{"product_id":"hoysala-vishnuvardhana-historical-novel-prakash-hemavati-kannada-book","title":"ಹೊಯ್ಸಳ ವಿಷ್ಣುವರ್ಧನ","description":"\u003cp\u003eಕರ್ನಾಟಕದ ಚರಿತ್ರೆಯಲ್ಲಿ ಹೊಯ್ಸಳರಿಗೆ ಒಂದು ವಿಶಿಷ್ಟವಾದ ಸ್ಥಾನವಿದೆ. ಇವರು ನಿರ್ಮಿಸಿದ ಅಸಂಖ್ಯಾತ ಶಿಲ್ಪ ವೈಭವಗಳಿಂದ ವಿಜೃಂಭಿಸುತ್ತಿರುವ ದೇವಾಲಯಗಳು ಇಂದಿಗೂ ಸಹಸ್ರಾರು ಜನರನ್ನು ಆಕರ್ಷಿಸುತ್ತಿರುವುದು ಇವರ ಜನಪ್ರಿಯತೆಗೆ ಮುಖ್ಯ ಕಾರಣವಾಗಿದೆ. ಆದರೆ ಈ ಜನಪ್ರಿಯತೆಯಲ್ಲಿ ಇವರ ಇನ್ನೊಂದು ಬಹುಮುಖ್ಯವಾದ ಕೊಡುಗೆ ಅಥವಾ ಕನ್ನಡನಾಡಿಗೆ ಇವರು ಸಲ್ಲಿಸಿರುವ ಇನ್ನೊಂದು ಅಮೋಘ ಸೇವೆ ಮರೆಯಾಗಿದೆ. ಹೊಯ್ಸಳರು ಅಧಿಕಾರಕ್ಕೆ ಬಂದದ್ದು ಕನ್ನಡ ನಾಡಿನ ಒಂದು ಸಂದಿಗ್ಧ ಕಾಲದಲ್ಲಿ ಎಂದು ಹೇಳಬಹುದು. ಸುಮಾರು ಆರೇಳು ಶತಮಾನಗಳಷ್ಟು ಕಾಲ ಮೂಡಣ ಹಾಗೂ ತೆಂಕಣ ದಿಕ್ಕುಗಳಿಂದ ಕನ್ನಡನಾಡಿನ ಮೇಲೆ ಸತತವಾಗಿ ದಾಳಿ ಮಾಡುತ್ತಿದ್ದ ತಮಿಳು ರಾಜರನ್ನು ಯಶಸ್ವಿಯಾಗಿ ತಡೆಗಟ್ಟಿದ್ದ ತಲಕಾಡಿನ ಗಂಗರು ಸುಮಾರು ಹತ್ತನೇ ಶತಮಾನದಲ್ಲಿ ದುರ್ಬಲರಾಗುತ್ತಿದ್ದರು. ಆಗ ಚೋಳರು ತಲಕಾಡನ್ನು ವಶಪಡಿಸಿಕೊಂಡು ಕನ್ನಡನಾಡಿನ ಇತರ ಪ್ರದೇಶಗಳನ್ನು ಅತಿಕ್ರಮಿಸಲು ಯೋಚಿಸುತ್ತಿದ್ದರು. ಅಂತಹ ಸಮಯದಲ್ಲಿ ಅಧಿಕಾರಕ್ಕೆ ಬಂದ ಹೊಯ್ಸಳರು, ಚೋಳರು ಕನ್ನಡನಾಡಿನ ಇನ್ನೂ ಒಳಪ್ರದೇಶಕ್ಕೆ ಬರದಂತೆ ತಡೆದರು. ಆ ಸಮಯದಲ್ಲಿ ಅತ್ಯಂತ ಪ್ರಬಲರಾಗಿದ್ದ ತಮಿಳಿನ ಚೋಳರನ್ನು ಎದುರು ಹಾಕಿಕೊಳ್ಳುವ ಪ್ರಮೇಯ ಹೊಯ್ಸಳರಿಗಿರಲಿಲ್ಲ. ಅವರ ಸರ್ವಾಧಿಕಾರವನ್ನು ಒಪ್ಪಿಕೊಂಡು, ಅವರಿಗೆ ಸಾಮಂತರಾಗಿ ನಿಶ್ಚಿಂತೆಯಿಂದ ತಮ್ಮ ರಾಜ್ಯವನ್ನು ಆಳುತ್ತಾ ಇರಬಹುದಾಗಿತ್ತು. ಆದರೆ ಹೊಯ್ಸಳರ ಕನ್ನಡಾಭಿಮಾನ ಹಾಗೆ ಆಗಗೊಡಲಿಲ್ಲ. ಅಳಿದುಳಿದಿದ್ದ ಗಂಗರನ್ನು ಮತ್ತು ಕದಂಬರನ್ನು ಒಂದುಗೂಡಿಸಿಕೊಂಡು ಚೋಳರ ವಿರುದ್ಧ ಹೋರಾಡಿ, ಅಂತಿಮವಾಗಿ ಚೋಳರನ್ನು ಕನ್ನಡನಾಡಿನಿಂದ ಹೊರದೂಡಿದರು. ಸುಮಾರು ಮೂರು ಶತಮಾನಗಳಷ್ಟು ಕಾಲ ಕನ್ನಡನಾಡಿಗೆ ಸುರಕ್ಷತೆ ಹಾಗೂ ಸುಭದ್ರ ಆಡಳಿತ ಒದಗಿಸಿ ಮುಂದೆ ವಿಜಯನಗರ ಸಾಮ್ರಾಜ್ಯಕ್ಕೆ ಸ್ಪೂರ್ತಿಯಾದರು. ಹೊಯ್ಸಳರ ಈ ಕನ್ನಡನಾಡಿನ ಸೇವೆ ಸಮಸ್ತ ಕನ್ನಡಿಗರು ಹೆಮ್ಮೆಯಿಂದ ನೆನಪಿಸಿಕೊಳ್ಳುವಂತಹದು.\u003c\/p\u003e","brand":"Prakash Hemavathi","offers":[{"title":"Default Title","offer_id":47700764492035,"sku":"HB00006042","price":250.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/HoysalaVishnuvardhanafp.jpg?v=1769965990","url":"https:\/\/harivubooks.com\/products\/hoysala-vishnuvardhana-historical-novel-prakash-hemavati-kannada-book","provider":"Harivu Books","version":"1.0","type":"link"}