Girimane Shyamarao
ಗಿರಿಮನೆ ಶ್ಯಾಮರಾವ್ ಅವರ ಮಲೆನಾಡಿನ ರೋಚಕ ಕತೆಗಳ 3 ಪುಸ್ತಕಗಳು
ಗಿರಿಮನೆ ಶ್ಯಾಮರಾವ್ ಅವರ ಮಲೆನಾಡಿನ ರೋಚಕ ಕತೆಗಳ 3 ಪುಸ್ತಕಗಳು
Publisher -
- Free Shipping
- Cash on Delivery (COD) Available
Pages -
Type -
Couldn't load pickup availability
- ಮಲೆನಾಡಿನ ರೋಚಕ ಕತೆಗಳು
ಇದು ಗಿರಿಮನೆ ಶ್ಯಾಮರಾವ್ ಅವರ ಮಲೆನಾಡಿನ ರೋಚಕ ಕತೆಗಳು ಸರಣಿಯ ಮೊದಲನೆಯ ಕಂತು. ಮಲೆನಾಡಿನ ಕುರಿತಾದ ವಿಷಯಗಳನ್ನು ತಿಳಿಯಬಯಸುವವರು ಓದಲೇಬೇಕಾದ ಸರಣಿ ಇದು. ಈ ಸರಣಿಯ ಮೊದಲನೆಯ ಈ ಪುಸ್ತಕದಲ್ಲಿ ಮಲೆನಾಡಿನ ಕುರಿತಾದ ತಿಳಿಯದಂತಹ ಹಲವಾರು ವಿಚಾರಗಳನ್ನು ಮನಮುಟ್ಟುವಂತೆ ತಿಳಿಸಿದ್ದಾರೆ. ಮಲೆನಾಡಿನ ಸೊಬಗನ್ನು ಅಕ್ಷರ ರೂಪಕ್ಕಿಳಿಸಿ ಮಲೆನಾಡಿನ ಸೊಬಗನ್ನೇ ನೋಡಿ ಅನುಭವಿಸದ ನಮ್ಮಂತವರಿಗೆ ಓದುವ ಮುಖಾಂತರ ಅನುಭವಿಸುವ ವೇದಿಕೆ ಸಿದ್ಧಪಡಿಸಿದ್ದಾರೆಂದರೆ ಅತಿಶಯೋಕ್ತಿಯಲ್ಲ. ಮಲೆನಾಡಿನ ರೋಚಕಕತೆಗಳ ಸರಣಿಯಲ್ಲಿ ಹೆಚ್ಚಿನ ಪುಸ್ತಕಗಳು ಕಾದಂಬರಿಗಳಾಗಿದ್ದರೂ ಇದೊಂದು ಕಥನ ಸಾಹಿತ್ಯ. 14 ಕಥೆಗಳನ್ನೊಳಗೊಂಡ ಈ ಪುಸ್ತಕದಲ್ಲಿ ಹೆಜ್ಜೇನುಗಳ ದಾಳಿ, ಹಾವು – ಮುಂಗುಸಿಯ ವೈರ, ಕಳ್ಳ ಭಟ್ಟಿಯ ದುರಂತ, ಮೊಸಳೆಯ ಭಯ, ಮೀನು ಬ್ಯಾರಿಯ ಜಾಣತನ, ಚಿಂಟಿಯ ಪಾತ್ರದ ಚಿತ್ರಣ, ಕೃಷಿಕನ ಕಷ್ಟನಷ್ಟಗಳು, ಹಾದರದ ವ್ಯಥೆ, ಅಲ್ಲಿ ಬೆಳೆಯುವ ಬೆಳೆಗಳ ಕುರಿತಾಗಿ, ಅವುಗಳನ್ನು ವರುಷವಿಡೀ ಪೋಷಿಸುವ ಬಗೆ, ಮಂಜರಾಬಾದ್ ಕೋಟೆಯ ಕುರಿತಾಗಿ, ಮಳೆಗಾಲದಲ್ಲಿ ಹಳ್ಳಿಪ್ರದೇಶದಿಂದ ಪಟ್ಟಣಕ್ಕೆ ಹೋಗಲು ಪಡುವ ಕಷ್ಟ, ಒಂದು ವರುಷದಲ್ಲಿ ಗದ್ದೆ, ಕಾಫಿ ತೋಟ, ಏಲಕ್ಕಿ ತೋಟದಲ್ಲಿ ಮಾಡಲೇಬೇಕಾಗಿರುವ ಅಗತ್ಯದ ಕೆಲಸಗಳು, ಇತ್ಯಾದಿ ವಿಷಯಗಳನ್ನು ಕಥೆಯ ಮೂಲಕ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. ಚಿಂಟಿಯ ಕುರಿತಾದ ಕಥೆ ನನಗೆ ಬಹಳಷ್ಟು ಖುಷಿ ನೀಡಿದ ಕಥೆ. ಹಾಗೆಯೇ ಈ ಚಿಂಟಿಯ ಪಾತ್ರದ ಚಿತ್ರಣದ ಭಾಗ ಮಕ್ಕಳಸಾಹಿತ್ಯಕ್ಕೆ ಸ್ವೀಕೃತವಾಯಿತೆಂಬುವುದು ಸಂತೋಷದ ವಿಷಯ. ‘ಟಾಪ್ ಟೆನ್’ ನೊಳಗೆ ಮಾರಾಟವಾದ ಕೃತಿ ಇದು ಎನ್ನುವುದೂ ಹೆಮ್ಮೆಯ ವಿಚಾರ. ಮೊದಲ ಕಂತನ್ನು ಓದಿದಾಗಲೇ ಉಳಿದ ಕಂತುಗಳನ್ನು ಓದಬೇಕೆಂದೆನಿಸುತ್ತದೆ. ಗಿರಿಮನೆಯವರ ಪ್ರಸ್ತುತಿಗಳೇ ಹಾಗೆ, ವಿಚಾರಗಳು ಒಂದಕ್ಕೆ ಮಾತ್ರ ಸೀಮಿತವಾಗದೆ ಹಲವಷ್ಟಕ್ಕೆ ತೆರೆದುಕೊಳ್ಳುತ್ತವೆ.
2.ಅರಮನೆ ಗುಡ್ಡದ ಕರಾಳ ರಾತ್ರಿಗಳು
ಮಲೆನಾಡಿನ ರೋಚಕ ಕತೆಗಳು ಸರಣಿಯ 2 ನೇ ಕೃತಿ. ತೀವ್ರ ರೋಚಕತೆ ಹುಟ್ಟಿಸುವ, ರಾತ್ರಿ ಓದಿದರೆ ಅಷ್ಟೇ ಭೀತಿಯನ್ನೂ ಹುಟ್ಟಿಸುವ ಕಾದಂಬರಿ. ಹೇಗೆ ಪಶ್ಚಿಮಘಟ್ಟದ ಸೌಂದರ್ಯವನ್ನು ವರ್ಣಿಸಲಸಾಧ್ಯವೋ ಹಾಗೆಯೇ ಅಲ್ಲಿನ ಭೀಕರತೆಯೂ ಕೂಡ. ಪಶ್ಚಿಮಘಟ್ಟದಲ್ಲಿ ವರುಷದ ಸುಮಾರು 5 ತಿಂಗಳೂ ಸುರಿಯುವ ಮಳೆಯ ರೌದ್ರ ವೈಭವ, ಪ್ರಾಣಿ ಪಕ್ಷಿ, ಕತ್ತಲು – ಹಗಲು, ದಿಕ್ಕು – ದೆಸೆ ಎಲ್ಲದರ ಕುರಿತಾಗಿ ಸ್ಪಷ್ಟ ಚಿತ್ರಣ ನೀಡಲಾಗಿದೆ. ಟ್ರೆಕ್ಕಿಂಗ್ ಗೆ ಹೋದವರು ಕಾಡಿನಲ್ಲಿ ಹೇಗೆ ಕಳೆದು ಹೋದರು, ಅವರು ಅಲ್ಲಿ ಅನುಭವಿಸಿದ ನಾನಾರೀತಿಯ ಕಷ್ಟಗಳನ್ನು ವಿವರಿಸುವುದರೊಂದಿಗೆ ಕಾದಂಬರಿಯು ಪುಟದಿಂದ ಪುಟಕ್ಕೂ ಕುತೂಹಲವನ್ನು ಹೆಚ್ಚಿಸುತ್ತಾ ಹೋಗುತ್ತದೆ. ಇದೊಂದು ಕಾಲ್ಪನಿಕ ಕಥೆಯಾಗಿದ್ದರೂ ಪಶ್ಚಿಮಘಟ್ಟದ ನೈಜ ಚಿತ್ರಣವನ್ನೇ ನೀಡಲಾಗಿದೆ. ಕಬ್ಬಿನಾಲೆ ಅರಣ್ಯದಲ್ಲಿರುವ ಅರಮನೆಗುಡ್ಡ ಎಂಬ ಬೆಟ್ಟದ ಕುರಿತಾಗಿ, ಅದರ ಭೀಕರತೆಯ ಕುರಿತಾಗಿ ಬಹಳ ಸ್ವಾರಸ್ಯಕರವಾಗಿ ವಿಶ್ಲೇಷಿಸಿದ್ದಾರೆ. ಒಮ್ಮೆ ಕುಳಿತುಕೊಂಡರೆ 3 ಗಂಟೆಯೊಳಗೆ ಓದಿಮುಗಿಸಬಹುದಾದ ಶಕ್ತಿ ಈ ಕಾದಂಬರಿಗಿದೆ; ಅಂದರೆ ಪುಸ್ತಕವೇ ನಮ್ಮನ್ನು ಓದಿಸಿಕೊಂಡು ಹೋಗುತ್ತದೆ.
