ನೀವೂ ಒಂದೊಳ್ಳೆ ಪತ್ತೇದಾರಿ ಕಥೆಗಳ ಪುಸ್ತಕವನ್ನು ಹುಡುಕುತ್ತಿದ್ದರೆ, ನಿಮಗೀ ಪುಸ್ತಕ!

ನೀವೂ ಒಂದೊಳ್ಳೆ ಪತ್ತೇದಾರಿ ಕಥೆಗಳ ಪುಸ್ತಕವನ್ನು ಹುಡುಕುತ್ತಿದ್ದರೆ, ನಿಮಗೀ ಪುಸ್ತಕ!

- ಸುಶೀಲ್ ಕುಮಾರ್

ವಾಸುದೇವ ಮೂರ್ತಿಯವರು ಈ ಕಾಲ ಘಟ್ಟದ ಯುವಕ, ಯುವತಿಯರ ತಲೆಯಲ್ಲಿಟ್ಟುಕೊಂಡು ಬರೆದ ಪುಸ್ತಕವೇ ಪಾತಾಳ ಗರಡಿ. ಓದಿದ್ದು ಸಿವಿಲ್ ಇಂಜಿನಿಯರಿಂಗ್, ಇಪ್ಪತ್ತೈದು ವರ್ಷಗಳ ಕಾಲ ಕಾರ್ಪೊರೇಟ್ ಹುದ್ದೆಯಲ್ಲಿ ಸೇವೆ ಸಲ್ಲಿಸಿದರು, ಆದರೂ ಅವರಲ್ಲಿದ್ದ ಬರೆಯುವ ಆಸಕ್ತಿ ಕಡಿಮೆಯಾಗಲಿಲ್ಲ. ಇಪ್ಪತ್ತೈದಕ್ಕೂ ಹೆಚ್ಚು ಸಣ್ಣ ಕಥೆಗಳು ತರಂಗ, ಮಯೂರ ಇತರ ಪತ್ರಿಕೆಗಳಲ್ಲಿ ಪ್ರಕಟಗೊಂಡು ಈಗ ಅವರ ಎರಡನೇ ಪುಸ್ತಕವಾದ ಪಾತಾಳ ಗರಡಿಯನ್ನು ಜನರಿಗೆ ಒಪ್ಪಿಸಿದ್ದಾರೆ.

         ಪಾತಾಳ ಗರಡಿ ಪುಸ್ತಕವು ಒಟ್ಟು ಏಳು ಕಥೆಗಳನ್ನೊಳಗೊಂಡ ಕಥಾಸಂಕಲನ. ಪಾತಾಳ ಗರಡಿ, ಅಪರಾಧಿ ನಾನಲ್ಲ, ಮೂರನೇ ಆಯಾಮ, ತೆರೆದ ಕಿಟಕಿ, ಚಕ್ರಬಿಂಬ, ಛದ್ಮ, ವರ್ಣಜಾಲ. ವರ್ತಮಾನದಲ್ಲಿ ಇಂತ ಕಥೆಗಳು ಕಣ್ಮರೆಯಾಗುತ್ತೀರುವಾಗ ವಾಸುದೇವ ಮೂರ್ತಿಯವರ ಪಾತಾಳ ಗರಡಿ ಜನರ ಮನ ಗೆಲ್ಲುತ್ತದೆ. ಪತ್ತೇದಾರಿ ಎಂದರೇನು, ಒಬ್ಬ ಪೊಲೀಸ್ ಅಂದರೆ ಯಾರು, ಅವನ ಗುಣಲಕ್ಷಣಗಳೇನು, ಅವನ ಬುದ್ದಿ ಹೇಗಿರಬೇಕು, ಒಂದು ಕೇಸಿನಲ್ಲಿ ಅನುಭವ ಎಷ್ಟು ಮುಖ್ಯ, ಒಬ್ಬ ಅಪರಾಧಿ ತನ್ನ ಕೃತ್ಯವನ್ನು ಮುಚ್ಚಿಹಾಕಲು ಮಾಡುವ ಪ್ರಯತ್ನವೇನು, ಅಪರಾಧಿ ಎಂದು ಬಿಂಬಿಸಲು ಹುಡುಕಬೇಕಾದ ರೀತಿ, ಸತ್ಯ ಸುಳ್ಳುಗಳ ನಡುವೆ ಎಲ್ಲೊ ಅವಿತ ಸಾಕ್ಷಿ ಇದೆಲ್ಲವನ್ನು ಲೇಖಕರಾದ ವಾಸುದೇವ ಮೂರ್ತಿಯವರು ಅಚ್ಚುಕಟ್ಟಾಗಿ ಹೆಣೆದ್ದಿದ್ದಾರೆ.

