Dr. K. Shivaram Karanth
Publisher - ರವೀಂದ್ರ ಪುಸ್ತಕಾಲಯ
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಆರಡಿ ಎತ್ತರ ಬೆಳೆದವನನ್ನು ಕಂಡು ಐದಡಿಯವನಿಗೆ ಅಸೂಯೆ ಪಡುವ ಹಕ್ಕಿದೆ. ಬುದ್ಧಿವಂತರ ಮೇಲೆ ಬುದ್ಧಿಹೀನ ದ್ವೇಷ ಕಾರಬಹುದು; ಚೆಲುವನನ್ನು ಕಂಡು, ಹಾಗಿಲ್ಲದವ ಅಸೂಯೆ ತಾಳಿ ಅವನ ಮುಖಕ್ಕೆ ಉಗುಳುವುದೂ ಧರ್ಮವಾಗುತ್ತದೆ. ಅಧಿಕಾರದಲ್ಲಿರುವವನನ್ನು ಕ೦ಡು ಇಲ್ಲದವ ಏಕೆ ಸಿಡಿಮಿಡಿಗೊಳ್ಳಬಾರದು? ವ್ಯಕ್ತಿಗಳ ಅಜ್ಞಾನ ಮತ್ತು ಕೊರತೆಗಳನ್ನು ಸುಲಿಗೆ ಮಾಡುವ ದಾರಿಗಳು ಒಂದೆರಡಲ್ಲ; ರಾಜಕೀಯ ಅದಕ್ಕೆ ತುಂಬ ಅನುಕೂಲ ಕ್ಷೇತ್ರ.
ಬಡವರನ್ನೂ ಆರ್ತಿಗಳನ್ನೂ ಕಂಡು ಮರುಗುವುದು ಧರ್ಮ. ಸಮಾಜ ಸುಖವಾಗಿದ್ದರೆ ನಾವೂ ಸುಖವಾಗಿರುತ್ತೇವೆ. ಆದುದರಿಂದಲೇ ಹಿರಿಯರು 'ದಾನ, ಧರ್ಮ ಮಾಡಿ' ಎಂದು ನುಡಿದರು. ಆದರೆ ಅವರು ದಾನಕೊಡುವುದನ್ನು ಬಯಸಿದಷ್ಟೇ 'ಸತ್ಪಾತ್ರ'ವನ್ನೂ ಕುರಿತು ಹೇಳಿದ್ದರು. ಈ 'ಸತ್ಪಾತ್ರ' ಯಾರು ಎಂದು ದಾನಿ ನಿರ್ಣಯಿಸಬೇಕೇ, ದಾನಕ್ಕೆ ಕೈಯೊಡ್ಡಿದವ ನಿರ್ಣಯಿಸಬೇಕೇ? ಇವತ್ತು ಅನ್ಯರು ದುಡಿದ ದ್ರವ್ಯವನ್ನು ಏನೂ ದುಡಿಯದ ನಾವು ಪರರಿಗೆ ಕೊಡಿಸಲು ತೀರ ಉತ್ಸಾಹ ತಾಳುತ್ತಿದ್ದೇವೆ!
ನಮ್ಮ ಹಿರಿಯರು 'ಅಪರಿಗ್ರಹ'ವನ್ನು ದಾನದಷ್ಟೇ ಹಿರಿಯ ಗುಣವೆಂದು ಬೋಧಿಸಿದ್ದರು. ಬೇಡುವ ಕೈ ಭೂಷಣದ್ದಲ್ಲ. ಆ ಸ್ಥಿತಿ ಬಾರದಿರಲಿ ಎಂದು ನಾವು ಬಯಸಲು ಕಲಿಯಬೇಕು. ಅನ್ಯರ ದುಡಿಮೆಯ ಫಲ ನಮಗೆ ಸಿಗಲಿ-ಎಂದು ಬಯಸುವವನಿಗೂ, ದರೋಡೆಯಿಂದ ಶ್ರೀಮಂತನಾಗಲು ಬಯಸುವವನಿಗೂ ಏನು ವ್ಯತ್ಯಾಸ? ದರೋಡೆಯನ್ನು ದೊಣ್ಣೆ ಹಿಡಿದೇ ನಡೆಯಿಸಬೇಕಾಗಿಲ್ಲ. ನಮ್ಮ ಬಲವನ್ನು ಅನ್ಯರ ಮೇಲೆ ಅನೇಕ ವಿಧಗಳಿಂದ ಹೊರಿಸಲು ಬರುತ್ತದೆ. ಅದು ಸಮಾಜದ ಪರಿಸ್ಥಿತಿಯನ್ನು ಹೊಂದಿದೆ. ಗುಂಪಿನ ಭಯ ವ್ಯಕ್ತಿಗೆ ಇದ್ದೇ ಇದೆ. ಅದನ್ನು ಕಂಡು, ಒಬ್ಬ ಹೆದರಿ, ಇದ್ದುದನ್ನು ತಾನಾಗಿಯೇ ನಡುನಡುಗಿ ತೆರಬಹುದು. ಹಾಗೆ ಕೊಟ್ಟುದು ದಾನವಾಗಬಹುದಾದರೆ, ಹಾಗೆ ಪಡೆದುದು “ಸಂಪಾದನೆ'ಯಾದೀತು. 'ನ್ಯಾಯ, ನೀತಿ'ಗಳೆಂಬುವು ಗುಂಪಿನ ಬಲವನ್ನು ನೆಚ್ಚಿ ಬದುಕುವ ಶಕ್ತಿಗಳಲ್ಲ; ಹಾಗೆ ಬದುಕಿದರೆ ಅವಕ್ಕೆ ಬೆಲೆಯೂ ಇಲ್ಲ.
ಈ ಬರಹದಲ್ಲಿ ಇದ್ದವರಿಬ್ಬರ ಮನೋಧರ್ಮಗಳನ್ನು ಚಿತ್ರಿಸಲು ಪ್ರಯತ್ನಿಸಿದ್ದೇನೆ. ಒಂದು ಹಣ್ಣೆಲೆ; ಇನ್ನೊಂದು ಚಿಗುರೆಲೆ.
ಶಿವರಾಮ ಕಾರಂತ
(ಮುನ್ನುಡಿಯಿಂದ)
