‘ಬಾನಂಚಿನ ಆಚೆ’ ಪುಸ್ತಕದ ಬಗ್ಗೆ ಪುಸ್ತಕ ಪ್ರೇಮಿಯ ನುಡಿ!

‘ಬಾನಂಚಿನ ಆಚೆ’ ಪುಸ್ತಕದ ಬಗ್ಗೆ ಪುಸ್ತಕ ಪ್ರೇಮಿಯ ನುಡಿ!

ಶ್ರೀ ಸತೀಶ ಉ. ನಡಗಡ್ಡಿ

ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನಮ್ಮದೇ ಆಫೀಸ್ ನ postman "ಬಾನಂಚಿನ ಆಚೆ"  ಪುಸ್ತಕವನ್ನು ಕೈಗಿತ್ತ.  ಕೈ ತಲುಪಿದ ಕೊಡಲೇ ಪುಸ್ತಕದ ಹಿಂಬದಿ ಪುಟದಲ್ಲಿ ಡಾ. ಶಾಂತಲ ಅವರ ಬಗೆಗಿನ 'ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.' ಎಂಬುದನ್ನು ಓದಿ "ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ"ಯಾದವರು ಬಾನಂಚಿನ ವಿಸ್ಮಯಗಳ ಕುರಿತು ಅದೆಷ್ಟು ಮನಮುಟ್ಟುವಂತೆ ಬರೆದಾರು  ಎಂದು ಮನದಲ್ಲಿ ಅಂದುಕೊಂಡು ಪುಸ್ತಕವನ್ನು ಪಕ್ಕಕ್ಕಿಟ್ಟು ಕೆಲಸದಲ್ಲಿ ನಿರತನಾದೆ.

ಸಾಯಂಕಾಲದ 5 ಗಂಟೆಗೆ ಕೆಲಸ ಸ್ವಲ್ಪ ಕಡಿಮೆ ಆಗಿತ್ತು. "ನೋಡೋಣ" ಎಂದು ಪುಸ್ತಕ ಬಿಡಿಸಿದೆ "ಮನದಲ್ಲಿ ಅರಿವಿನ ಕಿಡಿ ಹೊತ್ತಿ ಉರಿಯುವಾಗ ಸಾವಿನ ಅಂಜಿಕೆ ಇಲ್ಲವಾಗುತ್ತದೆ" - ಅಥರ್ವ ವೇದ ಪುಟ ಕಣ್ಣಿಗೆ ಬಿತ್ತು.

ಪೆಟ್ರೋಲಿಗೆ ಬೆಂಕಿ ಸ್ಪರ್ಶಿಸಿದರೆ ಹೇಗೆ ಕ್ಷಣಾರ್ಧದಲ್ಲಿ ಸುಟ್ಟು ಬಿಡುತ್ತದೆಯೋ ಹಾಗೆ ಶುಕ್ರವಾರದ ರಾತ್ರಿಯೇ ಪುಸ್ತಕ ಮುಗಿಯಿತು.

ಬೆಳಿಗ್ಗೆ ಎದ್ದು ಹಲ್ಲುಜ್ಜಲು ಸಿಂಕ್ ಮುಂದೆ ನಿಂತೆ, ಮೊನ್ನೆ ಹೊಲದಲ್ಲಿ ವಿಶೇಷ ಕಲ್ಲೊಂದು ಸಿಕ್ಕಿತ್ತು, ಅದನ್ನು ತಂದು ನೀರಲ್ಲಿ ನೆನೆ ಇಟ್ಟಿದ್ದು ಕಣ್ಣಿಗೆ ಬಿತ್ತು ; ಕಲ್-ಸಂಜೀವಮ್ಮನ ಕತೆ ಸರ್ರ್ ನೆ ತಲೆಯಲ್ಲಿ ಓಡಿತು!!!

