ಜನ ಮನ ಗೆದ್ದ ಐತಿಹಾಸಿಕ ಕಾದಂಬರಿ “ಚೆನ್ನಭೈರಾದೇವಿ” ಹಾಗೂ “ಪುನರ್ವಸು” ಅಂತಹಾ ವಿಭಿನ್ನ ಕಾದಂಬರಿಗಳನ್ನು ಬರೆದ ಗಜಾನನ ಶರ್ಮ ಅವರ ಮುಂದಿನ ಪುಸ್ತಕ ‘ಪ್ರಮೇಯ’ ಕಥನದ ಕುರಿತಾಗಿ ಅವರೇ ಹೇಳಿದ ನುಡಿಗಳು -
“ಇತಿಹಾಸ ಉದ್ದಕ್ಕೂ ಎಷ್ಟೇ ಒಳಿತು ಕೆಡಕುಗಳಿಗೆ ಸಾಕ್ಷಿಯಾಗಿದ್ದರೂ ಮನುಷ್ಯ ಜನಾಂಗದ ನಾಗರೀಕತೆಯನ್ನಂತೂ ಇವತ್ತಿನ ಈ ಹಂತಕ್ಕೆ ತಲುಪಿಸಿರುವುದು ಸುಳ್ಳಲ್ಲ. ಮಾನವ ಸಮಾಜ ಇವತ್ತು ಅನುಭವಿಸುತ್ತಿರುವ ಹಲವು ಸುಖ ಸೌಲಭ್ಯಗಳು ಹಿಂದಿನ ಹಲವು ವೈಜ್ಞಾನಿಕ, ಸಾಮಾಜಿಕ, ಸಾಂಸ್ಕೃತಿಕ ಕಾಣ್ಕೆ ಮತ್ತು ಪ್ರಯತ್ನಗಳ ಫಲ. ಅಂತಹ ಒಂದು ಮಹಾನ್ ಮನುಷ್ಯ ಪ್ರಯತ್ನವೇ ಟ್ರಿಗ್ನಾಮೆಟ್ರಿಕ್ ಸರ್ವೆ.
ಬ್ರಿಟಿಷರು ನಮ್ಮ ನೆಲವನ್ನು ಆಳಿದ ಕತೆ ನಮಗೆ ಗೊತ್ತು. ಅಳೆದ ಕತೆ ಹೆಚ್ಚು ಗೊತ್ತಿಲ್ಲ. ಆಳುವಾಗ ಅವರು ನಮ್ಮನ್ನು ಹುರಿದು ಮುಕ್ಕಿದ್ದು, ಅಹಂಕಾರ ತೋರಿದ್ದು, ಅನಾಚಾರ ನಡೆಸಿದ್ದು ಗೊತ್ತು. ಆದರೆ ಅಳೆಯುವಾಗ ಅವರು ತೋರಿದ ಶ್ರದ್ಧೆ, ಬದ್ಧತೆ ಮತ್ತು ನಿಸ್ಪೃಹತೆ ನಮಗೆ ಗೊತ್ತಿಲ್ಲ. ಇವತ್ತು ಗೂಗಲ್ ಮ್ಯಾಪ್ ಮೂಲಕ ಬೇಕೆನಿಸಿದ ಸ್ಥಳ (ಲೊಕೇಶನ್ನು)ಗಳ ವಿಳಾಸವನ್ನು ಅತ್ಯಂತ ಸುಲಭವಾಗಿ ಪಡೆಯಬಲ್ಲೆವು. ಅದಕ್ಕೆಲ್ಲ ಜಿಪಿಎಸ್, ಜಿ ಐ ಎಸ್ ಮುಂತಾದ ಉಪಗ್ರಹ ಆಧಾರಿತ ಸಂಪರ್ಕ ವ್ಯವಸ್ಥೆ ಮತ್ತು ನವತಾಂತ್ರಿಕ ಪ್ರಗತಿ ಕಾರಣವೆಂದು ಹೇಳುತ್ತೇವೆ. ನಿಜ, ಆದರೆ, ಅಂತಹ ವ್ಯವಸ್ಥೆಗಳು ಅಸ್ತಿತ್ವ ಬರುವುದರ ಹಿಂದೆ, ಇಡೀ ಭೂಗೋಳದ ನಿಖರ ಆಕಾರ, ಗಾತ್ರ, ಮತ್ತು ವಕ್ರತೆಗಳನ್ನು ಗುರುತಿಸಿ, ಅಕ್ಷಾಂಶ ರೇಖಾಂಶಗಳ ಮೂಲಕ ಇಡೀ ಭೂಗೋಳವನ್ನು ಭೌತಿಕವಾಗಿ ಹೆಣೆದು, ಆ ಮೂಲಕ ಪ್ರತಿ ತಾಣವನ್ನು ಗುರುತಿಸುವ ಭೂಮಾಪನ ವ್ಯವಸ್ಥೆ ಎಷ್ಟು ಕಾರಣ ಎಂಬ ಸೂಕ್ಷ್ಮ ಸಂಗತಿ ಹೆಚ್ಚು ತಿಳಿದಿಲ್ಲ.
