ಎಚ್. ಲೋಕೇಶ್ ಮಸವನಘಟ್ಟ
Publisher:
Couldn't load pickup availability
ಭೂಗೋಳದಲ್ಲಿ ಇಡೀ ಜಗತ್ತಿನ ಸ್ವರೂಪ ಸಂಕ್ಷಿಪ್ತವಾಗಿ ಕಾಣಿಸುವ ಹಾಗೆ ಈ ಕೃತಿ ಕನ್ನಡ ಭಾಷೆ, ಸಾಹಿತ್ಯ, ಸ್ವರೂಪ, ಶಾಸ್ತ್ರಗಳೆಲ್ಲದರ ಸಂಕ್ಷಿಪ್ತ ಮಾಹಿತಿಯನ್ನು ಹಿಡಿದಿಟ್ಟುಕೊಂಡಿರುವ ಮಾಹಿತಿ ಕೋಶವಾಗಿದೆ. ಕನ್ನಡದ ಆನೆಯನ್ನು ಕನ್ನಡಿಯಲ್ಲಿ ತೋರಿಸುತ್ತದೆ. ವ್ಯಾಕರಣದಿಂದ ತೊಡಗಿಕೊಂಡು ಅಲಂಕಾರ, ಛಂದಸ್ಸು, ಸಾಹಿತ್ಯಚರಿತ್ರೆ, ಕಾವ್ಯಮೀಮಾಂಸೆ, ವಚನ, ಕೀರ್ತನೆಗಳನ್ನೆಲ್ಲ ಹಾದು ಕವಿ ಕಾವ್ಯ ಪರಿಚಯ, ಕಾವ್ಯನಾಮ, ಬಿರುದುಗಳು ಹೀಗೆಲ್ಲ ವ್ಯಾಪಿಸಿ, ಅಪಾರ ಮಾಹಿತಿಯ ಪಟ್ಟಿಕೆಗಳನ್ನೆಲ್ಲ (ಟೇಬಲ್ಲುಗಳು) ಒಳಗೊಂಡು ಎಲ್ಲರಿಗೂ ಅತ್ಯಂತ ಉಪಯುಕ್ತ 'ಕೈಪಿಡಿ'ಆಗಿದೆ. ಇಲ್ಲಿ ಓದುಗರಿಗೆ ಕನ್ನಡದ ವಿಶ್ವರೂಪ ದರ್ಶನವೇ ಆಗುತ್ತದೆ.
ನನ್ನ ವಿದ್ಯಾರ್ಥಿಮಿತ್ರ ಲೋಕೇಶಮಸವನಘಟ್ಟ ಅವರು ಇದನ್ನು ಸಿದ್ದಪಡಿಸಲು ಅಪಾರ ಶ್ರಮವಹಿಸಿರುವುದು ಎದ್ದುಕಾಣುತ್ತದೆ. ಇದೊಂದು ಕೃತಿ ವಿದ್ಯಾರ್ಥಿಯ ಕೈಯಲ್ಲಿದ್ದರೆ ಗ್ರಂಥಾಲಯದ ಹತ್ತಾರು ಪರಾಮರ್ಶನ ಗ್ರಂಥಗಳ ಮೊರೆ ಹೋಗುವುದು ತಪ್ಪುತ್ತದೆ. ಅವುಗಳ ಸಾರ 'ಅಂಗೈಯ ನೆಲ್ಲಿಕಾಯಿ' ಆಗುತ್ತದೆ. ಇಂಥ ಹಲವು ಕೃತಿಗಳಲ್ಲಿ ಇಲ್ಲದ ಕೆಲವು ವಿಶೇಷ ಭಾಗಗಳು, ವಿವರಗಳು, ಮುಖ್ಯಾಂಶಗಳು, ಮರು ನೆನಪುಗಳು, ಹಲವು ಬಗೆಯ ಕ್ರೋಡೀಕರಣಗಳು ಇದರಲ್ಲಿದ್ದು ಮತ್ತೆ ಮತ್ತೆ ಓದುತ್ತಿದ್ದರೆ ಮನಸ್ಸಿನಲ್ಲಿ ಅನುಗಾಲ ನಿಂತುಬಿಡುತ್ತದೆ. ಈ ನಿಟ್ಟಿನಲ್ಲಿ ಇದೊಂದು ಮಾರ್ಗದರ್ಶಕ ಕೃತಿ.
ಕನ್ನಡದ ಐಚ್ಛಿಕ ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗೆ ಹೀಗೆ ಕನ್ನಡದ ಎಲ್ಲ ಅಭಿಮಾನಿಗಳಿಗೆ ಭಾಷಾ ಸಾಹಿತ್ಯಗಳ ಇಣುಕು ನೋಟ ನೀಡುವ ಇಲ್ಲಿನ ಪರಿ ಮೆಚ್ಚುಗೆಗೆ ಅರ್ಹವಾದುದು.
ಕೃತಿಕಾರ ಲೋಕೇಶ್ ರವರು ನನ್ನ ವಿದ್ಯಾರ್ಥಿ ಎನ್ನುವುದು ನನಗೆ ಹೆಮ್ಮೆಯ ಸಂಗತಿ. ಈ ಕೃತಿ ಎಲ್ಲ ಕನ್ನಡಾರ್ಥಿಗಳ ಕೈ ಸೇರಲಿ, ಸಾಹಸಿ ಲೋಕೇಶ್ರವರು ಅಪಾರ ಯಶಸ್ಸಿಗೆ ಪಾತ್ರರಾಗಲಿ ಎನ್ನುವುದು ನನ್ನ ಆಶಯ.
-ಟಿ.ಎಸ್. ನಾಗರಾಜ ಶೆಟ್ಟಿ.
ರಾಷ್ಟ್ರೀಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು.
ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯರು.