ಹಲ್ಲುಜ್ಜುತ್ತಲೇ, ಹೆಂಡತಿಯ ಹೆರಿಗೆಯ ದಿನ ನೆನಪಾಗಿ 05.04.2150 ರಂದು "ಹೆರಿಗೆ" ಪದ್ಧತಿ ಹೇಗೆಲ್ಲ ಬದಲಾಗಬಹುದು ಎಂದು ಹುಬ್ಬೇರಿತು. ಮುಖ ತೊಳೆಯಲು ನಡು ಬಗ್ಗಿಸಲಾಗದೆ ಸೊಂಟದ ನೋವಿನಿಂದ ಬಳಲುತ್ತಿರುವ ನಾನು ಸ್ಪೈನಲ್ ಆಪರೇಶನ್ ಸಮಯದಲ್ಲಿ ಬೆನ್ನುಹುರಿ ನರಗಳಲ್ಲಿ ಮೆದುಳಿಗೆ 'ಚಿಪ್' ಒಂದನ್ನು ಅಳವಡಿಸಿ ನಾನೂ ಸೈಬರ್ಗ್ ಸತೀಶ ಆದಂತೆ ಬಾಯಿ ಮುಕ್ಕಳಿಸುವಷ್ಟರಲ್ಲಿ ನಡೆದುಹೋಗಿತ್ತು.

ಇಷ್ಟೆಲ್ಲ ಕನಸು ಕಾಣುತ್ತಲೇ "quick ಆಗಿರಬೇಕು, quick ಆಗಿರಬೇಕು..." ಎಂದು ಆಫೀಸ್‌ನ ಸಾಹೇಬ ನನ್ನನ್ನು ಒಂದು ರೀತಿಯಲ್ಲಿ ಯಂತ್ರದಂತೆ ಮಾಡಿದ್ದು ಮನದಲ್ಲಿ ಸುಳಿಯದೇ ಇರಲಿಲ್ಲ !

ಮನುಷ್ಯ ಹೆಚ್ಚು ದಿನ ಬದುಕಲು ಅವಕಾಶ ಸಿಕ್ಕರೆ ಏನೆಲ್ಲ ಯೋಚ(ಜ)ನೆ ಮಾಡುವನಲ್ಲಾ..!?! ಕೊನೆಗೆ ಅಮೃತವೇ ವಿಷವಾಗಿ ಪರಿಣಮಿಸುತ್ತದೆ.

ಲೆಕ್ಕ ಪಕ್ಕಾ ಇದೆ ಎನ್ನುವಾಗಲೇ ಪಕ್ಕದಲ್ಲಿ ಯಾರೋ ಬಂದಂತೆ - ಅವರು ಬಂದು ಬಿಟ್ಟರು ! ನಮ್ಮೊಳಗಿದ್ದು ನಮ್ಮಂತಲ್ಲದ ಮಾಯೆ, ನಮ್ಮನ್ನೇ ಮಾಯೆಗೆ ತಳ್ಳುವುದು ಅತಿಶಯೋಕ್ತಿಯೇನಲ್ಲ. ಯಾಕೆಂದರೆ ಸೃಷ್ಟಿರುವ ಮನುಷ್ಯ ಅದಕ್ಕೆ ಬುದ್ಧಿಮತ್ತೆ ಅಭಿವೃದ್ಧಿ ಪಡಿಸುವಾಗ ಸ್ವಾರ್ಥಕ್ಕಾಗಿ ಮಾಡಿದರೂ ತನ್ನನ್ನು ತಾನು ಮುಕ್ತಿಗೊಳಿಸಿಕೊಂಡಿದ್ದು "ನೂರ್"ಳ ಪುಣ್ಯವೇ ಸರಿ.

ಅರ್ಕಾಲಜಿ ಬೆಳೆದ ಯುಗದಲ್ಲಿ ಅರೆರೆ ಆಯಸ್ಸನ್ನು ಅಗಲಿಸಿಕೊಳ್ಳುತ್ತ ಹೋಗುವ ನಾನು ಯಾವುದನ್ನೂ ಹೇಗೆ ಬೇಕಾದರೂ ಸಮಯಕ್ಕೆ ಮತ್ತು ಅವಶ್ಯಕತೆಗೆ ತಕ್ಕಂತೆ ಅಚ್ಚುಕಟ್ಟಾಗಿ ಬಳಸಿಕೊಳ್ಳುವ ತೀಕ್ಷ್ಣತೆ ಪಡೆದು ಬೆಳೆದವನಾಗಿದ್ದೆ..