ಹಿಂದೆ ನಮ್ಮಲ್ಲಿ ಭೂಮಾಪನ ಅಥವಾ ಮೋಜಣಿ ಕೂಗಳತೆ, ಕಣ್ಣಳತೆ ಮತ್ತು ಕೋಲಳತೆಗಳ ಮೂಲಕ ನಡೆಯುತ್ತಿತ್ತು. ಮುಂದೆ, ಅದಕ್ಕೊಂದು ವೈಜ್ಞಾನಿಕ ಸ್ವರೂಪ ಸಿಕ್ಕಿದ್ದು ಬ್ರಿಟಿಷರ ಕಾಲದಲ್ಲಿ. ಲಭ್ಯ ದಾಖಲೆಗಳನ್ನು ಆಧರಿಸಿ ಹೇಳುವುದಾದರೆ ನಮ್ಮ ನೆಲದಲ್ಲಿ ಮೊಟ್ಟಮೊದಲಿಗೆ ವೈಜ್ಞಾನಿಕ ಭೂಮಾಪನವನ್ನು ಆರಂಭಿಸಿದ್ದೇ ಬ್ರಿಟಿಷರು. ಅದನ್ನು "ದಿ ಗ್ರೇಟ್ ಟ್ರಿಗ್ನಾಮೆಟ್ರಿಕ್ ಸರ್ವೆ" ಎಂದು ಜಗತ್ತು ಕರೆಯಿತಲ್ಲದೆ, ಅದು ವೈಜ್ಞಾನಿಕ ಇತಿಹಾಸದಲ್ಲಿ ದಾಖಲಾದ ಮಹಾನ್ ಸಾಹಸವೆಂದು ಶ್ಲಾಘಿಸಿತು. ಸುಮಾರು ಏಳು ದಶಕಗಳಿಗೂ ಹೆಚ್ಚು ಕಾಲ, ಪ್ರತಿದಿನ ಸರಾಸರಿ ಆರುನೂರಕ್ಕೂ ಹೆಚ್ಚು ಮಂದಿ ಕನ್ಯಾಕುಮಾರಿಯಿಂದ ಹಿಡಿದು ಹಿಮಾಲಯದ ತುದಿಯವರೆಗೆ ನಡೆಸಿದ ಟ್ರಿಗ್ನಾಮೆಟ್ರಿಕ್ ಸರ್ವೆ ಭಾರತದ ಪ್ರತಿ ಇಂಚಿಂಚು ನೆಲವನ್ನೂ ಭೂಗೋಳದ ಅಕ್ಷಾಂಶ ರೇಖಾಂಶಗಳ ಜೊತೆಗೆ ಬೆಸೆದು, ಖಚಿತ ಗಡಿಗಳನ್ನು ಗುರುತಿಸಿ, ದೇಶದ ನಿಖರ ನಕ್ಷೆಯ ರಚನೆಗೆ ಕಾರಣವಾಯಿತಲ್ಲದೆ ಇಂದು ನಮ್ಮ ಮೊಬೈಲ್ ತುದಿಯಲ್ಲಿ ದೇಶದ ಪ್ರತಿ ತಾಣದ ಲೊಕೇಶನ್ ಗುರುತಿಸುವ ಮ್ಯಾಪಿಂಗ್ ಸೌಲಭ್ಯಕ್ಕೂ ಮೂಲ ಕಾರಣವಾದದ್ದು ಸುಳ್ಳಲ್ಲ. ಅಂತಹ ನಿಖರ ಸರ್ವೆಯ ಕಾರಣದಿಂದಲೇ ರೈಲ್ವೆ ಮತ್ತು ಟೆಲಿಗ್ರಾಫ್ ಮಾರ್ಗ, ನೀರಾವರಿ ಕಾಲುವೆ, ರಸ್ತೆಗಳ ನಿರ್ಮಾಣ... ಮುಂತಾದವುಗಳೆಲ್ಲ ಸುಲಲಿತವಾಗಿದ್ದು.
