ಯು. ಆರ್. ಅನಂತಮೂರ್ತಿ
Publisher:
Couldn't load pickup availability
‘ಸೂರ್ಯನ ಕುದುರೆ’ ಕಥೆಯಲ್ಲಿಯೂ ಒಂದು ಶೋಧ ಕಂಡು ಬರುತ್ತದೆ. ಈ ಕೃತಿಯಲ್ಲಿ ಅವರು ಹೇಳುವ ಮಾತುಗಳ ಬಗೆಗೆಯೆ ಅವರಲ್ಲಿ ಅನುಮಾನಗಳಿವೆ. ಅವರು ತಮ್ಮ ಆತ್ಮಕಥೆ ಸುರಗಿಯಲ್ಲಿ ಈ ಕಥೆ ಹುಟ್ಟಿಕೊಂಡ ಕ್ಷಣದ ಬಗೆಗೆ ದಾಕಲಿಸಿದ್ದಾರೆ. ಅವರು ಒಮ್ಮೆ ತಮ್ಮ ಮನೆಯಲ್ಲಿ ಮಾರ್ಕ್ಸ ನ ಕೃತಿಯೊಂದನ್ನು ಓದುತ್ತ ಕುಳಿತಿದ್ದಾಗ ಅವರ ಮಗಳು ಕೀಟವೊಂದನ್ನು ತೋರಿಸಿ ಅದು ಏನೆಂದು ಪ್ರಶ್ನಿಸುತ್ತಾಳೆ. ಅದಕ್ಕೆ ಅವರು ಅದು ಸೂರ್ಯನ ಕುದುರೆ ಎಂದು ಉತ್ತರಿಸುತ್ತಾರೆ. ಈ ಸಂಧರ್ಭದಲ್ಲಿ ಚಿಗುರೊಡೆದು ಬೆಳೆದ ಉತ್ತಮ ಕಥೆ ಇದು. ಕಾರ್ಲಮಾಕ್ರ್ಸ್ ಏಶಿಯಾ ಮತ್ತು ಭಾರತ ಕುರಿತು ಮಾತನಾಡುವಾಗ ಇಲ್ಲಿನ ಗ್ರಾಮೀಣ ಬದುಕನ್ನು ಒಟ್ಟರ್ಥದಲ್ಲಿ ಗ್ರಾಮ ಮೌಢ್ಯವೆಂದು ಕರೆದು ಬಿಡುತ್ತಾನೆ. ಫ್ಯೂಡಲಿಸಂ, ಕ್ಯಾಪಿಟ್ಯಾಲಿಸಂ ಮತ್ತು ಸೋಸಿಯಾಲಿಸಂಗಳು ಬಂದರೂ ಗ್ರಾಮಗಳು ಮೌಢ್ಯಗಳ ಕೂಪಗಳು ಯಾಕೆಂದರೆ ಇಲ್ಲಿ ಚಲನೆಯಿಲ್ಲ.ಮಾರ್ಕ್ಸನಿಗೆ ಹಳ್ಳಿ ಎನ್ನುವುದು ಬರಿ ಮೌಢ್ಯದ ಸಂಕೇತ ಜೊತೆಗೆ ಹಳ್ಳಿಗರು ಹಿಂದುಳಿದವರು ಎನ್ನುತ್ತಾನೆ. ಆತನ ಈ ಧೋರಣೆ ಅನಂತಮೂರ್ತಿ ಯವರಿಗೆ ಕಿರಿ ಕಿರಿ ಎನಿಸುತ್ತದೆ. ಹೀಗಾಗಿ ಅವರಿಗೆ ‘ಸೂರ್ಯನ ಕುದುರೆ’ ಒಂದು ಶ್ರೇಷ್ಟ ರೂಪಕವಾಗಿ ಕಂಡು ಬರುತ್ತದೆ. ಈ ಕಥೆಯಲ್ಲಿ ಒಂದು ಸಾಮಾನ್ಯ ಕೀಟ ಸೂರ್ಯನ ಕುದುರೆಯಾಗಿ ಮಾರ್ಪಟ್ಟಿದೆ. ಉನ್ನತ ಆಶಯಗಳ ನಮ್ಮ ಗ್ರಾಮ್ಯ ಬದುಕನ್ನು ಮತ್ತು ನಮ್ಮ ಗ್ರಾಮೀಣರು ಈ ಜೀವ ಜಾಲದೊಳಗಿನ ಸೂರ್ಯ ಮತ್ತು ಮಿಡತೆಗಳ ಸಂಬಂಧವನ್ನು ಸೂಚಿಸುವಾಗ ಅದನ್ನು ಬರಿ ಮೌಢ್ಯವೆಂದು ಹೇಗೆ ಕರೆಯಲು ಸಾಧ್ಯ ಎಂಬ ಯೋಚನೆ ಅವರದಾಗುತ್ತದೆ. ಅವರು ತಮ್ಮ ಗ್ರಾಮ್ಯ ಬದುಕಿನಲ್ಲಿ ಕಂಡ ವ್ಯಕ್ತಿಯನ್ನು ಹಡೆ ವೆಂಕಟ ಎಂಬ ಪಾತ್ರದ ಮೂಲಕ ಸೃಷ್ಟಿಸಿ ಎಲ್ಲ ಸ್ಥೂಲ ವಿವರಗಳನ್ನೂ ಮೀರಿ ಒಂದು ಕಥೆ ರೂಪಗೊಳ್ಳುತ್ತ ಹೋಗುತ್ತದೆ.