ತೆಳ್ಳಗಾಗುವ 'ಮಾಯಾ ಮದ್ದು' ಮುದ್ದಾಗಿ ಕಂಡು ಮನುಷ್ಯನ ಹಣ, ಪ್ರಸಿದ್ಧಿ, ಹೆಸರು ಗಳಿಸುವ, ಪ್ರತಿಷ್ಠೆಗಾಗಿ ಬದುಕಲು ಹೋಗಿ ಮಣ್ಣಾದ ಅಮಾಯಕರನ್ನು ನೋಡಿ 'ಕೋಮಾ'ಗೆ ಹೋಗಿ ನನ್ನ ಅಸ್ತಿತ್ವಕ್ಕೂ ಮುನ್ನ ನಾನು ಎಲ್ಲೆಲ್ಲಿ ಏನೇನು ಕಂಡೆ, ಉಂಡೆ ಎಲ್ಲವೂ 'ಸ್ಮೃತಿ ಪಟಲ'ದಲ್ಲಿ ಭಿತ್ತರವಾಯಿತು.

ಮರಳುಗಾಡಿನಲ್ಲಿ ನೀರಿಗಾಗಿ ಅಲೆಯುವಂತೆ ಇತ್ತೀಚಿನ ಕೆಲ ದಿನಗಳಿಂದ ಇಂತಹ ಪುಸ್ತಕಕ್ಕಾಗಿ ಅಲೆಯುತ್ತಿದ್ದೆ. ತಂದಿದ್ದ ಬೇರೆಲ್ಲ ಪುಸ್ತಕಗಳನ್ನು ಓದುವ ಮನಸ್ಸಿಲ್ಲದೆ ಕಪಾಟಿನಲ್ಲಿ ಹಾಗೆ ಎಸೆದಿದ್ದೆ. ಈ ಬಾನಂಚಿನ ಆಚೆ ಎಂಬ ಪುಸ್ತಕ ನನ್ನನ್ನು ಅಮ್ಮನಿಗೆ ಗೋಗರೆವ ಕರುವನ್ನು ತಾಯಿ ಸಂತೈಸಿದಂತೆ ಎನಿಸಿತು.

ಡಾ. ಶಾಂತಲ ಅವರಿಂದ ಈ ರೀತಿಯ ನೂರಾರು ಪುಸ್ತಕಗಳು ಬಂದು ಜನರಲ್ಲಿ ಮೂಢನಂಬಿಕೆ, ಕಂದಾಚಾರ, ಅಂಧ ಆನುಕರಣೆಗಳು ತೊಡೆದು ಎಲ್ಲವನ್ನೂ ವೈಜ್ಞಾನಿಕ ದೃಷ್ಟಿಯಿಂದ ನೋಡುವ ಪ್ರವೃತ್ತಿ ಹೆಚ್ಚಿಗೆ ಬೆಳೆಯಲಿ ಎಂದು ಆಶಿಸುತ್ತೇನೆ.

ಧನ್ಯವಾದಗಳು.

ಬಾನಂಚಿನ ಆಚೆ ಪುಸ್ತಕ ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ👇🏼

https://harivubooks.com/kn/products/baanachina-aache-kannada-books

ಬಾನಂಚಿನ ಆಚೆ ಪುಸ್ತಕದ ಲೇಖಕಿಯಾದ ಡಾ.ಶಾಂತಲ ಅವರ ಸಂದರ್ಶನ - https://youtu.be/syknvMCqZvs

ಇಂತದ್ದೇ ಹಲವಾರು ಪುಸ್ತಕಗಳನ್ನು ಕೊಳ್ಳಬೇಕಿದ್ದಲ್ಲಿ ಭೇಟಿಕೊಡಿ - www.harivubooks.com 

Back to blog