ಆದರೆ ಒಂದೂವರೆ ಶತಮಾನಕ್ಕೂ ಹಿಂದೆ, ದೇಶವಿನ್ನೂ ಪಾರತಂತ್ರ್ಯದಲ್ಲಿದ್ದ ಕಾಲಘಟ್ಟದಲ್ಲಿ ಸಾಮ್ರಾಜ್ಯಶಾಹಿಗಳು ನಡೆಸಿದ್ದ ಟ್ರಿಗ್ನಾಮೆಟ್ರಿಕ್ ಸರ್ವೆಯೆಂಬ ಆ ಪುರಾತನ ಚರಿತ್ರೆಯನ್ನು ತಿಳಿದು ಈಗ ಮಾಡುವುದೇನು? ಇದು, ಸೆಟಲೈಟ್, ಡ್ರೋನ್ ಮುಂತಾದ ಗಗನಗಾಮೀ ಉಪಕರಣಗಳ ಮೂಲಕ ಸಾಕಷ್ಟು ವಿಸ್ತೀರ್ಣದ ನೆಲ, ಸಾಗರ, ಗಿರಿ, ಕಾನನ, ಕಣಿವೆಗಳನ್ನು, ಇಂಚು, ಸೆಂಟಿಮೀಟರುಗಳ ಖಚಿತತೆಗೆ ದೂರದಿಂದಲೇ ಸರ್ವೆ ಮಾಡುವ ಡಿಜಿಟಲ್ ತಂತ್ರಜ್ಞಾನದ ಕಾಲಘಟ್ಟ. ಪ್ರತಿಕ್ಷಣವೂ ಜಿ ಪಿ ಎಸ್ ಮೂಲಕ ಇಡೀ ಭೂಮಿ ಇಂಚುಗಳ ಮಟ್ಟದ ಕಾರ್ಯಕ್ಷಮತೆಯಲ್ಲಿ ಸರ್ವೇಕ್ಷಣೆಗೆ ಒಳಪಡುತ್ತಿರುವಾಗ, ಗೂಗಲ್ ಪ್ರತಿಕ್ಷಣ ಬೇಕುಬೇಕೆಂದ ಊರು, ಕೇರಿ, ಮಾರ್ಗ, ಮನೆ, ಕಾರ್ಖಾನೆ, ಕಛೇರಿಗಳ ಅಗತ್ಯ ಮಾಹಿತಿಗಳನ್ನು ಒದಗಿಸುತ್ತಿರುವಾಗ, ಹುಟ್ಟು, ವಿವಾಹ, ವಿನೋದ, ಕ್ರೀಡೆ, ಮನೋರಂಜನೆ ಉತ್ಸವ, ಜಾತ್ರೆ, ಸಭೆ ಸಮಾರಂಭಗಳಷ್ಟೇ ಅಲ್ಲದೆ ಸಾವನ್ನು ಕೂಡ ಜೀವಂತವಾಗಿ ತೋರಿಸುವ ಲೈವ್ ಸ್ಟ್ರೀಮುಗಳು ಲಭ್ಯವಿರುವಾಗ, ಸಮುದ್ರ, ಸರೋವರ, ಪರ್ವತ, ಕಣಿವೆ, ನೀರ್ಗಲ್ಲು, ನದಿಗಳೆಲ್ಲ ಜಿ ಪಿ ಎಸ್ ಮತ್ತು ಜಿ ಐ ಎಸ್ ಸೆಟಲೈಟುಗಳ ಮೂಲಕ ಕಣ್ಣೆದುರು ಕಡುಬೆತ್ತಲಾಗಿ ಗೋಚರಿಸುವಾಗ, ಎಂದೋ ಯಾರೋ ಎಲ್ಲಿಯೋ ಸರಪಣಿ, ಕಂಪಾಸ್, ಸೆಕ್ಸ್ಟೆಂಟ್, ಕಂಪನ್ಸೇಟಿಂಗ್ ಬಾರ್, ಥಿಯೋಡಲೈಟ್ ಹಿಡಿದು ಅಳೆದದ್ದನ್ನು ಮಹಾನ್ ಸಾಹಸವೆಂಬಂತೆ ಪರಿಗಣಿಸಿ ಓದುವ ಅಗತ್ಯವಿದೆಯೇ? ಅದನ್ನು ತಿಳಿದುಕೊಳ್ಳುವ ಅಗತ್ಯ, ಆಸಕ್ತಿ ಮತ್ತು ಸಮಯ ಈ ಪೀಳಿಗೆಗೆ ಇದೆಯೇ? ಬೇಕಾದ್ದೆಲ್ಲ ಬೆರಳತುದಿಯಲ್ಲಿ ಗುಂಡಿಯೊತ್ತಿದರೆ ಗ್ಯಾಜೆಟ್ಟುಗಳ ಬಣ್ಣದ ಪರದೆಯಲ್ಲಿ ಬಿತ್ತರಗೊಳ್ಳುವಾಗ, ಅಂತಹ ಗೊಡ್ಡುಕತೆಗಳನ್ನೆಲ್ಲ ಆಧರಿಸಿದ ಅಧ್ಯಯನ ಅಗತ್ಯವೇ?
ಈ ಪ್ರಶ್ನೆ ಮೇಲ್ನೋಟಕ್ಕೆ ಒಂದಿಷ್ಟು ನಿಜವೆನ್ನಿಸುವಂತೆ ಕಂಡರೂ, ಕೊಡಚಾದ್ರಿ ಶಿಖರದ ನೆತ್ತಿಯಲ್ಲೋ, ಹಿಮಗಿರಿಯ ಭಿತ್ತಿಯಲ್ಲೋ, ಭಾರತ ಚೀನ ಗಡಿಯ ನೀರ್ಗಲ್ಲ ನಡುವಿನ ಸರೋವರ ತಟದಲ್ಲೋ, ರಾಜಸ್ಥಾನದ ಸುಡು ಮರುಭೂಮಿಯ ಮರಳು ರಾಶಿಯ ಒಡಲಲ್ಲೋ, ಅಳತೆಯ ಕಲ್ಲನ್ನು ಕಂಡಾಗ, ಬಿಸಲೆಯಂತಹ ರಿಡ್ಜ್ ಪಾಯಿಂಟಿನಲ್ಲಿ ನೆಟ್ಟ ಶಿಲೆಯೊಂದರ ತಲೆಯ ಮೇಲೆ ಸುರಿದ ಮಳೆ ನೀರು, ಒಂದಿಷ್ಟು ಅರಬ್ಬೀ ಸಮುದ್ರವನ್ನೂ ಮತ್ತೊಂದಿಷ್ಟು ಬಂಗಾಳಕೊಲ್ಲಿಯನ್ನೂ ಸೇರುವುದೆಂಬ ರೋಚಕ ಸಂಗತಿಯನ್ನು ಕೇಳಿದಾಗ, ಭೂಗೋಳದ ಕುರಿತು ಒಂದಿಷ್ಟು ಕುತೂಹಲ ಕೆಲವರಿಗಾದರೂ ಹುಟ್ಟೀತಲ್ಲವೇ? ಜಮ್ಮೂ ಕಾಶ್ಮೀರದ ಹರ್ಮುಖ ಪರ್ವತದ ಮೇಲಿನ ಸರೋವರ ತೀರದ ಚಳಿಗಾಳಿಯಲ್ಲಿ ಮಾಂಟ್ಗೊಮರಿ ಎಂಬಾತ 1856ರಷ್ಟು ಹಿಂದೆ ಶಿಬಿರವನ್ನು ಹಾಕಿಕೊಂಡು ರಾತ್ರಿ ನಕ್ಷತ್ರ ವೀಕ್ಷಣೆ, ಹಗಲು ಸರ್ವೆಯಲ್ಲಿ ತೊಡಗಿಕೊಂಡಿದ್ದ, ಮಧ್ಯಭಾರತದ ಗೋದಾವರಿ ತೀರದ ಘನಘೋರ ಅಡವಿಯಂಚಿನ ಹಿಂಗನ್ ಘಾಟಿನಲ್ಲಿ ಲ್ಯಾಂಬ್ಟನ್ ಎಂಬ ಸರ್ವೆ ಅಧಿಕಾರಿ ಅನಾಮಿಕನಂತೆ ಕೊನೆಯುಸಿರೆಳೆದಿದ್ದ, ಗೋದಾವರಿ ತೀರದ ಕಾಡಿನಲ್ಲಿ ಜಾರ್ಜ್ ಎವರೆಸ್ಟ್ ಮಾರಣಾಂತಿಕ ಯಲ್ಲಾಪುರಂ ರೋಗಕ್ಕೆ ತುತ್ತಾಗಿದ್ದ, ಎಂಬಂತಹ ಸಂಗತಿಗಳನ್ನು ತಿಳಿದಾಗ, ಅಲ್ಲಿಗೆ ಹೋಗಿ ನೋಡುವ ಅಥವಾ ಆ ಕುರಿತು ಓದುವ ಆಸಕ್ತಿ ಕೆಲವರಿಗಾದರೂ ಕುದುರೀತಲ್ಲವೇ? ಹಿಮಗಿರಿಯ ಅಗಲ ಉದ್ದ ಎತ್ತರವೆಷ್ಟು ತಿಳಿಯದೇ ಅದರ ಅಪರಂಪಾರ ಅಗಾಧತೆಗೆ ನಿಬ್ಬೆರಗಾಗಿ ಅದು ಅಪ್ರಮೇಯವೆಂದು ಭಾವಿಸಿದ ಮನುಷ್ಯನೆದುರು, ಅದರ ಅಳತೆಯ ವಿವರಗಳು ಮೈತೆರೆದು ನಿಂತಾಗ ಅಚ್ಚರಿಯೆನ್ನಿಸದೇ?
ಎರಡು ಶತಮಾನಗಳ ಹಿಂದೆ, ರಸ್ತೆ, ಸೇತುವೆ, ವಾಹನ, ಕಿರುದಾರಿಗಳೂ ಸರಿಯಿಲ್ಲದ ಕಾಲದಲ್ಲಿ ಸಾವಿರಾರು ಪರ್ವತಗಳನ್ನು ಪರಿಶ್ರಮದಿಂದ ಹತ್ತಿ, ಅದರ ನೆತ್ತಿಯಲ್ಲಿ ಶಿಬಿರ ಹೂಡಿ, ಎತ್ತರವನ್ನು ಅಳೆದದ್ದು ಸಾಮಾನ್ಯ ಸಾಹಸವಲ್ಲ. ಹದಿನೈದು ಇಪ್ಪತ್ತು ಸಾವಿರ ಅಡಿ ಎತ್ತರದ ಪರ್ವತದ ನೆತ್ತಿಯಲ್ಲಿ ಬೀಸುವ ಬಿರುಗಾಳಿಗೆ ಬೆಚ್ಚದೆ ವಾರಗಟ್ಟಲ್ಲೇ ಶಿಬಿರ ಹೂಡಿ, ಹಗಲಿರುಳೂ ಹೆಣಗಾಡಿದ್ದು ಹುಡುಗಾಟಿಕೆಯಲ್ಲ. ಬೋರ್ಗರೆದು ಹರಿಯುತ್ತಿದ್ದ ನೂರಾರು ಮೀಟರ್ ಅಗಲದ ನದಿಯನ್ನು ದೋಣಿ, ಹರಿಗೋಲುಗಳ ಮೂಲಕ ದಾಟಿದ್ದು, ಹೊರಲು ಕನಿಷ್ಠ ಹದಿನಾಲ್ಕು ಮಂದಿ ಬೇಕಾಗುತ್ತಿದ್ದ ಅರ್ಧ ಟನ್ನಿಗೂ ಹೆಚ್ಚು ಭಾರದ ಥಿಯೋಡಲೈಟ್, ಕಂಪನ್ಸೇಟಿಂಗ್ ಬಾರ್ ಮೊದಲಾದ ಉಪಕರಣಗಳನ್ನು ಹೇರಿದ ಎತ್ತು, ಆನೆ ಕುದುರೆಗಳನ್ನು ಹೊಳೆ ದಾಟಿಸಿ ಸರ್ವೆ ನಡೆಸಿದ್ದು, ರೋಚಕ ಮಾತ್ರವಲ್ಲ ಭಯಾನಕ ಕೂಡ. ಪಟ್ಟಣಗಳಿಂದ ಬಹುದೂರದ, ಕೃಷ್ಣಾ ನದೀತೀರದ ದಟ್ಟಾರಣ್ಯದಲ್ಲೋ, ಹಿಮಗಿರಿಯ ಮಧ್ಯದ ಬಿರ್ಚ್, ದೇವದಾರು ವೃಕ್ಷಗಳ ದಟ್ಟಡವಿಯ ನಡುವಲ್ಲೋ ಶಿಬಿರ ಹೂಡಿಕೊಂಡು ತಿಂಗಳುಗಟ್ಟಲೆ ಇರುತ್ತಿದ್ದ ಅವರು, ಏನು ತಿನ್ನುತ್ತಿದ್ದರು, ಏನು ಕುಡಿಯುತ್ತಿದ್ದರು, ಹೇಗೆ ಬದುಕುತ್ತಿದ್ದರು? ಚಳಿ ಮಳೆ ಬಿಸಿಲು ಬೆಂಕಿ ಹಿಮಪಾತ, ಬಿರುಗಾಳಿಗಳನ್ನು ಹೇಗೆ ಎದುರಿಸುತಿದ್ದರು? ಹಾವು ಚೇಳು ಕಾಡುಪ್ರಾಣಿಗಳ ದಾಳಿಯಿಂದ ಹೇಗೆ ತಮ್ಮನ್ನು ರಕ್ಷಿಸಿಕೊಳ್ಳುತ್ತಿದ್ದರು, ಅವರಿಗೆ ಕತ್ತಲಲ್ಲಿ ಬೆಳಕು ಹೇಗೆ, ಅನ್ನ, ಔಷಧ, ಸ್ನಾನ, ಪಾನಗಳು ಹೇಗೆ ಎಂಬ ಕುತೂಹಲ ಕೆರಳುವುದಿಲ್ಲವೇ? ಅವರು ಸರ್ವೆ ನಡೆಸಿದ ಕಾಲದಲ್ಲಿ ಕನಿಷ್ಠ ಬೆಂಕಿಪೊಟ್ಟಣ ಮತ್ತು ಹ್ಯಾಂಡ್ ಟಾರ್ಚ್ ಕೂಡ ಲಭ್ಯವಿರಲಿಲ್ಲ ಎನ್ನುವಾಗ ಅವರು ಎದುರಿಸಿದ ಸಂಕಷ್ಟ ಹೇಗಿದ್ದೀತು?
ಏಳೆಂಟು ನೂರು ಮಂದಿಯ ತಂಡ, ಉಪಕರಣಗಳ ಹೊರೆ ಹೊತ್ತು ಆನೆ, ಮೇನೆ ಒಂಟೆ ಕುದುರೆ ಕತ್ತೆ ಹೇರೆತ್ತು ಕುದುರೆ ಗಾಡಿ ಎತ್ತಿನ ಬಂಡಿ, ದೋಣಿ, ಹರಿಗೋಲುಗಳಲ್ಲಿ, ಈ ದೇಶದ ಬೆಟ್ಟ ಗುಡ್ಡ ಕಾಡು ಕಣಿವೆ ಪರ್ವತ ಕಂದರ, ಮರುಭೂಮಿ ನೀರ್ಗಲ್ಲು ಹೊಳೆ ಹಳ್ಳ ಕೆರೆ ಸರೋವರಗಳನ್ನು, ಬಿಸಿಲು ಬೆಂಕಿ ಹಿಮಪಾತ ಬಿರುಗಾಳಿಗಳ ನಡುವೆ, ಕಾಡುಪ್ರಾಣಿಗಳು ಕ್ರಿಮಿಕೀಟಗಳು ಹಾವು ಹಲ್ಲಿ ಚೇಳು ವಿಷಕ್ರಿಮಿ, ರೋಗರುಜಿನಗಳ ಬಾಧೆಗಳನ್ನು ಲೆಕ್ಕಿಸದೆ ಸರ್ವೆ ನಡೆಸಿದ ಸಾಹಸ ಅನುಪಮ. ನಂಬಲಸದಳವಾದದ್ದು.