         ಒಂದೊಂದು ಕಥೆಯು ಹೊಸ ರೋಚಕತೆಯನ್ನು ಸೃಷ್ಟಿಸುತ್ತದೆ, ಪುಸ್ತಕ ಓದಿ ಮುಗಿಸಿದ ಮೇಲೆ ಅನ್ನಿಸುವುದಿಷ್ಟೇ ಎಲ್ಲೂ ನೋಡದ ಹೊಸ ರೀತಿಯ ಸವಿ, ಒಂದು ಕೃತ್ಯದ ಹಿಂದೆ ಇರುವ ನೋವು, ಆ ಕೃತ್ಯಕ್ಕೆ ಕಾರಣ ಅದರ ಹಿಂದಿನ ಕಥೆ, ಮಾಡಿದ್ದು ಕೃತ್ಯವೆಂದು ತಿಳಿದಮೇಲೆ ಅವಿತುಕೊಳ್ಳುವ ಪರಿ, ಸೃಷ್ಟಿಸುವ ಸುಳ್ಳು ಸಾಕ್ಷಿ, ಆದರೂ ಅದೆಲ್ಲವನ್ನು ಮೀರಿ ತನ್ನ ಬುದ್ದಿ ಬರಿದಾದರು ಅನುಭವದಿಂದ ಹಾಗೂ ಚಾಣಕ್ಷತೆಯಿಂದ ಸಮಯಕ್ಕಾಗಿ ಕಾದು ಅಪರಾಧಿಯನ್ನು ಗುರುತಿಸುವ ಪೊಲೀಸ್ ಎಲ್ಲರ ಚಿತ್ರವು ಹಾಗೆ ಕಣ್ಣ ಮುಂದೆ ಬಂದು ಹೋಗುತ್ತದೆ.

         ಒಟ್ಟಾರೆ ಪಾತಾಳ ಗರಡಿ ಕಥಾ ಸಂಕಲನವು ಇಂದಿನ ಪೀಳಿಗೆಯ ಯುವಕ ಯುವತಿಯರ ಮನಸೆಳೆಯುವುದರಲ್ಲಿ ಅನುಮಾನವಿಲ್ಲ. ಲೇಖಕರು ಪಾತ್ರಗಳನ್ನು ಕಟ್ಟಿಕೊಂಡಿರುವ ರೀತಿ ರೋಚಕ, ದಿನ ನಿತ್ಯ ನಡೆಯುವ ಕೃತ್ಯಗಳ ಆಧಾರಿತದ ಮೇಲೆ ಪಾತ್ರ ತಯಾರಾಗಿದೆ ಹಾಗೂ ನೆನಪಿನಲ್ಲಿ ಉಳಿಯುವಂತ್ತದ್ದು, ಪಾತ್ರಕ್ಕೆ ತಕ್ಕ ತೂಕ, ಪಾತ್ರದ ಸಮಯ ಪ್ರಜ್ಞೆ, ಓದುಗರು ಅಪರಾಧಿಯನ್ನು ಒಮ್ಮೊಮ್ಮೆ ಕಂಡು ಹಿಡಿಯುವಷ್ಟು ಸುಲಭವಾಗಿ ಬರೆದ್ದಿದ್ದರು, ಒಮ್ಮೊಮ್ಮೆ ಓದುಗರಿಗೆ ನಿರಾಸೆ  ಹುಟ್ಟಿಸಿ ಕಥೆಯನ್ನು ರೋಚಕವಾಗಿ ಕಟ್ಟಿದ್ದಾರೆ ಲೇಖಕರು.

ಅಪರಾಧಿ ನಾನಲ್ಲ ಹಾಗೂ ಚಕ್ರಬಿಂಬ ಕಥೆಗಳು ರೋಚಕವಾಗಿಯೂ ಹಾಗೂ ಬುದ್ದಿವಂತಿಕೆಯ ಕಥೆಯು ಹೌದು. ಒಬ್ಬ ಲಾಯರ್ ಗೆ ಇರಬೇಕಾದ ಚಾಣಕ್ಷತೆ, ಒಬ್ಬ ಪೊಲೀಸ್ ಅಧಿಕಾರಿಯು ಸಣ್ಣ ಲೋಪವನ್ನು ಹಿಡಿದು ಇಡೀ ಕೇಸಿಗೆ ತಿರುವು ಕೊಡುವುದು, ಸಮಾಜದಲ್ಲಿ ಒಬ್ಬ ವ್ಯಕ್ತಿಯು ತನ್ನ ಸ್ವಾರ್ಥಕ್ಕೋಸ್ಕರ ಅಪರಾಧಿಯನ್ನು ನಿರಪರಾಧಿಯನ್ನಾಗಿಸುವುದು, ಸತ್ಯ ತಿಳಿದಿದ್ದರೂ ತಕ್ಕ ಸಾಕ್ಷಿ ಸಿಗದೆ ಅಪರಾಧಿಯನ್ನು ಕೈಚೆಲ್ಲುವುದು, ಇದೆಲ್ಲವು ಇಂದಿನ ಸಮಾಜದಲ್ಲಿ ನಡೆಯುವ ಸತ್ಯ ಘಟನೆಯೇ ಹೊರತು ಸುಳ್ಳಲ್ಲ.

    ಇನ್ನು ಚಕ್ರಬಿಂಬ ಕಥೆಯು ನಮ್ಮೆಲ್ಲರನ್ನೂ ರೋಲರ್ ಕೋಸ್ಟರ್ನಲ್ಲಿ ಕೂರಿಸಿದಂತಿದೆ, ಒಂದು ಸಿಹಿ ತಿಂಡಿಯ ಬಳಿ ನೂರಾರು ಜನರಿದ್ದರು ಅದನ್ನು ತಿಂದವರು ಯಾರು ಎಂದು ಹೇಳುವುದು ಕಷ್ಟ. ಒಬ್ಬನಿಗೆ ಸಿಹಿ ಇಷ್ಟವಿದ್ದರೂ ಶುಗರ್ ಸಮಸ್ಯೆ, ಒಬ್ಬನಿಗೆ ಸಿಹಿ ಕೈಗೆಟಾಕುವಂತಿದ್ದರು ನೂರಾರು ಜನ ಕಣ್ಣು ಅವನ ಮೇಲಿರುವುದ ತಿಳಿದು ಸುಮ್ಮನಾಗುವುದು, ಆದರೂ ಆ ಸಿಹಿಯನ್ನು ಅದೆಲ್ಲೋ ಕುಳಿತವ ತಿಂದು ಕೈ ತೊಳೆದದ್ದು ಯಾರ ಕಣ್ಣಿಗೂ ಬೀಳಲಿಲ್ಲ, ಆ ಸಿಹಿ ಅಲ್ಲಿ ಹೋದ್ದದ್ದಾದರು ಹೇಗೆ?ತಿಂದವನು ಯಾರು, ಸವಿದ ನಾಲಿಗೆಗೆಷ್ಟು ಗೊತ್ತು ಆ ಸತ್ಯ.ಹೀಗೆ ಒಂದು ಕೊಲೆಯ ಆಳವು ಎಷ್ಟು ಜನರ ಮೇಲಿನ ಅನುಮಾನಕ್ಕೆ ಅನುವು ಮಾಡಿಕೊಟ್ಟಿತ್ತು, ಸಿಹಿ ತಿಂದವನ ಆಕಾಂಕ್ಷೆ ಏನಾಗಿತ್ತು ಇದೆಲ್ಲವನ್ನು ನೀವು ಚಕ್ರಬಿಂಬ ಕಥೆಯಲ್ಲಿ ಓದಲೇಬೇಕು.

