Dr. Dayananda E. Nooli
Publisher -
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಮರುಳಶಂಕರದೇವರು, ಕಲ್ಯಾಣದ ಶರಣರಲ್ಲಿಯೇ ಅಪರೂಪದ ಶರಣರು. ಮಹಾಮನೆಯ ಹತ್ತಿರದ ಪ್ರಸಾದ ಕುಂಡದಲ್ಲಿದ್ದು, ಶರಣರು ಉಂಡ ತಟ್ಟೆಗಳನ್ನು ಶುಚಿ ಮಾಡುತ್ತಿದ್ದರು. ಒಂದಗುಳ ಅನ್ನವೂ ಕೆಡಬಾರದೆನ್ನುವ ಕಾಯಕ ಪ್ರಜ್ಞೆ ಅವರದು. ಪ್ರಸಾದವೇ ಪ್ರಾಣ, ಪ್ರಸಾದವೇ ದೇಹ, ಪ್ರಸಾದವೇ ಜ್ಞಾನವಾಗಿ ಪರಿಣಮಿಸಿದ ಮಹಾಪ್ರಸಾದಿ ಇವರು. ಕಲ್ಯಾಣಕ್ಕೆ ಬಂದ ಅಲ್ಲಮಪ್ರಭುಗಳಿಗೆ ಮರುಳಶಂಕರರು ಚಿದ್ದೆಳಕಿನ ಬೆರಗಾಗಿ ಕಾಣಿಸುತ್ತಾರೆ. 'ಶಿವಮಯ ಆಕಾಶದ ಮರೆಯಲಿರ್ದ ಶಾಂತ ಸೂರ್ಯನನ್ನು ನೋಡಿದೆ' ಎಂದು ಪ್ರಭುಗಳು ಬಸವಣ್ಣನವರಿಗೆ ವಿವರಿಸುತ್ತಾರೆ. ಅದೊಂದು ಶೂನ್ಯಸಂಪಾದನೆಯ ಅದ್ಭುತವಾದ ದೃಶ್ಯ!
ಅದೇನು ಕಾರಣವೋ ಈ ಮಹಾಶರಣನ ಜೀವನ ವೃತ್ತಾಂತ, ಅನುಭಾವ ವ್ಯಕ್ತಿತ್ವವು ಆಧುನಿಕ ಸಾಹಿತ್ಯರೂಪಗಳಲ್ಲಿ ಅಷ್ಟಾಗಿ ಮರುಪ್ರವೇಶ ಪಡೆದಿಲ್ಲವೆನಿಸುತ್ತದೆ. ಇದೀಗ ಈ ಕೊರತೆಯನ್ನು ನೀಗಿಸುವ ಪ್ರಯತ್ನವಾಗಿ ಡಾ.ದಯಾನಂದ ನೂಲಿ ಅವರ 'ಮರುಳಶಂಕರದೇವರು- ಅನುಭಾವಯಾತ್ರೆ'ಯು ಮಹತ್ವಪೂರ್ಣವೆನಿಸುತ್ತದೆ.
ಭಕ್ತಿಯ ಬೆರಗು ಎನಿಸಿದ ಮರುಳಶಂಕರದೇವರು ಪ್ರಸ್ತುತ ಕಥನದ ಕೇಂದ್ರಸೂತ್ರವಾಗಿ ಬೆಳೆದಿರುವುದನ್ನು ನೋಡಬೇಕು. ಪೂರ್ವಾರ್ಧದ ಕಥನದಲ್ಲಿ ಮರುಳಶಂಕರದೇವರ ಚರಿತ್ರೆ, ದೇಶ ಕಾಲದ ಚಿತ್ರಣ, ದೂರದ ಅಫಘಾನಿಸ್ಥಾನದಿಂದ ಕಲ್ಯಾಣದವರೆಗಿನ ಪ್ರವಾಸ, ಭಕ್ತಿಪಂಥದ ವಿವರಗಳು ಸೊಗಸಾಗಿ ಬಂದಿವೆ; ಉತ್ತರಾರ್ಧದ ಕಥನದಲ್ಲಿ ಕಲ್ಯಾಣದ ದಿನಚರಿ, ಅನುಭವ ಮಂಟಪ, ಮಹಾಮನೆಯ ಪರಿಸರ, ಶರಣರ ಸಹವಾಸ, ಲಿಂಗಾಯತ ಧರ್ಮದ ಸಾಹಿತ್ಯ, ಸಂಸ್ಕೃತಿ ಕುರಿತ ಚರ್ಚೆಗಳು ವಿದ್ವತ್ಪೂರ್ಣವಾಗಿ ತೆರೆದುಕೊಳ್ಳುತ್ತವೆ.
ವಿಶೇಷತೆಯೆಂದರೆ, ಮರುಳಶಂಕರದೇವರ ಮೂಲಕ ಮರೆತುಹೋದ ನಿರ್ಲಕ್ಷಿತ ಶರಣರನ್ನು ಇವತ್ತಿನ ಪೀಳಿಗೆಗೆ ಪರಿಚಯಿಸುವ ದೃಷ್ಟಿಯಿಂದ ಮತ್ತು ಇವತ್ತಿನ ಭೋಗದ ಬದುಕಿನ ಬೇಗುದಿಯಲ್ಲಿ ಮರೆಯಾಗಿದ್ದ ಪ್ರಸಾದತತ್ವದತ್ತ ಗಮನಸೆಳೆಯುವ ದೃಷ್ಟಿಯಿಂದ ಈ ಕೃತಿಗೆ ಸಮಕಾಲೀನ ಮಹತ್ವ ಬಂದಿದೆ.
ಮರುಳಶಂಕರದೇವರ ಆತ್ಮಕಥನದ ಭಾಗವಾಗಿಯೇ ನೂರಾರು ಶರಣರ ಕಥನಗಳು ಸೇರಿಕೊಳ್ಳುವ, ಆ ಮೂಲಕ, ಕಲ್ಯಾಣದ ಮಹಾಕಥನವಾಗಿ ಪರಿಣಮಿಸುವ ಇಲ್ಲಿಯ ಸೊಗಸನ್ನು ಸಹೃದಯರು ಓದಿಯೇ ಅನುಭವಿಸಬೇಕು.
ಗುಣ-ಗಾತ್ರ ಎರಡೂ ದೃಷ್ಟಿಯಿಂದ ಘನಕ್ಕೆ ಘನವಾದ ಕೃತಿಯನ್ನು ರಚಿಸಿದ ದಯಾನಂದ ನೂಲಿ ಡಾಕ್ಟರರು ಅಭಿನಂದನಾರ್ಹರು. ಅವರ ಅಧ್ಯಯನಕ್ಕೆ, ಶ್ರಮ-ಶ್ರದ್ಧೆಗೆ ನಾವು ಶರಣು ಹೇಳಲೇಬೇಕು.
-ಡಾ. ರಾಮಕೃಷ್ಣ ಮರಾಠೆ