ಟ್ರಿಗ್ನಾಮೆಟ್ರಿಕ್ ಸರ್ವೆ ಆರಂಭಿಸಿದ ಲ್ಯಾಂಬ್ಟನ್ ಅಡವಿಯ ನಡುವೆ ಸತ್ತ. ಎವರೆಸ್ಟ್ ಪಾರ್ಶವಾಯು ಪೀಡಿತನಾಗಿ ಜೀವನದುದ್ದಕ್ಕೂ ನರಳಿದ. ಕಾಶ್ಮೀರದ ತೇವಾಂಶ ತುಂಬಿದ ಕಗ್ಗಾಡಿನಲ್ಲಿ ಮೆಟ್ಟಿಕೊಂಡ ಬೆನ್ನುನೋವು ಮಾಂಟ್ಗೊಮರಿಯ ವೃತ್ತಿಜೀವನವನ್ನು ಇಪ್ಪತ್ತು ವರ್ಷಕ್ಕೆ ಮತ್ತು ಬದುಕನ್ನು ನಲವತ್ತೆಂಟು ವರ್ಷಕ್ಕೇ ಕೊನೆಗೊಳಿಸಿತು. ಡಾ ವಾಯ್ಸೆಯ ಎದುರೇ ಆತನ ನೆಚ್ಚಿನ ಶಿಷ್ಯನನ್ನೂ, ನಾಲ್ವರು ಸಿಬ್ಬಂದಿಯನ್ನೂ ಹುಲಿ ಹೊತ್ತು ಕೊಂಡು ಹೋಯಿತು. ಆತನೂ ಯಲ್ಲಾಪುರಂ ರೋಗಕ್ಕೆ ತುತ್ತಾಗಿ ಕಲ್ಕತ್ತೆಯ ದಾರಿಯಲ್ಲಿ ಸತ್ತ. ಸರ್ವೆ ಸಂದರ್ಭದಲ್ಲಿ ತಗುಲಿದ ರೋಗದ ಶುಶ್ರೂಶೆಗೆ ಮಸ್ಸೂರಿಗೆ ಹೋಗಿದ್ದ ಜಾರ್ಜ್ ಲೋಗೋನ್ ಅಲ್ಲಿಯೇ ಶವವಾದ. ಟೆರಾಯ್ ಪ್ರದೇಶದಲ್ಲಿ ಇಬ್ಬರು ಸೈನ್ಯಾಧಿಕಾರಿಗಳು ಉರುಳಿ ಬಿದ್ದು ಸತ್ತರು. ಹೊಳೆಯಲ್ಲಿ ತೇಲಿಹೋದವರು, ಪ್ರಪಾತಕ್ಕೆ ಬಿದ್ದು ಸತ್ತವರು, ಹಿಮಪಾತಕ್ಕೆ ಸಿಕ್ಕವರು, ಪರ್ವತಾಗ್ರದಲ್ಲಿ ವಿದ್ಯುತ್ ಆಘಾತಕ್ಕೆ ತುತ್ತಾದವರು, ಹತ್ಯೆಯಾದವರು, ಪೆಟ್ಟು ತಿಂದವರು ನೂರಾರು ಮಂದಿ. ಒಟ್ಟೂ ಸರ್ವೆಯಲ್ಲಿ ಐನೂರಕ್ಕೂ ಹೆಚ್ಚು ಕಾರ್ಮಿಕರು, ಮೂವತ್ತಕ್ಕೂ ಹೆಚ್ಚು ಅಧಿಕಾರಿಗಳು ಪ್ರಾಣತೆತ್ತರು.