    ಮಾನವೀಯತೆ ಹಾಗೂ ಕರ್ತವ್ಯ ಎರಡರಲ್ಲಿ ಒಂದನ್ನು ಆಯ್ಕೆ ಮಾಡಬೇಕೆಂದರೆ ನಿಮ್ಮ ಆಯ್ಕೆ? ಇದು ಎಲ್ಲರ ಜೀವನವ ಬಿಂಬಿಸುವ ಕಥೆ “ಛದ್ಮ”. ಸನ್ನಿವೇಶಗಳು ಕೈ ಮೀರಿದಾಗ ಮಾನ, ಪ್ರಾಣ ಕಾಪಾಡಲು ಒಂದು ಹೆಣ್ಣು ತೆಗೆದುಕೊಳ್ಳುವ ನಿರ್ಧಾರ ಸರಿಯೋ? ತಪ್ಪೋ? ಸರಿಯಾದರೆ ಶಿಕ್ಷೆ ಕಾನೂನಿನ ಪ್ರಕಾರ ಕೊಡುವ ಬಹುಮಾನ, ತಪ್ಪಾದರೆ ಮಾನ ಹೋಗಿ ಜನ ಬಾಯಿಗೆ ಸಿಗುವ ಆಹಾರ. ಹಾಗಾದರೆ ಒಂದು ಹೆಣ್ಣು ನಿರ್ಧಾರ ತೆಗೆದುಕೊಳ್ಳುವುದಾದರೂ ಹೇಗೆ? ತಮ್ಮ ಮಕ್ಕಳನ್ನು ತಂದೆ ತಾಯಿ ಕಾಪಾಡುವುದು ಹೇಗೆ? ಮಾನವೀಯತೆ ಹಾಗೂ ಕಾನೂನು ಎರಡರಲ್ಲಿ ಒಬ್ಬ ಪೊಲೀಸ್ ಅಧಿಕಾರಿಯು ಸರಿಯಾದ ಆಯ್ಕೆ ಮಾಡುವುದಾದರೂ ಹೇಗೆ? ಆಯ್ಕೆಗಳ ಮಧ್ಯೇ ಸಿಲುಕಿದಾಗ ಆಗುವ ಸಂಕಷ್ಟ ಅನುಭವಿಸಿದವರಿಗಷ್ಟೇ ಗೊತ್ತು. ಹಾಗಾಗಿ ನೀವು ಛದ್ಮ ಎಂಬ ಕಥೆಯನ್ನು ಓದಲೇಬೇಕು.

     ಹೀಗೆನಾದರೂ ನೀವು ಒಂದೊಳ್ಳೆ ಪತ್ತೇದಾರಿ ಕಥೆಗಳನ್ನು ಹುಡುಕುತ್ತಿದ್ದರೆ ನಿಮಗೆ ಪಾತಾಳ ಗರಡಿ ಮೊದಲ ಆಯ್ಕೆ ಎಂದು ಹೇಳುತ್ತೇನೆ. ಲೇಖಕರಾದ ವಾಸುದೇವ ಮೂರ್ತಿಯವರು ಹೀಗೆ ತಮ್ಮ ಬರವಣಿಗೆಯನ್ನು ಮುಂದುವರೆಸಿ ಓದುಗರನ್ನು ಮತ್ತಷ್ಟು ರೋಚಕಗೊಳಿಸಬೇಕಾಗಿ ನನ್ನದೊಂದು ವಿನಂತಿ.

ಪಾತಾಳಗರಡಿ ಪುಸ್ತಕ ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ👇🏼

https://harivubooks.com/kn/products/pathala-garadi-kannada-book

ಥ್ರಿಲ್ಲರ್ ಕತೆಗಳ ಬಗ್ಗೆ ವಾಸುದೇವ್ ಮೂರ್ತಿ ಹಾಗು ಕೌಶಿಕ್‌ ಕೂಡುರಸ್ತೆ ಅವರ ಜೊತೆ ಮಾತುಕತೆಯನ್ನು ನೋಡಲು ಭೇಟಿಕೊಡಿ - https://youtu.be/uhClbIvxoMY

ಇಂತದ್ದೇ ಹಲವಾರು ಪುಸ್ತಕಗಳನ್ನು ಕೊಳ್ಳಬೇಕಿದ್ದಲ್ಲಿ ಭೇಟಿಕೊಡಿ - www.harivubooks.com 

Back to blog