿ ಹೂವಿನ ಘಮ ಮೂಗಿಗೆ ಬಡಿಯುತ್ತದೆ.
*****
‘ರಥಬೀದಿ ಎಕ್ಸ್ಪ್ರೆಸ್’ ಪುಸ್ತಕವನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ👇🏼
ಹರಿವು ಬುಕ್ಸ್ ಪ್ರಕಾಶನದ ಪುಸ್ತಕಗಳನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ👇🏼
https://harivubooks.com/collections/harivu-books-publication
ಇತರೆ ಪುಸ್ತಕಗಳನ್ನು ಕೊಳ್ಳಲು ಭೇಟಿಕೊಡಿ www.harivubooks.com