ಹಾಗೆಂದು ಕಂಪನಿ ಸರ್ಕಾರ ಸರ್ವೆಯನ್ನು ಆರಂಭಿಸಿದ್ದು ಭಾರತದ ಉದ್ಧಾರಕ್ಕಾಗಿ ಎನ್ನುವುದಕ್ಕಿಂತ ತನ್ನ ಸ್ವಾರ್ಥಕ್ಕೆ ಎಂಬುದು ಅಕ್ಷರಶಃ ಸತ್ಯ. ಅದು, ಭಾರತದಲ್ಲಿ ತನ್ನ ಪ್ರಭುತ್ವವನ್ನು ಶಾಶ್ವತಗೊಳಿಸಲು, ಸಾಮ್ರಾಜ್ಯವನ್ನು ವಿಸ್ತರಿಸಲು ಅಗತ್ಯವಾದ ರಕ್ಷಣಾತ್ಮಕ ಅಗತ್ಯಗಳ ಪೂರೈಕೆಗಾಗಿ ಮತ್ತು ಸಾಧ್ಯವಾದಷ್ಟೂ ಹೆಚ್ಚು ಕಂದಾಯ ಸಂಗ್ರಹಕ್ಕಾಗಿ. ಜೊತೆಗೆ ಆಯಕಟ್ಟಿನ ತಾಣಗಳನ್ನು ಗುರುತಿಸಿ ಸೈನಿಕ ನೆಲೆ ಸ್ಥಾಪಿಸಿ ಭಾರತೀಯರನ್ನು ನಿಗ್ರಹಿಸಲು ಬೇಕಾದ ಮಾಹಿತಿಗಳನ್ನು ಸಂಗ್ರಹಿಸಲು. ಅವರ ಉದ್ದೇಶ ಎಷ್ಟೇ ಋಣಾತ್ಮಕವಾಗಿದ್ದರೂ ಪರಿಣಾಮ ನಮಗೆ ಉಪಯುಕ್ತವಾಗಿತ್ತು. ಲಾಭಕರವಾಗಿತ್ತು. ಅದರ ಅನುಷ್ಠಾನದಲ್ಲಿ ಬ್ರಿಟಿಷ್ ಅಧಿಕಾರಿಗಳು ತೋರಿದ ಅನುಪಮ ಶ್ರದ್ಧೆ ಮತ್ತು ಪ್ರಾಮಾಣಿಕತೆಗಳು ಮಾತ್ರ ಅನುಕರಣೀಯವಾಗಿದ್ದವು.
ಒಟ್ಟಿನಲ್ಲಿ ಇತಿಹಾಸವೆಂಬುದು ತಪ್ಪು ಒಪ್ಪುಗಳ ಮಿಶ್ರಣವಾಗಿದ್ದರೂ ಅದು ನಮ್ಮ ಇಂದಿನ ಬದುಕು ಹೀಗಿರಲು ಕಾರಣ ಎಂಬುದಂತೂ ಸುಳ್ಳಲ್ಲ. ಹಾಗಾಗಿ ಕೆಡುಕುಗಳನ್ನು ಆದಷ್ಟೂ ನಿರ್ಲಕ್ಷಿಸಿ, ನಮಗೆ ಒಳಿತುಗೈದು ಉಪಕರಿಸಿದಂತಹ ಐತಿಹಾಸಿಕ ಸಂಗತಿಗಳ ಕುರಿತು ತಿಳಿದರೆ ನಾವು ಅನುಭವಿಸುತ್ತಿರುವ ಸುಖ ಸೌಲಭ್ಯಗಳ ಸೊಗಸು, ರುಚಿ ಹೆಚ್ಚುತ್ತದೆ. ಟ್ರಿಗ್ನಾಮೆಟ್ರಿಕ್ ಸರ್ವೆಯ ಉದ್ದೇಶ ಏನೇ ಆಗಿದ್ದರೂ ಅದರ ಪರಿಣಾಮ ನಮ್ಮ ನೆಲಕ್ಕೆ ನೂರಕ್ಕೆ ನೂರು ಒಳಿತುಗೈದದ್ದು ಸತ್ಯ. ನಮಗೆ ಉಪಕರಿಸಿದ ಇಂತಹ ಐತಿಹಾಸಿಕ ಸಾಹಸವೊಂದರ ವಿವರಣೆಯೇ ಈ "ಪ್ರಮೇಯ" ಎಂಬ ಕೃತಿ.”
ಜನವರಿ 22ರಂದು ಬಿಡುಗಡೆಯಾಗಲಿರುವ ಮಹಾಮಾಪನದ ಬಗೆಗಿನ ಕಾದಂಬರಿ ‘ಪ್ರಮೇಯ’ ವನ್ನು ರಿಯಾಯಿತಿಯೊಂದಿಗೆ ಈಗಲೇ ಕಾಯ್ದಿರಿಸಿ!👇🏻
ಪ್ರಮೇಯ - https://harivubooks.com/kn/products/gajananasharma-prameya
ಚೆನ್ನಭೈರಾದೇವಿ - https://harivubooks.com/kn/products/chenna-bhaira-devi
ಪುನರ್ವಸು - https://harivubooks.com/kn/products/punarvasu-kannada-novel
1 comment
ಬೇಕು