3.ಹೇಮಾವತಿ ತೀರದ ಕೌತುಕ ಕತೆಗಳು
ಇದು ಗಿರಿಮನೆ ಶ್ಯಾಮರಾವ್ ಅವರ ಮಲೆನಾಡಿನ ರೋಚಕ ಕತೆಗಳು ಸರಣಿಯ 9 ನೇ ಕೃತಿ. ಈ ಕೃತಿಯನ್ನು ಸರಣಿಯ ಪ್ರಥಮ ಕೃತಿಯ ಮುಂದಿನ ಭಾಗ ಎನ್ನಬಹುದು. ಸದ್ರಿ ಸರಣಿಯ 1, 8, 9 ನೇ ಕೃತಿಗಳಲ್ಲಿ ಮಲೆನಾಡಿನ ಹಲವು ದಶಕಗಳಾಚೆಗಿನ ಸ್ಥಿತಿಗತಿಗಳನ್ನು ಲೇಖಕರು ತಮ್ಮ ಅನುಭವದ ದೆಸೆಯಲ್ಲಿ ವಿವರಿಸಿದ್ದಾರೆ. ಲೇಖಕರ ಹುಟ್ಟೂರಿನ ಹಳ್ಳಿ ಮತ್ತು ಅದನ್ನು ಬಿಟ್ಟು ಪೇಟೆ ಸೇರಿದ ಸಂದರ್ಭಗಳಲ್ಲಿ ಹೇಮಾವತಿ ನದಿಯ ಸುತ್ತ ನಡೆದ ಘಟನೆಗಳು ಇಲ್ಲಿವೆ. ಪ್ರಕೃತಿಯೇ ನಿಗೂಢ. ಪ್ರಕೃತಿಯನ್ನು ಸರಿಯಾಗಿ ಗಮನಿಸಿದರೆ ನಮಗೆ ಅದೆಷ್ಟೋ ಪ್ರಶ್ನೆಗಳು ಮೂಡುವುದು ಸಹಜ. ಅಂತಹ ಕೆಲವು ಪ್ರಕೃತಿಯ ಕುರಿತಾದ ಚಿಂಟಿಯ ಪ್ರಶ್ನೆಗಳಿಗೆ ಲೇಖಕರ ವೈಜ್ಞಾನಿಕವಾದ ಉತ್ತರ ನಮಗೂ ತೃಪ್ತಿಕೊಡಬಲ್ಲುದು. ನಮಗೂ ಇದರಿಂದ ಪ್ರಕೃತಿಯ ಕುರಿತಾದ ಹಲವಾರು ಪ್ರಶ್ನೆಗಳಿಗೆ ಉತ್ತರ ದೊರಕಿ ಪರಿಸರದ ಕುರಿತಾಗಿ ನಮಗಿರುವ ಕುತೂಹಲ ಇಮ್ಮಡಿಯಾಗುತ್ತದೆ. ನದಿಗಳಿರುವಲ್ಲಿ ಮರಳು ಮಾಫಿಯಾ ನಡೆದೇ ನಡೆಯುತ್ತದೆ. ಹೇಮಾವತಿ ನದಿಯ ತೀರದಲ್ಲಿ ನಡೆದ ಮರಳು ಮಾಫಿಯಾ ಕುರಿತು, ಅಜ್ಞಾನ ಮತ್ತು ಮೂಢನಂಬಿಕೆಯಿಂದ ಆಗುವ ಅನಾಹುತಗಳು, ಕಾಫಿ ದರದ ಏರುಪೇರಿನಿಂದ ಆಗುವ ಬೆಳವಣಿಗೆಗಳು, ಇತ್ಯಾದಿ ವಿಷಯಗಳನ್ನು ಒಳಗೊಂಡಿರುವ ನೈಜಘಟನೆಗಳು ಇಲ್ಲಿವೆ. ವಿಶೇಷವಾಗಿ ಇಲ್ಲಿ ಪ್ರತಿ ಕಥೆಯ ಕೊನೆಯಲ್ಲಿ ಕಥೆಯಿಂದ ನಮಗೆ ದೊರಕುವ ನೀತಿಯನ್ನೂ ಬರೆದಿದ್ದಾರೆ. ಲೇಖಕರ ಜೀವನದಲ್ಲಿ ನಡೆದ ಘಟನೆಗಳನ್ನು ವಿವರಿಸುತ್ತಾ ಅದರಿಂದ ಲೋಕಮುಖಕ್ಕೆ ತಿಳಿಯಬಹುದಾದಂತಹ ನೀತಿಯನ್ನು ವಿಶ್ಲೇಷಿಸುವುದರಿಂದ ಬಹುಬೇಗನೆ ಓದುಗರಾದ ನಮ್ಮ ಮನಮುಟ್ಟುತ್ತದೆ.


